Tuesday, July 29, 2014

ಜಾಲಿ ಕಂಟಿಯ ಪ್ರೇಮ ಪ್ರಸಂಗ!




ಮಳೆಗಾಲದ ಒಂದು ದಿನ.

ಜನ ನಿಬಿಡ ರಸ್ತೆಯೊಂದರ ಬದಿಗೆ ನಿರರ್ಥಕವಾಗಿ
ಬೆಳೆದುಕೊಂಡಿದ್ದ ಜಾಲಿ ಕಂಟಿಯ ಮೈಯೆಲ್ಲ ಪುಳಕ! 
ಹತ್ತಿರ ಬಂದವರನ್ನೆಲ್ಲ ಓಡಿಸುವ 
ಕತ್ತಿಯಲುಗಿನ ಮುಳ್ಳು, ಮುಳ್ಳ ತುದಿಯೆಲ್ಲ ನಂಜು,
ಅಂದು ನಂಜಿನ ಪಸೆಯಾರಿ ಮುಳ್ಳ ತುದಿಗೆ ಜೇನು ಒಸರಿತ್ತು! 

ಕಂಟಿಯ ಮೇಲೆ ಅಲ್ಲೇ ಮುಳ್ಳುಗಳ ಸಂದಿಯಲ್ಲೆ 
ತನ್ನ ತುಪ್ಪಳದ ಮೈಯ್ಯ ನೀರ ಕೊಡವುತ್ತ 
ಕೂತಿದ್ದ ಗುಬ್ಬಚ್ಚಿಗೆ ಗೂಡ ಚಿಂತೆ
ಆದರೇನಂತೆ, ಅದರ ಮಲ್ಲಿಗೆ ಪಾದ ತನ್ನನಪ್ಪಿದ ಪರಿ...
ಅದರ ರೆಕ್ಕೆಯೊದರುವ ಚಂದ...
ರೊಯ್ಯ ರೊಯ್ಯನೇ ಗಾಳಿ ಬೀಸಿದ ಹೊಡೆತಕ್ಕೆ
ತನ್ನ ತೋಳ ಮೇಲೆ ಅದು ಉಯ್ಯಾಲೆಯಾಡಿದ ಪರಿ...ಗೆ
ಜಾಲಿ ಕೋಟೆಯ ಕಲ್ಲೊಂದು ಸಡಿಲಗೊಂಡಿತ್ತು.

ಸಡಿಲಗೊಂಡ ಕಲ್ಲ ಪೊಟರೆಯೊಳಗೊಂದು
ಮಲ್ಲಿಗೆ ಪಾದದ ಗುಬ್ಬಚ್ಚಿ ಗೂಡು! 


-ಪ್ರಜ್ಞಾ