Saturday, September 28, 2013

ಕೈಲಾಸ-ಮಾನಸ - ೭

ಕೈಲಾಸ ದರ್ಶನದ ಉದ್ವೇಗವೆಲ್ಲ ಇಳಿದ ಮೇಲೆ ನಮ್ಮ ಕೋಣೆಗೆ ತೆರಳಿ ಸ್ವಲ್ಪ ಹೊತ್ತು ವಿರಮಿಸಿದೆವು. ದಿರಾಪುಕ್ ಒಂದು ತಾತ್ಕಾಲಿಕ ತಂಗುದಾಣದಂತಿದೆ. ಕೈಲಾಸ ಪರ್ವತದ ಬುಡದಲ್ಲೇ ನಮ್ಮ ಬಿಡಾರ. ಸಾಲಾಗಿ ತಗಡಿನ ಶೀಟ್ ಹೊದಿಸಲಾದ ೮-೧೦ ಕೋಣೆಗಳು. ಒಂದೊಂದರಲ್ಲಿ ೪ ರಿಂದ ೫ ಜನ ಮಲಗಬಹುದು. ಹೊದೆಯುವುದಕ್ಕೆ ಸಾಕಷ್ಟು ಕೊಡುತ್ತಾರೆ. ನಮ್ಮ ಷೆರ್ಪಾಗಳು ಅಲ್ಲೇ ಹೊರಗೆ ಟೆಂಟೊಂದರಲ್ಲಿ ಅಡುಗೆ ತಯಾರಿ ನಡಸಿದ್ದರು.

ಆದರೆ ನಾವು ಬಂದು ಸುಮಾರು ಒಂದು ಗಂಟೆಯಾದರೂ ನನ್ನ ತಮ್ಮ ಮತ್ತು ಅವನ ಹೆಂಡತಿ ಇನ್ನೂ ನಮ್ಮ ಜಾಗ ಸೇರಿಕೊಳ್ಳಲಿಲ್ಲ. ಆರಂಭದಿಂದಲೂ ನನ್ನ ತಮ್ಮ ನಮ್ಮ ಜೊತೆ ತಪ್ಪಿಸಿಕೊಂಡು ಬಿಟ್ಟಿದ್ದ. ಹೇಗೂ ಬರುತ್ತಾನೆ ಅಂತ ನಾವೂ ಸುಮ್ಮನಿದ್ದೆವು. ಅವನ ಹೆಂಡತಿ ಸ್ವಲ್ಪ ಹೊತ್ತಿನವರೆಗೆ ನಮ್ಮ ಜೊತೆ ಇದ್ದವಳು ಆಮೇಲೆ ಸ್ವಲ್ಪ ಹಿಂದೆ ಬಿದ್ದಿದ್ದಳು. ನಿಧಾನವಾಗಿ ಅವಳೂ ಬಂದಳು. ಆದರೆ ತಮ್ಮನ ಸುಳಿವೇ ಇಲ್ಲ. ತಂಡದ ಹಿರಿಯರೆಲ್ಲ ಸೇರಿಕೊಂಡಿದ್ದರು. ಸ್ವಲ್ಪ ಹೊತ್ತು ಕಳವಳಗೊಳ್ಳುತ್ತ ನಿಂತಿರುವಾಗ ಅವನೂ ತೇಕುತ್ತ ಬಂದ!

ನೋಡುತ್ತಿದ್ದಂತೆಯೇ ಕತ್ತಲಾಯಿತು. ಯಾರಿಗೂ ಎರಡು ಹೆಜ್ಜೆ ಎತ್ತಿಡಲೂ ತಾಕತ್ತಿಲ್ಲ. ಅಷ್ಟು ನಿಯಮಿತವಾಗಿ ಡೈಮಾಕ್ಸ ಸೇವಿಸಿದರೂ ಆ ರಾತ್ರಿ ನಮಗೆಲ್ಲ ಜ್ವರ. ವಾಂತಿ ಬಂದ ಹಾಗೆ ಆಗುವುದು, ತಲೆ ಸುತ್ತುವುದು ಎಲ್ಲ ಕಾಣಿಸಿಕೊಂಡಿತ್ತು. ಮಂಚ ಹತ್ತಿದವರು ಇಳಿಯಲಿಲ್ಲ. ನಮ್ಮ ಪ್ರಾರಬ್ಧಕ್ಕೆ ಮತ್ತೆ ಮಳೆ. ಆರ್ಭಟದ ಮಳೆ. ಕೆಲವೊಮ್ಮೆ ಹಿಮಪಾತವೂ ಆಗುತ್ತದಂತೆ. ಆ ದಿನ ಕೇವಲ ಮಳೆ! ರಾತ್ರಿಯಿಡೀ ಸುರಿದಿದ್ದರಿಂದ ನಾಳೆಯ ಪರಿಕ್ರಮಣ ರದ್ದಾಗುತ್ತದೆ ಎಂದೇ ಅಂದುಕೊಂಡೆವು. ಹಾಗಾದರೆ ಒಳ್ಳೆಯದೇ ಅಂತ ನನಗೆ ಅನಿಸಿತ್ತು. ಯಾಕೆಂದರೆ ರಾತ್ರಿಯಿಡೀ ನಿದ್ದೆಯಿರಲಿಲ್ಲ. ಜ್ವರಕ್ಕೆಂದು ಮಾತ್ರೆ ತೆಗೆದುಕೊಂಡಿದ್ದಕ್ಕೆ ವಿಪರೀತ ಬೆವರಿ, ತಲೆ ಸುತ್ತಿದಂತೆ ಆಗುತ್ತಿತ್ತು. ನಾಳೆ ಮತ್ತೆ ೩೨ ಕಿಲೋಮೀಟರುಗಳಷ್ಟು ಹೇಗೆ ನಡೆಯುವುದು? ಆಗಲಿಕ್ಕಿಲ್ಲ. ಹಾಗಾಗಿ ನಾಳೆ ಇಲ್ಲ ಅಂದರೆ ಒಳ್ಳೆಯದೇ ಅಂದುಕೊಳ್ಳುತ್ತ, ಗಳಿಗೆಗೊಮ್ಮೆ ನೀರು ಕುಡಿಯುತ್ತ ಹೇಗೋ ರಾತ್ರಿಯನ್ನು ದೂಡಿದೆ.

ಎರಡನೆಯ ದಿನ

ಆದರೆ, ಮಾರನೆ ದಿನ ನಸುಕಿನಲ್ಲೇ ಷೆರ್ಪಾಗಳು ಬಂದು ಬಾಗಿಲು ತಟ್ಟಿದರು. ಬೇಗ ಸಿದ್ಧವಾಗಿ ಅನ್ನಲಿಕ್ಕೆ. ಸಣ್ಣಗೆ ಮಳೆ ಹನಿಯುತ್ತಲೇ ಇತ್ತು. ಹೋಗುವುದು ಹೇಗೆ ಅಂತ ಕೇಳಿದರೆ, “ಹಿಮ್ಮತ್ ರಕ್ಖೋ...ಹಿಮ್ಮತ್ ಸೆ ಕಾಮ್ ಚಲೇಗಾ” ಅಂತ ನಮ್ಮ ಸಾಂಗ್ಯಾ ಷೆರ್ಪಾ ಉತ್ತರಿಸಿದ. ಅಂತೂ ಅನುಮಾನಿಸುತ್ತಲೇ ಹೊರಟೆವು. ಬಟ್ಟೆ ಗಿಟ್ಟೆ ಬದಲಾಯಿಸುವ ಕೆಲಸವಿಲ್ಲ. ಚಿಕ್ಕಮ್ಮ, ಚಿಕ್ಕಪ್ಪ ಎಲ್ಲ ಆರಾಮಾಗೆ ಇದ್ದರು. ನಾನು ಮಾತ್ರ ಸಿಕ್ಕಾಪಟ್ಟೆ ಗೊಂದಲದಲ್ಲಿದ್ದೆ. ಹಾಗೊಂದುವೇಳೆ ಎರಡನೆಯ ದಿನಕ್ಕೆ ಸಾಧ್ಯವೇ ಇಲ್ಲ ಎನ್ನಿಸಿದರೆ ಒಂದು ದಿನದ ಪರಿಕ್ರಮಣ ಮುಗಿಸಿ ಮರಳಿ ದಾರ್ಚಿನ್ನಿಗೆ ಹೋಗಿ ಉಳಿಯಬಹುದಿತ್ತು. ಆರೋಗ್ಯ ಹದಗೆಟ್ಟಿರಲಿಲ್ಲವಾದರೂ ತುಂಬ ಹೆದರಿಬಿಟ್ಟಿದ್ದೆ. ನಾನು ಬಯಸದೇ ಇದ್ದರೂ ನನ್ನನ್ನು ಇಲ್ಲಿಯವರೆಗೆ ನಿರ್ವಿಘ್ನವಾಗಿ ಕರೆದುಕೊಂಡು ಬಂದ ನನ್ನ ದೈವ ಮುಂದೆಯೂ ಕೈಬಿಡಲಾರದು ಎಂದುಕೊಂಡು ಹೊರಟಿದ್ದೆ.

ಪರಿಕ್ರಮಣದ ಈ ದಿನ ಅತ್ಯಂತ ಕಷ್ಟದ ದಿನ ಎಂದು ಷೆರ್ಪಾಗಳು ಎಚ್ಚರಿಸಿದ್ದರು. ೧೮ ಸಾವಿರ ಅಡಿಗಳಿಗಿಂತಲೂ ಹೆಚ್ಚಿನ ಎತ್ತರದಲ್ಲಿದ್ದ  ಡ್ರೋಲ್ಮಾ ಲಾ ಪಾಸ್ ನ್ನು ಮೂರು ಹಂತಗಳಲ್ಲಿ  ತಲುಪಬೇಕಿತ್ತು. ಆದು ಸುಮಾರು ೮-೯ ಕಿ.ಮೀ ಪ್ರಯಾಣ. ಮೂರು ಹಂತಗಳಲ್ಲಿ ಹತ್ತುತ್ತ ಹೋಗುವುದು, ಅದು ಸಮತಟ್ಟಾದ ಜಾಗವಲ್ಲ. ಆಮೇಲೆ ಸ್ವಲ್ಪ ದೂರ ಇಳಿದು ಮತ್ತೆ ಸುಮಾರು ೨೫ ಕಿ,ಮೀ ನಡೆದುಕೊಂಡು ಹೋಗಬೇಕು. ಏನಾದರೂ ತೊಂದರೆ ಆದರೆ ಷೆರ್ಪಾಗಳ ಹತ್ತಿರ ಆಮ್ಲಜನಕದ ಸಿಲಿಂಡರುಗಳು ಇರುತ್ತವೆ. ಆದರೆ ಅದನ್ನು ಉಪಯೋಗಿಸಿದರೆ ಎದೆಗೂಡಲ್ಲಿ ನೀರು ಕಟ್ಟಿಕೊಳ್ಳುತ್ತದೆ, ಮತ್ತೂ ಕಷ್ಟವಾಗುತ್ತದೆ ಎಂದು ಅವರೆಲ್ಲ ಹೇಳುತ್ತಿದ್ದರು. ಒಟ್ಟಿನಲ್ಲಿ  ನಮ್ಮ ಮನೋಬಲದ, ಸಂಯಮದ, ಎದೆಗಾರಿಕೆಯ ಮತ್ತು ಅದೃಷ್ಟದ ಪರೀಕ್ಷೆಯಾಗುತ್ತದೆಯಲ್ಲಿ.

ಚಲ್ ಪ್ರಜ್ಞಾ ಚಲ್!
ಸರಿ, ಒಬ್ಬರ ಹಿಂದೊಬ್ಬರು ನಡೆಯುತ್ತ ಹೊರಟೆವು. ಇವತ್ತಿನ ಹಾದಿ ಅಗಲದ್ದಲ್ಲ. ಕಿರಿದಾದ ಹಾದಿ. ಏರು ಹತ್ತುತ್ತ ಹೋಗಬೇಕು. ಹೆಜ್ಜೆಗೊಂದು ಸಲ ನಿಲ್ಲುತ್ತ, ಉಸಿರೆಳೆದು ಕೊಳ್ಳುತ್ತ, ನೀರು ಕುಡಿಯುತ್ತ...ಮೊದಲನೆಯ ಏರು ಹತ್ತಿದ್ದಾಯ್ತು. ಈ ಏರಾದ ಮೇಲೆ ಒಂದು ಮಾರು ಸಮತಟ್ಟಾದ ಹಾದಿ, ನಂತರ ಮತ್ತೆ ಎರಡನೆ ಹಂತದ ಏರು ಸಿಗುತ್ತದೆ.  ಏರೆಂದರೆ ಬೆಟ್ಟ ಹತ್ತಿದಂತೆ. ಎರಡನೆಯ ಹಂತದ ಏರಿನ ತುಂಬ ಹಿಮ. ಕಣ್ಣು ಹಾಯಿಸಿದಲ್ಲೆಲ್ಲ ಹಿಮ! ಹಿಂದಿನ ದಿನ ಕೆಳಗೆ ಮಳೆ ಬಿದ್ದರೆ ಇಲ್ಲಿ ಹಿಮ ಪಾತವಾಗಿತ್ತು ಅಂತ ಅನಿಸುತ್ತದೆ. ಮಬ್ಬು ಬೆಳಕು, ಗೂಢದೊಳಗೆ...ಆಳದೊಳಗೆ....ಗಮ್ಯ ಇನ್ನೇನು ಕೈಗೆಟುಕಿತು ಅನ್ನುವಷ್ಟರಲ್ಲಿ ಜಾರಿ ಇನ್ನಷ್ಟು ಮುಂದೆ ಸರಿವಂತೆ...ಇದು ಅಂತ್ಯವಿರದ ನಿರಂತರ ಚಲನೆಯೆನ್ನಿಸುತ್ತಿತ್ತು.

ಇಲ್ಲಿ ಎಲ್ಲಿಯೂ ಅರ್ಧ ನಿಮಿಷಕ್ಕಿಂತಲೂ ಹೆಚ್ಚು ನಿಲ್ಲುವಂತಿಲ್ಲ. “ಚಲೋ ಚಲೋ ಆಗೇ ಜಾನಾ ಹೈಎಂದು ನನ್ನ ಜೊತೆ ಬರುತ್ತಿದ್ದ ನೀಮಾ ಷೆರ್ಪಾ ಎಚ್ಚರಿಸುತ್ತಿದ್ದ. ಎಷ್ಟೇ ಸುಸ್ತಾದರೂ ನಡೆಯುತ್ತಲೇ ಇರಬೇಕಂತೆ. ಸುಸ್ತಾಯಿತು ಎಂದು ಕೂರುವಂತಿಲ್ಲ. ಕೂತರೆ ಏಳಲಾಗುವುದೇ ಇಲ್ಲ ಎಂದು ಹೆದರಿಸುತ್ತಿದ್ದ. ಎರಡನೆಯ ಹಂತದಿಂದ ಮೂರನೆಯ ಹಂತದ ಏರು ಕಾಣಿಸುತ್ತಿತ್ತು. ಅಲ್ಲಿ ಹೋಗುತ್ತಿದ್ದ ಜನರೆಲ್ಲ ಇರುವೆಗಳಂತೆ ಕಾಣುತ್ತಿದ್ದರು. ಮಧ್ಯೆ ಮಧ್ಯೆ ಕುದುರೆಯ ಮೇಲೆ ಹೋಗುತ್ತಿದ್ದ ಹಿರಿಯರು ಕಾಣುತ್ತಿದ್ದರು, ಚೈನೀಸ್ ಪೋರ್ಟರುಗಳು ಕೀರಲು ದನಿಯಲ್ಲಿ ಏನೇನೋ ಹಾಡುತ್ತ ಹೋಗುತ್ತಿದ್ದರು. ಮಾತಂತೂ ನಿಲ್ಲಿಸಿಬಿಟ್ಟಿದ್ದೆವು. ಮಂಜಿದ್ದದ್ದಕ್ಕೆ ಕತ್ತಲು ಕತ್ತಲು ಅನಿಸುತ್ತಿತ್ತು. ಸುತ್ತಲೆಲ್ಲ ಹಿಮದ ಹಾಸಿಗೆ. ಅದರ ಮಧ್ಯೆ ಚಿಕ್ಕ ಚಿಕ್ಕ ತೊರೆಗಳು. ಇಡೀ  ಕಣಿವೆಯ ತುಂಬ ಆವರಿಸಿದ್ದ ಮೌನಕ್ಕೆ ಗಾಢ ರಂಗಿತ್ತು.

ಆಮ್ಲಜನಕದ ಕೊರತೆಯೆಂದರೆ ಏನು ಎನ್ನುವುದು ಈ ದಿನ ಸರಿಯಾಗಿ ಅರ್ಥವಾಗುತ್ತದೆ. ಮೇಲೆ ಹೆಜ್ಜೆ ಕಿತ್ತಿಡಲೂ ಆಗುವುದಿಲ್ಲ. ಆಮ್ಲಜನಕ ಎಳೆದುಕೊಳ್ಳುವುದಕ್ಕೆ ಮೂಗಿನ ಎರಡು ಹೊಳ್ಳೆಗಳೂ ಮತ್ತು ಒಂದು ಬಾಯಿ ಏನೇನಕ್ಕೂ ಸಾಕಾಗುವುದಿಲ್ಲ! ನಾನಂತೂ ಸದ್ದು ಮಾಡುತ್ತಲೇ ಉಸಿರೆಳೆದುಕೊಳ್ಳುತ್ತಿದ್ದೆ. ಮಾರು ಮಾರಿಗೆ ಊರುಗೋಲಿನ ಸಹಾಯದಿಂದ ನಿಲ್ಲುವುದು. ಮತ್ತೆ ನಡೆಯುವುದು. ಶಕ್ತಿ ಬರಲಿ ಅಂತ ಜಾಕೇಟಿನ ಕಿಸೆಯಲ್ಲಿ ತುಂಬಿಟ್ಟುಕೊಂಡ ಒಣ ಹಣ್ಣುಗಳನ್ನ ತಿನ್ನುತ್ತಿದ್ದೆವು. ನನ್ನ ಅವಸ್ಥೆ ನೋಡಿ ಜೊತೆಯಲ್ಲಿದ್ದ ನೀಮಾ ಷೆರ್ಪಾ ನನ್ನ ಕ್ಯಾಮೆರಾ ಚೀಲವನ್ನೂ ತಾನೆ ಹೊತ್ತುಕೊಂಡ. ಮುಂದೆ ಕೊನೆ ಮುಟ್ಟುವವರೆಗೆ ಅದು ಅವನ ಹತ್ತಿರವೇ ಇತ್ತು. ನಡುವೆ ನನಗೆ ಬೇಕೆನ್ನಿಸಿದಾಗ ಅವನೇ ಕ್ಯಾಮೆರ ತೆಗೆದು ಕೊಡುತ್ತಿದ್ದ, ಕೆಲಸವಾದ ಮೇಲೆ ಮತ್ತೆ ಇಟ್ಟುಕೊಳ್ಳುತ್ತಿದ್ದ. ಬಿಸಿ ನೀರೂ ಅಷ್ಟೇ. ತಾನೇ ಫ್ಲಾಸ್ಕಿನ ಮುಚ್ಚಳ ತೆಗೆದು ನೀರೆರೆಸಿ ಕೊಡುತ್ತಿದ್ದ. ಕೊಡುವಾಗ ಮುಖದಲ್ಲಿ ಕನಿಕರದ ನಗುವಿರುತ್ತಿತ್ತು!


ಮೂರನೆಯ ಹಂತದ ಏರು ಹತ್ತತೊಡಗಿದೆವು. ಇದು ಮೊದಲೆರಡು ಏರುಗಳಿಗಿಂತ ಕಡಿದಾದದ್ದು. ಇದನ್ನು ಹತ್ತುವಾಗ ಮಾತ್ರ ನಾವೆಲ್ಲ ನಮ್ಮ ನಮ್ಮ ಜೀವದ ಹಂಗು ತೊರೆದುಬಿಟ್ಟಿದ್ದೆವು. “ಭಯ್ಯಾ..ಇನ್ನೂ ಎಷ್ಟು ದೂರ’ ಎನ್ನುವಂತೆ ನಮ್ಮ ಷೆರ್ಪಾನತ್ತ ನೋಡಿದರೆ..’ಆಗೋಯ್ತು..ಬಂದೆ ಬಿಟ್ವಿ’ ಅನ್ನುತ್ತಿದ್ದ. ಅಯ್ಯಪ್ಪ! ಎಲ್ಲಿ ಬರೋದು? ನನಗೆ ನನ್ನ ಮಗಳ ಮುಖ ಕಣ್ಣಿಗೆ ಬರುತ್ತಿತ್ತು. ಒಂದೆಡೆ ವಿಪರೀತ ಹೆದರಿಕೆಯಾಗಿ ನನ್ನ ಆಪ್ತ ರಕ್ಷಕ ದತ್ತ ಗುರುವಿನ ನಾಮಸ್ಮರಣೆಯನ್ನು ಮನಸ್ಸಿನಲ್ಲಿಯೇ ಮಾಡುತ್ತ ಹೋದೆ. ಈಗ ನಗು ಬರುತ್ತಿದೆ!

ನಮ್ಮ ಜೊತೆ ಮೊದಲ ದಿನ ನಡೆದುಕೊಂಡು ಬಂದಿದ್ದ ಮಂಜು ಆಂಟಿ ಎರಡನೆಯ ದಿನವೂ ನಡೆಯುತ್ತೇನೆ ಎಂದು ಹೊರಟಿದ್ದರು. ಆದರೆ ಎರಡನೆಯ ಏರು ಬರುವಷ್ಟರಲ್ಲಿಯೇ ಆಗದು ಎನ್ನಿಸಿತಂತೆ. ಅದೃಷ್ಟಕ್ಕೆ ಮತ್ಯಾರನ್ನೋ ಮೇಲೆ ಬಿಟ್ಟು ಮರಳುತ್ತದ್ದ ಕುದುರೆಯೊಂದು ಸಿಕ್ಕು ಅದರ ಮೇಲೆ ಹೋದರಂತೆ. ಅಂದ ಹಾಗೆ, ಈ ಕುದುರೆಗಳು ಡ್ರೋಲ್ಮಾ ಪಾಸನ್ನು ತಲುಪಿಸಿ ಮರಳಿ ಹೋಗುತ್ತವೆ. ನಂತರ ಸುಮಾರು ಐದಾರು ಕಿ.ಮೀ ಕಡಿದಾದ ಜಾರುಬಂಡೆಯಂತಹ ಇಳುಕಲು. ಹಾಗಾಗಿ ಅಲ್ಲಿ ಎಲ್ಲರೂ ನಡೆಯಲೇ ಬೇಕು. ಮುಂದೆ ಸಮತಟ್ಟಾದ ಜಾಗ ಸಿಗುವುದರಿಂದ ಅಲ್ಲಿ ಮತ್ತೆ ಬೇರೆ ಕುದುರೆಗಳು ಕಾಯುತ್ತಿರುತ್ತವೆ.

ಮುಂದೆ ಒಂದು ಕಡೆ ಯಾರಿಗೋ ತೊಂದರೆಯಾಗಿ ಕುಸಿದು ಬಿದ್ದಿದ್ದರು. ಅವರಿಗೆ ಆಮ್ಲಜನಕ ಕೊಡುತ್ತಿದ್ದರು. ಅವರನ್ನು ನೋಡುತ್ತ ನಿಲ್ಲಲು ಆಸ್ಪದವಿಲ್ಲ. ’ಚಲೋ ಚಲೋ’ ಅಂದಿದ್ದ ನೀಮಾ. ನಿಂತರೆ ಕಾಲು ನಡುಗುತ್ತಿದ್ದವು. ನಡೆಯಬೇಕು ಮತ್ತು ನಡೆಯುತ್ತಿರಬೇಕು. ಅಷ್ಟೇ.  ಆ ಹೊತ್ತಿನಲ್ಲಿ ಬೇರೆ ಯಾವ ಯೋಚನೆಯೂ ಬರುವುದಿಲ್ಲ. ನನಗನಿಸಿದ ಮಟ್ಟಿಗೆ ನಾನು ಆ ಅಸೀಮ ರೂಪಿ ಪ್ರಕೃತಿಯಲ್ಲಿನ ಒಂದು ನಾದಬಿಂದುವಾಗಿದ್ದೆ. ನುಡಿಸುವವರು ಯಾರೋ, ಯಾರದೋ ವೀಣೆ, ಯಾರದೋ ರಾಗ. ಆ ಸ್ಥಿತಿ ನನ್ನ ಸ್ಥಾಯೀ ಭಾವವಾಗಬಾರದೇ ಅನಿಸುತ್ತದೆ ನನಗೆ. ಒಂದು ಬಗೆಯ ಅರೆ ಎಚ್ಚರದ ಸ್ಥಿತಿ.




ನಾವು ತಲುಪಿದೆವು ಅಂತ ನೀಮಾ ಹೇಳಿದಾಗಲೇ ಬಹುಶಃ ನಮಗೆ ಎಚ್ಚರವಾಯಿತು ಅನಿಸುತ್ತದೆ, ನಾವು ನಿಂತ ಜಾಗ...ಅದು...ಅದೇ... ಡ್ರೋಲ್ಮಾ ಲಾ ಪಾಸ್...ಪರಿಕ್ರಮದ ಅತ್ಯಂತ ಎತ್ತರದ ಗಮ್ಯ...ಇಲ್ಲಿ ನಿಲ್ಲಲೇ ಬೇಡಿ ಎಂದಿದ್ದರು. ಇಲ್ಲಿ ಆಮ್ಲಜನಕ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಜಾಸ್ತಿ ನಿಂತವರು ಅಲ್ಲೇ ಸೆಟೆಯುತ್ತಾರೆ ಎಂದು ಷೆರ್ಪಾಗಳು ಹೇಳಿದ್ದರು. ನಡುಗುವ ಕೈಯಲ್ಲೇ ಕ್ಯಾಮೆರ ಇಸಿದುಕೊಂಡು ಲಗು ಬಗೆಯಿಂದ ಒಂದೆರಡು ಫೋಟೋ ಹೊಡೆದೆ. ಆವತ್ತು ಹಿಮ ತುಂಬಿದ್ದರಿಂದ ಮತ್ತು ಮಂಜಿದ್ದದ್ದರಿಂದ ಸುತ್ತಲಿನ ಕಣಿವೆ ಸ್ಪಷ್ಟವಾಗಿ ಗೋಚರಿಸಲಿಲ್ಲ. ಶುಭ್ರ ಹಿಮದ ಮೇಲೆ ರಂಗು ರಂಗಿನ ಪ್ರಾರ್ಥನಾ ಪತಾಕೆಗಳು ಅದ್ಭುತ ಕಾಂಟ್ರಾಸ್ಟ್ ಒದಗಿಸಿದ್ದವು.  ಆ ಜಾಗಕ್ಕೆ ಏನೇ ಹೆಸರಿರಲಿ, ನಾನದನ್ನ ಹಿಮ ಗರ್ಭವೆನ್ನುತ್ತೇನೆ. ರುದ್ರ ರಮಣೀಯ. ಮರುಹುಟ್ಟಿನ ಜಾಗವದು. ಸಾಧಕರಿಗೆ ಅರಿವು ಕಣ್ತೆರೆಯುವ ಜಾಗ. ಭಕ್ತರು ದೈವದೊಂದಿಗೆ ಲೀನವಾದ ಮಧುರ ಅನುಭೂತಿ ಪಡೆಯುವ ಜಾಗ. ಸಂಸಾರಸ್ಥರಿಗೆ ಆಸೆ ಮರಳುವ ಜಾಗ.  ಒಟ್ಟಿನಲ್ಲಿ ಸುಖ ಪ್ರಸವವಾಯಿತು ಎನ್ನಲಡ್ಡಿಯಿಲ್ಲ.



ಅಲ್ಲಿಂದ ಮುಂದೆ ಇಳಿಯುತ್ತ ಹೋಗುತ್ತೇವೆ, ಡ್ರೋಲ್ಮಾ ಲಾ ಪಾಸಿನ ನೇರವಾದ ಬುಡಕ್ಕೆ ಗೌರಿ ಕುಂಡವಿದೆ. ಇಲ್ಲಿ ನಮ್ಮ ಗೌರಮ್ಮ ಪರಶಿವನನ್ನು ಪಡೆಯುವ ಸಲುವಾಗಿ ತಪಸ್ಸು ಮಾಡಿದ್ದಳಂತೆ. ಎಂತಹ ಜಾಗದಲ್ಲಿ ಕೂತಿದ್ದಳು ಅವಳು! ಇಳಿಯಲು ಪ್ರಾರಂಭಿಸಿದಾದಲೇ ಗೌರಿಕುಂಡ ಕಾಣತೊಡಗುತ್ತದೆ. ಮುಂದೆ ಒಂದು ಹಿಮಗಟ್ಟಿದ ನದಿಯನ್ನೂ ದಾಟಿದೆವು. ಕಣಿವೆ ಇಳಿದರೆ, ಅಲ್ಲಿ ಬುಡಕ್ಕೆ ಕುದುರೆಗಳು ಬಂದಿರುತ್ತವೆ. ಅಲ್ಲೇ ಚಿಕ್ಕ ಹೊಟೆಲ್ ಥರದ್ದು ಇದೆ. ಅಲ್ಲಿ ಬಂದು ಕುಸಿಯುವವರೆಗೆ ನಮಗೆ ನಮ್ಮ ಖಬರಿರಲಿಲ್ಲ. ಎಲ್ಲರ ಮುಖ ನೋಡುವ ಹಾಗಿತ್ತು.


ನಮ್ಮ ಜೊತೆ ಬಂದಿದ್ದ ಮಂಗಳೂರಿನ ಯುವಕರೊಬ್ಬರಿಗೆ ವಿಪರೀತ ತ್ರಾಸಾಗಿತ್ತು. ವಾಂತಿ ಬರುತ್ತದೆ, ತಲೆ ತಿರುಗುತ್ತದೆ ಅಂತೆಲ್ಲ ಹೇಳತೊಡಗಿದ್ದರು. ಆದರೆ ಇನ್ನೂ ಸುಮಾರು ೨೫ ಕಿ.ಮೀ ನಡೆಯಬೇಕಲ್ಲ. ಹಾಗಾಗಿ ನಾವೆಲ್ಲ ಮುಂದೆ ಹೊರಟೆವು. ಒಂದು ನದಿಯ ಗುಂಟ ನಡೆಯುತ್ತ ಹೋಗಬೇಕು. ಇಲ್ಲಿ ಒಂದು ಸಮಾಧಾನವೆಂದರೆ ಆಮ್ಲಜನಕದ ಕೊರತೆಯುಂಟಾಗುವುದಿಲ್ಲ. ಆದರೆ ಮೇಲೆ ಹತ್ತಿದ ಸುಸ್ತು ಆರಿರುವುದಿಲ್ಲ. ಚಿಕ್ಕಮ್ಮ ಚಿಕ್ಕಪ್ಪ ಎಲ್ಲ ಮುಂದೆ ಮುಂದೆ ನಡೆದಿದ್ದರು, ನಾನು ಮತ್ತು ಡಾಕ್ಟರ್ ಒಟ್ಟೊಟ್ಟಿಗೆ ನಡೆಯುತ್ತಿದ್ದೆವು. ಈಗ ನನ್ನ ಜೊತೆ ನೀಮಾ ಷೆರ್ಪಾ ಮತ್ತು ವೀರ ಬಹಾದ್ದೂರ್ ಷೆರ್ಪಾ ಇಬ್ಬಿಬ್ಬರು ಬರುತ್ತಿದ್ದರು. ನಡೆದೆವು….ನಡೆದೆವು…ಮತ್ತು…….…….ಡೆ……..ದೆ…...ವು….

ನಾನಂತೂ ಕೊನೆ ಕೊನೆಗೆ ಅರೆ ಪ್ರಜ್ಞಾವಸ್ಥೆಯಲ್ಲಿ ನಡೆದಿದ್ದೆ. ಮಧ್ಯೆ ಮಧ್ಯೆ ಕೂರುತ್ತಿದ್ದೆ. ವೀರಬಹಾದುರ್ ನಂತೂ ಮಾರು ಮಾರಿಗೆ ನೀರು ಕೊಡುತ್ತಿದ್ದ. ಈ ರೀತಿ ನಿದ್ದೆಯ ನಶೆ ಕೂಡ altitude sickness ನ ಒಂದು ಲಕ್ಷಣವಂತೆ. ಅದು ಗೊತ್ತಾಗೇ ಇರಬೇಕು ವೀರಬಹಾದುರ್ ತುಂಬ ಕಾಳಜಿಯಿಂದ ನಡೆಸಿಕೊಂಡು ಬಂದಿದ್ದು. ದಾರಿಯಲ್ಲಿ ಮಳೆಯೂ ಸಿಕ್ಕಿತ್ತು. ಈ ಮಧ್ಯೆ ಒಂದು ಆಂಬುಲೆನ್ಸ ಭರ್ರನೇ ಹಾದು ಹೋಯಿತು. ನಮಗೆ ಕಳವಳ. ನಮ್ಮ ಜೊತೆಗೆ ಬಂದ ಹಿರಿಯರ ಮುಖ ಎಲ್ಲ ನೆನಪಿಗೆ ಬಂತು. ಅಲ್ಲಿ ಮೊದಲೇ ತಲುಪಿದ್ದ ಚಿಕ್ಕಮ್ಮ ಚಿಕ್ಕಪ್ಪ ಎಲ್ಲರಿಗೆ ನಾನಿನ್ನೂ ಬರದಿದ್ದುದು ನೋಡಿ, ಜೊತೆಗೆ ಆಂಬುಲೆನ್ಸ ಬೇರೆ ಹೊರಟಿದ್ದು ನೋಡಿ ಭಯವಾಗಿತ್ತಂತೆ. ಆದರೆ, ಅದು ಹೋಗಿದ್ದು ಮಂಗಳೂರಿನ ಯುವಕನನ್ನು ಕರೆತರಲು. ಅವರಿಗೆ ನಡೆಯಲೇ ಆಗುವುದಿಲ್ಲವೆಂಬ ಕಾರಣಕ್ಕೆ ಆಂಬುಲೆನ್ಸ ಕಳಿಸಿದ್ದರು. ಅಂತೂ ನಾನು ಜುತುಲ್ ಪುಕ್ ತಲುಪಿದಾಗ ಸುಮಾರು ಸಂಜೆ ಏಳು ಗಂಟೆಯಾಗಿತ್ತು. ಶೆಡ್ ಕಾಣಿಸುತ್ತಿದ್ದಂತೆ  ಒಳ್ಳೇ ರೋಮಿಯೋನ ಥರ ನನ್ನ ಕೈ ಹಿಡಿದುಕೊಂಡ ವೀರ್ ಬಹಾದುರ್ ನನ್ನನ್ನು ಚಿಕ್ಕಪ್ಪ-ಚಿಕ್ಕಮ್ಮನೆದುರು ಒಯ್ದು ನಿಲ್ಲಿಸಿದ. ’ಎ ದೇಖೋಕೌನ್ ಆಆಆಆಯಾಆಆ…” ಅನ್ನುತ್ತ.

ಶೂ, ಜಾಕೇಟ್ ಎಲ್ಲ ಕಿತ್ತೆಸೆದು ಹಾಸಿಗೆ ಮೇಲೆ ಒರಗಿದ್ದೆ. ಆ ಹೊತ್ತಿಗೆ ಹಾಗೆ ಒರಗುವ ಸುಖದ ಮುಂದೆ ಇನ್ಯಾವ ಸುಖವೂ ಇಲ್ಲ ಅನಿಸಿತ್ತು. ಆವತ್ತೂ ಜೋರು ಮಳೆ. ಇನ್ನು ಜನ ಬರುತ್ತಲೇ ಇದ್ದರು, ಡಾಕ್ಟರ್ ಶೈಲಜಾ ಇನ್ನೂ ಬಂದಿಲ್ಲವೆಂದು ಮೊದಲೇ ತಲುಪಿದ ಅವರ ತಂದೆ (ಸುಮಾರು ೬೫) ಕಳವಳಗೊಂಡಿದ್ದರು. ಭಟ್ಕಳದ ನಾರಾಯಣ ಅಂಕಲ್ (೬೯ ರ ವಯಸ್ಸು) ಕೂಡ ಬಂದಿರಲಿಲ್ಲ. ಅವರೂ ಬಂದರು. ಈ ಹಿರಿಯರಿಬ್ಬರ ಉತ್ಸಾಹಕ್ಕೆ, ಚೈತನ್ಯಕ್ಕೆ ನಾವೆಲ್ಲ ಬೆರಗಾಗಿದ್ದೇವೆ. ನಾವೆಲ್ಲ ಹತ್ತು ಹಡೆದವರ ಥರ ಮಲಗಿದ್ದರೆ ಇವರಿಬ್ಬರೂ ’ನಮ್ಮ ಪುಣ್ಯ ಮಾರಾಯರೇ. ನೋಡಿ ಎಂತಹ ದೈವೀ  ಕಳೆ ಬಂದಿದೆ ಎಲ್ಲರ ಮುಖದ ಮೇಲೆ” ಎನ್ನುತ್ತ ಓಡಾಡುತ್ತಿದ್ದರು!

ಮೂರನೆಯ ದಿನ

ಮರುದಿನ ಬೆಳಿಗ್ಗೆ ನಮಗೆ ನಡೆಯುವದಿದ್ದದ್ದು ಕೇವಲ ೮-೧೦ ಕಿ ಮೀ. ಈ ಅಂತರದ ಲೆಖ್ಖ ಯಾರಿಗೂ ಸರಿಯಾಗಿ ಸಿಕ್ಕಿಲ್ಲ. ಒಟ್ಟೂ ೫೩ ಕಿ.ಮೀ ಅಂತ ಮಾತ್ರ ಗೊತ್ತು. ಮರುದಿನ ನಡೆಯುವಾಗ ಸ್ವಲ್ಪ ದೂರ ಮಳೆ ಸಿಕ್ಕಿತ್ತು. ಇದೂ ಕಡಿದಾದ ದಾರಿ. ಆದರೆ ಗುಡ್ಡ ಹತ್ತುವದೇನೂ ಇಲ್ಲ. ಕೈಲಾಸ ನದಿ ಅಂತ ಕರೆಯುವ ನದಿಯಗುಂಟ ನಡೆಯಬೇಕು. ಕೊನೆ ತಲುಪಲು ಎರಡು-ಮೂರು ಕಿ.ಮಿ ಇರುವಾಗ ಹಿಮ ಬೀಳಲು ಶುರುವಾಯಿತು. ಎಂಥಾ ದೃಶ್ಯ ಅಂತೀರಿ! ಮುಂದೆ ಇದ್ದ ಚಿಕ್ಕಮ್ಮನಿಗೆ ಹೇಳುತ್ತಿದ್ದೆ ನಾನು, “ನೋಡೇ, ನಾವೆಲ್ಲ ಭಕ್ತಿಯಿಂದ ಪರಿಕ್ರಮಣ ಮಾಡಿದ್ದಕ್ಕೆ ಇಂದ್ರ ಲೋಕದಿಂದ ಪುಷ್ಪ ವೃಷ್ಟಿಯಾಗುತ್ತಿದೆ” ಎಂದು!!
ದೂರದಲ್ಲಿ ನಮ್ಮ ವಾಹನಗಳು ಕಾಣತೊಡಗಿದಾಗ ನಮ್ಮ ಮುಖ ಅರಳತೊಡಗಿತ್ತು. ಆ ದಿನವೇ ನಾವು ಬಂದ ದಾರಿಯಲ್ಲಿ ಮರಳಿ ಕಠ್ಮಂಡುವಿನತ್ತ ಹೊರಟಿದ್ದೆವು.  

[ಮುಂದಿನ ವಾರ ಉಪ ಸಂಹಾರ!]


Saturday, September 21, 2013

ಕೈಲಾಸ-ಮಾನಸ ಯಾತ್ರೆ ೬

ಕೈಲಾಸ ಪರಿಕ್ರಮಣ ಕೇವಲ ಹಿಂದೂ ಸಂಪ್ರದಾಯದ ಭಕ್ತರಿಗೆ ಮಾತ್ರ ಮುಖ್ಯವಾದದ್ದಲ್ಲ. ತಮ್ಮ ಮೊದಲ ತೀರ್ಥಂಕರ ಋಷಭದೇವ ನಿರ್ವಾಣ ಹೊಂದಿದ್ದು ಕೈಲಾಸ ಪರ್ವತದ ಮೇಲೇ ಎಂದು ಜೈನ ಪರಂಪರೆಯವರು ನಂಬುತ್ತಾರೆ. ಋಷಭದೇವ ನಿರ್ವಾಣ ಹೊಂದಿದ ಅಷ್ಟಪಾದ ಪರ್ವತವೆಂದರೆ ಇದೇ ಕೈಲಾಸ ಪರ್ವತ ಎಂಬುದು ರೂಢಿಯಲ್ಲಿದೆ. ಬಾನ್ ಎಂಬ ಟಿಬೇಟಿನ ಒಂದು  ಪ್ರಕಾರದ ಬೌದ್ಧ ಸಂಪ್ರದಾಯದವರಿಗೆ ಹಾಗೂ ಗುರು ರಿನ್-ಪೊ-ಚೆ (ಪದ್ಮ ಸಂಭವ) ಯನ್ನು ಅನುಸರಿಸುವ ತಾಂತ್ರಿಕ ಬೌದ್ಧರಿಗೆ ಕೂಡ ಈ ಜಾಗ ಅತೀ ಮಹತ್ವದ್ದು. ಟಿಬೇಟಿನಲ್ಲಿ ತಾಂತ್ರಿಕ ಬುದ್ಧ ಪರಂಪರೆಯನ್ನು ಬೆಳೆಸಿದ ಕೀರ್ತಿ ಗುರು ರಿನ್-ಪೊ-ಚೆ ಗೆ ಸಲ್ಲುತ್ತದೆ. ಅದು ವಜ್ರಯಾನ ಸಂಪ್ರದಾಯ ಎಂದು ಕೇಳಿ ತಿಳಿದಿದ್ದೇನೆ.

ಎಲ್ಲರಿಗೂ ಗೊತ್ತಿರುವಂತೆ ಹಿಂದೂಗಳು ಇದನ್ನ ಪರಶಿವನ ಆವಾಸ ಎಂದು ಭಾವಿಸುತ್ತಾರೆ. ಈ ಕೈಲಾಸ ಪರ್ವತವು ಸಿಂಧೂ (ಇಂಡಸ್), ಸಟ್ಲೇಜ್, ಬ್ರಹ್ಮಪುತ್ರಾ ಹಾಗೂ ಘಾಘರಾ ನದಿಯ  ಉಗಮ ಸ್ಥಾನ ಎಂದು ಹೇಳಲಾಗುತ್ತದೆ. ಪ್ರಾಯಶಃ ಕೈಲಾಸದ ಆಸುಪಾಸಿನಲ್ಲೆಲ್ಲೋ ಇವು ನಾಲ್ಕೂ ಉಗಮಿಸುತ್ತವೆ. ಘಾಘರಾ ನದಿ ಅಲ್ಲಿಂದ ಹರಿದು ಬಂದು ಕೊನೆಗೆ ಗಂಗಾ ನದಿಯನ್ನು ಸೇರುತ್ತದೆ. ನಾವು ಯಾತ್ರೆಗೆ ಹೋಗುವುದೆಂದು ನಿರ್ಧರಿಸಿಯಾದ ಮೇಲೆ ಮಾನಸ ಸರೋವರದ ಬಗ್ಗೆ, ಕೈಲಾಸ ಪರಿಕ್ರಮಣದ ಬಗ್ಗೆ ವಿವರ ಸಂಗ್ರಹಿಸಿದ್ದು. ಅದಕ್ಕೂ ಮೊದಲು ಅದು ಯಾತ್ರೆಗಳಲ್ಲೇ ಶ್ರೇಷ್ಠವಾದ ಒಂದು ಯಾತ್ರೆ  ಮತ್ತು ಕಷ್ಟಕರವಾದ ಯಾತ್ರೆ ಎಂದಷ್ಟೇ ಗೊತ್ತಿತ್ತು.

ಮಾನಸ ಸರೋವರದಲ್ಲಿ ಬೀಡು ಬಿಟ್ಟ ರಾತ್ರಿ ಘೋರಾಕಾರ ಮಳೆ. ನಾಳೆ ಪರಿಕ್ರಮಣ ರದ್ದಾಗಬಹುದು ಅಂತ ಅಂದುಕೊಂಡಿದ್ದೆವು. ಆದರೆ ಬೆಳಗಾಗುತ್ತಿದ್ದಂತೆಯೇ ಎಲ್ಲ ತಿಳಿಯಾಗಿತ್ತು. ಆ ದಿನ ಮಧ್ಯಾಹ್ನದ ಹೊತ್ತಿಗೆ ಅಲ್ಲಿಂದ ಹೊರಟು ದಾರ್ಚಿನ್ ಎಂಬಲ್ಲಿ ತಂಗಬೇಕಿತ್ತು. ಹೊರಡಲು ಸಮಯವಿದ್ದಿದ್ದರಿಂದ ನಾವು ಸರೋವರದ ಆಸುಪಾಸಿನ ಜಾಗವನ್ನು ನೋಡಿ ಬರಲು ಹೊರಟೆವು. ಅಲ್ಲಿ ಮಂದಿರವಿಲ್ಲ. ಹಾಗಾಗಿ ಪೂಜೆ, ತರಾವರಿ ಸೇವೆ, ಆರತಿ, ತೆಂಗಿನಕಾಯಿ ಒಡೆಸುವುದು ಇತ್ಯಾದಿ ಪದ್ಧತಿಯಿಲ್ಲ. ಬೇರೆ ಬೇರೆ ಟ್ರಾವೆಲ್ಸ್ ನವ್ರ ಮೂಲಕ ಬಂದ ಕೆಲವು ಯಾತ್ರಿಗಳು ಅಲ್ಲಲ್ಲೇ ಗುಂಪು ಗುಂಪಾಗಿ ಹೋಮ-ಹವನ ಮಾಡುತ್ತಿದ್ದರು. ಅದೇನು ಕಡ್ಡಾಯವಲ್ಲ.

ಮಾನಸ ಸರೋವರದ ಆಸುಪಾಸಿನಲ್ಲಿ ಸುಮಾರು ಬೌದ್ಧ ಗೊಂಪಾಗಳಿವೆ. ಕೆಲವೊಂದಿಷ್ಟು ಗೊಂಪಾಗಳು ಈಗ ಭಗ್ನಗೊಂಡಿವೆ. ಗೊಂಪಾಗಳೆಂದರೆ ಧ್ಯಾನ ಮಂದಿರಗಳು. ಬೌದ್ಧ ಮಠಗಳೆಂದೂ ಅವುಗಳನ್ನು ಅರ್ಥೈಸಬಹುದು. ಈ ಜಾಗದಲ್ಲಿ ಗುರು ರಿನ್-ಪೊ-ಚೆ ಬಂದು ತಂಗಿದ್ದನೆಂದೂ ಹೇಳಲಾಗುತ್ತದೆ. ನಮಗೆ ಎಲ್ಲವನ್ನೂ ನೋಡಲಾಗಲಿಲ್ಲ. ನಿಜ ಹೇಳಬೇಕೆಂದರೆ ಪರಿಕ್ರಮಣದ ದಾರಿಯಲ್ಲೂ ಹಲವು ಗೊಂಪಾಗಳು ಸಿಗುತ್ತವೆ. ಆದರೆ ನಮ್ಮ ಯಾತ್ರೆಯ ಮಿತಿಯಲ್ಲಿ ಅವೆಲ್ಲವನ್ನೂ ನೋಡುವದಕ್ಕೆ ಆಗಿಲ್ಲ. ಅಲ್ಲೇ ಗುಡ್ಡವೊಂದರ ನೆತ್ತಿಯ ಮೇಲಿದ್ದ ’ಜಿ’ವು’ (ಅಥವಾ ’ಚಿ’ವು’ ಅಂತ ಇರಬೇಕು) ಗೊಂಪಾವೊಂದನ್ನು ನೋಡಿ ಬಂದೆವು. ಮಣಿಸರಗಳನ್ನು ಮಾರುತ್ತ ಬಂದ ಟಿಬೆಟಿಯನ್ ಅಜ್ಜಿಯೊಬ್ಬಳಿಂದ ಒಂದಿಷ್ಟು ಖರೀದಿಯೂ ಆಯಿತು.

ಮಧ್ಯಾಹ್ನ ಅಲ್ಲಿಂದ ಹೊರಟು ದಾರ್ಚಿನ್ ತಲುಪಿದೆವು. ದಾರ್ಚಿನ್ ನಿಂದ ಪರಿಕ್ರಮಣ ಆರಂಭವಾಗುತ್ತದೆ. ಮೊದಲನೆಯ ದಿನ ದಾರ್ಚಿನ್ ಇಂದ ಸುಮಾರು ೧೨ ಕಿ.ಮಿ ದೂರದ ದಿರಾಪುಕ್ ವರೆಗೆ ನಡೆಯಬೇಕು. ಎರಡನೆಯ ದಿನ ದಿರಾಪುಕ್ ನಿಂದ ಹೊರಟು, ಡೋಲ್ಮಾ ಲಾ ಪಾಸ್ (೧೮, ೬೦೦ ಅಡಿಗಳು) ದಾಟಿ ಸುಮಾರು ೩೨ ಕಿ.ಮಿ ನಡೆದು ಜುತುಲ್ ಪುಕ್ ತಲುಪಬೇಕು. ಮೂರನೆಯ ದಿನ ಅಲ್ಲಿಂದ ಹೊರಟು ಸುಮಾರು ೭-೮ ಕಿ.ಮಿ ನಡೆದರೆ ಮರಳಿ ದಾರ್ಚಿನ್ ಗೆ ಕರೆದುಕೊಂಡು ಹೋಗುವ ಬಸ್ಸು ಕಾಯುತ್ತಿರುತ್ತದೆ. ದಾರ್ಚಿನ್ ನಲ್ಲಿ ಕೂಡ ಖರೀದಿ-ಗಿರೀದಿ ಮಾಡಬಹುದು. ಆದರೆ ಶಿವನ ಭಕ್ತರು ಬಂಧು ಮಿತ್ರರಿಗೆ ಕೊಡಲೆಂದು ಶಿವಲಿಂಗ, ಮೂರ್ತಿ, ಜಪಸರ, ಇತ್ಯಾದಿಗಳನ್ನು ಹುಡುಕಿದರೆ ನಿರಾಸೆಯಾಗುತ್ತದೆ. ಅಲ್ಲಿರುವವೆಲ್ಲ ಟಿಬೇಟಿಯನ್ ಅಂಗಡಿಗಳು. ಅವೆಲ್ಲ ಬೇಕೆಂದರೆ ನೇಪಾಲದಲ್ಲೇ ಖರೀದಿ ಮಾಡುವುದು ಒಳ್ಳೆಯದು. ನಾವಿಲ್ಲಿ ಬೆತ್ತದ ಊರುಗೋಲುಗಳನ್ನು ಖರೀದಿ ಮಾಡಿದೆವು. ಖರೀದಿ ಮುಗಿಸಿ ನಮ್ಮ ಬಿಡಾರದತ್ತ ಹೊರಳಿದರೆ ಎದುರಿನ ಬೆಟ್ಟಗಳ ಸಾಲಿನಲ್ಲಿ ಹಿಮಗಿರಿಯೊಂದು ಕಂಡಿತು. ನೋಡಿದರೆ ಕೈಲಾಸದ ಶಿಖರವಂತೆ! ನಮ್ಮ ಬಿಡಾರದ ಕಿಟಕಿಯಿಂದಲೂ ಅದು ಕಾಣುತ್ತಿತ್ತು. ಸಾಮಾನ್ಯವಾಗಿ ಮೋಡ ಮುಸುಕೇ ಇರುತ್ತದಂತೆ. ನಾವು ಬಾಯಿ ಬಿಟ್ಟುಕೊಂಡು ಎಲ್ಲರನ್ನೂ ಕರೆ ಕರೆದು ತೋರಿಸುವಷ್ಟರಲ್ಲಿ ಮತ್ತೆ ಮೋಡ ಮುಸುಕೇ ಬಿಟ್ಟಿತು.

ಆ ರಾತ್ರಿ ಎಲ್ಲರಿಗೂ  ಒಂಥರಾ ಸಂಭ್ರಮ... ಕಳವಳ... ಆತಂಕ. ನಾಳೆ ಹೇಗೋ ಏನೋ, ನಮ್ಮ ಹತ್ರ ಆಗುತ್ತೋ ಇಲ್ಲವೋ...ಆದರಲ್ಲೂ ನಮ್ಮ ಷೆರ್ಪಾಗಳು ಎಲ್ಲರ ಕೋಣೆಗೂ ಬಂದು ಒಂದಿಷ್ಟು ಹೆದರಿಸಿ ಹೋಗಿದ್ದರು. ನಾವು ಏನೇನು ಮುನ್ನೆಚ್ಚೆರಿಕೆ ತೆಗೆದುಕೊಳ್ಳಬೇಕು, ಹೇಗೆ ನಡೆಯಬೇಕು, ಮುಂತಾದವುಗಳ ಬಗ್ಗೆ ತರಬೇತು ಮಾಡಲು ಬಂದವರು ಅಲ್ಲಿ ಎಚ್ಚರಿಕೆ ವಹಿಸದ ಕೆಲವರು ಹೇಗೆ ಪ್ರಾಣ ಬಿಟ್ಟರು ಎಂಬ ಕತೆಗಳನ್ನು ಸಾದ್ಯಂತವಾಗಿ ವಿವರಿಸಿ ನಮ್ಮ ಬೆವರಿಳಿಸಿದ್ದರು. “ಅದೆಂತದೇ ಆಗಲಿ ಹೋಪದೇಯ” ಅಂತ ನನ್ನ ಚಿಕ್ಕಮ್ಮ ವೀರ ರಾಣಿ ಕಿತ್ತೂರು ಚೆನ್ನಮ್ಮನಂತೆ ಕಹಳೆ ಮೊಳಗಿಸಿದಳು.

ಪರಿಕ್ರಮಣದ ಮೂರು ದಿನಗಳಿಗೆಂದು ಒಂದು ಚಿಕ್ಕ ಬ್ಯಾಗ್ ಪ್ಯಾಕ್ ತಯಾರಾಯಿತು. ಜಾಸ್ತಿ ಏನೂ ತುಂಬುವಂತಿಲ್ಲ. ಅಲ್ಲಿ ನಮ್ಮ ನಮ್ಮ ಪ್ರಾಣ ಹೊರುವುದೇ ಕಷ್ಟವಾದಾಗ ಲಗೇಜು ಹೊರುವುದು ಎಲ್ಲಿ ಬಂತು? ಒಂದಿಷ್ಟು ಒಣ ದ್ರಾಕ್ಷಿ, ಬಾದಾಮು, ಒಣಗಿದ ಬಾಳೆ ಹಣ್ಣು (ಸುಕೇಲಿ ಅಂತೀವಿ), ಒಣಗಿದ ಅಂಜೂರ ಇತ್ಯಾದಿ ತುಂಬಿಕೊಂಡಿದ್ದೆವು. ಪ್ರತಿಯೊಬ್ಬರಿಗೂ ಒಂದೊಂದು ಥರ್ಮಾಸ್ ಫ್ಲಾಸ್ಕ ಬೇಕು ಬಿಸಿ ನೀರು ತುಂಬಿಟ್ಟುಕೊಳ್ಳಲು. ಆಮೇಲೆ ಒಂದು ಟಾರ್ಚ, ಔಷಧಗಳು, ಕಾಲು ನೋವಿಗೆ ಮೂವ್ ಇತ್ಯಾದಿ. ಹಾಕಿದ್ದ ಬಟ್ಟೆಯಲ್ಲಿಯೇ ಮೂರು ದಿನ ಕಳೆಯಬೇಕು. ಇನ್ನು ಅಲ್ಲಿಯ ಹವಾಮಾನಕ್ಕೆಂದು ಒಂದರ ಮೇಲೊಂದು ಲೇಯರ್ ಬಟ್ಟೆ ತೊಡಬೇಕು. ಮೊದಲು ಥರ್ಮಲ್ ಒಳ ಉಡುಪು, ಅದರ ಮೇಲೆ ಮಾಮೂಲು ಬಟ್ಟೆ, ಅದರ ಮೇಲೆ ಉಣ್ಣೆಯ ಜರ್ಕಿನ್, ಅದರ ಮೇಲೆ ಒಂದು ಡೌನ್ ಜ್ಯಾಕೆಟ್! ಡೌನ್ ಜ್ಯಾಕೆಟನ್ನು ನಮ್ಮ ಟ್ರಾವೆಲ್ಸನವರೇ ಬಾಡಿಗೆಗೆ ಕೊಟ್ಟಿದ್ದರು. ಈವಿಷ್ಟು ಬೇಕೇ ಬೇಕು. ಏಯ್ ನಂಗ್ ಚಳಿ ಗಿಳಿ ಹೆದರಿಕೆ ಇಲ್ಲ, ಘೋರಾಕಾರ ಚಳಿಯಲ್ಲೂ ಬನಿಯನ್ ಕೂಡ ಹಾಕ್ಕೊಳ್ಳದೇ ಇರ್ತೀನಿ ಅನ್ನುವ ಒಣ ಜಂಭ ಬ್ಯಾಡ!

ದಾರ್ಚಿನ್ನಿನಿಂದ ಹೊರಟು ಅನತಿ ದೂರದಲ್ಲಿರುವ ಯಮದ್ವಾರ ಎಂಬ ಜಾಗದವರೆಗೆ ವಾಹನ ಬರುತ್ತದೆ. ಅಲ್ಲಿಂದ ನಮ್ಮ ಪರಿಕ್ರಮಣ ಆರಂಭ. ಈ ಪರಿಕ್ರಮಣವನ್ನು ಕುದುರೆಯ ಮೇಲೂ ಮಾಡಬಹುದು. ಮೂರೂ ದಿನಗಳಿಗೆಂದು ಕುದುರೆಯನ್ನು ಬಾಡಿಗೆಗೆ ಗೊತ್ತು ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲ, ಆದಷ್ಟು ನಡೀತೀನಿ ಆಗೋದಿಲ್ಲ ಅಂದ್ರೆ ಕುದುರೆ ಮೇಲೆ ಹೋಗುತ್ತೀನಿ ಅನ್ನಬೇಡಿ. ಮಧ್ಯೆ ಕುದುರೆ ಸಿಕ್ಕರೆ ಸಿಕ್ಕೀತು ಇಲ್ಲದಿದ್ದರೆ ಇಲ್ಲ. ಇನ್ನು ಕಾಲ್ನಡಿಗೆಗೆ ಹೋಗುವವರು ತಮ್ಮ ಬ್ಯಾಗ್ ಪ್ಯಾಕ್ ಹೊರಲೆಂದು ಪೋರ್ಟ್‌ರ್ ಗಳನ್ನು ಗೊತ್ತು ಮಾಡಿಕೊಳ್ಳುತ್ತಾರೆ. ಅದು ಒಳ್ಳೆಯದು. ಎರಡನೆಯ ದಿನದ ಪರಿಕ್ರಮ ದಲ್ಲಿ ಕೈಲಿದ್ದ ಊರುಗೋಲೂ ಭಾರವಾಗತೊಡಗುತ್ತದೆ. ನಾನು ಹೇಳಿದ್ನಲ್ಲಾ ಯಮದ್ವಾರ ಅಂತ...ಅಲ್ಲಿ ಕುದುರೆಯವರೂ, ಪೋರ್ಟ್‌ರುಗಳೂ ಎಲ್ಲ ತಯಾರಾಗಿ ನಿಂತಿರುತ್ತಾರೆ.

ನಮಗೆ (ಅಂದರೆ ನಾವು ಐದು ಜನ) ಪೋರ್ಟರ್ ಸಿಗದಿದ್ದರಿಂದ ನಮ್ಮ ಷೆರ್ಪಾಗಳೇ ಇಬ್ಬಿಬ್ಬರ ಲಗೇಜನ್ನು ಒಬ್ಬೊಬ್ಬರು ಹೊತ್ತುಕೊಂಡು ಬರುತ್ತೇವೆ ಅಂದರು. ಒಳ್ಳೆಯದಾಯಿತು ಅಂದುಕೊಂಡೆವು. ಯಾಕೆಂದರೆ ಎಲ್ಲ ಚೈನೀಸ್ ಪೋರ್ಟರುಗಳು. ಷೆರ್ಪಾಗಳ ಜೊತೆ ಹಿಂದಿಯಲ್ಲಾದರೂ ಮಾತಾಡಬಹುದು. ಏನಾದರೂ ಜಗಳ-ಪಿಗಳ ಶುರುವಾದರೆ ಅವರು ಚೀನೀ ಭಾಷೆಯಲ್ಲಿ ಮತ್ತು ನಾವು ಹರುಕು ಮುರುಕು ಹಿಂದಿಯಲ್ಲಿ ಒಬ್ಬರಿಗೊಬ್ಬರು ತಿಳಿಸಿ ಹೇಳುವಷ್ಟರಲ್ಲಿ ಪ್ರಾಣ ಹೋಗಿರುತ್ತದೆ ಅಂತ ಲೆಕ್ಕಾಚಾರ ಹಾಕಿ ಖುಷಿ ಪಟ್ಟೆವು! ಆದರೆ, ಚೈನೀಸ್ ಪೋರ್ಟ್‌ರುಗಳನ್ನ ಗೊತ್ತು ಮಾಡಿಕೊಂಡವರಿಗೆ ಅಂತಹ ಕೆಟ್ಟ ಅನುಭವವೇನೂ ಆಗಲಿಲ್ಲವಂತೆ. 

ಮೊದಲ ದಿನ

ಆ ಘಳಿಗೆ ಬಂದೇ ಬಿಟ್ಟಿತು. ಯಮದ್ವಾರ ಅಂತ ಯಾಕೆ ಹೆಸರಿಟ್ಟಿದ್ದಾರೋ ಗೊತ್ತಿಲ್ಲ. ಆ ಹೆಸರು ಕೇಳಿಯೇ ಭಯವಾಗಿತ್ತು. ಅಲ್ಲಿ ಒಂದು ಚಿಕ್ಕ ಗುಡಿ ಇದೆ. ಅದರೊಳಗೆ ಆಡು, ಮೇಕೆಗಳ ತಲೆ ತರಿದು ನೇತು ಹಾಕಿದ್ದಾರೆ. ಹಸಿ ಹಸಿ ತಲೆಗಳಲ್ಲ ಒಣ ಒಣ ತಲೆಗಳು!! ಆ ಗುಡಿಯನ್ನ ಮೂರು ಸುತ್ತು ಹಾಕಿ ಗುಡಿಯೊಳಗಿರುವ ಘಂಟೆಯನ್ನು ಬಾರಿಸಿ ’ಯಮಧರ್ಮ ರಾಯ ನಿನ್ನ ಕಣ್ಣು ನನ್ನ ಮೇಲೆ ಬೀಳದಿರಲಿ’ ಎಂದು ಪ್ರಾರ್ಥನೆ ಮಾಡಿಕೊಂಡು ಹೋಗುವ ಪದ್ಧತಿಯಂತೆ. ಆ ಗುಡಿ ನೋಡಿಯೇ ಅರ್ಧ ಜೀವ ಬಾಯಿಗೆ ಬಂದಿತ್ತು. ನಾವೂ ಸುತ್ತು ಹಾಕಿ, ಘಂಟೆ ಬಾರಿಸಿಯೇ ಹೊರಟೆವು.

ನಡೆಯುವವರು ಅತ್ಯಂತ ನಿಧಾನವಾಗಿ ನಡೆಯುತ್ತ ಹೋಗಬೇಕು. ಜೊತೆಯಲ್ಲಿದ್ದವರು ಜೋರಾಗಿ ನಡೆಯುತ್ತಿದ್ದಾರೆ, ನಾನು ಹಿಂದೆ ಬೀಳುತ್ತೇನೆ ಮತ್ತು ಎಲ್ಲರಿಗಿಂತ ಮುಂಚೆ ಸೇರೋಣ ಎಂಬ ಆತುರ ಬೇಡ. ಸಮತಟ್ಟಾದ ಹಾದಿಯಲ್ಲಿ ಕಷ್ಟವಾಗುವುದಿಲ್ಲ. ಆದರೆ, ಚಿಕ್ಕ ಏರಿದ್ದರೂ ಹತ್ತಲಾಗುವುದಿಲ್ಲ. ಅವರವರ ಶಕ್ತಿಗನುಸಾರವಾಗಿ ನಡೆಯುತ್ತ ಹೋಗಬೇಕು. ಮತ್ತೇನೆಂದರೆ ಎಲ್ಲರೂ ಒಟ್ಟಿಗೇ ಹೋಗಿ ಸೇರಲಾಗುವುದಿಲ್ಲ. ಯಾಕ್ ಎಂಬ ಹೆಸರಿನ ನದಿಯಗುಂಟ ಹೋಗಬೇಕು. ಹಾದಿ ಅಗಲವಾಗೇ ಇದೆ. ಆದರೆ, ಏರು ಹತ್ತುವಾಗ ಮಾತ್ರ ಎರಡು ಹೆಜ್ಜೆ ನಡೆಯುವುದು, ಆಮೇಲೆ ಸುಧಾರಿಸಿಕೊಂಡು ಮತ್ತೆ ಎರಡು ಹೆಜ್ಜೆ ನಡೆಯುವುದು. ಅಂತಹ ಕಡಿದಾದ ಏರೇನೂ ಅಲ್ಲ. ಇಷ್ಟು ಚಿಕ್ಕ ಏರಿಗೆ ಹೀಗಲ್ಲ ಅಂತ ಅನಿಸಿತ್ತು. ಏದುಸಿರು ಬಂದಂತಾದರೆ, ಊರುಗೋಲನ್ನ ನೆಲಕ್ಕೆ ಗಟ್ಟಿಯಾಗಿ ಊರಿಕೊಂಡು ಅದರ ಮೇಲೆ ನಮ್ಮೆದೆ ಆನಿಸಿ ಅರ್ಧ ನಿಮಿಷ ನಿಂತುಕೊಂಡರೆ ಸ್ವಲ್ಪ ಆರಾಮವಾಗುತ್ತದೆ. ಇದನ್ನ ಷೆರ್ಪಾಗಳು ಹೇಳಿಕೊಟ್ಟಿದ್ದರು. ಬೌದ್ಧ ಭಕ್ತರೊಬ್ಬರು ಹೆಜ್ಜೆ ಹೆಜ್ಜೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತ ಹೊರಟಿದ್ದರು. ಹೀಗೇ ಮಾಡುತ್ತ ಇಡೀ ಪರಿಕ್ರಮಣ ಮುಗಿಸುವುದಕ್ಕೆ ಎಷ್ಟು ದಿನ ಹಿಡಿದೀತೋ ಗೊತ್ತಿಲ್ಲ. ಎರಡನೆಯ ದಿನಕ್ಕೆ ಹೋಲಿಸಿದರೆ ಮೊದಲನೆ ದಿನ ಅಂತಹ ಕಷ್ಟವಾಗಲಿಲ್ಲ.

ನಾವು ದಿರಾಪುಕ್ ತಲುಪುವ ಹೊತ್ತಿಗೆ ಮದ್ಯಾಹ್ನದ ಮೂರು-ನಾಲ್ಕು ಗಂಟೆಯಾಗಿರಬೇಕು. ನಮ್ಮ ಗುಂಪಿನಲ್ಲಿ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ನಾನು ಮೊದಲು ಹೋಗಿ ಸೇರಿದೆವು. ದಿರಾಪುಕ್ ಸಮೀಪಿಸಿದಂತೆ ಒಂದು ದೊಡ್ಡ ಏರು ಸಿಗುತ್ತದೆ. ಅದನ್ನು ಏರಲು ಸುಮಾರು ಅರ್ಧಗಂಟೆಯೇ ಹಿಡಿದಿತ್ತು. ಅಯ್ಯಬ್ಬ ಅನ್ನುತ್ತ ಏರಿನ ತುದಿಗೆ ತಲುಪಿದರೆ ನಮ್ಮ ಸುಸ್ತೆಲ್ಲ ಮಾಯವಾಗುವಂತಹ ದೃಶ್ಯ.



ಬಲಕ್ಕೆ ತಿರುಗಿದರೆ ತೆಳುವಾಗಿ ಭಸ್ಮ ಲೇಪಿಸಿಕೊಂಡಂತೆ ಹಿಮ ಬಳಿದ ಕೈಲಾಸನ ಉತ್ತರದ ಮುಖ ಗೋಚರಿಸುತ್ತದೆ. ಕೈ ಚಾಚಿದರೆ ಕೈಲಾಸ ಅನ್ನುವಷ್ಟು ಹತ್ತಿರದಲ್ಲಿ! ಕೈಲಾಸದ ಈ ಮುಖವನ್ನು ಬಹಳಷ್ಟು ಫೋಟೋಗಳಲ್ಲಿ, ಭಿತ್ತಿಚಿತ್ರಗಳಲ್ಲಿ ನೋಡಿರುತ್ತೀರಿ. ಎರಡು ಬೆಟ್ಟಗಳ ಸಂದಿಯಲ್ಲಿ ಹಿಮಶಿಖರ ಕಾಣುತ್ತದೆ. ಮುಂಜಾವಿನ ಸೂರ್ಯ ಕಿರಣಗಳು ಸೋಕಿದಾಗ ಬಂಗಾರವರ್ಣ ವಾಗುವ ಕೈಲಾಸ ಶಿಖರ ಅಂದು ಚಂದ್ರಕಳೆ ಹೊತ್ತಿತ್ತು. ನಾವು ಅಲ್ಲೇ ಕೂತು ಬಿಟ್ಟೆವು. ಅವರ್ಣನೀಯ ಆನಂದ ಎನ್ನುವುದನ್ನು ಬಹಳಷ್ಟು ಬಾರಿ ಬಳಸುತ್ತೇವೆ, ಓದುತ್ತೇವೆ. ಬರೆಯುತ್ತೇವೆ. ಆವತ್ತು ನಾವದನ್ನ ಅನುಭವಿಸಿದೆವು. 

***ಮುಂದುವರೆಯುವುದು!      



                                                                                   


Saturday, September 14, 2013

ಕೈಲಾಸ-ಮಾನಸ ಯಾತ್ರೆ ೫

ನ್ಯಾಲಂನಿಂದ ಡೋಂಗ್ಬಾ ಹೋಗಿ ತಲುಪಲು ಸುಮಾರು ೭-೮ ಗಂಟೆಗಳು ಬೇಕು. ದಾರಿಯ ಮಧ್ಯೆ ಸಾಗ ಎಂಬ ಊರನ್ನು ದಾಟಿ ಹೋಗುತ್ತೇವೆ. ಈ ದಾರಿಯಲ್ಲಿ ಹೋದವರಿಗೆ ಅನೂಹ್ಯ ವಾತಾವರಣದ ಟಿಬೇಟಿನ ಪ್ರಸ್ಥಭೂಮಿಯ ಪರಿಚಯವಾಗುತ್ತದೆ.



ಮಧ್ಯಾಹ್ನದ ಹೊತ್ತಿಗೆ ಸಾಗಕ್ಕಿಂತ ಸ್ವಲ್ಪ ಹಿಂದೆಯೇ ಸಿಗುವ ಬ್ರಹ್ಮಪುತ್ರ ನದಿಯ ತಟದಲ್ಲಿ ಊಟ. ಕೈಲಾಸ ಪರ್ವತದ ಬಳಿ ಉಗಮವಾಗುವ ಈ ನದಿ ಅಲ್ಲಿ ಝಾಂಗ್ಬೊ ಎಂಬ ಹೆಸರಿನಲ್ಲಿ ಪ್ರಚಲಿತವಾಗಿದೆ, ನಾವು ಹೋದ ಸಮಯದಲ್ಲಿ ನದಿಯ ಹರವು ಚಿಕ್ಕದಾಗಿತ್ತು. ಇದೇ ನದಿ ಮಳೆಗಾಲದಲ್ಲಿ ನಮ್ಮ ಆಸ್ಸಾಂ ನ ಜನತೆಯನ್ನು ತಲ್ಲಣಗೊಳಿಸುತ್ತದೆ. ಈ ನದಿ ಮಾನಸ ಸರೋವರದ ಬಳಿಯಿಂದೆಲ್ಲೋ ಉಧ್ಭವಿಸಿ ರಿಬ್ಬನ್ ಎಳೆಯಂತೆ ಹರಿಯುತ್ತ ಹರಿಯುತ್ತ ಇದ್ದಕ್ಕಿದ್ದಂತೆ ಕಾಣದಾಗುತ್ತದೆ, ನಂತರ ಮುಂದೆಲ್ಲೋ ಧುತ್ತೆಂದು ಹರಿಯತೊಡಗುತ್ತದೆ. ಆಶ್ಚರ್ಯವೆಂದರೆ ಅಂತಹ ನದಿ ಹರಿದರೂ ಆ ಜಾಗ ಮರಳುಗಾಡಿನಂತಿದೆ. ಕೃಷಿ ಅಂತೇನಾದರೂ ಕಾಣಸಿಗುವುದು ನ್ಯಾಲಂನ ಬಳಿ ಮಾತ್ರ. ಅಲ್ಲಿಯವರೆಗೂ... ಮುತ್ತಿಕ್ಕುವ ಬೆಳ್ಳಿ ಮೋಡಗಳ ಮರೆಯಲ್ಲಿ ನೆರಳು-ಬೆಳಕಿನಾಟವಾಡುವ ಬೋಳು ಬೋಳು ಪರ್ವತ ಸಾಲುಗಳನ್ನೇ ನೋಡುತ್ತ ಹೋಗುತ್ತೇವೆ.

ಮೋಡದ ಛತ್ತರಿಯ ಕೆಳಗೆ ಬೆವರುವ
ಅಸಂತೃಪ್ತ ನಿರ್ಮೋಹಿಯಂತೆ ಒಮ್ಮೆ
ಸೂರ್ಯನ ತಾಪಕ್ಕೆ ಇಂಬಾದರೂ ಕುಂಚದ ಕಲೆಯಾದ
ಧೀರ ವಿರಹಿಯಂತೆ ಇನ್ನೊಮ್ಮೆ
ಹಾದಿಯಂಚಿಗೆ ಕಾವಲು ಕೂತ ಬರಡೆದೆಯ ಸೈನಿಕರಂತೆ ಮಗುದೊಮ್ಮೆ
ಅಲ್ಲಲ್ಲಿ ಬೆಳ್ಳಿ ಮುಕುಟ ಧರಿಸಿದ ಘನವೆತ್ತ ರಾಜರಂತೆ ಕಾಣುವ ಹಿಮಶಿಖರಗಳು
ಬಯಲ ಭೇಧಿಸಿ ಹಾವಿನಂತೆ ಸಾಗುವ ಹಾದಿ
ಮರಳುಗಾಡೋ ಎಂಬಂತೆ ಮರಳ ದಿನ್ನೆಗಳು, ಚಂಚಲ ಹವಾಮಾನ,
ಮತ್ತು ಇವ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಸರಿ ಸರಿದು ಸಾಗುವ ಏಕಾಂಗಿ ನದಿ
ಹಿಮ ಕರಗಿದ ಟಿಬೇಟಿಯನ್ ಕಣಿವೆಗಳ ಸೊಗಸಿದು!

ಎಳೆಂಟು ತಾಸುಗಳ ಸುದೀರ್ಘ ಪ್ರಯಾಣದ ತರುವಾಯ ಸುಮಾರು ೫ ಗಂಟೆಗೆ ಡೋಂಗ್ಬಾ ತಲುಪಿದೆವು. ಹಿಮಾಲಯದ ಕಣಿವೆಗಳಲ್ಲಿ ಸುದೀರ್ಘ ಹಗಲು. ಬೆಳಕು ನೋಡಿ ಇನ್ನೂ ಆರು ಗಂಟೆಯಿರಬೇಕು ಅಂದುಕೊಂಡರೆ ಆಗಲೇ ರಾತ್ರಿ ಒಂಬತ್ತಾಗಿರುತ್ತದೆ! ಡೋಂಗ್ಬಾ ತಲುಪುವಷ್ಟರ ಹೊತ್ತಿಗೇ ಹಲವರಿಗೆ ಅಸ್ವಸ್ಥತೆ ಶುರುವಾಗಿತ್ತು. ಶೀತ, ನೆಗಡಿ, ತಲೆನೋವು, ಜ್ವರ, ಸುಸ್ತು, ವಾಂತಿ, ಅಜೀರ್ಣ...ಸುಮಾರು ಹಣ್ಣಾಗಿದ್ದೆವು. ಪುಣ್ಯಕ್ಕೆ ನಮ್ಮ ಜೊತೆ ಪ್ರಸೂತಿ ತಜ್ಞೆಯೊಬ್ಬರು ತಮ್ಮ ತಂದೆಯ ಜೊತೆ ಬಂದಿದ್ದರು. ಶೈಲಜಾ. ಅವರು ನಮ್ಮ ಫುಲ್ ಟೈಮ್ ಫಿಸಿಶಿಯನ್!

ನಮ್ಮ ದಿನಚರಿ ಹೀಗಿರುತ್ತಿತ್ತು. ಬೆಳಿಗ್ಗೆ ನಸುಕಿಗೆ ’ಗರಂ ಪಾನೀ’ ಅನ್ನುತ್ತ ಎಬ್ಬಿಸಿಬಿಡುತ್ತಿದ್ದರು. ಹೂ ಬೆಚ್ಚಗಿನ ನೀರನ್ನು ಒಂದು ಪಿಪಾಯಿಯಲ್ಲಿ ತಂದಿಡುತ್ತಿದ್ದರು. ಅದರಲ್ಲಿ ಹಲ್ಲುಜ್ಜಿ ಮುಖ ತೊಳೆದ ಶಾಸ್ತ್ರ ಮಾಡುವುದು. ಅದಾದ ನಂತರ ’ಚಾ....ಯ್’ ಅನ್ನುತ್ತ ಬರುತ್ತಿದ್ದರು. ಆಮೇಲೆ ಬೆಳಗಿನ ನಾಷ್ಟಾ. ಮಧ್ಯಾಹ್ನ ಊಟ. ರಾತ್ರಿ ಊಟಕ್ಕಿಂತ ಮೊದಲು ಎಲ್ಲರಿಗೂ ಸೂಪ್ ಸಿಗುತ್ತಿತ್ತು. ಅವಿಷ್ಟರ ನಡುವೆ ಪ್ರಯಾಣ.

ಇಲ್ಲಿ ನಾವುಳಿದಿದ್ದು ತಗಡು ಹೊದಿಸಿದ ಷೆಡ್ಡುಗಳು. ಮಣ್ಣಿನ ಷೆಡ್ಡುಗಳೂ ಇವೆ. ೪ ಜನರಿಗೆ ಒಂದೊಂದು ರೂಮಿನ ವ್ಯವಸ್ಥೆಯಿತ್ತು. ಬಸ್ಸಿಳಿಯುತ್ತಿದ್ದಂತೆಯೇ ನನ್ನ ತಮ್ಮ ಚಿಕ್ಕ ಮಕ್ಕಳ ಹಾಗೆ ಎಲ್ಲರಿಗಿಂತ ಮುಂಚೆ ಓಡಿ ಹೋಗಿ ನಾವು ಐದು ಜನಕ್ಕೆ ರೂಮೊಂದನ್ನು ಹಿಡಿದು ನಿಲ್ಲುತ್ತಿದ್ದ. ಇದೇ ರೀತಿ ಪ್ರಯಾಣದ ಆರಂಭಕ್ಕೆ ಓಡಿ ಹೋಗಿ ಬಸ್ಸಿನ ಸೀಟುಗಳನ್ನೂ ನಮಗಾಗಿ ಕಾಯ್ದಿರಿಸಿ ನಮ್ಮ ಭಾರವನ್ನೊಂದಿಷ್ಟು ಕಡಿಮೆ ಮಾಡುತ್ತಿದ್ದ. ಆದರೆ, ಅವನ ಈ ಚಿಕ್ಕ ಸಹಾಯದ ಬದಲಿಗೆ ಅವನ ಹೆಂಡತಿಯೂ ಮತ್ತೂ ನಾನೂ ಕೂತಲ್ಲಿಯೇ ಅವನಿಗೆ ಊಟ, ತಿಂಡಿ, ಬಿಸಿ ನೀರು, ಚಾ, ಸೇಬು ಹಣ್ಣು, ಸರಬರಾಜು ಮಾಡಿ ಸುಸ್ತಾಗುತ್ತಿದ್ದೆವು ಎನ್ನಿ! ಎದುರಾಡಿದರೆ ’ನಾನು ನಿಮಗೆ ರೂಮ್ ಹಿಡಿದು ಕೊಡೋದಿಲ್ವಾ, ಸೀಟು ಹಿಡಿಯೋದಿಲ್ವಾ?’ ಅನ್ನುವ ರೋಪ್ ಬೇರೆ.

ಮರುದಿನ ಬೆಳಿಗ್ಗೆ ಮತ್ತೆ ಪ್ರಯಾಣ. ಮತ್ತೆ...ಹಾವು ಸರಿದಂತೆ ಕಾಣುವ ರಸ್ತೆ...ಇಕ್ಕೆಲಗಳಲ್ಲಿ ಪರ್ವತ ಶ್ರೇಣಿಗಳು...ನಿರ್ಮಾನುಷ... ನೀರವ ಮೌನದ ವೀಥಿ...

ಮಧ್ಯಾಹ್ನ ಇಲ್ಲಿಯ ಸುಮಾರು ಒಂದು ಗಂಟೆಗೆಯ ಹೊತ್ತಿಗೆ ’ಅಲ್ ನೋಡ್ರೀ ಬಂತು ಮಾನಸ ಸರೋವರ’ ಅಂತ ಸಹ ಪ್ರಯಾಣಿಕರು ಮಿಸುಕಾಡತೊಡಗುವವರೆಗೆ ಬಸ್ಸಿನಲ್ಲಿ ಸದ್ದಿರಲಿಲ್ಲ. “ಓಹ್...ಹೌದಲ್ಲ..” ’ಅಂತೂ ಬಂದ್ವಲ್ಲ..” ಎಂಬ ಉದ್ಗಾರಗಳು ಹೊರಟವು. ದೂರದಿಂದಲೇ ಗೋಚರಿಸಿದ ನೀಲಿ ಸರೋವರ...ಸರೋವರಕ್ಕೆ ಅಂಟಿದಂತಿದ್ದ ಆಕಾಶ...ಆಕಾಶದಲ್ಲಿ ಸ್ತಬ್ದವಾಗಿದ್ದ ಬಿಳಿ ಮೋಡಗಳ ಗುಚ್ಛ...ಇನಿಯನನ್ನೇ ಧ್ಯಾನಿಸುತ್ತ ಮಲಗಿರುವ ಅಪ್ಸರೆಯೊಬ್ಬಳ ಮೈಗಂಟಿದ ನೀಲಿ ಪಾರದರ್ಶಕ ಮೇಲ್ವಸ್ತ್ರದಂತೆ...ಚೌಕಟ್ಟಿಲ್ಲದ ಚಿತ್ರ.

ಇನ್ನು ಮುಂದಿನ ದಿನಗಳಲ್ಲಿ ಮಾನಸ ಸರೋವರದ ವರೆಗೆ ಚಿಕ್ಕ ಚಿಕ್ಕ ವಿಮಾನಗಳು ಹಾರಾಡಿದರೂ ಆಶ್ಚರ್ಯವಿಲ್ಲ. ಯಾಕೆಂದರೆ ಈಗಲೇ ಅಲ್ಲಿಗೆ ಹೆಲಿಕಾಪ್ಟರ್ ಗಳು ಹೋಗಿ ಬರುವಷ್ಟು ವ್ಯವಸ್ಥೆ ಮಾಡಲಾಗಿದೆ. ಹೆಲಿಕಾಪ್ಟರ್ ಹಾರಾಡುತ್ತವೋ ಇಲ್ಲವೋ ನಿಖರವಾಗಿ ಗೊತ್ತಿಲ್ಲ, ಆದರೆ, ಸುಸಜ್ಜಿತ ತಂಗುದಾಣವಂತೂ ನಿರ್ಮಾಣವಾಗಿದೆ. ನಮ್ಮನ್ನು ಅಲ್ಲಿ ಇಳಿಸಿ ಹೋಗುವ ಬಸ್ಸು ಮತ್ತೆ ಬರುವುದು ನಮ್ಮ ಪರಿಕ್ರಮವೆಲ್ಲ ಮುಗಿದ ದಿನ. ಅಲ್ಲಿಯವರೆಗೆ ಅಲ್ಲಿಯ ತಿರುಗಾಟಕ್ಕೆಂದೇ ನಿಯಮಿಸಲಾದ ಬಸ್ಸುಗಳಿರುತ್ತವೆ. ಈ ಬಸ್ಸಿನಲ್ಲಿಯೇ ವಿಸ್ತಾರವಾದ ಸರೋವರದ ಪ್ರದಕ್ಷಿಣೆಯೂ ಆಗುತ್ತದೆ.




ಆ ತಂಗುದಾಣದಲ್ಲಿಯೇ ಮದ್ಯಾಹ್ನದ ಊಟ ಮುಗಿಸಿ ನಾವೆಲ್ಲ ಆ ಬಸ್ಸಿನಲ್ಲಿ ಸರೋವರದ ಪ್ರದಕ್ಷಿಣೆ ನಡೆಸಿದೆವು. ಅದು ಒಂದಿಷ್ಟೂ ಸಮಾಧಾನವಾಗಲಿಲ್ಲ. ನಡೆದು ಹೋಗಬೇಕಿತ್ತು. ಸಿನೆಮಾ ಪರದೆಯ ಮೇಲೆ ಓಡುವ ಮಾನಸ ಸರೋವರದ ಚಿತ್ರದಂತೆ. ಏನೇನೂ ತೃಪ್ತಿಯಾಗಲಿಲ್ಲ. ಅಂತೂ ಒಂದೆಡೆ ನಿಲ್ಲಿಸಿದರು. ಅದೃಷ್ಟಕ್ಕೆ ಆದಿನ, ಆ ಹೊತ್ತಿಗೆ ನಿಚ್ಚಳವಾದ ಹಗಲಿತ್ತು. ಅಲ್ಲಿ ಯಾವಾಗ ಬಿಸಿಲಿರುತ್ತದೆ ಯಾವಾಗ ಮಳೆಯಾಗುತ್ತದೆ ಎಂದು ಹೇಳುವುದು ಕಷ್ಟ.

ಹವಾಮಾನ ಅನುಕೂಲಕರವಾಗಿರದಿದ್ದರೆ ಸರೋವರದಲ್ಲಿ ಮುಳುಗೇಳುವ ಅವಕಾಶ ಸಿಗುವುದಿಲ್ಲ. ನಮ್ಮ ಅದೃಷ್ಟ. ಊರ ಕಡೆಯ ಹೊಳೆಯಲ್ಲಿ ಮಿಂದಂತೆ ಸರೋವರದಲ್ಲಿ ಮುಳುಗೆದ್ದೆವು. ಕಲ್ಮಶಗೊಳ್ಳದ ಕನ್ನಡಿಯಂತಹ ತಿಳಿ. ತಿಳಿಗೊಂಡ ಮನಸ್ಸಿನಂತೆ. ಸುಮ್ಮ ಸುಮ್ಮನೆ ಇದಕ್ಕೆ ಮಾನಸ ಸರೋವರ ಅಂದಿರಲಿಕ್ಕಿಲ್ಲ! ಊಂಹೂಇನಿಯನನ್ನೆ ಚಿಂತಿಸುತ್ತ ನೀಲಿ ಸೆರಗಿನ ಆ ಅಪ್ಸರೆ ಸುಖಾ ಸುಮ್ಮನೆ ನಿದ್ದೆ ಹೋಗಿಲ್ಲ. ಧ್ಯಾನಸ್ಥಳಾಗಿದ್ದಾಳೆ. ತನ್ನಲ್ಲೇ ಇನಿಯನನ್ನು ಸ್ಥಾಪಿಸಿಕೊಂಡ ಬಳಿಕ ಸಿದ್ದಿಸಿದ ತುರ್ಯಾವಸ್ಥೆ ಅದು. ವಿಚಲಿತ ಮನಸ್ಸು ತಿಳಿಗೊಂಡದ್ದು ಅದು.

ಸರೋವರದ ವೈಶಿಷ್ಟ್ಯ ಅಲ್ಲಿಗೇ ನಿಲ್ಲುವುದಿಲ್ಲ. ಸರೋವರದ ಒಂದು ದಿಕ್ಕಿಗೆ ಪುರಾಣ ಪ್ರಸಿದ್ಧವಾದ ಮೇರು ಪರ್ವತ ಶೃಂಖಲೆ ಹಾಗೂ ಇನ್ನೊಂದು ದಿಕ್ಕಿಗೆ ಕೈಲಾಸ ಪರ್ವತವಿದೆ. ಅದಲ್ಲದೇ ಕೈಲಾಸವನ್ನು ನಡುವಿಟ್ಟುಕೊಂಡು ಅಲ್ಲಿ ಎರಡು ಸರೋವರಗಳು. ಒಂದು ಬದಿಗೆ ಮಾನಸ ಸರೋವರವಾದರೆ ಇನ್ನೊಂದು ಬದಿಗೆ ರಾಕ್ಷಸ ಸರೋವರ. ನಮಗೆ ಇವೆಲ್ಲವನ್ನೂ ನೋಡುವ ಭಾಗ್ಯ ಪ್ರಾಪ್ತಿಯಾಯಿತು. ಅಷ್ಟೆಲ್ಲ ಮುಗಿಸಿ ನಮ್ಮ ಬೇಸ್ ಕ್ಯಾಂಪಿಗೆ ತೆರಳಿದೆವು. ಸಂಜೆಯಾಗುತ್ತಿದ್ದಂತೆ ಜೋರಾಗಿ ಶುರುವಾದ ಮಳೆ ರಾತ್ರಿಯಿಡೀ ಸುರಿಯಿತು. ಮರುದಿನ ನಮ್ಮ ಕೈಲಾಸ ಪರಿಕ್ರಮ ಆರಂಭಗೊಳ್ಳುತ್ತದೆ.

ಕೈಲಾಸ ಪರಿಕ್ರಮವೆಂದರೆ ಕೈಲಾಸ ಪರ್ವತದ ಪ್ರದಕ್ಷಿಣೆಯಷ್ಟೆ. ಈ ಪರಿಕ್ರಮವನ್ನು ಒಂದು ದಿನದಲ್ಲಿ, ಮೂರು ದಿನದಲ್ಲಿ ಅಥವಾ ಕೈಲಾಸವನ್ನು ಇನ್ನೂ ಹತ್ತಿರದಿಂದ ನೋಡಬಯಸುವವರು ಇನ್ನೂ ಜಾಸ್ತಿ ದಿನಗಳನ್ನ ಸೇರಿಸಿಕೊಳ್ತಾರಂತ ಕೇಳಿದ್ದೇನೆ. ನಾವು ಮೂರು ದಿನದ ಪರಿಕ್ರಮವನ್ನು ಮಾಡಿದೆವು. ಇದನ್ನ ಹೋದವರೆಲ್ಲ ಮಾಡಲೇಬೇಕೆಂಬ ನಿಯಮವೇನಿಲ್ಲ. ಹೋಗಲಾಗದಿದ್ದವರು, ನಿಶ್ಯಕ್ತರಾದವರು ದಾರ್ಚಿನ್ ಎಂಬಲ್ಲಿ ಉಳಿದುಕೊಂಡು ಪರಿಕ್ರಮದ ತಂಡ ಮರಳಿದ ಮೇಲೆ ಅವರ ಜೊತೆ ಸೇರಬಹುದು. ಆದರೆ, ಪರಿಕ್ರಮ ಮಾಡದೇ ಇದ್ದರೆ ಅಲ್ಲಿಯವರೆಗೆ ಹೋಗಿ ಏನೂ ಪ್ರಯೋಜನವಿಲ್ಲ. ಯಾಕೆಂದು ಮುಂದಿನ ಭಾಗದಲ್ಲಿ ಹೇಳುತ್ತೇನೆ.

[ಕ್ಷಮಿಸಿ, ಈ ಕತೆ ತಿಳಿದುಕೊಂಡದ್ದಕ್ಕಿಂತ ಉದ್ದವಾಗುತ್ತಿದೆ. ಮುಂದೆ ಹೋಗಬಯಸುವ ಮತ್ತು ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸಲಾಗದ ಕೆಲವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವೊಂದು ವಿವರಗಳನ್ನು ಒದಗಿಸಬೇಕು ಅನಿಸಿತು. ಇಲ್ಲಿಯವರೆಗಿನ ಕತೆಯಲ್ಲಿ ಏನಾದರೂ ಬಿಟ್ಟುಹೋಯಿತು ಎಂದು ಆಸಕ್ತರಿಗೆ ಅನಿಸಿದರೆ ದಯವಿಟ್ಟು ತಿಳಿಸಿ. ಬರೆಯುವಾಗ ಎಲ್ಲವೂ ನೆನಪಾಗುತ್ತಿರುವುದಿಲ್ಲ!]
 


Saturday, September 7, 2013

ಕೈಲಾಸ-ಮಾನಸ ಯಾತ್ರೆ ೪

ಮರುದಿನ ನಮ್ಮ ಯಾತ್ರೆಯ ಮೂರನೆಯ ದಿನ.  ಚುಮು ಚುಮು ನಸುಕಿಗೇ ಎದ್ದು ಒಂದು ಬಕೀಟು ಬಿಸಿ ನೀರಿಗೆ ತಲಾ ನೂರು ರುಪಾಯಿಗಳನ್ನು ತೆತ್ತು ಸ್ನಾನ ಮಾಡಿದ್ದೇ ಕೊನೆ. ಈ ಮಧ್ಯೆ ಮಾನಸ ಸರೋವರದಲ್ಲಿ ಒಮ್ಮೆ ಮುಳುಗೇಳಲು ಅವಕಾಶ ಸಿಕ್ಕಿತ್ತು. ಅದನ್ನು ಬಿಟ್ಟರೆ ಮತ್ತೆ ಸೋಪು ಹಚ್ಚಿ ಸ್ನಾನ ಮಾಡಿದ್ದು ಮರಳಿ ಕಠ್ಮಂಡುವಿಗೆ ಬಂದ ಮೇಲೇ. ಅಂದರೆ ೧೨ ನೆಯ ದಿನ.

ಅಂತೂ ಗಡಿ ದಾಟುವ ಸಂಭ್ರಮ ಶುರುವಾಯ್ತು. ಆ ಬದಿಯಲ್ಲಿ ಚೈನಾ ಏಜೆಂಟ್ ಬಂದಿದ್ದಾನೆ ಎಂಬ ಸುದ್ದಿ ಬಂತು. ನಾವಿದ್ದ ಹೊಟೆಲ್ಲಿನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬೋಟಿಕೋಸಿ ನದಿಗೆ ಅಡ್ಡಲಾಗಿ ಕಟ್ಟಲಾದ ’ಸ್ನೇಹ ಸೇತುವೆ’ಯನ್ನು ಕಾಲ್ನಡಿಗೆಯಿಂದ ಕ್ರಮಿಸಿ, ಇಮಿಗ್ರೇಶನ್ ವಿಧಿಗಳನ್ನು ಪೂರೈಸಿದರೆ ಗಡಿ ದಾಟಿದಂತೆ. ಸರಿ. ನಾವೆಲ್ಲರೂ ಸೇತುವೆಯನ್ನು ಸೇರಿಕೊಂಡಿದ್ದಾಯಿತು. ಆ ಸೇತುವೆಯ ಅರ್ಧಕ್ಕೆ ಒಂದು ಕೆಂಪು ರೇಖೆಯನ್ನ ಎಳೆಯಲಾಗಿದೆ. ಅದು ಗಡಿ. ಅಲ್ಲಿಂದ ಮುಂದೆ ಚೀನಾದ ಸೈನಿಕರ ಕಣ್ಗಾವಲಿರುತ್ತದೆ. ಅಪ್ಪಿ ತಪ್ಪಿ ಎಲ್ಲಿಯಾದರೂ ಒಂದೆರಡು ಫೋಟೋ ತೆಗೆಯುವ ಎಂದು ನಿಮ್ಮ ಮೊಬೈಲ್ ಫೋನನ್ನೋ ಅಥವಾ ಕ್ಯಾಮೆರಾವನ್ನೋ ಹೊರ ತೆಗೆದರೆ ನಿಮ್ಮ ಕ್ಯಾಮೆರಾ ಅಥವಾ ಮೊಬೈಲನ್ನ ಕಸಿದು ಎಸೆಯುತ್ತಾರಂತೆ. ಆದರೆ, ಮರಳಿ ಬರುವಾಗ ಒಂದಿಷ್ಟು ವಿದೇಶಿಯರು ಪೋಟೋ ತೆಗೆಯುತ್ತಾ ಇದ್ದಿದ್ದನ್ನ ನೋಡಿದೆವು. ಆದರೆ ಸೇತುವೆಯ ಮೇಲಲ್ಲ, ಇಮಿಗ್ರೇಶನ್ ಕೇಂದ್ರದ ಬಳಿ. ನಾವೂ ಇಮಿಗ್ರೇಶನ್ ಕೇಂದ್ರ ದಾಟಿದ ಮೇಲೆ ಕದ್ದು ಫೋಟೋ ಹೊಡೆದೆವೆನ್ನಿ!



ಸರದಿಯಲ್ಲಿ ನಿಂತು ಇಮಿಗ್ರೇಶನ್ ವಿಧಿ ಪೂರೈಸುವಾಗ ನಮ್ಮ ಗುಂಪಿನ ಮಹಾಮಾಯಿಯವರನ್ನ ಒಂದು ಬದಿಗೆ ನಿಲ್ಲಿಸಿದ್ದರು.ಅವರು ಮಂಗಳೂರಿನಿಂದ ಬಂದವರು. ನಮಗೆಲ್ಲ ಕಳವಳ. ಏನಾಯಿತೋ ಏನೋ ಎಂದು. ಆಮೇಲೆ ನೋಡಿದರೆ ಅವರ ಫೋಟೋ ದಲ್ಲಿ ಅವರು ಸ್ವಲ್ಪ ಬೇರೆ ಕಂಡರಂತೆ. ಒಳಗೆ ಮತ್ತೆ ತಪಾಸಣೆ ನಡೆಸಿ ಅವರನ್ನು ಬಿಟ್ಟುಕೊಟ್ಟರು. ಒಂದು ಸಾಲಿನಲ್ಲಿ ನಾವು ಸಾಗುತ್ತಿದ್ದರೆ, ಇನ್ನೊಂದು ಸಾಲಿನಲ್ಲಿ ನೇಪಾಳಿ ಮತ್ತು ಟಿಬೇಟಿಯನ್ ಕಾರ್ಮಿಕರು ನಿತ್ಯದ ಕೆಲಸಗಳಿಗೆಂದು ಗಡಿ ದಾಟುತ್ತಿದ್ದರು. ಅವರ ಕೈಯ್ಯಲ್ಲೂ ಪರವಾನಿಗೆ ಪತ್ರದಂಥದ್ದೇನೋ ಇತ್ತು. ಅಂತೂ ಅವೆಲ್ಲ ಮುಗಿದು ಚೀನಿ ಮಾರ್ಗದರ್ಶಕನ ಜೊತೆ ಬಸ್ಸಿನಲ್ಲಿ ನ್ಯಾಲಂನತ್ತ  ಹೊರಡುವಲ್ಲಿಯವರೆಗೆ ನೆಮ್ಮದಿಯಿರಲಿಲ್ಲ.

ಹೀಗೆ ಕಾಲ್ನಡಿಗೆಯಲ್ಲಿ ಗಡಿ ದಾಟುವುದು ನಿಜಕ್ಕೂ ಒಂದು ಭಾವುಕ ಘಳಿಗೆ. ಇದೇ ಹೀಗಾಗಿದ್ದರೆ ಭಾರತಪಾಕಿಸ್ತಾನದ ನಡುವಿನ ಗಡಿ ದಾಟುವಾಗ ಹೇಗಾಗಬಹುದು ಎಂದು ಊಹಿಸಿಕೊಳ್ಳುತ್ತಿದ್ದೇನೆ!

ನ್ಯಾಲಂನತ್ತ ಸಾಗುವ ಹಾದಿ ಘಟ್ಟ ಪ್ರದೇಶವನ್ನು ಬಳಸಿಕೊಂಡು ಸಾಗುತ್ತದೆ. ನಿಜಕ್ಕೂ ಮನಮೋಹಕ. ನಮ್ಮ ಪಶ್ಚಿಮ ಘಟ್ಟಗಳ ನೆನಪಾಗುತ್ತದೆ. ದಾರಿಯುದ್ದಕ್ಕೂ ಜಲಪಾತಗಳು. ಒಂದಲ್ಲ ಎರಡಲ್ಲ! ಸಮುದ್ರ ಮಟ್ಟದಿಂದ ಸುಮಾರು ೧೨ ಸಾವಿರ ಅಡಿಗಳಿಗೂ ಮೇಲ್ಪಟ್ಟು ಎತ್ತರದಲ್ಲಿರುವ ನ್ಯಾಲಂನಿಂದಲೇ ವಾತಾವರಣ ಬದಲಾಗುತ್ತ ಹೋಗುತ್ತದೆ. ಕೊರೆಯುವ ಶೀತಲ ಗಾಳಿ, ಚಿಕ್ಕ ಏರು ಹತ್ತಿದರೂ ಆಯಾಸ, ಸಣ್ಣಗೆ ತಲೆ ನೋವು...ಎಲ್ಲ ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ನಿಜ ಹೇಳ ಬೇಕೆಂದರೆ ಅಲ್ಲಿ ಒಂದಿಡೀ ದಿನ ನಮ್ಮನ್ನಿಟ್ಟು ಹಿಮಾಲಯದ ವಾತಾವರಣಕ್ಕೆ ನಮ್ಮನ್ನು ತಯಾರು ಮಾಡುವವರಿದ್ದರು. ಆದರೆ, ಒಂದು ದಿನ ಕಡೋರಿಯಲ್ಲಿ ಚೀನಾದ ಮಾರ್ಗದರ್ಶಕನ ಸಲುವಾಗಿ ವೃಥಾ ಕಳೆದಿದ್ದರಿಂದ ಆ ಅವಕಾಶ ಸಿಗಲಿಲ್ಲ. ಅಲ್ಲದೇ ನಮಗೆಂದು ಕಾದಿರಿಸಿದ್ದ ಛತ್ರವನ್ನು (ಡಾರ್ಮಿಟರಿ) ಇನ್ಯಾರಿಗೋ ಕೊಟ್ಟು ತಡವಾಗಿ ಹೋದ ನಮ್ಮನ್ನು ಉಳಿಸಿದ ಛತ್ರಕ್ಕೆ ಗಂಡಸರು-ಹೆಂಗಸರಾದಿಯಾಗಿ ಎಲ್ಲರಿಗೂ ಚಿಲಕವಿಲ್ಲದ ಒಂದು ಕೊಳಕು ಕಕ್ಕಸು ಕೋಣೆ. ಇಲ್ಲಿಂದ ಮುಂದೆ ಉಳಿಯುವ ವ್ಯವಸ್ಥೆ ಇಂತಹ ಛತ್ರಗಳಲ್ಲೇ ಇತ್ತು ಮತ್ತು ಇಲ್ಲಿಂದ ಮುಂದೆ ನಮ್ಮಲ್ಲಿ ಬಹುತೇಕರು ಬಹಿರ್ದೆಶೆಗೆ ಕಕ್ಕಸು ಕೋಣೆಗಳನ್ನ ಬಳಸಲಿಲ್ಲ. ಓಡಾಡುವ ದಾರಿಯಲ್ಲೇ ಷೆರ್ಪಾಗಳು ಪಾತ್ರೆ ತೊಳೆಯುತ್ತಿದ್ದುದರಿಂದ ಹೊರಗೆ ಹೋಗಿ-ಬಂದು ಮಾಡುವಾಗ ಮೂಗು ಮುಚ್ಚಿಕೊಂಡೇ ಇರಬೇಕಿತ್ತು. ಇದ್ದಿದ್ದರಲ್ಲಿಯೇ ಒಳ್ಳೆಯ ಹಜಾರವೊಂದನ್ನ ಹೆಂಗಸರಿಗೆ ಕೊಟ್ಟಿದ್ದರು. ಧಾರವಾಢದ ಮಂಜು, ರತ್ನಾ, ವಿದ್ಯಾ ಆಂಟಿಯರು, ಮಂಗಳೂರಿನ ಮಾಯಿ, ಬೆಂಗಳೂರಿಂದ ಬಂದ ಡಾಕ್ಟರ್ ಶೈಲಜಾ, ನಾನು, ಚಿಕ್ಕಮ್ಮ, ತಮ್ಮನ ಹೆಂಡತಿ ಶ್ಯಾಮಲಾ...ಅವಳೇ ಎಲ್ರಿಗಿಂತ ಚಿಕ್ಕವಳು. ತಲೆಗೊಂದೊಂದು ಮಾತು, ಸಲಹೆ. ಬೆಳಗಾಗುವುದರ ಒಳಗೆ ನಾವೆಲ್ಲ ಒಂದೇ ದೋಣಿಯ ಪಯಣಿಗರು ಅನ್ನುವ ಭಾವ ಹುಟ್ಟಿತ್ತು.

ಇಲ್ಲಿಂದ ಮುಂದೆ ಯಾತ್ರೆ ಮುಗಿಯುವಲ್ಲಿಯವರೆಗೆ ನಮ್ಮ ಊಟದ ವ್ಯವಸ್ಥೆ ಷೆರ್ಪಾಗಳದ್ದು. ಕಠ್ಮಂಡುವಿನಿಂದ ಬರುವಾಗ ನಮ್ಮ ಜೊತೆ ಷೆರ್ಪಾಗಳ ತಂಡವೊಂದು ಬಂದಿತ್ತು, ಈ ತಂಡವು ನಮ್ಮ ಜೊತೆಯೇ ಬಂದು ಯಾತ್ರೆ ಮುಗಿಯುವಲ್ಲಿಯವರೆಗೆ ನಮ್ಮ ಊಟ, ತಿಂಡಿ ಮತ್ತಿತರೆ ಸುರಕ್ಷತೆಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ನಮ್ಮ ಜೊತೆ ಬಂದ ತಂಡದ ನಾಯಕನ ಹೆಸರು ಸಾಂಗೇ ಎಂದಾಗಿತ್ತು. ಒಳ್ಳೇ ಪೊಗದಸ್ತಾದ ನೇಪಾಳಿ ಠೊಣಪ! ಈ ಷೆರ್ಪಾಗಳು ವರ್ಷಕ್ಕೆ ಮೂರು-ನಾಲ್ಕು ಬಾರಿಯಂತೆ ಅದೆಷ್ಟು ಬಾರಿ ಕೈಲಾಸ ಸುತ್ತಿದ್ದಾರೋ. ನುರಿತ ಸಿಪಾಯಿಗಳ ಹಾಗೆ ಚಕಚಕನೇ ಮೂರು ಹೊತ್ತಿನ ಅಡುಗೆ ಮಾಡಿ, ನಮ್ಮನ್ನೆಲ್ಲ ಕರೆದು ಬಡಿಸಿ, ಪಾತ್ರ-ಪಗಡೆ ತೊಳೆದುಕೊಂಡು, ವ್ಯಾನಿಗೆ ಏರಿಸಿ ಮತ್ತೊಂದು ಜಾಗದಲ್ಲಿ ಬೀಡು ಬಿಡಲು ಸನ್ನಧ್ಧರಾಗುವ ಇವರೇ ಪರಿಕ್ರಮದ ಸಮಯದಲ್ಲಿ ದಾದಿಯರಂತೆ, ಯಾವುದೋ ಜನ್ಮದ ಗೆಳೆಯರಂತೆ, ಅಣ್ಣ-ತಮ್ಮಂದಿರಂತೆ ಜೊತೆಯಾಗುತ್ತಾರೆ. ನಾವೆಲ್ಲ ತಪ್ಪದೇ ದಿನಕ್ಕೊಂದು ಡೈಮಾಕ್ಸ್ ಗುಳಿಗೆ ನುಂಗುವಂತೆ ನೋಡಿಕೊಳ್ಳುವುದು ಇವರ ಇನ್ನೊಂದು ಜವಾಬ್ದಾರಿಯಾಗಿತ್ತು.

ಭೂಮಟ್ಟದಿಂದ ಎತ್ತರೆತ್ತರಕ್ಕೆ ಹೋದಂತೆಲ್ಲ ಆಮ್ಲಜನಕದ ಕೊರತೆಯಿಂದ ಉಂಟಾಗುವ ಅಸ್ವಸ್ಥತೆಯನ್ನು altitude sickness ಎಂದು ಕರೆಯುತ್ತಾರೆ. ಎತ್ತರೆತ್ತರರಕ್ಕೆ ಹೋದಂತೆ ತಲೆನೋವು, ವಾಂತಿ ಬಂದ ಹಾಗೆ ಆಗುವುದು, ಎದೆ ಬಡಿತ ಜೋರಾಗುವುದು, ನಿದ್ದೆಯ ಅಮಲು, ಹಸಿವಿಲ್ಲದಿರುವುದು ಮತ್ತು ವಿಪರೀತ ದಣಿವು ಇವೆಲ್ಲ ಆ ಅನಾರೋಗ್ಯದ ಸೂಚನೆಗಳು. ಒಂದು ಹೆಜ್ಜೆ ಎತ್ತಿಡುವುದೂ ಪ್ರಯಾಸದ ಕೆಲಸವಾಗುತ್ತದೆ. ನ್ಯಾಲಂನಿಂದ ಮುಂದೆ ಮಾನಸ ಸರೋವರದತ್ತ ಸಾಗಿದಂತೆಲ್ಲ ಆಲ್ಟಿಟ್ಯೂಡ್ ಹೆಚ್ಚಾಗುತ್ತ ಹೋಗುತ್ತದೆ. ಮಾನಸ ಸರೋವರ ಸುಮಾರು ೧೫ ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಕೈಲಾಸ ಪರಿಕ್ರಮದ ಎರಡನೆಯ ದಿನ ನಾವು ಏರಲಿರುವ ಡೋಲ್ಮಾ ಲಾ ಪಾಸ್ ಸುಮಾರು ೧೮ ಸಾವಿರ ಅಡಿಗಳ ಎತ್ತರದಲ್ಲಿದೆ. ಅಥವಾ ಅದಕ್ಕಿಂತ ಜಾಸ್ತಿಯೇ ಇರಬೇಕು. ಅಲ್ಲಿಯ ವಾತಾವರಣಕ್ಕೆ ದಿಢೀರೆಂದು ಹೋದವರು ಹೊಂದಿಕೊಳ್ಳುವುದು ತುಂಬ ಕಷ್ಟ. ಅಭ್ಯಾಸವಿಲ್ಲದವರು ವಿಪರೀತ ತೊಂದರೆ ಅನುಭವಿಸುತ್ತಾರೆ. ಯಾತ್ರೆಗೆ ಹೋಗುವವರು ಈ ಅಸ್ವಸ್ಥತೆಯನ್ನು  ನಿರ್ಲಕ್ಷಿಸುವಂತಿಲ್ಲ. ಈ ಡೈಮಾಕ್ಸ ಗುಳಿಗೆಗಳು ನಮ್ಮ ಸಂಕಷ್ಟವನ್ನ ಬಹುಮಟ್ಟಿಗೆ ಕಡಿಮೆ ಮಾಡುತ್ತವೆ. ಅವುಗಳನ್ನು ಮುಂಚಿತವಾಗಿಯೇ ಸೇವಿಸಲು ಪ್ರಾರಂಭಿಸಬೇಕು. ನಾವು ಕಡೋರಿಯಲ್ಲಿದ್ದಾಗಲೇ, ಅಂದರೆ ಎರಡನೆಯ ದಿನದ ರಾತ್ರಿಯಿಂದಲೇ ನಮ್ಮ ಡೈಮಾಕ್ಸ್ ಸೇವನೆ ಶುರುವಾಗಿತ್ತು.

ಮರುದಿನ ಬೆಳಿಗ್ಗೆ ಅಲ್ಲಿಂದ ಹೊರಟು  ಡೋಂಗ್ಬಾ ಎಂಬ ಜಾಗಕ್ಕೆ ಹೋಗಿ ಸೇರಿಕೊಳ್ಳಬೇಕಿತ್ತು. ಅದರ ಮಾರನೆಯ ದಿನ ಮಾನಸ ಸರೋವರ ತಲುಪುತ್ತೇವೆ.