Saturday, November 22, 2014

ಹೆಣ್ಣೊಬ್ಬಳನ್ನು ಪ್ರೀತಿಸುವುದೆಂದರೆ...

ನನ್ನ ಕವಿತೆಗಳಲ್ಲಿ ಏನೇನು ಇರುತ್ತವೆ ಎಂದು ಕೇಳುವಿರಾದರೆ ಅದಕ್ಕೆ ನೇರವಾದ ಉತ್ತರ ಬಲು ಕಷ್ಟ.  ಒಂದು ಕವಿತೆ ವಿವಿಧ ಆಯಾಮಗಳಲ್ಲಿ ತನ್ನ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವಿಗೇ ನಿಲುಕಿರದ, ಕಲ್ಪಿಸಿಕೊಳ್ಳಲಾಗದ ಎಷ್ಟೋ ಸಾಧ್ಯತೆಗಳು ಕವಿತೆಯೊಳಗೆ ಅಡಗಿರುತ್ತವೆ. ಅನುಭವಕ್ಕೆ ಅನಂತ ಸಾಧ್ಯತೆಗಳು ಹಾಗೆಯೇ ಅಭಿವ್ಯಕ್ತಿಗೂ. ಇದು ಕವಿಯ ಮಾತು. ಹೆಣ್ಣು ಮತ್ತು ಅವಳನ್ನು ಪ್ರೀತಿಸುವುದು ಎಂದರೆ ಏನು ಎಂಬುದರ ಆಳಕ್ಕೆ ಇಳಿದು, ಆ ಪ್ರೀತಿಯ ಕೆಲವು ಆಯಾಮಗಳನ್ನು ಈ ಕೆಳಗಿನ ಕವಿತೆ ನಮ್ಮೆದುರು ಇಡುತ್ತಿದೆ. 


ಹೆಣ್ಣೊಬ್ಬಳನ್ನು ಪ್ರೀತಿಸುವುದೆಂದರೆ
ಕಲ್ಲಾದವಳನ್ನು[1] ಸಚೇತನಗೊಳಿಸುವುದು.
ಶಾಪದಿಂದ ಹೆಪ್ಪುಗಟ್ಟಿದ  ರಕ್ತ
ಕನಸೊಂದರಿಂದ ಬೆಚ್ಚಗಾಗುವವರೆಗೆ
ಅವಳನ್ನು ಅಡಿಯಿಂದ ಮುಡಿಯವರೆಗೆ ರಮಿಸುವುದು

ಹೆಣ್ಣೊಬ್ಬಳನ್ನು ಪ್ರೀತಿಸುವುದೆಂದರೆ
ಹೊಗೆ ಮಸಿ ಮೆತ್ತಿದ ಅವಳ ದಿನವನ್ನು
ಒಂದು ಸ್ವಚ್ಛಂದ ಬಾನಾಡಿಯನ್ನಾಗಿಸುವುದು.
ಸುರಲೋಕದ ಹೂದೂಳಿಯನ್ನು  ಉಸಿರಾಡುವ... ಬಾನಾಡಿಯನ್ನಾಗಿಸಿ,
ಅಷ್ಟೇ ಅಲ್ಲ, ಅವಳ ದಣಿದ ರೆಕ್ಕೆಗಳು ಇರುಳಿನಲ್ಲಿ ವಿರಮಿಸಲೆಂದು
ತಾನೇ ಒಂದು ಹೂವರಳಿದ ಮರವಾಗುವುದು

ಹೆಣ್ಣೊಬ್ಬಳನ್ನು ಪ್ರೀತಿಸುವುದೆಂದರೆ       
ಚಂಡಮಾರುತವಪ್ಪಳಿಸಿದ ಕಡಲೊಳಗಿನ ಯಾನದಂತೆ.
ದಟ್ಟ ಮೋಡ ಕವಿದ ಬಾನಿನಡಿಯಲ್ಲಿ
ಹೊಸ ಭೂಖಂಡವೊಂದನ್ನು ಅರಸುವ... ಕಡಲ ಯಾನ,     
ಅಷ್ಟೇ ಅಲ್ಲ. ನಿಮ್ಮ ಮನೆಯಂಗಳದಲ್ಲರಳಿದ
ಕೆಂಪು ಬಾಲ್ಸಮ್ ಹೂವೊಂದನ್ನು
ಕಂಡರಿಯದ ತೀರಕ್ಕೆ ಒಯ್ದು ಅಲ್ಲಿ ನೆಟ್ಟು ಅರಳಿಸುವುದು  

ಹೆಣ್ಣೊಬ್ಬಳನ್ನು ಪ್ರೀತಿಸುವುದೆಂದರೆ
ನಿಮ್ಮ ಸ್ನಾಯುಗಳ  ಬಿರುಸನ್ನು
ಹೂವಿನ ಎಳಸಿನೊಂದಿಗೆ ಸಾಟಿ ಮಾಡುವುದು. [2]
ನಿಮ್ಮ ಕಾಪು, ಮುಕುಟಗಳನ್ನು ಕಳಚಿಟ್ಟು,
ಬರಿದಾಗಿ, ಇನ್ನೊಂದು ಆಕಾಶದ ಸೀಮೆ ದಾಟುವುದು
ಮತ್ತು, ನಿಮ್ಮ ದೇಹದ ಮಾಂಸಖಂಡಗಳನ್ನು
ಬೇರೊಂದು ಗ್ರಹದ ಗಾಳಿಯ, ನೀರಿನ ಪಾಲಾಗಿಸುವುದು

ಹೆಣ್ಣೊಬ್ಬಳನ್ನು ಪ್ರೀತಿಸುವುದೆಂದರೆ
ಅವಳ ಹೂತಿಟ್ಟ ಗಾಯಗಳನ್ನು ಕೆದಕಿ ಅದರೊಳಗಿಂದ
ಬೆಳಕಿನ ರೇಖೆಗಿಂತಲೂ ಹರಿತವಾದ ಕತ್ತಿಯೊಂದನ್ನು ಹುಡುಕಿ ತೆಗೆದು
ತದನಂತರ, ನಿಮ್ಮೆದೆಯ ರಕ್ತ ಪೂರ್ತಿ ಬಸಿದು ಹೋಗುವವರೆಗೆ
ಅದರ ಅಲುಗಿನ ಮೇಲೆ ನಿಮ್ಮ ಹೃದಯವನ್ನೊತ್ತಿಕೊಂಡು ಒರಗುವುದು

ನಾನಿದುವರೆಗೂ ಹೆಣ್ಣೊಬ್ಬಳನ್ನು ಪ್ರೀತಿಸಿಲ್ಲ.


-ಮೂಲ: ಕೆ ಸಚ್ಚಿದಾನಂದನ್
 ಕನ್ನಡಕ್ಕೆ: ಪ್ರಜ್ಞಾ
                                                                                                                                                                     




[1]  ಅಹಲ್ಯೆಯನ್ನು ನೆನಪಿಸಿಕೊಳ್ಳಿ [ಈ ಕವಿತೆಗೆ ಸಂಬಂಧಿಸಿದ ಅಡಿ ಟಿಪ್ಪಣಿಗಳು ಕವಿಗಳದ್ದು]

[2]  ಭೀಮನ ಸೌಗಂಧಿಕಾ ಪುಷ್ಪಹರಣದ ಪ್ರಸಂಗ