Monday, February 24, 2014

ಹರಿವ ನದಿ ಹಿಮವಾದ ಗಳಿಗೆ

ಹರಿವ ನದಿ
ಹಿಮವಾದ ಗಳಿಗೆ.

ಪುಟಿದ ಅಲೆಯೊಂದು
ಚಿತ್ರವಾಗಿದ್ದ ಪರಿ...
ಒಡಲೊಳಗೆ ಸೆರೆ ಸಿಕ್ಕ
ಕನಸುಗಳ ನರ ಬಿಗಿದು                          
ಚಿತ್ರವಾಗಿದ್ದ ಪರಿ…
ಆಚೆ ದಡದಲಿ ಕಾಯ್ದು ಕುಳಿತವಳ
ಕಣ್ಮಿಂಚು, ತುಟಿಯಂಚು, ಕೊರಳ ಇಳಿಜಾರಿನಂಚು
ನೆನೆಯುತ್ತ ಧಾವಿಸಿದ ನಾವೆಯೊಂದು
ಚಿತ್ರವಾದ ಪರಿ…

ತೆವಳಿತ್ತು ಮರಿ ಮೀನೊಂದು

ತಳದೊಳಗೆ ಜೀವ ಸಂಚಾರ

Monday, February 3, 2014

ಇಂತವರೇ ನನ್ನವರಾಗಬೇಕೆಂದು ನಿಯಮ ಮಾಡಿಕೊಂಡರೆ ಮಾತ್ರ ಏಕಾಂಗಿಯಾಗೋದು...




ವಸುಧೇಂದ್ರರವರ ’ಮೋಹನ ಸ್ವಾಮಿ’ ಕಥಾ ಸಂಕಲನದಲ್ಲಿನ ಎಲ್ಲಾ ಕತೆಗಳನ್ನೂ ಪರಿಗಣಿಸಿದರೆ ಕತೆಯ ಶೀರ್ಷಿಕೆ ’ಮೋಹನಸ್ವಾಮಿ ಮತ್ತು ಇತರ ಕತೆಗಳು’ ಎಂದಿದ್ದರೆ ಒಳ್ಳೆಯದಿತ್ತು ಎನ್ನಿಸಿತು. ಸಂಕಲನವನ್ನು ಓದಲು ಕೈಗೆತ್ತಿಕೊಳ್ಳುವ ಮೊದಲು ಆ ಶೀರ್ಷಿಕೆಯಿಂದಾಗಿ ಇರುವ ಕತೆಗಳೆಲ್ಲವೂ ಮೋಹನಸ್ವಾಮಿಗೆ ಸಂಬಂಧಿಸಿದ್ದೇ ಇರಬೇಕು ಎಂಬ ಪೂರ್ವಾಭಿಪ್ರಾಯ ಬಂದುಬಿಡುತ್ತದೆ, ಅದರಿಂದ ಅನಾಹುತವೇನೂ ಆಗದಿದ್ದರೂ,”ತಗಣಿ’ ಕತೆಯ ನಂತರ ಇದ್ದಕ್ಕಿದ್ದಂತೆ ಬೇರೆಯದೇ ಕಥಾವಸ್ತುವನ್ನಿಟ್ಟುಕೊಂಡ ಕತೆ ಎದುರಾಗಿ ಏನೋ ಒಂದು ರೀತಿಯಲ್ಲಿ ನನಗೆ ರಸಾಭಾಸವಾದಂತೆ ಅನುಭವವಾಯಿತು.

ಅಲ್ಲಿಯವರೆಗಿನ ಒಟ್ಟೂ ೫ ಕತೆಗಳು ಮೋಹನಸ್ವಾಮಿಯೆಂಬ ಸಲಿಂಗಕಾಮಿಯೊಬ್ಬನ ಬದುಕಿನ ವಿವಿಧ ಮಗ್ಗಲುಗಳನ್ನು ಅನಾವರಣ ಮಾಡುತ್ತ ಹೋಗುತ್ತವೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಇಷ್ಟು ವಿಸ್ತೃತ ರೂಪದಲ್ಲಿ ಅನಾವರಣವಾಗಿದ್ದು ಇದೇ ಮೊದಲ ಸಲವೇನೋ. ಆನಂತರ ಬರುವ ’ತಗಣಿ’ ಎಂಬ ಕತೆ ಮೋಹನಸ್ವಾಮಿಯ  ಚಿತ್ರಣವಲ್ಲದಿದ್ದರೂ ಮೋಹನಸ್ವಾಮಿಯ ಬಳಗಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ಇಟ್ಟುಕೊಂಡಿದೆಯಾದ್ದರಿಂದ ಅಲ್ಲಿಯವರೆಗಿನ ಒಟ್ಟೂ ೬ ಕತೆಗಳನ್ನು ಒಂದು ಗುಚ್ಛದಲ್ಲಿಟ್ಟು ಓದಿಕೊಳ್ಳಬಹುದು. ಮತ್ತು ನಾನು ಕೂಡ ಮೋಹನಸ್ವಾಮಿಯೊಬ್ಬನನ್ನೇ ಕೇಂದ್ರವಾಗಿಟ್ಟುಕೊಂಡು ಆ ೬ ಕತೆಗಳನ್ನಷ್ಟೇ ಕೈಗೆತ್ತಿಕೊಂಡು ನನ್ನ ಅನಿಸಿಕೆಗಳನ್ನು ನಿಮ್ಮೆದುರು ಇಡುತ್ತಿದ್ದೇನೆ.

ಮೊದಲ ೫ ಕತೆಗಳನ್ನು ಒಂದಾದ ನಂತರ ಮತ್ತೊಂದರ ಹಾಗೆ ಓದುತ್ತ ಹೋದರೆ....ಅವು ಮೋಹನಸ್ವಾಮಿಯ ಒಟ್ಟೂ ಜೀವನ ಯಾತ್ರೆಯ ವಿವಿಧ ಪುಟಗಳೇನೋ, ಒಂದೇ ಪಯಣದ ವಿವಿಧ ನಿಲುಗಡೆಗಳೇನೋ...ಎನ್ನುವಂತೆ ಭಾಸವಾಗುತ್ತದೆ. ಅವನ ಅಸಹಾಯಕತೆಯನ್ನು ಸ್ವ-ಹಿತಾಸಕ್ತಿಗೆ ಬಳಸಿಕೊಳ್ಳುವ ಗೆಳೆಯರನ್ನು ಸಂಭಾಳಿಸುತ್ತ, ಅವನ ವೈಯಕ್ತಿಕ ಸಮಸ್ಯೆಯ ಸುಳಿವೂ ಇರದ ನೆರೆ-ಹೊರೆಯ ಜೊತೆ ತನ್ನೊಳಗಿನ ಒತ್ತಡವನ್ನು ಹೊರಹಾಕಲಾರದೇ ಒಳಗೂ ಇಟ್ಟುಕೊಳ್ಳಲಾಗದೇ ಪೇಚಾಡುವ ಮೋಹನ ಸ್ವಾಮಿಯ ಆಂತರ್ಯದೊಳಗೆ ನಮ್ಮನ್ನೂ ಎಳೆದೊಯ್ಯುತ್ತವೆ ಈ ಕತೆಗಳು.   


ಒಟ್ಟಾರೆಯಾಗಿ ನಮ್ಮ ಅನುಭವಕ್ಕೆ ದಕ್ಕುವ ಮೋಹನ ಸ್ವಾಮಿಯ ಒಂಟಿತನವನ್ನೂ, ಅಸಹಾಯಕತೆಯನ್ನೂ, ಯಾರಿಗೂ ಬೇಡವಾದವನು ಎಂಬ ಒಳಗುದಿಯನ್ನೂ, ಜೊತೆಗಾರರಲಿಲ್ಲದ ಬೇಸರವನ್ನೂ, ಅವನ ಅಸ್ತಿತ್ವದ ಬಗೆಗಿನ ಕೀಳರಿಮೆಯನ್ನೂ ಮತ್ತು ಈ ಎಲ್ಲವನ್ನೂ ಮೀರಿ ಬೆಳೆಯುವ ಆತ್ಮಚೈತನ್ಯವನ್ನೂ ಈ ಕತೆಗಳು ಅನಾವರಣಗೊಳಿಸುತ್ತವೆ. ಏಕಾಂಗಿತನದಿಂದ ಕಂಗೆಡುವ ಮೋಹನಸ್ವಾಮಿ ಅದನ್ನು ಮೀರಲೂ ಬಲ್ಲ. ಒಮ್ಮೆ ಪ್ರೀತಿಗೆ ಹಾತೊರೆವ, ಕಾಮದಿಂದ ಕಂಗೆಡುವ, ಹೆಗಲಾದ ಗೆಳೆಯರನ್ನು ಬಾಚಿ ತಬ್ಬುವ, ಸ್ವಾನುಕಂಪದಿಂದ ಕುಬ್ಜನಾಗುವ ಮೋಹನಸ್ವಾಮಿ ಮತ್ತೊಮ್ಮೆ ಸಿಡಿದೇಳುವ, ಮೆಟ್ಟಿ ನಿಲ್ಲುವ, ಎಲ್ಲ ಬಯಲಾಗುವ  ದಾರ್ಶನಿಕನೂ ಹೌದು. ಒಂದು ಕ್ಷಣ ಆಚೆ ಬಂದು ಯೋಚಿಸುತ್ತೇನೆ…… ಮೇಲಿನ tendencies  ನನ್ನಲ್ಲೂ ಇಲ್ಲವೆ? 

ತುತ್ತ ತುದಿಯಲಿ: ಈ ಕತೆಯಲ್ಲಿ ಮೋಹನಸ್ವಾಮಿ ಕಾರ್ತೀಕನೆಂಬ ದ್ವಿಲಿಂಗಿಯ ಜೊತೆ ಲಿವ್ ಇನ್ ಥರ ಇರುತ್ತಾನೆ. ಅವನಿಗೆ ತನ್ನ ಮತ್ತು ಕಾರ್ತೀಕನ ಸಂಬಂಧ ಹೊರಗಡೆ ಗೊತ್ತಾದರೆ ಎಂಬ ಆತಂಕ. ಕಾರ್ತೀಕನ ಜೊತೆ ಸರಸದಿಂದಿರುವಾಗ ಬಾಗಿಲು ತೆರೆದೇ ಇತ್ತೆಂಬ ಆತಂಕ, ಕಾರ್ತೀಕನಿಗಾಗಿ ಅತೀವ ಕಾಳಜಿ, ಮತ್ತು ತನ್ನ ಮತ್ತು ಕಾರ್ತೀಕನ ಸಂಬಂಧದ ಬಗ್ಗೆ ಸಹ ಪ್ರಯಾಣಿಕನೊಂದಿಗೆ ಹಂಚಿಕೊಳ್ಳುವಾಗ ಅನುಭವಿಸಿದ ಮುಜುಗರ ಮತ್ತು ಅದಕ್ಕಾಗೇ ಇದ್ದ ವಿಷಯ ಮರೆಮಾಚಿದ ಪ್ರಸಂಗಗಳು ಒಂದು ಸಾಧಾರಣ (ಯಾವುದೇ ಗಂಡು-ಹೆಣ್ಣಿನ ನಡುವೆ ಇರಬಹುದಾದ) ಪ್ರೇಮ ಪ್ರಸಂಗದಲ್ಲೂ ಕಂಡುಬರುತ್ತವೆ. ಆದರೆ ಇದು ಸಲಿಂಗ ಕಾಮಿಗಳ ವಿಷಯದಲ್ಲೂ ಅಷ್ಟೇ ಸಹಜವಾಗಿ ನಡೆಯಬಹುದಾದ ಘಟನೆಗಳು ಎಂಬ ಅಂಶ ಕುತೂಹಲಕಾರಿಯದಾದದ್ದು. ಆದರೆ ಗಂಡು-ಹೆಣ್ಣಿನ ಪ್ರೇಮಕ್ಕೆ ಏನಿಲ್ಲವೆಂದರೂ ಕಾನೂನಾದರೂ ಸಹಾಯ ಮಾಡೀತು, ಇವರ ವಿಷಯದಲ್ಲಿ ಹಾಗಾಗುವುದಿಲ್ಲವಲ್ಲ.  

ಕಗ್ಗಂಟು : ಇದು ಮೊದಲ ಕತೆಯ ಮುಂದುವರೆದ ಭಾಗದಂತೆ ತೋರುತ್ತದೆ. ಕಾರ್ತೀಕನ ಮದುವೆ ನಿಶ್ಚಯವಾಗುತ್ತದೆ. ಇಲ್ಲಿಯವರೆಗೆ ಜೊತೆಯಾಗಿದ್ದ ಸಂಗಾತಿ ಇದ್ದಕ್ಕಿದ್ದಂತೆ ಅಪರಿಚಿತನಂತೆ ವರ್ತಿಸತೊಡಗುತ್ತಾನೆ. ಮೋಹನಸ್ವಾಮಿ ಅತಂತ್ರಭಾವದಿಂದ ಕಂಗೆಡುತ್ತಾನೆ. ಕಾರ್ತೀಕ ವಿಲನ್ ಏನೂ ಅಲ್ಲ. ಒಬ್ಬ ದ್ವಿಲಿಂಗಿಯ ದ್ವಂದ್ವಗಳ ಬಗ್ಗೆ ನಮಗೆಷ್ಟು ಗೊತ್ತು? ಆದರೂ ಮೋಹನಸ್ವಾಮಿಯ ತೊಳಲಾಟಕ್ಕೆ ಪರ್ಯಾಯ ಸೂಚಿಸುವುದು ಕಷ್ಟ. ತನ್ನಂತೇ ಇರುವ ಮತ್ತೊಬ್ಬ ಹೆಣ್ಣಿಗ ನ ಜೊತೆ ಸೂತ್ರ ಬೆಸೆಯುವುದಿಲ್ಲ. ಇವನ ಜೊತೆಯಾಗುವವರು ಸುಲಭಕ್ಕೆ ಸಿಗುವುದಿಲ್ಲ.

“ಅಪ್ಪ, ಅಮ್ಮ, ಅಕ್ಕ, ಅಣ್ಣ, ಸ್ನೇಹಿತ, ಸಹೋದ್ಯೋಗಿ, ಗುರು, ಸೇವಕ, ಸಮಾಜ, ಕೋರ್ಟು, ಕಛೇರಿ, ಜಗತ್ತು –ಊಹೂಂ ಯಾರೂ ನಿನ್ನನ್ನು ಒಪ್ಪುವುದಿಲ್ಲ, ಎಲ್ಲರ ಕಣ್ಣಲ್ಲೂ ನೀನು ಪರಮ ನೀಚ. ಯಾರಿಗೂ ನಿನ್ನ ಮೇಲೆ ಹನಿ ಕನಿಕರವೂ ಮೂಡುವುದಿಲ್ಲ. ಯಾವುದೇ ಕಟಕಟೆಯಲ್ಲಿ ನಿಂತು ಗೋಗರೆದರೂ ನೀನು ತಪ್ಪಿತಸ್ಥನಾಗುತ್ತೀ". 

ಸ್ವ-ಮರುಕದಿಂದ ತಪ್ತನಾಗಿ  ಹೀಗೆ ಘೋಷಣಾವಾಕ್ಯಗಳನ್ನು ಹರಿಬಿಡುವ ಮೋಹನಸ್ವಾಮಿ ತನ್ನ ಮೆಚ್ಚಿನ ಕೃಷ್ಣನಿಗೆ ಹನ್ನೊಂದನೇ ಅವತಾರದಲ್ಲಿ ತನ್ನಂತೆ ಹುಟ್ಟಲು ಶಾಪವಿತ್ತು ನಿರಾಳವಾಗುತ್ತಾನೆ.

ಕಾಶಿವೀರರು: ಈ ಕತೆಯಲ್ಲಿ ಮೋಹನಸ್ವಾಮಿಯ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಯೊಬ್ಬನ ಚಿತ್ರಣ ಬರುತ್ತದೆ. ಅವನನ್ನು ಎದುರಿಸಿ ತನ್ನ ಆತ್ಮಾಭಿಮಾನವನ್ನು ಉಳಿಸಿಕೊಳ್ಳುವ ಈ ಮೋಹನಸ್ವಾಮಿ ನನಗಿಷ್ಟವಾದ. ಈ ಕತೆಯಲ್ಲಿ ಬರುವ ಕಾಶೀವೀರ, ಅವನ ನಾಮಕರಣವಾದ ಪ್ರಸಂಗ ಮತ್ತು ವಿಮಲಕ್ಕ ನ ಪಾತ್ರಗಳಲ್ಲಿ ಎಂದಿನ ವಸುಧೇಂದ್ರ ಕಂಡರು!

ಒಲ್ಲದ ತಾಂಬೂಲ: ಈ ಕತೆಯಲ್ಲಿ ಮೋಹನಸ್ವಾಮಿ ಸ್ವಂತಕ್ಕೊಂದು ಮನೆ ಖರೀದಿಸುತ್ತಾನೆ. ಮನೆ ಖರೀದಿಸುವಾಗಿನ ಇಡೀ ಸನ್ನಿವೇಶ ಮನ ಕಲಕುತ್ತದೆ. ಮನೆಯ ಆಯ್ಕೆ ಮತ್ತು ಇತರೆ ವ್ಯವಹಾರಗಳನ್ನು ಸ್ವತಂತ್ರವಾಗಿ ನಿಭಾಯಿಸುವುದೇ ಅವನಿಗೆ ದೊಡ್ಡ ಸಾಹಸವೆನಿಸುತ್ತದೆ. ಅಪಾರ್ಟಮೆಂಟಿನ ಆ ಚಿಕ್ಕ ಮನೆಯೂ ಅದರಲ್ಲಿನ ಕೋಣೆಗಳೂ ಬೃಹತ್ತಾಗಿ ಅವನ ಆತ್ಮ ಸ್ಥೈರ್ಯವನ್ನು ಕೆಣಕತೊಡಗುತ್ತವೆ. ತನಗೊಂದು ಸ್ವಂತದ ಗೂಡು, ಅದರಲ್ಲಿನ ಸವಲತ್ತುಗಳು, ಸಂಸಾರ ಇತ್ಯಾದಿ ಕಲ್ಪನೆಗಳೇ ಭಯಹುಟ್ಟಿಸುವಷ್ಟು ಕೀಳರಿಮೆಯಿಂದ ತೊಳಲಾಡುವ ಮೋಹನಸ್ವಾಮಿಗೆ ಗೆಳೆಯರಿಲ್ಲದೇ ಬದುಕಲಾಗುತ್ತಿಲ್ಲ.
ಹಾಗಂತ, ಗೆಳೆಯ ಗುರುರಾಜನ ಮೇಲೆ ದೈಹಿಕ ಆಕರ್ಷಣೆ ಉಂಟಾಗದೇ ಇರುವುದರ ಬಗ್ಗೆ ಸಮಾಧಾನ ಪಟ್ಟುಕೊಳ್ಳುತ್ತಾನೆ.

ಕಿಲಿ ಮಂಜಾರೋ- ಅವರ ಕಿಲಿಮಂಜಾರೋ ಕತೆಯನ್ನು ಒಂದು ಪ್ರವಾಸ ಕಥನದ ರೂಪದಲ್ಲಿ ಮೊದಲೇ ಓದಿದ್ದೆ. ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದ ಜೊತೆಗೆ ಹೊರಬಂದ ಪ್ರವಾಸ ಕಥನಗಳ ಗುಚ್ಛದಲ್ಲಿ ಆ ಕತೆ ಇತ್ತು. ಅದನ್ನೊಂದು ಪ್ರವಾಸ ಕಥನವನ್ನಾಗಿ ಓದಿ, ಹೊಸ ಬಗೆಯ ನಿರೂಪಣೆಯ ಬಗ್ಗೆ ಖುಷಿಪಟ್ಟಿದ್ದೆ. ಆದರೆ, ಈ ಸಂಕಲನದೊಳಗೆ ಬಂದ ಕತೆಗೆ ಬೇರೆಯದೇ ಫಿಲಸಾಫಿಕಲ್  ಹೊಳಹು ಇದೆ. ಮೋಹನಸ್ವಾಮಿಯ ೫ ಕತೆಗಳಲ್ಲಿ ಕಿಲಿಮಂಜಾರೋ ನನ್ನ ಮೆಚ್ಚಿನ ಕತೆ.

ಮೋಹನಸ್ವಾಮಿಯ  ಕಿಲಿಮಂಜಾರೋ ಚಾರಣದ ಅನುಭವವನ್ನು ತೆರೆದಿಡುವ ಕತೆ ಇದು. ಏಕಾಂಗಿತನದಿಂದ ಬೇಸತ್ತುಹೋದ ಮೋಹನಸ್ವಾಮಿಯ ಅಂತರಾಳವೂ ಕಿಲಿಮಂಜಾರೋದಂತೆ. ಒಡಲಲ್ಲಿ ನಿಗಿ ನಿಗಿ ಕೆಂಡವನ್ನಿಟ್ಟುಕೊಂಡ ಕಿಲಿಮಂಜಾರೋ. ಕತ್ತಲೆಯಲ್ಲಿ ಮಾತ್ರ ಕ್ರಮಿಸಬೇಕಾದ ದುರ್ಗಮ ಹಾದಿ. “ದುರ್ಗಮ ಹಾದಿಯಲ್ಲಿ ಮುಖವಾಡ ಕಳಚಬೇಕು”.

ಸ್ನೇಹಿತರು, ಸಮಾಜ, ಪ್ರೇಮ, ಕಾಮ –ಇವೆಲ್ಲವುಗಳನ್ನು ಮೀರಿದ ಅನುಭವ ಲೋಕಕ್ಕೆ ಮೋಹನಸ್ವಾಮಿ ತೆರೆದುಕೊಳ್ಳುತ್ತಾನೆ. ಹಗುರವಾಗುತ್ತಾನೆ. ಏಕಾಂಗಿತನ ಈಗ ಒಂದು ಬಾಧೆಯಲ್ಲ. ಅವನ ಗೈಡ್ ಡೇವಿಡ್ ಹೇಳುವ ಹಾಗೆ “ಇಂತವರೇ ನನ್ನವರಾಗಬೇಕೆಂದು ನಿಯಮ ಮಾಡಿಕೊಂಡರೆ ಮಾತ್ರ ಏಕಾಂಗಿಯಾಗೋದು” ಅಲ್ವಾ?!

ಕಿಲಿಮಂಜಾರೋ ಆರೋಹಣ ಅವನ ಪಾಲಿಗೆ ಒಂದು ಅಲೌಕಿಕ ಅನುಭವ. ಆರೋಹಣದುದ್ದಕ್ಕೂ ಜೊತೆಯಾದ ಡೇವಿಡ್ ಚಾರಣದ ನೆಪದಲ್ಲಿ ಬದುಕಿನ ಸೂತ್ರಗಳನ್ನೂ ಕಲಿಸಿಕೊಡುತ್ತಾನೆ. ಅಲ್ಲಿ ಮೋಹನಸ್ವಾಮಿ ಕೇವಲ ಒಬ್ಬ ಆರೋಹಿ. ಪಥಿಕ. ಅವನು ಸಲಿಂಗಿಯೋ-ಭಿನ್ನ ಲಿಂಗಿಯೋ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಎಲ್ಲರಂತೆ ಮೂಳೆ-ಮಾಂಸ, ಕೋಪ-ತಾಪ, ಮದ-ಮತ್ಸರ, ಸುಖ-ದುಃಖ ಉಳ್ಳ ಒಬ್ಬ ನರಮನುಷ್ಯ ಅಷ್ಟೇ. ತುತ್ತ ತುದಿಯೇರುವುದೊಂದೇ ಗುರಿ.

ತಗಣಿ: ಇದು ವ್ಯವಹಾರಿಕ ಪ್ರಪಂಚದಲ್ಲಿ ಬದುಕು ಸಾಗಿಸುವ ವಿದ್ಯೆ ಕಲಿತುಕೊಂಡ ಮಂಗಳಮುಖಿಯೊಬ್ಬನ ದುರಂತ ಕತೆ. ಇದರೊಳಗೂಶಂಕರಗೌಡನ ದುರಂತಕ್ಕೆ ಮೂಕ ಸಾಕ್ಷಿಯಂತೆ  ಅವ್ಯಕ್ತವಾಗಿ ಮಿಡಿವ ಮೋಹನಸ್ವಾಮಿಯ ಒಳದನಿಯನ್ನು ಊಹಿಸಿಕೊಳ್ಳುವುದು ಶಕ್ಯವಿದೆ.

ಮೋಹನಸ್ವಾಮಿಯ ಲೈಂಗಿಕ ಆಸಕ್ತಿ (ಓರಿಯೆಂಟೇಶನ್) ವಿಭಿನ್ನವಾದರೂ ಲೈಂಗಿಕ ಉತ್ಕಟೇಚ್ಛೆ (ಅರ್ಜ್) ಯಾವುದೇ ಮನುಷ್ಯರಿಗಿರಬಹುದಾಷ್ಟೇ ಸಹಜವಾದದ್ದು. ‌ಅದು ಒಂದು ಗಂಡಿಗೆ ಹೆಣ್ಣಿನ ಬಗ್ಗೆ ಮತ್ತು ಒಂದು ಹೆಣ್ಣಿಗೆ ಗಂಡಿನ ಬಗ್ಗೆ ಇರಬಹುದಾದಷ್ಟೇ ಸಹಜವಾದದ್ದಾರೂ, ಸಮಾಜ ಅವನ ವಿಭಿನ್ನತೆಯನ್ನು ಅಸಹಜವೆಂದು ಪರಿಗಣಿಸಿ ಪ್ರತ್ಯೇಕಿಸುವುದರಿಂದ ಮತ್ತು ಅವನ ವಿಭಿನ್ನ ಲೈಂಗಿಕ ಒಲವಿಗೆ ವಿಶಿಷ್ಟವಾದ ಕೆಲವು ತೊಡಕುಗಳಿರುವುದರಿಂದ ಮೋಹನಸ್ವಾಮಿ ಮತ್ತು ಅವನಂತವರ ಬದುಕು ಎಲ್ಲ ಮನುಷ್ಯರಂತಾದರೂ ಎಲ್ಲರಂತಲ್ಲ ಅನ್ನುವುದು ಒಟ್ಟಾರೆಯಾಗಿ ಹೊರಡುವ ಭಾವ.

ಅವರು  ಲೈಂಗಿಕ ಜೊತೆಗಾರರನ್ನು ಪಡೆದುಕೊಳ್ಳುವುದು ಸುಲಭವಲ್ಲ. ಒಬ್ಬ ’ಗೇ’ ಮತ್ತೊಬ್ಬ ’ಗೇ’ ಜೊತೆ ಸ್ನೇಹದಿಂದಿರಬಲ್ಲ. ಆದರೆ, ಅವನ ಜೊತೆ ಲೈಂಗಿಕ ಆಸಕ್ತಿ ತೋರಿಸಿಯೇ ಬಿಡುತ್ತಾನೆ ಎನ್ನಲಾಗುವುದಿಲ್ಲ. ಸಲಿಂಗ ಕಾಮಿಗಳಲ್ಲೂ ಬೇರೆ ಬೇರೆ ಮನೋಭಾವದವರಿರುತ್ತಾರೆ. ಮತ್ತು ಅವರ ಚರ್ಯೆಯೂ ಸಾರ್ವತ್ರಿಕವಲ್ಲ. ಮೋಹನ ಸ್ವಾಮಿಯ ಹಾಗೆ ಗಂಡುಗಳಲ್ಲೂ ಸ್ತ್ರೀ ಚರ್ಯೆ ಹೊಂದಿರುವವರ ಜೊತೆ ಸಂಪರ್ಕ ಸಾಧ್ಯವಿಲ್ಲದವರು ಒಂದು ಬಗೆ. ಇನ್ನು ’ತಗಣಿ’ ಯ ಕಥಾನಾಯಕನ ರೀತಿಯವರು ಇನ್ನೊಂದು ಬಗೆ.  

ಇವರ್ಯಾರೂ ಇದ್ದಕ್ಕಿದ್ದ ಹಾಗೆ ಒಂದು ದಿನ ’ನಾನು ಇವತ್ತಿಂದ ಗೇ’ ಆಗುತ್ತೇನೆ ಎಂದು ಹೊರಡುವುದಿಲ್ಲ ಅಲ್ಲವಾ! ಗಂಡಿಗೆ ಹೆಣ್ಣಿನ ಜೊತೆ ಅಥವಾ ಹೆಣ್ಣಿಗೆ ಗಂಡಿನ ಜೊತೆ ಲೈಂಗಿಕ ಒಲವು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದ್ದರೆ ಅವರೇನು ಮಾಡುತ್ತಾರೆ? ಹಸಿವು, ನಿದ್ರೆಯಷ್ಟೇ ಸಹಜವಾದ ಲೈಂಗಿಕ ಬದುಕು ಅವರಿಗೂ ಬೇಡವೆ? ಒಂದು ಗಂಡು ಮತ್ತು ಹೆಣ್ಣಿನ ನಡುವಿನ ಲೈಂಗಿಕ ಉತ್ಕಟೇಚ್ಛೆ ಯನ್ನು ಸ್ವೀಕರಿಸುವಷ್ಟು ಸಹಜವಾಗಿ ಸಲಿಂಗಕಾಮಿಗಳ ಲೈಂಗಿಕ ಉತ್ಕಟೇಚ್ಛೆಯನ್ನೂ ಒಪ್ಪುವಷ್ಟು ಔದಾರ್ಯ ಬೇಕು ಅಷ್ಢೇ. ಹಾಂ,”ಸಂಗಾತಿಯ ಸಹಮತವಿದ್ದಲ್ಲಿ’ ಎಂಬ ಅಂಶ ಎಲ್ಲರಿಗೂ ಅನ್ವಯವಾಗುತ್ತದೆ. ಈ ಮೇಲಿನ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಮೋಹನಸ್ವಾಮಿ ಇನ್ನಷ್ಟು ಸ್ಪಷ್ಟವಾಗುತ್ತಾನೆ.


ಬಗೆಹರಿಯದ ಕೌತುಕವೆಂದರೆ...ಸಲಿಂಗಿಯಾಗಲೀ, ದ್ವಿಲಿಂಗಿಯಾಗಲೀ, ಅಥವಾ ಭಿನ್ನ ಲಿಂಗಿಯಾಗಲೀ ಗಂಡು/ಹೆಣ್ಣು ಹೀಗೆ ವಿಜಾತೀಯ ಧ್ರುವಗಳೇ ಆಕರ್ಷಿತವಾಗುತ್ತವೆಯೆ?! ಗೊತ್ತಿಲ್ಲ. ಮೋಹನಸ್ವಾಮಿಯನ್ನ ಅರ್ಥ ಮಾಡಿಕೊಳ್ಳುವ ಚಿಕ್ಕ ಪ್ರಯತ್ನವನ್ನಂತೂ ಮಾಡಿದ್ದೇನೆ. ಬದುಕ ತೆರೆದಿಟ್ಟ ಮೋಹನಸ್ವಾಮಿಗೆ ಧನ್ಯವಾದಗಳು.