ದೇವರು ಗುಡಿಯೊಳಗಿಲ್ಲ!
ಮಾನಸ ಸರೋವರ |
ನನ್ನಮ್ಮ ಈ ಕತೆಯನ್ನ ಚಾಚೂ ತಪ್ಪದೆ
ಓದುತ್ತಿದ್ದಾಳೆ. ಓದಿ ತಲ್ಲಣಗೊಂಡಿದ್ದಾಳೆ. ತನಗಿದ್ದ ಎರಡೂ ಮಕ್ಕಳನ್ನೂ ಕಳಿಸಿಕೊಟ್ಟಿದ್ದೆನಲ್ಲ
ಎಂದು ಮರುಗುತ್ತಾಳೆ. ಕಷ್ಟ ಆದರೂ ಸರಿ ಪೂರೈಸಿದರಲ್ಲ ಅಂತ ಖುಷಿಪಡುತ್ತಾಳೆ. ಮುಂದಿನ ವರ್ಷ ನೀನೂ ಹೋಗು
ಎಂದರೆ, ತನಗೆ ಇನ್ನೂ ಬದುಕಬೇಕೆಂಬ ಆಸೆಯಿದೆಯೆಂದೂ, ತಾನು ಇದ್ದಲ್ಲೇ ಕೈಲಾಸ ಕಂಡಿದ್ದೇನೆ ಎಂದೂ
ಹೇಳುತ್ತಾಳೆ. ಅವಳು ಹಾಗೆಂದರೆ ಅದಕ್ಕೆ ನನ್ನ ಸಹಮತವಿದೆ. ಸಾಯುವದರೊಳಗೆ ಈ ಯಾತ್ರೆಯೊಂದನ್ನು
ಮಾಡಲಿಲ್ಲವಲ್ಲ, ಎಂಬ ಕೊರಗು ಕಟ್ಟಿಕೊಳ್ಳುವುದೇನೂ ಬೇಡ. ಚಿತ್ರಗುಪ್ತನ ಲೆಕ್ಕದ ಪಟ್ಟಿಯಲ್ಲಿ ಈ
ಯಾತ್ರೆ ಮಾಡಿಯೇ ಪುಣ್ಯದ ತೂಕ ಹೆಚ್ಚಿಸಬೇಕೆಂದೇನೂ ಇಲ್ಲ. ಶಿವ ಕೈಲಾಸದಲ್ಲೊಂದೇ ಅಲ್ಲ ಎಲ್ಲ ಕಡೆಯೂ
ಸಿಗಬಲ್ಲ.
ಅಲ್ಲಿಯ ಶಿವ
ಬೇರೆ,
ಇಲ್ಲಿಯ ಶಿವ
ಬೇರೆಯೆಂದೇನೂ ಇಲ್ಲ. ಅಸಲಿಗೆ
ಈ ಯಾತ್ರೆಯ ಸಾಫಲ್ಯ ಅದಲ್ಲವೇ ಅಲ್ಲ ಎಂಬುದು ನನ್ನ ಅನಿಸಿಕೆ.
ಇಷ್ಟು ಪರಿಶ್ರಮವುಳ್ಳ ಈ
ಯಾತ್ರೆಯನ್ನು ಮಾಡುವ ಪರಿಪಾಠ ಹೇಗೆ ಶುರುವಾಯಿತು, ಇದಕ್ಕೆ ಶಾಸ್ತ್ರಗಳೇನು ಅನ್ನುತ್ತವೆ, ಅಲ್ಲಿ
ನಿಜಕ್ಕೂ ಶಿವನಿದ್ದಾನೆಯೆ...ಇತ್ಯಾದಿ ಸಂಗತಿಗಳ ಬಗ್ಗೆ ನನಗೆ ಜಾಸ್ತಿ ತಿಳಿದಿಲ್ಲ. ಅಲ್ಲಿ
ನಿಜಕ್ಕೂ ಶಿವ-ಪಾರ್ವತಿಯರು ಇದ್ದಾರೆಯೇ ಅಥವಾ ಇಲ್ಲವೇ ಎಂಬುದು ನನಗೆ ಸಮಸ್ಯೆಯಲ್ಲ. ಭಕ್ತರಿಗೆ
ಹಾಗನ್ನಿಸಿದರೆ ಅದು ಅವರ ಪಾಲಿನ ಸತ್ಯ. ಈ ವಿಚಾರದಲ್ಲಿ ಒಬ್ಬ ಪ್ರೇಮಿಗೂ ಒಬ್ಬ ಭಕ್ತನಿಗೂ ಬಹಳ
ವ್ಯತ್ಯಾಸಗಳೇನೂ ಇಲ್ಲ. ಒಣಗಿದ ಕಾಷ್ಠದಲ್ಲೂ ಅವಳ ಇರುವಿಕೆಯನ್ನು ಗುರುತಿಸಬಲ್ಲ, ಅನುಭವಿಸಬಲ್ಲ
ಒಬ್ಬ ಪ್ರೇಮಿಗೆ ಕಾಷ್ಠದಲ್ಲಿ ಅವಳಿರುತ್ತಾಳೆ. ಅದು ವ್ಯಕ್ತಗೊಂಡ ಅವ್ಯಕ್ತ. ಅಥವಾ
ಅವ್ಯಕ್ತದೊಳಗಿನ ವ್ಯಕ್ತ. ಇವೆಲ್ಲ ಅವರವರ ಅನುಭೂತಿಗೆ ಸಂಬಂಧಪಟ್ಟಿದ್ದು. ನಾನು ಅಂತಹ
ಸಾಧಕಿಯೇನೂ ಅಲ್ಲ. ಸೃಷ್ಟಿಯ ಅಚ್ಚರಿಯೊಂದನ್ನು ಕಂಡು ಬಂದ ದಾರಿಹೋಕಿ ಅಂತಿಟ್ಟುಕೊಳ್ಳಿ. ಅಷ್ಟಲ್ಲ
ಕಷ್ಟ ಪಡುವ ಈ ಯಾತ್ರೆ ನಿರರ್ಥಕವಂತೂ ಅಲ್ಲ.
ನೀವೇ ಗಮನಿಸಿದ ಹಾಗೆ, ಸುಮಾರು ಹತ್ತು ದಿನ ಸ್ನಾನವಿಲ್ಲದೇ, ಸರಿಯಾದ ಶೌಚವಿಲ್ಲದೇ ಇದ್ದರೂ
ಶಿವನ ಸನ್ನಿಧಿ ತಲುಪಲು ಅವು ಯಾವವೂ ತಡೆಯಾಗುವುದಿಲ್ಲ. ಅಲ್ಲಿ ಮಂದಿರವಿಲ್ಲ. ಪೂಜೆ-ಪುನಸ್ಕಾರಗಳ ಗೊಡವೆಯಿಲ್ಲ. ಶಿವನೆಂದರೆ ಒಂದು ಅಮೂರ್ತ
ಶಕ್ತಿ ಅಥವಾ ದೈವ ಅಂದುಕೊಳ್ಳೋಣ. ಅದಕ್ಕೆ ನಿಮಗೆ ಬೇಕಾದ ಹೆಸರಿಟ್ಟುಕೊಳ್ಳಿ. ಶೌಚ/ಅಶೌಚದ, ಮಡಿ/ಮೈಲಿಗೆಗಳ, ಮಂತ್ರ/ಆರತಿಗಳ ಪರಿಧಿಯಾಚೆಯ ಸನ್ನಿಧಿ
ಅದು. ಭೌತಿಕವಾಗಿ ಅಲ್ಲಿ ಹೋದರೂ
ಸಹ ಅದು ಒಂದು ಮಾನಸ ಯಾತ್ರೆಯಾಗಿ ಪರಿಣಮಿಸುತ್ತದೆ. ಆ ಸನ್ನಿಧಿಯನ್ನು ಏರಲು ಬೇಕಾಗಿರುವ
ಮುಖ್ಯ ಕ್ವಾಲಿಫಿಕೇಶನ್ ಗಳು ಇವು: ನಮ್ಮ ಮನೋಬಲ, ನಮ್ಮ ಧೃಢ ಸಂಕಲ್ಪ, ಮತ್ತು ಎದೆಗಾರಿಕೆ. ತಕ್ಕಮಟ್ಟಿಗೆ ಅಲ್ಲಿನ ಪ್ರಕೃತಿಯೂ
ಅನುಕೂಲಕರವಾಗಿದ್ದರೆ ಮಾತ್ರ ಎಲ್ಲವೂ ಸಾಧ್ಯ.
ಇನ್ನು ಈ ಯಾತ್ರೆಗೊಂದು ನಿಶ್ಚಿತವಾದ
ವಿಧಿ ವಿಧಾನಗಳಿದ್ದ ಹಾಗೂ ನನಗೆ ಕಾಣಲಿಲ್ಲ. ಬೇರೆ ಯಾತ್ರೆಗಳಿಗೂ ಹೀಗೆಯೇ ಇರಬಹುದೇನೋ, ಆದರೆ ನನ್ನ ಅನುಭವ ಈ ಯಾತ್ರೆಯ
ಮಟ್ಟಿಗೆ ಸೀಮಿತವಾದದ್ದರಿಂದ ನಾನು ಕೇವಲ ಈ ಯಾತ್ರೆಯನ್ನುದ್ದೇಶಿಸಿ ಬರೆಯುತ್ತಿದ್ದೇನೆ. ಮೂರು ದಿನಗಳ ಕೈಲಾಸ ಪರಿಕ್ರಮಣ
ಈ ಯಾತ್ರೆಯ ಒಂದು ಮುಖ್ಯವಾದ ಘಟ್ಟ. ಆದರೆ ಅದನ್ನು ಹೀಗೆ-ಹೀಗೇ ಮಾಡಬೇಕು ಎನ್ನುವ ಶಾಸ್ತ್ರ ಸಂಬಂಧಿ
ಆಚರಣೆಗಳೇನೂ ಇದ್ದ ಹಾಗೆ ಕಾಣಲಿಲ್ಲ. ಒಬ್ಬರು ಆಗುವುದಿಲ್ಲವೆಂದರೆ ಒಂದು ದಿನಕ್ಕೆ ಮರಳಬಹುದು, ನಮ್ಮ ನಮ್ಮ ತಾಕತ್ತು, ಮತ್ತು ನಿಶ್ಚಯವನ್ನು ಅವಲಂಬಿಸಿ
ಮುಂದುವರೆಯುತ್ತೇವೆ. ಮುಖ್ಯವಾಗಿ
ದೇಹ ಶುದ್ಧಿ, ಬಾಹ್ಯ
ಆಡಂಬರ,
ಇದು ವರ್ಜ್ಯ
ಅದು ವರ್ಜ್ಯ ವೆನ್ನುವ ಕಟ್ಟಳೆಗಳಿರಲಿಲ್ಲ. ದೇವರು ನಿಜಕ್ಕೂ ಇದ್ದಾನೆಯೋ ಇಲ್ಲವೋ ಎಂಬುದೂ ಮುಖ್ಯವಲ್ಲ. ಅವನ ಸ್ವರೂಪವೂ ಮುಖ್ಯವಲ್ಲ. ಅಲ್ಲಿ ಶಿವ ಇದ್ದಾನೆ ಎಂದು ಭಾವಿಸಿದವರಿಗೆ ಅವನನ್ನು ಒಲಿಸಿಕೊಳ್ಳಲು ಬಾಹ್ಯಾಡಂಬರವೂ
ಬೇಕಿಲ್ಲ.
ಶೌಚ-ಅಶೌಚದ ಪ್ರಶ್ನೆಯಂತೂ ಮೊದಲೇ
ಇಲ್ಲ.
ಒಟ್ಟಿನಲ್ಲಿ
ಇದೊಂದು
’ರಿಲಿಜಿಯಸ್’ ಯಾತ್ರೆ ಎಂದು ಅನ್ನಿಸಲಿಲ್ಲ.
ಹಾಗಿದ್ದರೆ, ಈ ಯಾತ್ರೆ
ಮತ್ತೇನನ್ನು ಹೇಳುತ್ತದೆ? ನನಗೆ ಅನ್ನಿಸುವುದೇನೆಂದರೆ, ಈ ಯಾತ್ರೆ ಒಂದು ದೃಷ್ಟಾಂತ. ಈ ’ಕೈಲಾಸ –ಮಾನಸ’
ಯಾತ್ರೆಯ ಸಾಫಲ್ಯ ಪುಣ್ಯ ಪ್ರಾಪ್ತಿಯೂ ಅಲ್ಲ, ಅದು ಜೀವಮಾನದ ಮಹೋನ್ನತ ಸಾಧನೆಯೊಂದನ್ನು ಮಾಡಿದ
ತೃಪ್ತಿಯಲ್ಲೂ ಇಲ್ಲ, ಅದು ಒಂದು ಗಮ್ಯದ ಕೊನೆಯ ಬಿಂದುವೂ ಅಲ್ಲ. ಇಡೀ ಯಾತ್ರೆಯೇ ಒಂದು
ದೃಷ್ಟಾಂತ. ಯಾವುದರ ದೃಷ್ಟಾಂತ?
ಈ ಹಂತದಲ್ಲಿ ಸ್ಥೂಲವಾಗಿ ಒಂದು
ವಿಷಯವನ್ನು ಪ್ರಸ್ತಾಪಿಸಬಯಸುತ್ತೇನೆ. ಈಗ ಪ್ರಸ್ತಾಪಿಸಬಯಸುವ ವಿಷಯದಲ್ಲಿ ನಿಷ್ಣಾತಳೇನೂ ಅಲ್ಲ
ನಾನು.
ಈ ಪ್ರಪಂಚದಲ್ಲಿ ಹುಟ್ಟಿದ ಎಲ್ಲರೂ
ಒಂದರ್ಥದಲ್ಲಿ ಈ ’ಮಾನಸ’ ಯಾತ್ರೆಯ ಪಯಣಿಗರೇ. ಎಲ್ಲರಿಗೂ ಶಿವನನ್ನು ಕಾಣುವ ಗಮ್ಯವಿರುತ್ತದೋ
ಇಲ್ಲವೋ ಆದರೆ, ಎಲ್ಲರೂ ನೆಮ್ಮದಿಯ ಹುಡುಕಾಟದಲ್ಲಿದ್ದವರೇ. ನೆಮ್ಮದಿ ಎಲ್ಲಿ ಸಿಗುತ್ತದೆ,
ಯಾವುದರಲ್ಲಿದೆ ಎಂಬುದರ ಬಗ್ಗೆ ಒಬ್ಬೊಬ್ಬರದು ಒಂದೊಂದು ಬಗೆಯ ಅಭಿಪ್ರಾಯ. ಈ ಹುಡುಕಾಟದಲ್ಲಿ
ಎಲ್ಲರೂ ಏಕಾಂಗಿಗಳೇ. ಈ ಯಾತ್ರೆಯಲ್ಲಿ ಹಿರಿಯರಿದ್ದಾರೆ, ಕಿರಿಯರಿದ್ಧಾರೆ, ಹೆಂಗಸರಿದ್ಧಾರೆ,
ಗಂಡಸರಿದ್ದಾರೆ, ಬಡವರಿದ್ದಾರೆ, ಶ್ರೀಮಂತರೂ ಇದ್ದಾರೆ. ಮನುಷ್ಯರು ಅನಿಸಿಕೊಂಡವರೆಲ್ಲರೂ
ಯಾತ್ರಿಗಳೇ. ಬಾಹ್ಯವಾಗಿ ಎಷ್ಟೇ ಬೇಧಗಳಿರಲಿ, ಅಂತರಂಗದೊಳಗೆ ನಾವೆಲ್ಲರೂ ಸಮಾನರೇ. ಮದ. ಮೋಹ,
ಮತ್ಸರ, ಕಾಮ, ಲೋಭ ಇತ್ಯಾದಿ ದೌರ್ಬಲ್ಯಗಳ ಜೊತೆಗೆ ಈ ಎಲ್ಲ ದೌರ್ಬಲ್ಯಗಳನ್ನು ಮೀರಬಲ್ಲ ಸಾಮರ್ಥ್ಯ –ಇವೆಲ್ಲವೂ
ನಮ್ಮೊಳಗೇ ಇವೆ. ದೌರ್ಬಲ್ಯಗಳಿಗೂ ಮತ್ತು ಅದನ್ನು ಮೀರುವ ಸಾಮರ್ಥ್ಯಕ್ಕೂ ತಾರತಮ್ಯವಿಲ್ಲ. ಅದು ಯಾರಲ್ಲಾದರೂ
ಇರಬಹುದು,
ಯಾರಿಗಾದರೂ
ಸಾಧ್ಯವಾಗಬಹುದು. ’ನಾನು’
ಎನ್ನುವ ಅಹಂಕಾರ ಮತ್ತು ’ನಾನು’ ಎನ್ನುವ ಅಂತಸತ್ವ ಇವೆರಡೂ ನಮ್ಮೊಳಗೇ ಇವೆ. ಒಂದನ್ನು
ಸುಪ್ತಗೊಳಿಸಿ ಮತ್ತೊಂದನ್ನು ಜಾಗ್ರತಗೊಳಿಸುವ ’ಕ್ರಿಯೆ’ ಇದೆಯಲ್ಲ....ಅದನ್ನು ಅಧ್ಯಾತ್ಮ ಸಾಧಕರ
’ಕ್ರಿಯೆ’ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಅದು ಸಾಧಕರ ಉತ್ತುಂಗ ಕ್ರಮಣದ ಹಾದಿ. ಕೈಲಾಸ
ಕಾಣುವ ಹಾದಿ. ಇದು ಓದಿನಿಂದ ಬಂದದ್ದು. ಕೇಳಿ ಅರ್ಥ ಮಾಡಿಕೊಂಡಿದ್ದು. ನನ್ನ ಗ್ರಹಿಕೆ
ತಪ್ಪಿರಲಿಕ್ಕೂ ಸಾಕು.
ಈ ಕ್ರಿಯೆ ಸುಲಭದ್ದಲ್ಲ. ಹಾಗಂತ
ಇಂಥವರೇ ಸಾಧಕರಾಗಬೇಕೆಂಬ ಕಡ್ಡಾಯವೇನಿಲ್ಲ. ಆಗಲೇಬೇಕೆಂಬ ಕಡ್ಡಾಯವೂ ಇಲ್ಲ!
ಹೆಣ್ಣಾಗಲೀ-ಗಂಡಾಗಲೀ, ಸಂಸಾರಕ್ಕೆ ಅಂಟಿಕೊಂಡವರಾಗಲೀ-ಕಾಡು ಸೇರಿದವರಾಗಲೀ, ಇದ್ದವರಾಗಲೀ-ಇಲ್ಲದೇ
ಇದ್ದವರಾಗಲೀ, ಸ್ನಾನ ಮಾಡಿದವರಾಗಲೀ- ಮಾಡದೇ ಇದ್ದವರಾಗಲೀ, ವಯಸ್ಸಾಗಲೀ-ವಯಸ್ಸಾಗದೇ
ಇರಲಿ...ಇವರೆಲ್ಲರೂ ಆ ಕ್ರಿಯೆಗೆ ಅರ್ಹರೇ. ಆದರೆ, ಸಾಧಕ ಸನ್ನದ್ಧನಾಗಬೇಕಾಗುತ್ತದೆ.
ಕಲ್ಮಷವಿರುವುದು ಮನಸ್ಸಿನಲ್ಲಿ. ಮನಸ್ಸು ತಿಳಿಯಾದಷ್ಟೂ ಸಾಧಕನ ಹಾದಿ ಸುಗಮ. ಸಾಧಕನ ’ಕ್ರಿಯೆ’ ಗೆ ಅಡ್ಡಿಬರುವುದರಿಂದ ಅವು
ಕಲ್ಮಷವೆನಿಸಿಕೊಳ್ಳುತ್ತವೆ ಎಂದು ನಾನು ಗ್ರಹಿಸಿಕೊಂಡಿದ್ದೇನೆ ಹೊರತೂ ಅವು inherent ದೋಷಗಳು ಎಂಬ ಕಾರಣಕ್ಕಾಗಿ ಅಲ್ಲ. ಮನೋಬಲವನ್ನು ಹೊಂದುವುದರ ಜೊತೆಗೆ ಸಂಯಮವನ್ನೂ ರೂಢಿಸಿಕೊಳ್ಳಬೇಕಾಗುತ್ತದೆ. ಕಷ್ಟ
ಅದೆಷ್ಟೇ ರೌದ್ರವಾಗಿರಲಿ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಇವೆಲ್ಲವೂ ರಾತ್ರಿ ಬೆಳಗಾಗುವುದರೊಳಗೆ
ಸಿಧ್ದಿಸುವಂತವುಗಳಲ್ಲ. ಇವೆಲ್ಲವನ್ನೂ ಗ್ರಹಿಸಿಕೊಳುವುದೂ ಕಷ್ಟ. ಇಂತಹ ಒಂದು ಹಾದಿಯ
’ಪ್ರಾತ್ಯಕ್ಷಿಕ’ ಅನುಭವವನ್ನು ಈ ’ಕೈಲಾಸ- ಮಾನಸ’ ಯಾತ್ರೆ ಒದಗಿಸಿಕೊಡುತ್ತದೆ. ಇದಕ್ಕಾಗಿಯೇ
ನಾನು ಅದನ್ನೊಂದು ’ದೃಷ್ಟಾಂತ’ ವೆಂದು ಹೇಳಿದ್ದು.
ಅಂದರೆ...ಅಮೂರ್ತ ರೂಪದಲ್ಲಿದ್ದ
ಸೂಕ್ಷ್ಮವೊಂದನ್ನು ಮೂರ್ತಗೊಳಿಸಿ, ನಮ್ಮನ್ನು ಆ ಪ್ರಕ್ರಿಯೆಯ ಒಂದು ಭಾಗವನ್ನಾಗಿಸಿ, ಮುಂದಿನ
ಯಾವುದೋ ಒಂದು ಮಾರ್ಗಕ್ಕೆ ನಮ್ಮನ್ನು ಅಣಿಗೊಳಿಸುವ ಕಾರ್ಯವನ್ನು ಈ ಯಾತ್ರೆ ಮಾಡುತ್ತದೆ. ಮುಂದಿನ
ಮಾರ್ಗ ಮುಕ್ತಿ ಮಾರ್ಗವಾಗಿರಬಹುದು. ಅದನ್ನು
ಶಿವನೆನ್ನಿ, ನಾರಾಯಣನೆನ್ನಿ, ಬ್ರಹ್ಮವೆನ್ನಿ, ದೇವಿಯೆನ್ನಿ, ಅಥವಾ ಶಕ್ತಿಯೆನ್ನಿ...ಅದು
ನಿರ್ಗುಣ, ನಿರಾಕಾರ, ನಿರಾಮಯ, ಅವ್ಯಕ್ತ ಲಕ್ಷಣ, ಅನಂತ ಲಕ್ಷಣ, ಅನಂತ ನಾಮವುಳ್ಳದ್ದು ಮತ್ತು
ಅಸೀಮರೂಪಿ. ಸತ್ಯವೂ ಅವನೇ, ಅಸತ್ತೂ ಅವನೇ, ಸೌಂದರ್ಯವೂ ಅವನೇ, ಕುರೂಪವೂ ಅವನೇ ಅಂದ ಮೇಲೆ ಅವನು
ಅಸೀಮರೂಪಿಯಾದನಲ್ಲವೇ. ಎಲ್ಲವೂ ಅವನೇ ಆದಾಗ, ನಾನು ಸ್ನಾನ ಮಾಡಿ, ಶುಚಿಗೊಂಡು, ಗಂಧ-ಚಂದನಗಳಿಂದ
ಅವನನ್ನ ಅಲಂಕರಿಸಿ, ಮಂತ್ರ ಹೇಳಿ, ಆರತಿ ಎತ್ತಿ, ಗಂಟೆ ಮೊಳಗಿಸಿ...ಇವೆಲ್ಲ ಅವರವರ ಖುಷಿಗೆ
ಮಾಡಿಕೊಳ್ಳುವುದಲ್ಲವೇ. ಹೀಗೇ ಮಾಡಿ ಅಂತ ಅವನೆಲ್ಲಿ ಬೇಡುತ್ತಿದ್ದಾನೆ?! ಅದನ್ನು ಬೇಡವೆಂದೂ ಹೇಳುತ್ತಿಲ್ಲ
ಅವನು. ಆದರೆ...ಅದಕ್ಕೂ ಮೀರಿದ್ದು ಆನಂದ ಅನ್ನುತ್ತಿರಬಹುದೆ?
ಡ್ರೋಲ್ಮಾ ಲಾ ಪಾಸ್ |
ನಮ್ಮ ಜೊತೆ ಯಾತ್ರೆಗೆ ಬಂದವರೆಲ್ಲ
ಒಂದನ್ನಂತೂ ಘಂಟಾಘೋಷವಾಗಿ ಹೇಳಬಲ್ಲರು. ಅದು ಏನೆಂದರೆ, ’ದೇವರು ಗುಡಿಯೊಳಗಿಲ್ಲ’. ಈ ಯಾತ್ರೆ
ಮಾಡಿದ ಮೇಲೆ ಇನ್ಯಾವ ಯಾತ್ರೆಯನ್ನೂ ಮಾಡಬೇಕಂತಿಲ್ಲ ಎಂದು ನಮ್ಮ ಸಹಯಾತ್ರಿಗಳು ಮೇಲಿಂದ ಮೇಲೆ
ಹೇಳುತ್ತಿದ್ದರು. ಅಂದರೆ ಇದು ಸಾಧನೆಯ ಕೊನೆಯ ಮೆಟ್ಟಿಲು ಎಂದಲ್ಲ ಅಂದುಕೊಂಡಿದ್ದೇನೆ. ಇದು
ಕೊನೆಯಲ್ಲ. ಇದು ಮತ್ತೊಂದರ ಆರಂಭವೂ ಆಗಿರಬಹುದು.
ಈ ಯಾತ್ರೆಯಿಂದ ನನಗೆ ಏನು ದಕ್ಕಿತು
ಎಂಬುದನ್ನ ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ!
[ಮುಗಿಯಿತು]