Saturday, August 31, 2013

ಕೈಲಾಸ - ಮಾನಸ ಯಾತ್ರೆ ೩

ಕಡೋರಿ ನೇಪಾಳ ಮತ್ತು ಚೈನಾ ಆಕ್ರಮಿತ ಟಿಬೇಟಿನ ಗಡಿಯಲ್ಲಿರುವ ಊರು. ಹಸಿರು ಬೆಟ್ಟಗಳು, ಮೈತುಂಬಿ ಹರಿವ ಬೋಟಿಕೋಸಿ ನದಿ, ಎಲ್ಲೆಂದರಲ್ಲಿ ಕಾಣುವ ಜಲಪಾತಗಳು, ಮತ್ತು ಊರತುಂಬ ಮಕ್ಕಳು! ಕಠ್ಮಂಡುವಿನಿಂದ ಕಡೋರಿಗೆ ಹೋಗುವ ಮಾರ್ಗವನ್ನು ’ಆರ್ನಿಕೊ ಹೈವೇ’ ಎಂದು ಕರೆಯುತ್ತಾರೆ. ಅದನ್ನು ಉಭಯ ಸಂಬಂಧಿ ವ್ಯಾಪಾರ ವಹಿವಾಟಿಗಾಗಿ ಚೀನಾದ ನೇತೃತ್ವದಲ್ಲಿ ನಿರ್ಮಿಸಲಾಗಿದೆಯಂತೆ. ವ್ಯಾಪಾರ-ವಹಿವಾಟಲ್ಲದೇ ಕಾಲಕ್ರಮೇಣ ನೇಪಾಳವನ್ನೂ ಕಬಳಿಸುವ ಚೀನಾದ ಹುನ್ನಾರವದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಅದನ್ನು ಹೈವೇ ಎನ್ನುವ ಹಾಗೇ ಇಲ್ಲ. ಒಂದು ಕಡೆ ಎತ್ತರೆತ್ತರದ ಹಸಿರು ಬೆಟ್ಟಗಳ ಸಾಲು, ಇನ್ನೊಂದು ಬದಿಗೆ ಉದ್ದಕ್ಕೂ ಹರಿಯುವ ಬೋಟಿಕೋಸಿ ನದಿ ಕಣಿವೆ. ಅವೆರಡರ ಮಧ್ಯೆ ಕಡಿದಾದ, ಟಾರು ಕಿತ್ತುಹೋದ ರಸ್ತೆ. ದಾರಿಯುದ್ದಕ್ಕೂ ಜಲಪಾತಗಳು ಮತ್ತು ಅಲ್ಲಲ್ಲಿ ಭೂಕುಸಿತಗೊಂಡು ಭಗ್ನಗೊಂಡ ಹಾದಿ. ಭೂಕುಸಿತ ಆಗುತ್ತಲೇ ಇರುವ ರಸ್ತೆ ಅದು. ನಿಜಕ್ಕೂ ಹೆದರಿಕೆಯನ್ನುಂಟು ಮಾಡುವ ಹೈವೆ.

ಕಡೋರಿಗೆ ತಾಗಿಯೇ  ಚೈನಾ ಇಮಿಗ್ರೇಶನ್ ಕೇಂದ್ರ ವಿದೆ. ಬೋಟಿಕೋಸಿ ನದಿಗೆ ಕಟ್ಟಲಾದ  ’ಸ್ನೇಹ ಸೇತುವೆಯನ್ನು ದಾಟಿ ಬಿಟ್ಟರೆ ನಾವು ಚೈನಾ ಆಕ್ರಮಿತ ಟಿಬೇಟಿನಲ್ಲಿ ಇರುತ್ತೇವೆ. ಸೇತುವೆಯ ಈಚೆಗೆ ಕಡೋರಿ, ಆಚೆಗೆ ಚೀನಾದವರ ಜಾಗ. ಅದನ್ನು ಝಾಂಗ್ಮು ಎಂದು ಕರೆಯುತ್ತಾರೆ. ಗಡಿ ದಾಟುವುದು ಮೊದಲಿನಷ್ಟು ಸುಲಭವಲ್ಲ ಈಗ ಎನ್ನು ತ್ತಾರೆ ಷೆರ್ಪಾಗಳು. ಈಗ ಒಂದೆರಡು ವರ್ಷಗಳಿಂದ ಚೈನಾ ಕಡೆಯಿಂದ ತೀವ್ರ ಕಟ್ಟೆಚ್ಚರ ಕಂಡುಬಂದಿದೆಯಂತೆ

ಅಧಿಕೃತವಾಗಿ ವಿಶ್ವಸಂಸ್ಥೆಯ ಮಾನ್ಯತೆ ಸಿಗದೇ ಇದ್ದರೂ ಚೈನಾ  ಆಕ್ರಮಿತ ಟಿಬೇಟಿನ ಜಾಗವನ್ನು ತನ್ನದೇ ಎಂಬಂತೆ ಬಳಸುತ್ತಿದೆ. ಅಲ್ಲೀಗ ಹೊಸದಾಗಿ ಕಟ್ಟಲಾದ ವ್ಯವಸ್ಥಿತವಾದ ಇಮಿಗ್ರೇಶನ್ ಕೇಂದ್ರವಿದೆ. ೧೯೬೨ ರಿಂದ ೧೯೮೧ ರವರೆಗೆ ಹದಗೆಟ್ಟ ಇಂಡೋ-ಚೈನಾ ಸಂಬಂಧದ ಪ್ರಯುಕ್ತ ಮಾನಸ ಸರೋವರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ನಿಧಾನವಾಗಿ ಮತ್ತೆ ಶುರುವಾದ ಯಾತ್ರೆಯನ್ನ ಈಗ ಭಾರತ ಸರಕಾರದ ಮೂಲಕವೂ ಮಾಡಬಹುದು ಅಥವಾ ಖಾಸಗಿ ಪ್ರವಾಸಿ ಏಜೆನ್ಸಿಗಳ ಮೂಲಕವೂ ಮಾಡಬಹುದು. ನೇಪಾಳದ ಮೂಲಕ ಚೈನಾ ಆಕ್ರಮಿತ ಟಿಬೇಟನ್ನು ಪ್ರವೇಶಿಸಲು ಈಗ ಕೊಡಾರಿ ಒಂದೇ ಸದ್ಯಕ್ಕಿರುವ ವ್ಯವಸ್ಥಿತ ಪ್ರವೇಶದ್ವಾರ.

ಕಠ್ಮಂಡುವಿನಲ್ಲಿ ನಮಗೆ ಮುನ್ನೆಚ್ಚರಿಕೆ ಕೊಡಲಾಗಿತ್ತು. ಗಡಿ ದಾಟುವ ಸಮಯದಲ್ಲಾಗಲೀ ಅಥವಾ ಗಡಿ ದಾಟಿದ ನಂತರವಾಗಲೀ ಚೀನಾದ ರಾಜತಂತ್ರದ ಬಗ್ಗೆ, ದಲೈಲಾಮ ಅವರ ಬಗ್ಗೆ ಏನನ್ನೂ ಮಾತಾಡಬಾರದು ಎಂದು. ಈ ಬಗ್ಗೆ ಅಂತರ್ಜಾಲದಲ್ಲಿ ಒಂದಿಷ್ಟು ಓದಿಕೊಂಡೂ ಹೋಗಿದ್ದೆ ನಾನು. ಏನೆಂದರೆ ನೇಪಾಳದ ವ್ಯಾಪಾರಿಗಳು ಹಾಗೂ ಟ್ರಾವಲ್ಸನವರಲ್ಲಿ ಒಂದು ಅಘೋಷಿತ ಒಮ್ಮತವಿದೆ. ಚೈನಾದ ವಿರುದ್ಧ ಯಾವುದೇ ಬಗೆಯ ಚಟುವಟಿಕೆಗಳನ್ನೂ ಪ್ರೋತ್ಸಾಹಿಸಕೂಡದು. ಅಲ್ಲದೇ ಆಕ್ರಮಿತ ಟಿಬೇಟನ್ನು ಚೀನಾದ ಅಧಿಕೃತ ಸ್ವತ್ತು ಎಂದು ಮಾನ್ಯ ಮಾಡಬೇಕು. ಹೀಗಾಗಿ ನೇಪಾಳ ಮತ್ತು ಆಕ್ರಮಿತ ಟಿಬೇಟ್ ನಡುವೆ ವ್ಯಾಪಾರ, ಹಾಗೂ ಪ್ರವಾಸೋದ್ಯಮ ಅಡ್ಡಿ ಆತಂಕಗಳಿಲ್ಲದೇ ನಡೆಯುತ್ತಿದೆ. ಚೀನಾದ ಸ್ವಾಮ್ಯವನ್ನು ಮಾನ್ಯ ಮಾಡುವ ಮೂಲಕ ನೇಪಾಳಿ ವ್ಯಾಪಾರಸ್ಥರು, ಉದ್ಯಮಿಗಳು,  ಪ್ರವಾಸಿ ಏಜೆನ್ಸಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ನಿರಾತಂಕವಾಗಿ ಇರಬಹುದು. ಇದೇ ಕಾರಣಕ್ಕೆ ನೇಪಾಳದಲ್ಲಿ ಮಾನಸ ಸರೋವರ ಯಾತ್ರೆಯನ್ನು ನಡೆಸಿಕೊಡುವ ಅನೇಕ ಖಾಸಗಿ ಸಂಸ್ಥೆಗಳು ತಲೆಯೆತ್ತುತ್ತಿವೆ. ಚೀನಾ ಬಾರ್ಡರ್ ದಾಟಿದ ಮೇಲೆ ನಿರಾತಂಕವಾಗಿ ಚೀನಾ ಏಜೆಂಟರೊಂದಿಗೆ ಮಾನಸ ಸರೋವರ ತಲುಪಬಹುದು. ಮತ್ತು ಬಹುಶಃ ಇದೇ ಕಾರಣಕ್ಕೆ ಈ ಮಾರ್ಗವನ್ನು ಇದ್ದಿದ್ದರಲ್ಲೇ ಸುರಕ್ಷಿತ ಮಾರ್ಗ ಎಂದೂ ಪರಿಗಣಿಸಲಾಗುತ್ತದೆ. ಎಲ್ಲಿಯವರೆಗೆ ಪ್ರತಿರೋಧವಿಲ್ಲವೋ ಅಲ್ಲಿಯವರೆಗೆ ಅವರು ನಮ್ಮ ದೋಸ್ತರು!

ನಮ್ಮ ಗುಂಪಿನಲ್ಲಿ ಕೈಲಾಸ ಪರಿಕ್ರಮ ನಡೆಸಿ ಕೃತಾರ್ಥರಾಗಬಯಸಿದ ಭಕ್ತರಲ್ಲದೇ ಸುಮ್ಮನೇ ಹಿಮಾಲಯ ಕಣಿವೆಗಳ ಸೌಂದರ್ಯ ಸವಿಯ ಬಂದವರೂ ಇದ್ದರು. ಆದರೆ ಈ ಹಾದಿಯಲ್ಲಿ ಹೋದವರಿಗೆ ಮಾನಸ ಸರೋವರ ಯಾತ್ರೆಯ ಅನುಭವ ಕೇವಲ ಆಧ್ಯಾತ್ಮಿಕ ಅಥವಾ ಪ್ರೇಕ್ಷಣೀಯವಾಗಿ ಉಳಿದುಕೊಳ್ಳುವುದಿಲ್ಲ ಎಂದು ನನಗನ್ನಿಸುತ್ತದೆ. ನೇಪಾಳ ಮತ್ತು ಭಾರತದೊಂದಿಗೆ ಚೀನಾದ ರಾಜತಾಂತ್ರಿಕ ವ್ಯವಹಾರ ಮತ್ತು ಅದರ ಪರಿಣಾಮಗಳನ್ನು ಕುರಿತು ಯೋಚಿಸುವಂತೆ ಮಾಡುತ್ತವೆ. ಹಾಗಂತ ಚೀನೀಯರನ್ನೆಲ್ಲ ದುಷ್ಟರು ಎಂಬಂತೆ ನೋಡಬೇಕಾದ್ದಿಲ್ಲ. ಗಡಿ ದಾಟುವಾಗ ಮತ್ತು ಗಡಿ ದಾಟಿದ ನಂತರ ನೇಪಾಳಿಗರಲ್ಲಿ ಮತ್ತು  ಟಿಬೇಟಿಯನ್ನರಲ್ಲಿ ಮೂಡುವ ಆತಂಕವಂತೂ ಖಂಡಿತ ನಮ್ಮ ಅನುಭವಕ್ಕೆ ಬರುತ್ತದೆ. ಮತ್ತು ಈ ಆತಂಕವನ್ನು ನನ್ನೊಂದಿಗೆ ಬಂದ ಉಳಿದ ಯಾತ್ರಿಕರೂ ಹಂಚಿಕೊಂಡಿದ್ದಾರೆ.

ಗಡಿಯನ್ನು ದಾಟುವವರು ಅಧಿಕೃತ ಪಾಸಪೋರ್ಟ ಮತ್ತು ಚೈನಾ ವೀಸಾ ಪಡೆದಿರಬೇಕು. ನಮ್ಮದು ಗ್ರೂಪ್ ವೀಸಾ ಮೊದಲೇ ಆಗಿತ್ತು. ಸೇತುವೆಯನ್ನು ದಾಟಿ, ಇಮಿಗ್ರೇಶನ್ ಪರವಾನಗಿ ದಕ್ಕಿಸಿಕೊಂಡು ಮುಂದೆ ಸಾಗಬೇಕು. ಆದರೆ ಇವೆಲ್ಲ ಸಾಂಗ ವಾಗಿ ನೆರವೇರಬೇಕೆಂದರೆ, ಆ ಬದಿಯಲ್ಲಿ ನಮ್ಮನ್ನು ಕರೆದೊಯ್ಯುವ ಚೈನಾದ ಏಜೆಂಟ್ ಬಂದಿರಬೇಕು. ನಮ್ಮ ದುರಾದೃಷ್ಟಕ್ಕೆ ಆವತ್ತು ನಮ್ಮ ಚೈನಾ ಏಜೆಂಟ್ ಬರಲೇ ಇಲ್ಲ. ಇದ್ದಿದ್ದರಲ್ಲಿಯೇ ಪರವಾಗಿಲ್ಲ ಅನ್ನುವ  ಹೊಟೆಲ್ಲೊಂದರಲ್ಲಿ ಏಜೆಂಟಿಗೋಸ್ಕರ ಕಾಯುತ್ತ ಕುಳಿತೆವು. ಅಲ್ಲೇ ಊಟವೂ ಆಯಿತು. ಸಂಜೆಯೂ ಆಯಿತು. ಇನ್ನು ಗಡಿ ದಾಟುವುದು ಮರುದಿನವೇ ಅಂದ ನಮ್ಮ ನೇಪಾಳಿ ಏಜೆಂಟು. ಗತ್ಯಂತರವಿಲ್ಲದೇ ಅದೇ ಹೊಟೆಲ್ಲಿನಲ್ಲಿ ಆ ರಾತ್ರಿ ಕಳೆಯುವಂತಾಯಿತು.

ಅದು ಊರೆಂದರೆ ಊರೇನಲ್ಲ. ಹಾಗೆ ನದಿಯಂಚಿನ ಗುಡ್ಡಗಳ ಮೇಲೆ ಚಾ ಪೆಟ್ಟಿಗೆಯಂಥ ಮನೆಗಳು, ಅಲುಗಾಡುವ ಮನೆಗಳು. ಅವುಗಳಿಗೆ ಬಾಲ್ಕನಿಗಳು ಬೇರೆ ಇದ್ದವು. ನಾವು ಉಳಿದ ಹೊಟೆಲ್ಲನ್ನೂ ಹಾಗೆಯೇ ಕಟ್ಟಲಾಗಿತ್ತು. ಪ್ರಕೃತಿ ಸೌಂದರ್ಯ ಸವಿಯುವ ಆಸೆಯಿಂದ ಬಾಲ್ಕನಿಯಲ್ಲಿ ನಿಂತರೆ ಇಡೀ ಮನೆಯೇ ಅಲುಗಾಡಿದಂತಾಗುತ್ತದೆ. ತೂಗು ಸೇತುವೆಯ ಮೇಲೆ ನಿಂತಂತೆ. ಜೀವ ಮುಖ್ಯವೇ ಅಥವಾ ಪ್ರಕೃತಿ ಮಾತೆಯೇ ಎಂಬ ಜಿಜ್ಞಾಸೆ ಮೂಡುವ ಮೊದಲೇ ನಾವು ಬಾಲ್ಕನಿಯನ್ನು ಬಿಟ್ಟು ಓಡಿದ್ದೆವು!



ಮೇಲ್ನೋಟಕ್ಕೆ ಆ ಜಾಗ ಟಿಬೇಟ್ ನಿರಾಶ್ರಿತರ ಆಶ್ರಯದಾಣವೆಂಬಂತೆ ತೋರುತ್ತಿತ್ತು. ನೇಪಾಳಿಗರು ಬಹಳ ಕಮ್ಮಿಯೇ ಕಂಡರು. ನಮ್ಮ ಬಸ್ಸು ಅಲ್ಲಿ ನಿಲ್ಲುತ್ತಿದ್ದಂತೆ ಚಿಕ್ಕ ಮಕ್ಕಳ ತಂಡವೇ ಓಡಿಬಂದಿತ್ತು. ’ಆಂಟಿ, ತಿನ್ನೋಕ್ಕೆ ಏನಾರ ಕೊಡಿ’ ಅಂದುಕೊಂಡು ದುಂಬಾಲು ಬಿದ್ದಿದ್ದವು. ಅದು ಅಲ್ಲಿ ಮಾಮೂಲಂತೆ. ಮುದ್ದು ಮುದ್ದಾದ ಗೊಣ್ಣೆ ಸುರುಕ ಮಕ್ಕಳು, ನನ್ನನ್ನ ನೋಡಿ ನೀವೂ ನೇಪಾಳಿ ಥರ ಇದ್ದೀರಾ ಅಂದಿತು ಒಂದು ಮಗು. ಆ ಊರಿಗೆ ಒಂದು ಶಾಲೆಯೂ ಇದೆ. ಎತ್ತರದ ಗುಡ್ಡದ ಮೇಲೆ.  ಬ್ಯಾಗಿನಲ್ಲಿದ್ದ ಬಿಸ್ಕೀಟ್ ಪೊಟ್ಟಣವನ್ನ ಅವರ ಕೈಗಿಟ್ಟ ಮೇಲಂತೂ ನಮ್ಮ ನ್ನ ಮುತ್ತಿಕೊಂಡೇ ಬಿಟ್ಟವು. 

ನಾವಿದ್ದ ಹೊಟೆಲ್ಲಿನಲ್ಲಿ ಟೇಬಲ್ ಒರೆಸುವದರಿಂದ ಹಿಡಿದು ಮಾಡಿದ ಅಡುಗೆ ಬಡಿಸುವಲ್ಲಿಯವರೆಗೆ ಎಲ್ಲವನ್ನೂ ಹೆಣ್ಣು ಮಕ್ಕಳೇ ನಡೆಸುತ್ತಿದ್ದವು. ಒಂದಿಷ್ಟು ಹೆಂಗಸರು ದಾರಿಯಲ್ಲಿದ್ದ ಜಲಪಾತದ ನೀರಲ್ಲಿ ಬಟ್ಟೆ ಒಗೆಯುತ್ತಿದ್ದರು. ಹೆಂಗಸರೇ ಹೆಚ್ಚಾಗಿ ಕಂಡಿದ್ದರುಈ ಊರಲ್ಲಿ ಗಂಡಸರೇನು ಮಾಡುತ್ತಾರೆ ಎಂದು ನಮ್ಮೊಳಗೆ ನಾವು ಅಣಕವಾಡಿದ್ದೆವು. ಬಹುಶ: ಗಂಡಸರೆಲ್ಲ ಬಾರ್ಡರಿನಾಚೆ ದುಡಿಯುವುದಕ್ಕೆ ಹೋಗುತ್ತಿದ್ದಿರಬೇಕು. ಅಂತೂ ಬೆಳಿಗ್ಗೆಯಾಗುವುದನ್ನೇ ಕಾಯುತ್ತ ನಿದ್ದೆ ಹೋದೆವು.

[ಮುಂದುವರೆಯುವುದು]

Tuesday, August 27, 2013

ಕೈಲಾಸ-ಮಾನಸ ಯಾತ್ರೆ ೨

ಮಾನಸ  ಸರೋವರ ವನ್ನು ತಲುಪಲು ಎರಡಕ್ಕಿಂತ ಹೆಚ್ಚು ದಾರಿಗಳಿವೆಯಂತೆ. ಉತ್ತರಾಖಂಡದಿಂದ ಹೊರಡುವ ಯಾತ್ರೆಯನ್ನು ಭಾರತ ಸರಕಾರದ ಮಿನಿಸ್ಟ್ರಿ ಆಫ್ ಎಕ್ಸಟರ್ನಲ್ ಅಫೇರ್ಸ ಆಯೋಜಿಸುತ್ತದೆ. ಆದರೆ ಈ ಸಲದ ಮಳೆಯ ಆರ್ಭಟದಿಂದ ಸರಕಾರದ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು. ನಾವು ಒಂದು ಖಾಸಗಿ ಟ್ರಾವೆಲ್ಸನವರ ಮೂಲಕ ಹೊರಟಿದ್ದೆವು.  

ಕಳೆದ ಬೇಸಿಗೆಯಲ್ಲೇ ಈ ಯಾತ್ರೆಗೆ ತಯಾರಿ ನಡೆಸಿದ್ದ ನನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪ ನನ್ನ ತಮ್ಮನನ್ನೂ ತಮ್ಮ ಜೊತೆ ಹೊರಡಿಸಿದ್ದರು. ನನ್ನ ಪತಿ ಸುರೇಶನನ್ನೂ ಬರುತ್ತೀಯಾ ಅಂತ ಕೇಳಿದ್ದರು. ಮಗಳನ್ನು ನಾನು ನೋಡಿಕೊಳ್ಳುತ್ತೇನೆ ನೀನೆ ಹೋಗಿ ಬಾ ಎಂದಿದ್ದರು ಸುರೇಶ್. ಒಪ್ಪಿಕೊಂಡಾದ ಮೇಲೆ ಚಿಂತೆ ಹಿಡಿದಿತ್ತು ಈ ಯಾತ್ರೆಯನ್ನು ನಾನು ಮಾಡಬಲ್ಲೆನೆ ಅಂತ. ನನ್ನ ಸಮಾಧಾನಕ್ಕೆಂದು ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನೆಲ್ಲ ಮಾಡಿಸಿಕೊಂಡೆ. ಎಲ್ಲವೂ ಸರಿಯಾಗಿದೆ ಎಂದು ಧೃಢವಾದ ಮೇಲೆ ಕೊಂಚ ನೆಮ್ಮದಿ ಸಿಕ್ಕಿತ್ತು. ಅಷ್ಟಲ್ಲ ಮಾಡಿ ದೊರಕಿಸಿಕೊಂಡ ವೈದ್ಯರ ಪ್ರಮಾಣ ಪತ್ರವನ್ನು ಮೂಸಿಯೂ ನೋಡಲಿಲ್ಲ ನಮ್ಮ ಟ್ರಾವಲ್ಸನವರು.

ನಾವು ಹೊರಟಿದ್ದು ನೇಪಾಳದ ಕಠ್ಮಂಡುವಿನಿಂದ. ಬೆಂಗಳೂರಿನಿಂದ ದಿಲ್ಲಿ, ದಿಲ್ಲಿಯಿಂದ ಕಠ್ಮಂಡುವರೆಗೆ ವಿಮಾನ ಪ್ರಯಾಣ ಮತ್ತು ಅಲ್ಲಿಂದ ಮುಂದೆ ಖಾಸಗಿ ಬಸ್ಸೊಂದರಲ್ಲಿ ಹೋಗಬೇಕು. ನೇಪಾಳದಿಂದ ಚೈನಾ ಆಕ್ರಮಿತ ಟಿಬೇಟಿನ ಬಾರ್ಡರವರೆಗೆ ನೇಪಾಳದ ಖಾಸಗಿ ಬಸ್ಸು ನಮ್ಮನ್ನು ಕೊಂಡೊಯ್ಯುತ್ತದೆ. ಬಾರ್ಡರ್ ದಾಟಿದ ಮೇಲೆ ಮುಂದೆಲ್ಲ ಚೈನೀಸ್ ಏಜೆಂಟುಗಳದ್ದೇ ಕಾರುಬಾರು. ಅವರದೇ ಬಸ್ಸು, ಅವರದೇ ಮೇಲ್ವಿಚಾರಣೆ. ಮಾನಸ ಸರೋವರ ತಲುಪಿ, ಕೈಲಾಸದ ಪರಿಕ್ರಮ ನಡೆಸಿ, ಮರಳಿ ನೇಪಾಳದ ಬಾರ್ಡರ್ ತಲುಪುವವರೆಗೆ ಈ ಚೀನಾದ ಏಜೆಂಟರುಗಳು ನಮ್ಮ ಜತೆ ಇರುತ್ತಾರೆ. ಒಂದರ್ಥದಲ್ಲಿ ನಮ್ಮಿಡೀ ಯಾತ್ರೆ ಚೈನೀಸ್ ಟ್ರಾವೆಲ್ಸ ನವರ ಸುಪರ್ದಿಯಲ್ಲಿರುತ್ತದೆ.

ನಮ್ಮ ದಾರಿ ಹೀಗಿತ್ತು. ಕಠ್ಮಂಡುವಿನಿಂದ ಹೊರಟು ೧೧೫ ಕಿ.ಮಿ ದೂರದಲ್ಲಿರುವ ಕಡೋರಿ ಎಂಬ ಊರನ್ನು ತಲುಪಿಕೊಳ್ಳುವುದು. ಕಡೋರಿಯಿಂದ ನ್ಯಾಲಂ, ನ್ಯಾಲಂನಿಂದ ಡೋಂಗ್ಬಾ, ಡೋಂಗ್ಬಾ ದಿಂದ ಮಾನಸ ಸರೋವರ ಸೇರಿಕೊಳ್ಳುವುದು. ಒಟ್ಟು ೧೩ ದಿನದ ಯಾತ್ರೆ. ನ್ಯಾಲಂ, ಸಾಗ, ಡೋಂಗ್ಬಾ ಇವೆಲ್ಲ ಟಿಬೆಟಿಗೆ (ಈಗ ಚೈನಾ ಆಕ್ರಮಿತ ಟಿಬೇಟ್) ಸೇರಿರುವ ಜಾಗಗಳು. ಮಾನಸ ಸರೋವರದ ವರೆಗೆ ಈಗ ಚೈನಾ ಸರಕಾರದ ನಿರ್ಮಿಸಿದ ಒಳ್ಳೆಯ ರಸ್ತೆ ಇದೆ. ಅಲ್ಲಿಯವರೆಗೂ ಬಸ್ಸಿನಲ್ಲಿ ಅಥವಾ ಮತ್ಯಾವುದೇ ಗಾಡಿಯಲ್ಲಿ ಆರಾಮವಾಗಿ ಪ್ರಯಾಣಿಸಬಹುದು.

ಕಠ್ಮಂಡುವಿನಲ್ಲಿ ತುಂಬ ತಿರುಗಾಡಲು ಆಗಲಿಲ್ಲ. ಮಳೆ ಇತ್ತು. ನಾವು ಹೋದ ಮಾರನೆ ದಿನ ಸೋಮವಾರ, ಮತ್ತು ಆವತ್ತು ನಾಗರ ಪಂಚಮಿಗೆಂದು ವಿಶೇಷ ಸಂಭ್ರಮವಿತ್ತು. ಪಶುಪತಿನಾಥ ದೇವಸ್ಥಾನದಲ್ಲಿ ಕೆಂಪು, ಹಳದಿ, ಹಸಿರು, ಕೇಸರಿ ಸೀರೆ ಉಟ್ಟು ಹೆಂಗಳೆಯರ ತಂಡವೇ ಇತ್ತು.  ಕೊರಳಲ್ಲಿ ಕೆಂಪು, ಹಸಿರು ಮಣಿಗಳ ಸರ. ಗಾಢವಾದ ಮೇಕಪ್. ಎಲ್ಲಿ ನೋಡಿದರಲ್ಲಿ ಅವರೇ. ಅದೇನು ನಗುವೋ, ಅದೇನು ಮಾತೋ! ಪಶುಪತಿ ನಾಥ ದೇವಸ್ಥಾನದೊಳಕ್ಕೆ ಪ್ರವೇಶಿಸಿದರೆ ಬೇರೆಯದೇ ಲೋಕ. ಒಂದು ಕಡೆ ನೇಪಾಳಿ ಪೂಜಾರಿಗಳು ಅಲ್ಲಲ್ಲಿ ಒಂದಿಷ್ಟು ಹೆಂಗಸರನ್ನ ಕೂರಿಸಿಕೊಂಡು ಪೂಜೆ ನಡೆಸಿಕೊಡುತ್ತಿದ್ದರು. ಪೂಜೆ ಸಮಾಪ್ತಿಯಾದ ಮೇಲೆ ಎಲ್ಲ ಹೆಂಗಸರ ಹಣೆಗೆ ಅಕ್ಷತೆ ಕಾಳಿನಂಥದ್ದನ್ನೇನೋ ಮೆತ್ತುತ್ತಿದ್ದರು. ಇನ್ನೊಂದು ಕಡೆ ಒಂದಿಷ್ಟು ಜನ ಗುಂಪು ಕಟ್ಟಿಕೊಂಡು ನೃತ್ಯ ಮಾಡುತ್ತಿದ್ದರು. ಆ ದೇವಸ್ಥಾನದೊಳಗೆ ನಮ್ಮ ಕರ್ನಾಟಕದವರೇ ಒಬ್ಬರು ಪ್ರಧಾನ ಅರ್ಚಕರು. ಅವರ ಹೆಸರು ಗಿರೀಶ ಭಟ್. ಉತ್ತರ ಕನ್ನಡದ ಮೂಲೆಯಿಂದ ಆ ನೇಪಾಳವನ್ನು ಹೇಗೆ ಸೇರಿಕೊಂಡರು ಎಂಬುದನ್ನು ತಿಳಿಯಲಾಗಲಿಲ್ಲ. ನೇಪಾಳಿ ಷೆರ್ಪಾಗಳು ಅವಸರದಲ್ಲಿ ಒಂದೆರಡು ದೇವಾಲಯಗಳನ್ನೂ, ಬೌದ್ಧನಾಥ ಸ್ತೂಪವನ್ನೂ ತೋರಿಸಿದರು. ಅದಷ್ಟು ಬಿಟ್ಟರೆ ನಮಗೆ ಮತ್ತೇನೂ ದಕ್ಕಲಿಲ್ಲ.

ಬೆಳಿಗ್ಗೆ ಸುಮ್ಮನೇ ನಡೆದು ಬರೋಣ ಎಂದು ಹೋದವರಿಗೆ ದಾರಿಯಲ್ಲಿ ಒಬ್ಬಳು ಬಿಸಿ ಬಿಸಿ ಚಹಾ ಫ್ಲಾಸ್ಕಿನಲ್ಲಿ ಇಟ್ಟುಕೊಂಡು ಕೂತಿದ್ದು ಕಾಣಿಸಿತು. ಆ ಹೆಂಗಸಿನ ಹೆಸರು ಮಂಜು. ಚಹಾ ಕುಡಿಯುತ್ತ ಕೂತಂತೆ ಮಿಲ್ಖಾ ಸಿಂಗನಂತೆ ಕೂದಲನ್ನು ಮೇಲೆತ್ತಿ ಗಂಟು ಹಾಕಿಕೊಂಡ ಮುದುಕಿಯೊಬ್ಬಳು ತನಗೂ ಚಹಾ ಆರ್ಡರ್ ಮಾಡಿ ಅಲ್ಲೇ ಕೂತಳು. ಸ್ವಲ್ಪ ಹೊತ್ತಿಗೆ ಮಂಜು ಅವಳಿಗೆ ಒಂದು ಸಿಗರೇಟ ಎತ್ತಿಕೊಟ್ಟಳು. ಇವಳು ಸೇದತೊಡಗಿದಳು. ಮುದುಕಿಯ ಹೆಸರು ವೇಲ್ಮಯಿಯಂತೆ. ನಾವು ಫೋಟೋ ತೆಗೆಯುವುದನ್ನ ನೋಡಿ ಹತ್ತಿರದಲ್ಲಿದ್ದ, ಅವಳಂತೆ ಸೀರೆಯುಟ್ಟ ತನ್ನ ಗೆಳತಿ ಗಾಯತ್ರಿಯನ್ನೂ ಕರೆದಳು. ನೇಪಾಳ ಮೊದಲಿನಿಂದಲೂ ತನ್ನ ಬಗ್ಗೆ ವಿಚಿತ್ರ ಬಗೆಯ ಕುತೂಹಲವನ್ನು ಕಾಯ್ದಿರಿಸಿಕೊಂಡೇ ಬಂದಿದೆ. ಬಡ ಪಟ್ಟಿಗೆ ಏನನ್ನೂ ತೋರಿಸದ ಊರು ಕಠ್ಮಂಡು. ಎನೋ ಒಂಚೂರು ತೋರಿಸಿದ ಹಾಗೆ ಮಾಡಿ ತಟಕ್ಕನೆ ಸೆರಗಿನಲ್ಲಿ ಮುಚ್ಚಿಟ್ಟುಕೊಳ್ಳುವ ಮಾಟಗಾತಿ ಮುದುಕಿಯಂತೆ ಆ ಊರು. ಹಾಗಂತ ನನಗನ್ನಿಸಿತು.


ಮರುದಿನ ಬೆಳಿಗ್ಗೆ ಸುಮಾರು ೨೦ ಜನರನ್ನ ತುಂಬಿಕೊಂಡ ಬಸ್ಸು ಕಡೋರಿಯತ್ತ ಸಾಗಿತು. ನಾವೆಲ್ಲ ಬೆಂಗಳೂರಿನ ಟ್ರಾವೆಲ್ ಏಜೆನ್ಸಿಯ ಮೂಲಕ ಹೊರಟಿದ್ದರಿಂದ ನಮ್ಮ ಗುಂಪಿನಲ್ಲಿ ಸುಮಾರು ಮುಕ್ಕಾಲು ಭಾಗ ಕನ್ನಡಿಗರೇ ಇದ್ದರು. ಬಹುಪಾಲು ಎಲ್ಲಾ ೫೦ ದಾಟಿದವರು. ಅವರಲ್ಲಿ ಅತ್ಯಂತ ಸೀನಿಯರ್ ಅಂದರೆ ಭಟ್ಕಳದ ನಾರಾಯಣ ಅವರು. ೬೯ ರ ವಯಸ್ಸಿನಲ್ಲಿಯೂ ಮೂರು ದಿನಗಳ ಕಾಲ್ನಡಿಗೆಯ ಪರಿಕ್ರಮವನ್ನು ಒಂಚೂರು ತ್ರಾಸಿಲ್ಲದೇ ಪೂರೈಸಿದ್ದರು! 

Sunday, August 25, 2013

ಕೈಲಾಸ -ಮಾನಸ ಯಾತ್ರೆ -೧

ಒಂಥರಾ ಮಬ್ಬು ಕವಿದ ಹಾಗೆ. ಯಾರ ಜೊತೆಯೂ ಮಾತಾಡಬೇಕೆನ್ನಿಸುತ್ತಿಲ್ಲ. ಒಳಗಿಂದೊಳಗೇ ಬಿಗಿದ ಮೌನ. ಅಂತರಾಳದೊಳಗಿಂದ ಕಡಲ ಮೊರೆತದ ಸದ್ದು, ಅರೆನಿದ್ರೆಯಲ್ಲಿ ಅದ್ಭುತ ರೌದ್ರವೊಂದನ್ನು ಕಂಡು ಅದು ನಿಜವೋ ಸುಳ್ಳೋ ಅನ್ನುವದು ಗೊತ್ತಾಗದೇ, ಕುತೂಹಲಿಗಳಿಗೆ ಅದನ್ನು ಹೇಗೆ ವಿವರಿಸಬೇಕೆಂದು ತೋಚದೇ ದಿಕ್ಕುಗೆಟ್ಟ ಪರಿಸ್ಥಿತಿಯಲ್ಲಿ ನಾನಿದ್ದೇನೆ. 

ಕೈಲಾಸ-ಮಾನಸ ಯಾತ್ರೆಯಿಂದ ಹಿಂದಿರುಗಿ ಎರಡು ದಿನಗಳಾಗಿವೆ. ಸುಮಾರು ೫೩ ಕಿ ಮಿ ಗಳಷ್ಟು ಉದ್ದದ ಕೈಲಾಸ ಪರಿಕ್ರಮವನ್ನು ಯಶಸ್ವಿಯಾಗಿ ಕಾಲ್ನಡಿಗೆಯಲ್ಲಿ ಪೂರ್ಣ ಗೊಳಿಸಿದ ಆನಂದದೊಳಗೆ ನಿಗೂಢ ತುಮುಲವಿದೆ. ಅದೇನೆಂದೇ ನನಗರ್ಥವಾಗುತ್ತಿಲ್ಲ. 

ಅಸಲಿಗೆ ಈ ಯಾತ್ರೆಯನ್ನು ಹರಕೆ ತೀರಿಸುವುದಕ್ಕೆಂದು ಮಾಡಿದ್ದಲ್ಲ. ಬಹುವಾಗಿ ಬಯಸಿ ಹೊರಟು ನಿಂತಿದ್ದಲ್ಲ. ಹಿಮಾಲಯದ ಕಣಿವೆಗಳ ಪ್ರಕೃತಿ ಸೌಂದಯವನ್ನು ಸವಿಯುವ ಉದ್ದೇಶವೂ ಇರಲಿಲ್ಲ. ತನ್ನಿಂದ ತಾನೆ ಘಟಿಸಿದ್ದು. ಗಾಳಿಯೊಂದಿಗೆ ತೇಲಿದ ಒಣ ಹುಲ್ಲ ಗರಿಕೆ ನಾನು. 

ಒಟ್ಟಾರೆ ಇಡೀ ಯಾತ್ರೆಯನ್ನು ಹಿಂತಿರುಗಿ ತಡವಿದಾಗ ಸಿಕ್ಕ ನೆನಪಿನ ತುಂಡುಗಳು ಇಂತಿವೆ: ಕಠ್ಮಂಡುವಿನಲ್ಲಿ ಕಂಡ ಹವಳದ ತುಟಿಯ ಸುಂದರಿಯರು, ರಹಸ್ಯವೊಂದನ್ನು ಬಚ್ಚಿಟ್ಟುಕೊಂಡಂತಿದ್ದ ನೇಪಾಳ, ಮೋಹಕ ಪ್ರಕೃತಿ, ಆಗಷ್ಟೇ ಮೈನೆರೆದ ಯುವತಿಯ ಮಾದಕತೆಯನ್ನು ನೆನಪಿಸುವ ಬೋಟಿಕೋಸಿ ನದಿ, ನೇಪಾಳ-ಚೈನಾ ಬಾರ್ಡರ್ ನಲ್ಲಿದ್ದ ’ಸ್ನೇಹ ಸೇತುವೆ’, ಚೈನಾ ಆಕ್ರಮಿತ ಟಿಬೇಟ್ ಮತ್ತು ಅಲ್ಲಿನ ಜನಜೀವನ, ಬೋಳು ಬೋಳಾದರೂ ಮನಸೆಳೆಯುವ ಟಿಬೇಟಿನ ಪ್ರಸ್ಥಭೂಮಿ ಮತ್ತು ಅದರೊಳಗಿನ ಊರುಗಳು, ಪ್ರಶಾಂತ ಮಾನಸ ಸರೋವರದ ನೀಲಿ, ಘನ ಗಾಂಭೀರ್ಯದ ಕೈಲಾಸ ಪರ್ವತ, ಎದೆ ನಡುಗಿಸುವ ಡೋಲ್ಮಾ ಲಾ ಪಾಸ್ ನ ಕಣಿವೆ, ಮತ್ತು ಮೂರು ದಿನದ ಕಾಲ್ನಡಿಗೆಯ ಪರಿಕ್ರಮ. 

ಇವೆಲ್ಲ ತುಣುಕುಗಳನ್ನು ಜೋಡಿಸಿ ಒಂದು ಅನುಭವ ಕಥಾನಕವನ್ನು ಹೆಣೆಯಬೇಕೆಂದುಕೊಂಡಿದ್ದೇನೆ. ಅಸಲಿಗೆ ಈ ಯಾತ್ರೆಯಿಂದ ನನಗೆ ದಕ್ಕಿದ್ದೇನು, ಈ ಯಾತ್ರೆಯ ಸಾಫಲ್ಯವನ್ನು ಯಾವ ಮಾನದಂಡ ದಿಂದ ಅಳೆಯಬಹುದು, ಮತ್ತು ಈ ಯಾತ್ರೆಯ ಕೆಲವೊಂದು ವಿವರಗಳು ಮುಂದಿನವರಿಗೆ ಯಾವ ರೀತಿ ಉಪಯುಕ್ತವಾಗಬಹುದು ಎಂಬ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನನ್ನದು. 

ಮಡುಗಟ್ಟಿದ ಮೌನ ಸಡಿಲವಾಗುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. 

Wednesday, August 7, 2013

ಋತು ಪಲ್ಲವ





ಕಳೆದ ಬೇಸಿಗೆಯಲ್ಲಿ
ಬಿರಿದ ಭೂಮಿಯ ಬಾಯೊಳಗಿಂದ ಹಾದು
ಕರುಳ ತಂತುಗಳನ್ನ ಸುಟ್ಟು
ಅಂತರ್ಜಲದ ಬಿರಡೆ ಮುಚ್ಚಿ
ದಾಹದ ಹಸಿವಿಗೆ ಕಿಚ್ಚಿಟ್ಟ ರಣ ಬಿಸಿಲಿಗೆ
ಸೂತಕದ ಛಾಯೆಯಿತ್ತು.

ಸಾವಿನ ಮನೆಯಲ್ಲಿ ನಗುವ ಕಂದನ ಕೇಕೆಯಂತೆ
ಸುರಿದ ಮಳೆ ಕೆರೆ ಕೊಳ್ಳ ಕೋಡಿ ಹರಿದು
ಕರುಳ ತಂತುಗಳನ್ನ ಪುನಶ್ಚೇತನಗೊಳಿಸಿ
ಮೊಳೆಯಿಸಿದ ಅಂಕುರ
ಚಿಗುರಿ 
ಎಲೆ ಬಿರಿದು
ಮೊಗ್ಗಾಗಿ
ಪಲ್ಲವಿಸಿದ ಸದ್ದಿಗೆ
ಸಂಭ್ರಮಿಸಿತ್ತು ಶ್ರಾವಣ! 

Monday, August 5, 2013

ಕಲ್ಪನೆಯೊಂದನ್ನು ಹಾಳೆಯಲ್ಲಿ ಹೂತಿಟ್ಟರೆ...



ಕಲ್ಪನೆಯೊಂದನ್ನು ಹಾಳೆಯಲ್ಲಿ ಹೂತಿಟ್ಟ ಕ್ಷಣ
ಕವಿತೆಯೊಂದು ಕಣ್ಣು ಬಿಟ್ಟು ನೋಡಿತ್ತು

ಒಂದು ರಾಶಿ ಶಬ್ಧಗಳ ಅಡಿಯಲ್ಲಿ  ಸಿಲುಕಿಕೊಂಡಿತ್ತು ಕಲ್ಪನೆ

ಬೆದರಿದಂತಿದ್ದ ಮೆಲುದನಿಯೊಂದರ
ಆ...........ವಿಯೆದ್ದು ಕಿವಿಗಳನ್ನು ಸೋಕಿತ್ತು
ಯಾಕೆ ಇಷ್ಟೊಂದು ಶಬ್ಧಗಳಲ್ಲಿ ನನ್ನನ್ನು ರೂಪಿಸುತ್ತೀಯೆ
ಕವಿತೆಯ ಸಾಲುಗಳ ತೋಳನ್ನು ಎಳೆದು ಕಟ್ಟದ್ದೀಯೆ
ಉಪಮೆಗಳ ಪರದೆಯಲ್ಲಿ ನನ್ನ ಪ್ರತಿ ಚಲನೆಯನ್ನೂ ಮಡಿಕೆ ಮಾಡಿಡುತ್ತೀಯೆ

ಇಷ್ಟೊಂದು ಇಟ್ಟಿಗೆಗಳು ಬೇಕೆ ಒಂದು ಕಲ್ಪನೆಯನ್ನು ಹೂತಿಡಲು?!




      ಗುಲ್ಜಾರ್ ಅವರ ಮತ್ತೊಂದು ಕವನ.
      ಹಿಂದಿಯಿಂದ ಕನ್ನಡಕ್ಕೆ ತಂದೆ.
      ek khyaal ko kagaj par dafnaaya to...









Sunday, August 4, 2013

ಸೆರೆ ಹಿಡಿದ ಕವಿತೆ




ಕಾಲಘಟ್ಟದ ಕ್ಷಣವೊಂದರ ಮೇಲೆ ಕೂತ ಕವಿತೆಯನ್ನು
ಪಾತರಗಿತ್ತಿಯ ಜಾಲದಲ್ಲಿ ಸೆರೆ ಹಿಡಿದು
ನಂತೆರ   ಕತ್ತರಿಸಿ
ಆಲ್ಬಮ್ಮಿನಲ್ಲಿ ಜೋಡಿಸಿಡುತ್ತಾ ಹೋಗುವುದು
ಅನ್ಯಾಯವಲ್ಲದೇ ಮತ್ತಿನ್ನೇನು?

ಕ್ಷಣಗಳು ಕಾಗದದ ಮೇಲೆ ಬಿದ್ದು ಮಮ್ಮಿಗಳಾದರೂ
ಕೊನೆಗೆ ಕವಿತೆಯ ರಂಗು ಮಾತ್ರ ಬೆರಳತುದಿಗಳ ಮೇಲೆ ಉಳಿದುಕೊಳ್ಳುತ್ತದೆ


-ಗುಲ್ಜಾರ್ ಹಿಂದಿಯಲ್ಲಿ ಸೆರೆ ಹಿಡಿದ ಕವಿತೆಯನ್ನು ಕನ್ನಡಕ್ಕೆ ತಂದಿದ್ದು!

[poem- Lamho par baithi najmon ko]

Thursday, August 1, 2013

A search...



All of us know that a person passes through different stages of growth in a lifespan. He passes through the stage of innocence moving on to different levels of maturity. This maturity will  not be attained overnight. It is a never ending process of learning. A baby learns to crawl, to walk, to talk, to count, to solve problems, to control oneself and and so on. It is also a process of unlearning and it is a constant search for the best possible way for happiness. 

In a similar way one will pass through different stages of growth while going about in the world. Growth in terms of maturity, from stage of innocence to stage of maturity.  That is how one understands another  human being. Perception has different levels of growth. A person called 'x' passes through different levels of knowing a person called 'y'. Initial excitements or setbacks of 'x' over 'y' may turn into opposite streams of emotions in the process. 'x' rejects his own assumptions about 'y' and decides about dealing with 'y'.

You can't jump over to stage of maturity without passing through the stage of innocence. However, we have to be conscious of our level of perception. Whether we are in the stage of innocence or have crossed that stage like that. To be conscious of where we are in the process is not an easy task. Often we get carried over by our pride that assumes itself to be in the last stage of the process.

"I know him enough" is the assumption. This assumption may be misleading. Just like assumptions about ourselves. So, the process of learning and unlearning is not limited to the understanding of   physical growth in a human being or to the comprehension of relationships between two or more human beings. It is very well present in understanding the growth of our own mind. By mind, here I mean a space which decides; a space which thinks; a space which suffers or feels happy within our body.

Does it mean that we have to be skeptical of human beings constantly? I don't know. But, this process is inevitable, i think, to decide the life of any human relationship. I have no clarity over other factors that influence our decisions in all stages, be it the stage of innocence or maturity. Internal factors like pride, jealousy, anger, pain experienced by us and external factors like some experience shared by his or her friends/relatives/community.

This is no conclusion of any sort I have just thought aloud. If you come across this write up please do write about what you feel. You may have different things say. 

-prajna