Wednesday, October 7, 2015

ನ್ಯಾಸ -ನನ್ನ ಗ್ರಹಿಕೆಯಲ್ಲಿ




ಹರೀಶ ಹಾಗಲವಾಡಿಯವರ ಚೊಚ್ಚಲ ಕಾದಂಬರಿ ’ನ್ಯಾಸ’ ವನ್ನು ಓದಿ ಮುಗಿಸಿದ ಮೇಲೆ ನೆನಪಾದದ್ದು, ಶಿಶುನಾಳ ಶರೀಫರ ಈ ಸಾಲುಗಳು.

ನಿಶ್ಚಿಂತನಾಗಬೇಕಂತಿ ಬಹು
ದುಶ್ಚಿಂತೆಯೊಳಗೆ ನೀ ಕುಂತಿ

’ನ್ಯಾಸ’ ದ ಕತೆ  ಬಂಧಮುಕ್ತರಾದೆವೆಂದುಕೊಂಡವರು  ಅದರೊಳಗೇ ಸೆರೆಯಾದವರ ಕತೆ. ಬಿಟ್ಟೆನೆಂದುಕೊಂಡವರು ಅದಕ್ಕೇ ಅಂಟಿಕೊಂಡವರ ಕತೆ. ಸ್ಥೂಲವಾಗಿ ಹೇಳಬೇಕೆಂದರೆ, ಅದು, ಸಂಸಾರ ತೊರೆದು ಸೇವೆ, ಸಾಧನೆ ಎಂಬ ಭ್ರಮೆಯಲ್ಲಿ ಸ್ವ ಇಚ್ಛೆಯಿಂದ  ಸನ್ಯಾಸ ಸ್ವೀಕರಿಸಿ ಮಠ ಎಂದೋ ಆಶ್ರಮವೆಂದೋ ಒಳ ಹೊಕ್ಕಿದವರ ಬದುಕಿನ ಆಂತರಿಕ ಸಂಘರ್ಷದ ಕತೆ. ಅವರ  ಬದುಕಿನ ವಿವಿಧ ಮಗ್ಗುಲುಗಳನ್ನು ವಿಶ್ಲೇಷಿಸುವ ಕತೆ. ಆದರೆ ಅದು ಅದಷ್ಟೇ ಅಲ್ಲ.

ಸಾಧನೆ, ಸನ್ಯಾಸ, ಸೇವೆ, ಆಧ್ಯಾತ್ಮ, ಸತ್ಯಾನ್ವೇಷಣೆ, ಎಂಬಿತ್ಯಾದಿ  ಪದಗಳೆಲ್ಲ ತೂಕ ಕಳೆದುಕೊಂಡು, ಸವಕಲಾಗಿ, ನಿಸ್ತೇಜಗೊಂಡು, ನಗೆಪಾಟಲಿಗೀಡಾಗುತ್ತಿರುವ ಹೊತ್ತಿನಲ್ಲಿ ಆ ಪದಗಳ ಬೇರಿಗಿಳಿದು ಅರ್ಥ ಅನರ್ಥವಾದದ್ದು ಎಲ್ಲಿ ಎಂದು ಹುಡುಕುವ ಪ್ರಯತ್ನ ಮಾಡುತ್ತದೆ ಈ ಕಾದಂಬರಿ. ಕಾದಂಬರಿಯೇ ಒಂದು ಕನ್ನಡಿಯಂತೆ ಕೆಲಸ ಮಾಡುತ್ತದೆ, ಅರ್ಥ-ಅನರ್ಥಗಳ ನಡುವಿನ ಗೆರೆ ಮಸುಕಾದ್ದು ಎಲ್ಲಿ ಹೇಗೆ ಎಂಬ ಚಿತ್ರಣವನ್ನು ತಾನು ಪ್ರತಿಫಲಿಸುತ್ತದೆ. ಓದುಗರ ತಲೆಯೊಳಗೆ ಗುಂಗಿ ಹುಳ ಮೊಟ್ಟೆಯಿಡುವುದಕ್ಕೆ ಅಷ್ಟು ಸಾಕು!

ಸಾಧಕನಾಗಲಿಕ್ಕೆ ಸನ್ಯಾಸ ಬೇಕೆ? ಸನ್ಯಾಸ ಸ್ವೀಕರಿಸಿದ ಮಾತ್ರಕ್ಕೆ ಸಾಧಕನಾಗುವ ಅರ್ಹತೆ ಬಂದು ಬಿಡುತ್ತದೆಯೆ? ಸಂಸಾರದೊಳಗಿದ್ದುಕೊಂಡೂ, ಮನೆ-ಮಠ ತೊರೆಯದೇ ಎಲ್ಲ ನಿಭಾಯಿಸಿಕೊಂಡೂ ಯೋಗಿಗಳಂತೆ ಬದುಕಿದವರ ಬದುಕೂ ನಮ್ಮ ಅನುಭವಕ್ಕೆ ಬರುತ್ತದೆ. ಮನೆ-ಮಠ ತೊರೆದು, ಸಂಸಾರಿಕ ಬಂಧಗಳಿಂದ ಮುಕ್ತರಾಗಿ ಪರಮಾತ್ಮನ ಸೇವೆ ಮಾಡಿಕೊಂಡು ಇರ್ತೀನಿ ಅಂತ ಆಶ್ರಮ ಕಟ್ಟಿಕೊಂಡವರು ಹೇಗೆ ಆಶ್ರಮಕ್ಕೊಂದು ಕಟ್ಟಡ ಬೇಕು, ನಂತರ ಜಮೀನು ಬೇಕು, ನಂತರ ಸ್ಕೂಲ್ ಬೇಕು, ಅತ್ಯಾಧುನಿಕ ವ್ಯವಸ್ಥೆ ಬೇಕು, ಕೊನೆಗೊಂದು ಗೆಳತೀನೂ ಬೇಕು, ಎಂದುಕೊಂಡು  ಸಂಸಾರಿಗಳಿಗಿಂತ ಜಾಸ್ತಿ ಒದ್ದಾಡುವುದೂ ನಮ್ಮ ಅನುಭವಕ್ಕೆ ಬರುತ್ತದೆ. ಸಾಧಕರೆಂದರೆ ಯಾರು? ಏನದು ಸಾಧನೆಯೆಂದರೆ? ಸೇವೆ ಅಥವಾ ಸನ್ಯಾಸ ಯಾವಾಗ ಸಾರ್ಥಕವಾಗುತ್ತದೆ? ನ್ಯಾಸ ಸಾಧ್ಯವೆ?  ಎಂಬಿತ್ಯಾದಿ ಪ್ರಶ್ನೆಗಳನ್ನು ನಮ್ಮ ಕಾಲಘಟ್ಟದ ಗ್ರಹಿಕೆಗೆ ನಿಲುಕುವಂತೆ ಬಿಡಿಸುವ ನಿಟ್ಟಿನಲ್ಲಿ ಸೂಕ್ಷ್ಮ ಒಳನೋಟಗಳನ್ನು ನೀಡುವ ಕಾದಂಬರಿ ’ನ್ಯಾಸ’.

ಈ ಕಾದಂಬರಿಯಲ್ಲಿ ಬರುವ ಪ್ರತಿ ಪಾತ್ರಕ್ಕೂ ವ್ಯಕ್ತಿಗತ ನೆಲೆಯಲ್ಲಿ ಅವರವರದ್ದೇ ಆದ ಹುಡುಕಾಟವಿದೆ. ಕೆಲವು ಪಾತ್ರಗಳು ತಮ್ಮ ಹುಡುಕಾಟದ ಪ್ರಶ್ನೆಯನ್ನೆ ಗೋಜಲಾಗಿಸಿಕೊಂಡವರು. ಕೆಲವರು ಅವರವರ ನೆಲೆಯಲ್ಲಿ ಉತ್ತರ ಪಡೆದುಕೊಂಡು ನೆಮ್ಮದಿ ಪಡಕೊಂಡವರು. ಕೆಲವರದ್ದು ಕಪಟ. ಕೆಲವರದ್ದು ಭ್ರಮೆ.  ಪ್ರತಿ ಪಾತ್ರವೂ ಒಂದು ಪಯಣದಂತೆ, ಅವುಗಳ ಆರಂಭ-ಅಂತ್ಯದ ನಡುವಿನ ಹಾದಿ ಕವಲೊಡೆದು ಒಂದಲ್ಲ ಒಂದು ರೀತಿಯಲ್ಲಿ ಈ ಕಾದಂಬರಿಯ ಮುಖ್ಯ ಪಾತ್ರವಾದ ಸತ್ಯಪ್ರಕಾಶನೊಂದಿಗೆ ತಳಕು ಹಾಕಿಕೊಳ್ಳುತ್ತದೆ.  ಈ ಪಾತ್ರ ಮುಖ್ಯವೆನಿಸಿಕೊಳ್ಳುವುದು ಅದು ಈ ಕಾದಂಬರಿಯ ಕೇಂದ್ರವೆನ್ನುವ ಕಾರಣಕ್ಕಲ್ಲ, ಅದು ಇನ್ನುಳಿದ ಎಲ್ಲ ಪಾತ್ರಗಳೊಂದಿಗೆ ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ಸಂವಾದ ನಡೆಸುತ್ತದೆ ಅನ್ನುವ ಕಾರಣಕ್ಕೆ.  ಬರಿಯ  ಪಾತ್ರ ವಿಶ್ಲೇಷಣೆಯೇ ಒಂದು ಮಹಾಪ್ರಬಂಧವಾಗಬಹುದು!

ತನ್ನ ಮಗ ತನ್ನಂತೆ ಎಡಬಿಡಂಗಿಯಾಗದೇ ಕಲಿತು ಒಳ್ಳೇ ಒಂದು ನೌಕರಿ ಹಿಡಿದು ನೆಮ್ಮದಿಯ ಜೀವನ ನಡೆಸಬೇಕೆಂದು ಕನಸು ಕಂಡಿದ್ದ ರುದ್ರಯ್ಯನವರಿಗೆ ಆಘಾತವಾಗುತ್ತದೆ. ಮುದ್ದಿನ ಮಗ ಸಂಸಾರದಲ್ಲಿ ವಿರಕ್ತಿ ಹೊಂದಿ ಸನ್ಯಾಸಿಯಾಗುತ್ತೇನೆ,  ಸಾಧಕನಾಗುತ್ತೇನೆ, ಈ ಸಂಸಾರ ಸೀಮಿತ ಪರಿಧಿ ಉಳ್ಳದ್ದು, ಇದರಲ್ಲಿ ನನಗೆ ತೃಪ್ತಿ ಇಲ್ಲ, ಅಹಂಕಾರ ಮಮಕಾರಗಳನ್ನು ಕಳಕೊಳ್ಳದೆ ಸತ್ಯ ಗೊತ್ತಾಗೋದಿಲ್ಲ ಅಪ್ಪನಿಗೆ ಪತ್ರ ಬರೆದಿಟ್ಟು ಸ್ವ ಇಚ್ಛೆಯಿಂದ ಮನೆ ಬಿಟ್ಟು ಹೋಗುತ್ತಾನೆ. ಹೊರಟವನು ತುಮಕೂರಿನ  ದೇವಪ್ರಿಯಾನಂದರ ಆಶ್ರಮ ಸೇರುತ್ತಾನೆ, ಅಲ್ಲಿಂದ ಹುಬ್ಬಳ್ಳಿಯ ಧರ್ಮಾತ್ಮಾನಂದರ ಆಶ್ರಮ ಸೇರುತ್ತಾನೆ. ಅದನ್ನೂ ಬಿಟ್ಟು ಒಂಟಿಯಾಗಿ ಉತ್ತರದ ತೀರ್ಥ ಕೇತ್ರಗಳಲ್ಲಿ ಅಲೆದಾಡುತ್ತಾನೆ. ಸತತ ಅಭ್ಯಾಸಿ, ಶ್ರದ್ಧೆ ಮತ್ತು ಮನೋನಿಗ್ರಹವುಳ್ಳ ಸತ್ಯನೆಂದರೆ ಅವನೊಂದಿಗೆ ಒಡನಾಡಿದ ಎಲ್ಲರಿಗೂ ಅದೇನೋ ಸೆಳೆತ. ಅವನ ಗಾಂಭೀರ್ಯವೋ, ಅಂತರ್ಮುಖಿ ವ್ಯಕ್ತಿತ್ವವೋ ಅಥವಾ ನಿಷ್ಠುರವಾಗಿ ಸತ್ಯಕ್ಕೆ ಕನ್ನಡಿ ಹಿಡಿಯುವ ವರಸೆಗೋ ಹಿರಿಯರು ಕಿರಿಯರಾದಿಯಾಗಿ  ಅವನೆಡೆಗೆ ಆಕರ್ಷಿತರಾಗಿರುತ್ತಾರೆ.  ಅವನ ಪ್ರಭಾವಕ್ಕೊಳಪಟ್ಟಿರುತ್ತಾರೆ. ತಮ್ಮಿಂದಾಗದ್ದನ್ನು ಅವನು ಸಾಧಿಸಿ ತೋರುತ್ತಾನೆಂಬ ನಿರೀಕ್ಷೆ. ಆದರೆ, ಇತ್ತ ಸತ್ಯನಿಗೆ ಈ ಆಶ್ರಮಗಳ ಆವರಣಗಳೂ ಸೀಮಿತವನಿಸತೊಡಗುತ್ತದೆ.  ಸಾಮಾಜಿಕ ಸೇವೆಯ ನೆಪದಲ್ಲಿ ಆಶ್ರಮಗಳು ಸಂಘ-ಸಂಸ್ಥೆಗಳಾಗಿ ಮಾರ್ಪಡುವುದು, ಆಶ್ರಮವನ್ನು ನಡೆಸುವವರು ಸಂಘಸಂಸ್ಥೆಗಳ ಆಡಳಿತ ಮಂಡಳಿಯಂತೆ, ನೌಕರರಂತೆ ವರ್ತಿಸುವದು, ಅವರೊಳಗೇ ಆಂತರಿಕ ವೈಮನಸ್ಸು, ಮತ್ಸರ, ಸ್ವಾರ್ಥ, ಒಳ ಜಗಳ –ನಾವೆಲ್ಲ ಮನೆ ಬಿಟ್ಟು ಏನೋ ಸಾಧಿಸುತ್ತೇವೆಂದು, ಸೇವೆ ಮಾಡಬೇಕೆಂದೂ ಬಂದದ್ದು ಇದಕ್ಕಾ ಅನಿಸುವಂತಹ ಆವರಣ. ಹಾಗೆಂದೇ ಅವನು ಅಲ್ಲೆಲ್ಲೂ ನಿಲ್ಲದೆ, ಯಾವುದಕ್ಕೂ ಅಂಟಿಕೊಳ್ಳದೆ ಒಂಟಿಯಾಗಿ ಅಲೆದಾಡುತ್ತಾನೆ.  ಆ ಅಲೆದಾಟದ ದಿನಗಳಲ್ಲಿ ಆತನ  ಹುಡುಕಾಟ ಮಹತ್ವದ ತಿರುವನ್ನು ಪಡೆದುಕೊಳ್ಳುತ್ತದೆ. 


ಕಾದಂಬರಿಯಲ್ಲಿನ ಕೆಲವು ಪಾತ್ರಗಳು ತಾವು ಸಾಗಿ ಬಂದ ದಾರಿಯನ್ನ ಅವಲೋಕಿಸಿಕೊಂಡಾಗ ಅವರ ಮನದೊಳಗೆ ನಡೆಯುವ ಜಿಜ್ಞಾಸೆಯ ಕೆಲವು ತುಣುಕುಗಳು ಇಲ್ಲಿವೆ:

[ಈ ಜಿಜ್ಞಾಸೆ ’ಆತ್ಮ ಸ್ವರೂಪ’ ದ ಕುರಿತಾದದ್ದಲ್ಲ. ಕಾದಂಬರಿಯೊಳಗೆ ನಡೆಯುವ ಮಂಥನವು ಬದುಕಿನ ಕುರಿತಾದದ್ದು, ಹೇಗೆ ಬದುಕಿದರೆ ಸಾರ್ಥಕವಾದಿತು, ಯಾವುದು ತೃಪ್ತಿದಾಯಕ ಬದುಕು? ಯಾವುದು ಹೆಚ್ಚು ಸಂತೋಷವನ್ನುಂಟು ಮಾಡುವ ಬದುಕು...ಈ ರೀತಿ]

“ತಾನು ತನ್ನದು ಎಂಬುದನ್ನೆಲ್ಲಾ ಬಿಟ್ಟುಬಿಡುವ ಸಂಕಲ್ಪವನ್ನು ಮಾಡಿ ಇಲ್ಲಿಗೆ ಬಂದಮೇಲೂ ಹ್ಯಾಗೆ ಅವೆಲ್ಲಾ ನಮಗೆ ಗೊತ್ತಿಲ್ಲದೇ ನಮ್ಮನ್ನೇ ಸುತ್ತಿಕೊಂಡಿರುತ್ತದೆ ಎನ್ನಿಸಿ ಒಳಗೆ ತುಂಬಿದ್ದ ಶೂನ್ಯ ಇನ್ನೂ ಗಾಢವಾಯಿತು. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ದಂಭ, ದರ್ಪ, ಅಹಂಕಾರ, ಸ್ವಾರ್ಥ, ದ್ವೇಷಗಳನ್ನು ಬಿಡಬೇಕು ಅನ್ನೋದನ್ನೇ ದಿನವೂ ಬಂದವರಿಗೆಲ್ಲಾ ಹೇಳುತ್ತ ಬದುಕಿದರೂ ಅವು ನಮ್ಮ ಮನಸ್ಸಿನಲ್ಲಿಯೆ ಇಷ್ಟು ಆಟವಾಡುವಾಗ ಗೊತ್ತಾಗೋದೇ ಇಲ್ಲವಾ? ಅಥವಾ ಬೇರೆಯವರಿಗೆ ಹೇಳುವ ರಭಸದಲ್ಲಿ ನಮ್ಮನ್ನು ನಾವು ನೋಡಿಕೊಳ್ಳೋದನ್ನೇ ಮರೆತುಬಿಡ್ತೀವಾ?”

“ಬ್ರಹ್ಮಚಾರಿಗಳಲ್ಲದವರು ಪವಿತ್ರರೂ ಶುದ್ಧರೂ ಆಗೋದಕ್ಕೆ ಸಾಧ್ಯವಿಲ್ಲವಾ? ಬರೀ ವೀರ್ಯನಷ್ಟವಾಗದಂತೆ ಹೆಣಗಿ ಸತ್ತು ಬಿಟ್ಟರೆ ಬ್ರಹ್ಮಚರ್ಯ ಸಿದ್ದಿಸಿದಂತೆ ಆಗುತ್ತಾ? ತಂತ್ರ ಸಾಧಕರು ಸಾಧಕರಲ್ವ? ಬ್ರಹ್ಮಚರ್ಯದ ಅಹಂಕಾರವೂ ಸಾಧನೆಗೆ ವೈರಿ.”

“ಹ್ಞಾ...ಏನೂ ಗೊತ್ತಿಲ್ಲದೇ ಬರೀ ತ್ಯಾಗ ಮಾಡಿಬಿಟ್ಟೆ ಅಂದರೆ ಅದು ಹೋಗಿಬಿಡುತ್ತದಾ? ಯಾವುದನ್ನಾದರೂ ಬಿಡೋಕೆ ಮುಂಚೆ ಹಿಡೀಬೇಕು ಅದನ್ನ ತಿಳಕಳಿ, ನೀವು ಸುಖವನ್ನು ಬಿಟ್ಟಿರಿ ಮೋಹವನ್ನು ಇಟ್ಟುಕೊಂಡಿರಿ”

“ಇಷ್ಟೆಲ್ಲ ಸಾಧನೆಯಿಂದ ಸಾಧಿಸಲಾಗದ ವೈರಾಗ್ಯ ಒಂದು ಜೀವನಾನುಭವದಿಂದ ಬರೋದದರೆ ಬಂದುಬಿಡಲಿ ಎನ್ನಿಸಿ ಹೊರಟುಬಿಟ್ಟೆ.”

                                                                ***




ಫೋಟೋ: ಪ್ರಜ್ಞಾ
ಇಟ್ಟೆ. ಬಿಟ್ಟೆ. ಪಡೆದೆ.
ಏನಿಟ್ಟೆ? ಏನ್ ಬಿಟ್ಟೆ? ಏನ್ ಪಡೆದೆ?
ಎಲ್ಲ ಕಣ್ಕಟ್ಟೇ.

ಸ್ಥೂಲವಾಗಿ ಈ ಕಾದಂಬರಿ ಉನ್ನತ ಧ್ಯೇಯಗಳನ್ನು ಹೊತ್ತು ಅಥವಾ ಆ ಭ್ರಮೆಯಲ್ಲಿ ಸನ್ಯಾಸಿಗಳಾಗಿ ಮಠ ಸೇರಿದವರ ಬದುಕನ್ನು ಪರಾಮರ್ಶಿಸುತ್ತದೆಯಾದರೂ ಕಾದಂಬರಿಯ ಶೀರ್ಷಿಕೆಯೇ ಅದರ ಕಥಾವಸ್ತು ಎಂದರೆ ತಪ್ಪಾಗಲಿಕ್ಕಿಲ್ಲ. ನ್ಯಾಸ ಎಂಬ ಪದವು ನಾನಾ ಅರ್ಥಗಳನ್ನು ಒಳಗೊಂಡಿದೆ. ಕನ್ನಡದ ಜಾಲತಾಣವಾದ ’ಚುಕ್ಕುಬುಕ್ಕು”ವಿನಲ್ಲಿ ಈ ಪದದ ಅರ್ಥವ್ಯಾಪ್ತಿಯ ಬಗ್ಗೆ ಚರ್ಚೆಯಾಗಿತ್ತು.  ’ನ್ಯಾಸ’ ಎಂದರೆ ನೆಚ್ಚುಕೂಟ, ವಿಶ್ವಸ್ಥ ಮಂಡಳಿ, ಇಡಲ್ಪಟ್ಟದ್ದು, ಇಟ್ಟಿದ್ದು, ಕೇಳಿದಾಗ ಕೊಡುವಂತೆ ಹೇಳಿ ನಂಬಿಕೆಯಿಂದ ಕಾಪಾಡುವುದಕ್ಕಾಗಿ ಇನ್ನೊಬ್ಬರಲ್ಲಿ ಇಟ್ಟ ವಸ್ತು, ವಿಧಾನ, ರಚನೆ, ನಿತ್ಯ ಪೂಜೆಯ ವೇಳೆಗೆ ಮಂತ್ರಪೂರ್ವಕ ಅಂಗನ್ಯಾಸ ಮಾಡುವುದು, ವ್ಯಾಖ್ಯಾನ, ಭಾಷ್ಯ ಎಂದೆಲ್ಲ ಅರ್ಥೈಸಿಕೊಳ್ಳಬಹುದು.

ಕವಯತ್ರಿ ಲಲಿತಾ ಸಿದ್ದಬಸವಯ್ಯನವರು ಇನ್ನೊಂದು ಅರ್ಥವನ್ನು ಸೂಚಿಸುತ್ತಾರೆ. “ನ್ಯಾಸ ಅಂದರೆ ಇಟ್ಟುಬರೋದು, ಸಂ-ನ್ಯಾಸ ಅಂದರೆ ಆ ಇಟ್ಟಿದ್ದನ್ನ ಬಿಟ್ಟು ಬರೋದು ಅಂತ ತುಮಕೂರು ಹಿರೇಮಠದ ಸ್ವಾಮೀಜಿಯವರ ಪ್ರವಚನದಲ್ಲಿ ಕೇಳಿದ್ದೆ. ನಮ್ಮ ಹರೀಶರು ತಗೊಂಡಿರುವ ಸಬ್ಜೆಕ್ಟ್ ನೋಡಿದರೆ ಈ ಅರ್ಥದಲ್ಲೆ ಬಳಸಿರಬಹುದು ಅಂತ ಅನ್ನಿಸುತ್ತೆ.” ಕಾದಂಬರಿಯ ಮೊದಲ ಓದಿಗೆ ನನಗೆ ಸಿಕ್ಕ ಅನುಭವ ಈ ಅರ್ಥವ್ಯಾಪ್ತಿಗೆ ಸಂಬಂಧಪಟ್ಟದ್ದು.

ಸನ್ಯಾಸ’ ದೊಳಗಿನ  ’ನ್ಯಾಸ’ ಕ್ಕೆ ಬಿಡುವುದು, ತ್ಯಜಿಸುವುದು, ಪರಿತ್ಯಾಗ ಮಾಡುವುದು ಎಂಬ ಅರ್ಥವೂ ಇದೆ. ಅದನ್ನು ಸರಳಗೊಳಿಸಿ ಹೇಳುವುದಾದರೆ ಸಾಂಸಾರಿಕ ಕರ್ಮಗಳನ್ನು, ಬಂಧಗಳನ್ನು ಸಂಪೂರ್ಣವಾಗಿ ಬಿಟ್ಟು ಸಾಧಕರಾದವರು ಸನ್ಯಾಸಿಗಳು. ಗೆಳೆಯ ದತ್ತರಾಜ್ ’ನ್ಯಾಸ’ ಕ್ಕೆ ಮತ್ತೊಂದು ನಮನಿ ಅರ್ಥ ಕೊಟ್ಟರು. ನ್ಯಾಸ ವೆಂದರೆ ಒಂದರೊಳಗೊಂದು ಐಕ್ಯವಾಗುವುದು, ಲೀನವಾಗುವುದು ಅಂತಲೂ ಆಗುತ್ತದೆ ಅಂತ. ಈಗ ಆಚರಣೆಗಳಲ್ಲಿ ಅಂಗ ನ್ಯಾಸ, ಕರನ್ಯಾಸ ಮಾಡುವಾಗ, ಪ್ರತಿ ಮಂತ್ರಕ್ಕೆ ಒಂದೊಂದು ಅಂಗವನ್ನ ಸ್ಪರ್ಶಿಸುತ್ತಾರೆ. ಆ ಕ್ರಿಯಯೊಂದಿಗೆ ಸ್ಪರ್ಶಿಸಲ್ಪಟ್ಟ ಅಂಗ ಆ ಮಂತ್ರವೇ ಆಗುತ್ತದೆ, ಅಥವಾ ಮಂತ್ರದ ಸುಪ್ತ ಚೈತನ್ಯವೇ ತಾನಾಗುತ್ತದೆ. ಹೀಗೆ ಈ ಅರ್ಥದಲ್ಲಿ ತೆಗೆದುಕೊಂಡರೆ,  ನಿತ್ಯ ಬದುಕಿನ ಬಂಧಗಳನ್ನು ಬಿಟ್ಟ ಸಾಧಕರು ಆತ್ಯಂತಿಕ ಸತ್ಯ, ಆನಂದ ಅಥವಾ ಪರಮಾತ್ಮ ಅಂತೇನು ನಾವು ಕರೀತೇವೆ ಅದರೊಳಗೆ ಐಕ್ಯರಾಗುವ ಇಡೀ ಪ್ರಕ್ರಿಯೆಯೇ ಸನ್ಯಾಸ ಅಂತ ಅಂದುಕೊಳ್ಳಬಹುದು. ಬಂಧಗಳೆಂದರೆ  ಇಲ್ಲಿ ಮೋಹ, ಮದ, ಮತ್ಸರ, ದ್ವೇಷ, ಅಹಂಕಾರ, ಮಮಕಾರ ಇತ್ಯಾದಿ ಮಿತಿಗಳು ಎಂದು ಅರ್ಥ ಮಾಡಿಕೊಳ್ಳಬೇಕು.

ಆ ಚರ್ಚೆಯ ವೇಳೆಗೆ  ಕಾದಂಬರಿಕಾರರೇ ಹೇಳಿದಂತೆ ಅವರ ಕಾದಂಬರಿಯು ’ನ್ಯಾಸ’ ಎಂಬ ಪದ ಒಳಗೊಂಡಿರಬಹುದಾದ ಎಲ್ಲ ಅರ್ಥಮೂಲಗಳನ್ನೂ ಪರಿಶೋಧಿಸುತ್ತದೆ. ಇವತ್ತಿನ ಕಾಲಕ್ಕೆ ಪ್ರಸ್ತುತವೆನಿಸುವ ಪ್ರಶ್ನೆಗಳನ್ನು ಪಾತ್ರಗಳ ಮೂಲಕ ವಿಶ್ಲೇಷಿಸುತ್ತ, ನಿತ್ಯ ಬದುಕಿನ ಅನುಭವಕ್ಕೆ ಆ ಪ್ರಶ್ನೆಗಳ ಔಚಿತ್ಯವನ್ನು ಒರೆ ಹಚ್ಚಿ, ಜರಡಿ ಹಿಡಿದು ಅದರಲ್ಲಿ ಸಿಕ್ಕ ಜೊಳ್ಳು ಅಥವಾ ಗಟ್ಟಿ ವಿಚಾರಗಳನ್ನು ಓದುಗರ ಮುಂದಿಟ್ಟು ನೀವೇ ನಿರ್ಣಯಿಸಿ ಎನ್ನುವ ಈ ಕಾದಂಬರಿ, ಕಾದಂಬರಿಕಾರರೇ ಹೇಳುವಂತೆ ’ನ್ಯಾಸ’ ಪದದ ಅರ್ಥಾನ್ವೇಷಣೆಗೆ  ಸ್ವತಃ  ತಾನೇ ಒಂದು ಪ್ರಮಾಣವಾಗಿದೆ. 

ಹಿರಿಯ ವಿದ್ವಾಂಸರಾದ ಶತಾವಧಾನಿ ಆರ್ ಗಣೇಶ್ ರವರು ಬೆನ್ನುಡಿಯಲ್ಲಿ ಹೇಳಿದಂತೆ ನ್ಯಾಸವು ತನ್ನ ಕಥಾವಸ್ತುವನ್ನು ಯಾವದೇ “ಸರಳೀಕರಣ ಹಾಗೂ ಸಮಯಸಾಧಕತೆಯಿಲ್ಲದೆ”  ಶ್ರದ್ಧೆಯಿಂದ ವಿಶ್ಲೇಷಿಸುತ್ತದೆ. ಗಡಚು ತಾತ್ವಿಕತೆಯಿಂದ ಗೊಂದಲಕ್ಕೀಡು ಮಾಡುವುದಿಲ್ಲ. ಖಂಡಿತಕ್ಕೂ “ಕಾವ್ಯಾತ್ಮಕ ಬನಿ”ಯುಳ್ಳ ಭಾಷೆ.  ಇದು ಧಾವಂತದ ಓದಿಗಲ್ಲ. 

ಇದನ್ನು ಬರೆದ ಲೇಖಕರಿಗೆ ಅಷ್ಟೇ ೨೬ ರ ವಯಸ್ಸು ಅಂದರೆ ನಂಬಲಿಕ್ಕಾಗುವುದಿಲ್ಲ! ಇಂತಹದ್ದೊಂದು ಕಾದಂಬರಿಯನ್ನು ಕನ್ನಡಕ್ಕೆ ಕೊಟ್ಟ ಹರೀಶ ಹಾಗಲವಾಡಿಯವರಿಗೂ ಅದನ್ನು ಪ್ರಕಟಿಸಿದ ಛಂದ ಪುಸ್ತಕಕ್ಕೂ ಅಭಿನಂದನೆಗಳು.


ನ್ಯಾಸ
ಲೇಖಕರು: ಹರೀಶ ಹಾಗಲವಾಡಿ
ಪ್ರಕಾಶಕರು: ಛಂದ ಪುಸ್ತಕ