Tuesday, December 20, 2016

The Art Cafe



Before me is a cup of hot cappuccino
topped with  milk foam in the shape of a heart.
A  heart floating in a bowl of heavily scented silence.
In a silky white attire,
bewitching  the ailing minds,
assuring of an ethereal future.
A gentle kiss.  The milky foamy heart, a healer in pretense,
seeps slowly  into my overcast depth
only to stimulate dampen sparks                                 

Unfamiliar faces, yet so soothing
I stare at nothing in particular
A forwarded joke on my  WhatsApp and
I text back a smile.  “Still upset?”
“No, I am alright” a digital smile in return. 
Start everything again from the debris
seal   open wounds, and smile
we are resilient you see. Brave.
I stare at nothing in particular.

A Waitress in multicoloured synthetic hair braids
is returning with an empty tray
raking an uncomfortable past up.
Her young boyfriend, missing since a month
 was a thief with many women that she knew.  
Denying the rumours about his death in a police encounter
She waits. A kind lover, she is.

A unique blend  
Of half truth; the Cafe brews.

-Prajna




















Tuesday, February 2, 2016

ಬಾಗಿಲ ಮೇಲೆ ಬದುಕನ್ನು ಬರೆದವನ ಸ್ವಗತ

ನಾನು ಸಾಕ್ಷಿಯಾಗಬಯಸುತ್ತೇನೆ.

ಅದು ಆಗಿದ್ದು ಹತ್ತು ವರ್ಷಗಳ ಹಿಂದೆ. ಆದರೆ ಅದು ಪ್ರತಿನಿತ್ಯ ನನ್ನ ಕಣ್ಣೆದುರು ಬಂದು ನಿಲ್ಲುತ್ತದೆ.

ನಾವು ಪ್ರಿಪ್ಯಟ್ ನಲ್ಲಿ ಇದ್ವಿ. ಪ್ರಿಪ್ಯಟ್ ಟೌನ್.

ನಾನು ಬರಹಗಾರನೇನಲ್ಲ. ಅದನ್ನ ವರ್ಣಿಸುವುದು ನನ್ನ ಕೈಲಾಗೋದಿಲ್ಲ. ಅದನ್ನ ಅರ್ಥ ಮಾಡಿಕೊಳ್ಳುವುದು ನನ್ನ ಬುದ್ದಿಗೆ ನಿಲುಕದ್ದು.  ವಿಶ್ವವಿದ್ಯಾನಿಲಯದ ಡಿಗ್ರಿ ಇದ್ದರೇನು ಅದನ್ನು ಅರಗಿಸಿಕೊಳ್ಳುವುದು ತಿಳಕೊಂಡಷ್ಟು ಸರಳವಲ್ಲ. 

ನೀವು ತೀರಾ ಸಾಮಾನ್ಯವಾಗಿ ಜೀವನ ನಡೆಸುತ್ತಿರುತ್ತೀರಿ ಅಂದುಕೊಳ್ಳಿ. ಒಬ್ಬ ತೀರಾ ಸಾಮಾನ್ಯ ಗ್ರಹಸ್ಥ. ಸಣ್ಣ ಮನುಷ್ಯ. ಎಲ್ಲರ ಹಾಗೆ ದಿನಾ ಕೆಲಸಕ್ಕೆ ಹೋಗ್ತೀರಿ, ಸಂಜೆ ಮನೆಗೆ ಮರಳುತ್ತೀರಿ. ಅಂತಾ ಹೇಳಿಕೊಳ್ಳುವಂತಹ ಪಗಾರೇನಲ್ಲ, ವರ್ಷಕ್ಕೊಂದು ಸಲ ರಜಾದಿನಗಳಲ್ಲಿ  ಸಂಸಾರದೊಟ್ಟಿಗೆ ಎಲ್ಲಾದರೂ ಪ್ರವಾಸಕ್ಕೆ ಹೋಗಿ ಬರ್ತೀರಿ.  ತೀರಾ ಸಾಮಾನ್ಯ ವ್ಯಕ್ತಿ! ಇನ್ನೇನು ಹೇಳೋದು. ಆಮೇಲೊಂದು ದಿನ ನೀವು ಚೆರ್ನೋಬಿಲ್ ವ್ಯಕ್ತಿಯಾಗಿಬಿಡುತ್ತೀರಿ. ಒಂದು ಪ್ರಾಣೀನೋ ಅನ್ನೋ ಹಾಗೆ ಇದ್ದಕ್ಕಿದ್ದಂತೆ ಎಲ್ಲರಿಗೂ ನಿಮ್ಮ ಮೇಲೆ ಆಸಕ್ತಿ ಕೆರಳುತ್ತದೆ. ಎಲ್ಲರಿಗೂ ಆಸಕ್ತಿ, ಆದರೆ ತಿಳಕೊಂಡಿರೋದು ಏನೂ ಇಲ್ಲ. ನಿಮಗೆ ಎಲ್ಲರ ಹಾಗೇ ಬದುಕಬೇಕು ಅನಿಸುತ್ತದೆ, ಆದರೆ ಜನ ನಿಮ್ಮನ್ನ ಬೇರೇ ಥರ ನೋಡಲಿಕ್ಕೆ ಶುರು ಮಾಡ್ತಾರೆ. ನಿಮ್ಮನ್ನ ಕೇಳೋದಕ್ಕೆ ಶುರು ಮಾಡ್ತಾರೆ. ಭಯ ಆಯ್ತಾ? ಸ್ಟೇಶನ್ ಹೇಗೆ ಸುಟ್ಟಿತು? ನೀವೇನು ನೋಡಿದ್ರಿ? ಮತ್ತೇ, ನಿಮಗೆ ಮಕ್ಕಳು ಆಗೋಕೇನೂ ಸಮಸ್ಯೆ ಇಲ್ಲ ಅಲ್ವಾ? ನಿಮ್ಮ ಹೆಂಡತಿ ಏನಾದ್ರೂ ನಿಮ್ಮನ್ನ ಬಿಟ್ಟು ಹೋದ್ರಾ? ಮೊದ ಮೊದಲಿಗೆ ನಮ್ಮನ್ನೆಲ್ಲಾ ಪ್ರಾಣಿಗಳನ್ನಾಗಿ ಮಾಡಿಬಿಟ್ಟಿದ್ರು. ’ಚೆರ್ನೋಬಿಲ್’ ಅನ್ನೋ ಪದ ಕಿವಿಗೆ ಬಿದ್ರೆ ಸಾಕು, ಅದೊಂಥರಾ ಎಲ್ಲರಿಗೂ ಸುಳಿವು ಸಿಕ್ಕು ಬಿಡುತ್ತಿತ್ತು. ಎಲ್ಲ ಈ ಕಡೆ ತಿರುಗಿ, ’ಹೋ ಇವರು ಅಲ್ಲಿಯವರು!’ ಅನ್ನೋ ಥರ ಮುಖ ಮಾಡೋದು.

ಶುರು ಶುರುವಿನಲ್ಲಿ ಹೀಗೇ ಇತ್ತು. ನಾವು ಬರೀ ಒಂದು ಪಟ್ಟಣವನ್ನು ಕಳಕೊಂಡಿಲ್ಲ. ನಮ್ಮಿಡೀ ಬದುಕನ್ನೇ ಕಳಕೊಂಡ್ವಿ. ನಾವು ಅದಾದ ಮೂರನೇ ದಿನ ಊರು ಬಿಟ್ವಿ. ರಿಯಾಕ್ಟರಿಗೆ ಬೆಂಕಿ ಬಿದ್ದಿತ್ತು.  ನನ್ನ ಸ್ನೇಹಿತನೊಬ್ಬ ಹೇಳಿದ್ದು ನೆನಪಿಗೆ ಬರ್ತಿದೆ  “ರಿಯಾಕ್ಟರಿನ ವಾಸನೆ ಎಲ್ಲ ಕಡೆ”. ಹೇಳೋಕಾಗೋದಿಲ್ಲ, ಅದ್ಯಾವ ತರಹರದ ವಾಸನೆ ಅಂತ, ಆ ತರಹ ಇತ್ತು. ಅಷ್ಟೊತ್ತಿಗಾಗಲೇ ಪೇಪರಿನವರು ಅದರ ಬಗ್ಗೆ ಬರೆಯೋಕೆ ಶುರು ಮಾಡಿದ್ರು.  ಅವರ ಲೇಖನಗಳಲ್ಲಿ, ವರದಿಗಳಲ್ಲಿ ಚೆರ್ನೊಬಿಲ್ಲನ್ನು ಒಂದು ಭಯದ ಗೂಡನ್ನಾಗಿ ಮಾಡಿಬಿಟ್ಟಿದ್ದರು, ಆದರೆ ನಮಗೆ ಅವರು ಬರೆದದ್ದು ಕಾರ್ಟೂನ್ ಥರ ಅನಿಸುತ್ತಿತ್ತು. ನಾನೀಗ ನನ್ನ ಕತೆಯನ್ನು ಮಾತ್ರ ಹೇಳ್ತೀನಿ. ನನ್ನ ಪಾಲಿನ ಸತ್ಯವನ್ನು ಮಾತ್ರ.

ಅದು ಹೇಗಾಯ್ತೆಂದರೆ: ಊರು ಬಿಡೋವ್ರು ತಮ್ಮೊಂದಿಗೆ ತಾವು ಸಾಕಿದ ಪ್ರಾಣಿಗಳನ್ನೆಲ್ಲ ಒಯ್ಯೋ ಹಾಗಿಲ್ಲ ಅಂತ ರೇಡಿಯೋದಲ್ಲಿ ಪ್ರಕಟಣೆ ಹೊರಡಿಸಿದರು. ನಾವು ನಮ್ಮ ಬೆಕ್ಕನ್ನ ಒಯ್ಯೋ ಹಾಗಿರಲಿಲ್ಲ. ನಾವೇನ್ಮಾಡಿದ್ವಿ, ಅದನ್ನ ಸೂಟ್ಕೇಸಿನಲ್ಲಿ ಇಟ್ಟು ಕೊಂಡ್ವಿ. ಆದರೆ ಅದು ಹೊರಗೆ ಬಂದುಬಿಡ್ತು. ಸುತ್ತಮುತ್ತ ಇರೋವ್ರನ್ನ ಪರಚೋಕೆ ಶುರು ಮಾಡ್ತು. ಬಂದೇ ಬಿಡ್ತಪ್ಪ ಎಲ್ಲಿಂದಲೋ ಆವಾಜ್! ನೀವು ನಿಮ್ಮ ಸಾಮಾನುಗಳನ್ನೆಲ್ಲ ಒಯ್ಯೋಹಾಗಿಲ್ಲ ಅಂತ. ಸರೀನಪ್ಪ, ಎಲ್ಲವನ್ನೂ ಒಯ್ಯೋದಿಲ್ಲ. ಒಂದನ್ನ ಮಾತ್ರ ಒಯ್ತೀನಿ. ಒಂದೇ ಒಂದು ಸಾಮಾನು. ನಮ್ಮ ಅಪಾರ್ಟಮೆಂಟಿನ ಬಾಗಿಲೊಂದನ್ನ ಕಳಚಿಕೊಂಡು  ಬರ್ತೀನಿ. ಆ ಬಾಗಿಲನ್ನ ಬಿಡೋ ಹಾಗಿಲ್ಲ. ಮನೆಗೆ ಬೇರೇ ಏನಾದ್ರೂ ಹಲಗೆ ಪಲಗೆ ಹಾಕಿ ಮುಚ್ತೀನಿ. ಅದು ನಮ್ಮ ತಾಯಿತ ಇದ್ದ ಹಾಗೆ. ನಮ್ಮ ಕುಟುಂಬದ ಕುರುಹು. ನನ್ನ ತಂದೆಯನ್ನ ಈ ಬಾಗಿಲ ಮೇಲೇ ಇರಿಸಿದ್ದರು. ಇದು ಯಾರ ಪರಂಪರೆ ಅಂತ ನನಗೆ ಗೊತ್ತಿಲ್ಲ. ಈ ಪರಂಪರೆ ಎಲ್ಲ ಕಡೆಯೂ ಇಲ್ಲ. ನನಗೆ ನನ್ನಮ್ಮ ಹೇಳಿದ್ದು, ಸತ್ತವರನ್ನ ಅವರ ಮನೆಯ ಬಾಗಿಲ ಮೇಲೆ ಇಡಬೇಕು. ಜನ ಕಾಫಿನ್ ತರುವಲ್ಲಿಯವರೆಗೆ ಹೆಣವನ್ನ ಅದರ ಮೇಲೆ ಇಡಬೇಕು. ಅಪ್ಪ ಸತ್ತಾಗ ಅವನನ್ನ ಇದರ ಮೇಲೇ ಇಟ್ಟಿದ್ದರು. ನಾನು ರಾತ್ರಿಯಿಡೀ ಅವನ ಪಕ್ಕದಲ್ಲಿದ್ದುಕೊಂಡು ಕಾದಿದ್ದೆ, ಕಾಫಿನ್ ಬೆಳಿಗ್ಗೆ ಬಂತು. ಮನೆ ತೆರೆದೇ ಇತ್ತು, ಇಡೀ ರಾತ್ರಿ,  ಬಾಗಿಲ ಮೇಲೆ ಅಲ್ಲಲ್ಲಿ ಕೊರೆದಿರೊ ಹಾಗೆ ಕಾಣ್ತದೆ, ಅದು ನಾನು ಹೇಗೆ ಬೆಳೆಯುತ್ತ ಬಂದೆ ಅನ್ನೋದನ್ನ ಗುರುತು ಮಾಡಿಟ್ಟದ್ದು. ಮೊದಲನೆ ತರಗತಿ, ಎರಡನೆ ತರಗತಿ ನಂತರ ಏಳನೆಯ ತರಗತಿ. ಆಮೇಲೆ ಸೈನ್ಯ ಸೇರೋಕೆ ಮುಂಚಿಂದು. ಅದರ ಪಕ್ಕದಲ್ಲಿರೋದು ಮಗ ಹೇಗೆ ದೊಡ್ಡೋನಾದ ಅನ್ನೋದು, ಆಮೇಲೆ ಮಗಳು. ನನ್ನಿಡೀ ಬದುಕು ಇದರ ಮೇಲೆ ಬರೆದುಕೊಂಡಿದೆ. ಇದನ್ನ ಹ್ಯಾಗೆ ಬಿಟ್ಟು ಬರಲಿ?

ನನ್ನ ಪಕ್ಕದ್ಮನೆಯವನ ಹತ್ತಿರ ಕಾರಿತ್ತು. ಸಹಾಯ ಮಾಡಪ್ಪ ಅಂದೆ. ಅವನು, ’ನಿಂಗೆ ತಲೆಗಿಲೆ ಏನಾದ್ರೂ ಕೆಟ್ಟಿದೆಯಾ’ ಅನ್ನೋ ತರಹ ನೋಡಿದ. ಆದರೆ ನಾನು ಬಾಗಿಲನ್ನ ತೊಗೊಂಡು ಹೋದೆ, ಬಿಡಲಿಲ್ಲ. ರಾತ್ರಿ ಬೈಕಿನ ಮೇಲೆ ಹಾಕಿಕೊಂಡು ತೊಗೊಂಡು ಹೋದೆ. ಕಾಡಿನ ಹಾದಿಯಲ್ಲಿ ಹೋದೆ. ಅದು ಇವೆಲ್ಲ ಆಗಿ ಎರಡು ವರ್ಷಗಳ ನಂತರ ಆದದ್ದು. ಅಷ್ಟೊತ್ತಿಗಾಗಲೇ ನಮ್ಮ ಅಪಾರ್ಟ್ಮೆಂಟುಗಳನ್ನೆಲ್ಲ ಕೊಳ್ಳೆ ಹೊಡೆದಾಗಿತ್ತು. ಸುಮಾರು ದೂರದವರೆಗೆ ಪೋಲೀಸರು ನನ್ನನ್ನು ಹಿಂಬಾಲಿಸಿಕೊಂಡು ಬಂದರು, ’ಶೂಟ್ ಮಾಡ್ತೀವಿ, ಶೂಟ್ ಮಾಡ್ತೀವಿ” ಅನ್ನುತ್ತ. ಅವರೆಲ್ಲ ನಾನು ಕಳ್ಳ ಅಂದುಕೊಂಡರು. ಹೀಗೆ ನಾನು ನನ್ನ ಮನೆಯ ಬಾಗಿಲನ್ನೇ ಕದ್ದೆ.

ಆಮೇಲಿನ ಕತೆ...

ನನ್ನ ಹೆಂಡತಿ ಮತ್ತು ಮಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅವರ ಮೈಮೇಲೆಲ್ಲ ಬಿಲ್ಲೆಯಾಕಾರದ ಕಪ್ಪು ಚುಕ್ಕೆಗಳು  ತುಂಬಿಕೊಂಡಿದ್ದವು. ಈ ಚುಕ್ಕೆಗಳು ಆವಾಗಾವಾಗ ಕಾಣಿಸಿಕೊಳ್ಳುತ್ತಿದ್ದವು, ಆಮೇಲೆ ಮಾಯವಾಗುತ್ತಿದ್ದವು. ಐದು  ಕೊಪೆಕ್ ನಾಣ್ಯ ಗಾತ್ರದಲ್ಲಿದ್ದವು. ನೋವೇನೂ ಇರಲಿಲ್ಲ. ಸುಮಾರು ಬಗೆಯ ಟೆಸ್ಟುಗಳಾದವು. ನಾನು ರಿಪೋರ್ಟ್ ಕೇಳಿದರೆ, ಅದು ನಿನಗಲ್ಲ ಅಂದುಬಿಟ್ಟರು. ಮತ್ಯಾರಿಗೆ ಅಂದೆ.

ಆವಾಗ ಎಲ್ಲರ ಬಾಯಲ್ಲೂ ಒಂದೇ ಮಾತು. ’ನಾವೆಲ್ಲ ಸತ್ತು ಹೋಗುತ್ತೀವಿ. ನಾವೆಲ್ಲ ಸಾಯೋವ್ರೆ. 2000 ದ ಹೊತ್ತಿಗೆ ಒಬ್ಬ ಬೆಲರೂಸಿಯನ್ ಕೂಡ ಇರೋದಿಲ್ಲ’ ಅಂತ. ಆವಾಗ ನನ್ನ ಮಗಳಿಗೆ ಆರು ವರ್ಷ ಆಗಿತ್ತು. ಅವಳನ್ನ ಮಲಗಿಸ್ತಾ ಇದ್ದೀನಿ, ನನ್ನ ಕಿವಿಯಲ್ಲಿ ಉಸುರಿದಳು, “ಅಪ್ಪಾ ನಂಗೆ ಬದುಕಬೇಕು ಅಂತಿದೆ. ನಾನಿನ್ನೂ ಚಿಕ್ಕವಳು”  ಅವರೆಲ್ಲ ಹಾಗೆ  ಮಾತಾಡಿದ್ದು ಇವಳಿಗೇನೂ ಅರ್ಥವಾಗಿರಲಿಕ್ಕಿಲ್ಲ ಅಂದುಕೊಂಡಿದ್ದೆ.

ಒಂದು ರೂಮಿನಲ್ಲಿ ತಲೆ ಬೋಳಿಸಿಕೊಂಡ ಏಳು ಚಿಕ್ಕ ಚಿಕ್ಕ ಹೆಣ್ಣು ಮಕ್ಕಳನ್ನ ಕಲ್ಪನೆ ಮಾಡಿಕೊಳ್ಳುತ್ತೀರಾ? ಆಸ್ಪತ್ರೆಯ ಆ ರೂಮಿನೊಳಗೆ ಹಾಗೆ ಏಳು ಮಕ್ಕಳು ಇದ್ದವು....ಸಾಕಪ್ಪ! ಅಷ್ಟೇ! ನಾನು ಆ ಬಗ್ಗೆ ಮಾತಾಡಿದರೆ ನನ್ನ ಹೃದಯ ಕೂಗಿ ಹೇಳುತ್ತದೆ –ನೀನು ಅವರಿಗೆ ದ್ರೋಹ ಮಾಡ್ತಾ ಇದ್ದೀಯೆ. ಯಾಕೆಂದರೆ, ಅದನ್ನು ಅಪರಿಚಿತನ ಥರ ವರ್ಣಿಸಬೇಕಾಗುತ್ತದೆ. ನನ್ನ ಹೆಂಡತಿ ಆಸ್ಪತ್ರೆಯಿಂದ ಮನೆಗೆ ಬಂದಳು. ಇನ್ನವಳಿಗೆ ಅದನ್ನು ಭರಿಸುವುದು ಸಾಧ್ಯವಿರಲಿಲ್ಲ. “ಅವಳು ಹೀಗೆ ಸಂಕಟ ಅನುಭವಿಸುವ ಬದಲು ಸತ್ತು ಹೋಗುವುದೆ ಒಳ್ಳೆಯದು. ಅಥವಾ ನಾನೇ ಸತ್ತು ಹೋಗುವುದು ಒಳ್ಳೆಯದು, ಅದನ್ನು ನೋಡುವುದಾದರೂ ತಪ್ಪುತ್ತದೆ”

ಇಲ್ಲ, ಇನ್ನು ಆಗೋದಿಲ್ಲ! ಆಯ್ತು, ಇಷ್ಟೇ! ನನ್ನ ಹತ್ರ ಇನ್ನು ಏನು ಹೇಳೋಕೂ ಆಗೋದಿಲ್ಲ.

ನಾವು ಅವಳನ್ನ ಆ ಬಾಗಿಲ ಮೇಲೆ ಇಟ್ವಿ...ನನ್ನಪ್ಪನನ್ನು ಇರಿಸಿದ ಬಾಗಿಲು. ಪುಟ್ಟ ಕಾಫಿನ್ ತರುವ ತನಕ. ಪುಟ್ಟ ಪೆಟ್ಟಿಗೆ, ಒಂದು ದೊಡ್ಡ ಗೊಂಬೆ ಹಿಡಿಸುವಷ್ಟು ಇದ್ದ ಪುಟ್ಟ ಪೆಟ್ಟಿಗೆ.

ನಾನು ಸಾಕ್ಷಿಯಾಗಬಯಸುತ್ತೇನೆ: ನನ್ನ ಮಗಳು ಸತ್ತಿದ್ದು ಚೆರ್ನೋಬಿಲ್ ನಿಂದ. ನಾವದನ್ನ ಮರೆಯಲಿ ಅಂತ ಅವರು ಬಯಸುತ್ತಾರೆ.


-ನಿಕೊಲಾಯ್ ಕಲುಜಿನ್, ತಂದೆ
ಕನ್ನಡಕ್ಕೆ: ಪ್ರಜ್ಞಾ


Voices from the Chernobyl


This is a collection of interviews by Svetlana Alexievich. In 2015, the author received the Nobel Prize for literature. It is collection of ‘voices’ from those who were caught in the tragic moment, it is a collection of real–life stories.  Voices, here, resonate pain. The Chernobyl tragedy occurred in 1986. But, it is a never ending struggle for people over there for life due to invisible radiation.  You can’t read the stories, can’t hear the voices without moistening your eyes. 


[ಇದು ಅವಧಿಯಲ್ಲಿ ಪ್ರಕಟಗೊಂಡಿದೆಯಾದರೂ ನನ್ನ ಎಲ್ಲ ಬರಹಗಳೂ ಒಂದೇ ಕಡೆ ಜಮಾ ಆಗಲಿ ಎಂಬ ಉದ್ದೇಶದಿಂದ ಇಲ್ಲಿ ಹಾಕಿಕೊಂಡಿದ್ಧೇನೆ,]