ಇರುಳು:
ಅರೆಬಿರಿದ ಗುಲಾಬಿ ನಗುವನ್ನು
ಎಳೆ ಚಿಗುರ ತುಟಿಯಂಚಲ್ಲಿ
ಸಿಕ್ಕಿಸಿಕೊಂಡು ಫೇರಿ ಹೊರಟ
ಮುಸ್ಸಂಜೆಯಾರತಿಯ ವಧು...
ಇರುಳು:
ಅಂತ್ಯವಿಲ್ಲದ ಹಾದಿಯಂಚಿಗೆ ದೃಷ್ಟಿಯಿಟ್ಟು
ಕಡು ಕಪ್ಪು ಕೊಳದೊಳಗೆ ಅಮೃತದ ಹನಿ ಬಿಟ್ಟು ನಿಟ್ಟುಸಿರಿಡುವ
ವಿರಹಿಗಳ ತಾಪಕ್ಕೆ... ಬೆಳೆದಿಂಗಳೆರೆ ಎರೆದು
ಕುಂದಿದ ಚಂದಿರನ ಜೀವದ ಗೆಳತಿ...
ಇರುಳು:
ಹಡೆಯಲಾಗದ ನೋವ ನಿತ್ಯ ಬಸಿರೊಳಗಿಟ್ಟು
ಸವೆದ ಹಗ್ಗದ ತೊಟ್ಟಿಲೊಳಗೆ ನಿತ್ಯವೂ ತೂಗಿ
ಬಸಿರೊಳಗೇ ಬೆಳೆಸಿ ಬೇರಿಳಿಸಿ
ಹಗಲ ಬರಸೆಳೆವ ಮರುಳು...
ಇರುಳು:
ತಪ್ತ ಹಗಲಿನ ವಿಷಕೆ ತನ್ನೊಡಲ ತೆರೆದಿಟ್ಟು
ಕೆರಳಿದ ಬಡವಾನಲದ ಬೇಗೆಗೆ ಸುಟ್ಟ ತಂತುಗಳನ್ನು
ಹವಳದ ಚಿಪ್ಪೊಳಗಿಟ್ಟು ಮತ್ತೆ ಹೊಸ ಬೆಳಗಿಗೆ
ನಗೆ ಲೇಪಿಸಿಕೊಂಡ ಶಾಂತ ಕಡಲು...
ತಪ್ತ ಹಗಲಿನ ವಿಷಕೆ ತನ್ನೊಡಲ ತೆರೆದಿಟ್ಟು
ಕೆರಳಿದ ಬಡವಾನಲದ ಬೇಗೆಗೆ ಸುಟ್ಟ ತಂತುಗಳನ್ನು
ಹವಳದ ಚಿಪ್ಪೊಳಗಿಟ್ಟು ಮತ್ತೆ ಹೊಸ ಬೆಳಗಿಗೆ
ನಗೆ ಲೇಪಿಸಿಕೊಂಡ ಶಾಂತ ಕಡಲು...
ಇರುಳು:
ಹೊತ್ತಲ್ಲದ ಹೊತ್ತಿಗೆ ನಾಭಿಮೂಲದಲ್ಲಿ
ಮಿಸುಕಿ ಒದ್ದಾಡಿ ಪ್ರಾಣ ತೊರೆವ ಮುನ್ನ
ಮಿಸುಕಿ ಒದ್ದಾಡಿ ಪ್ರಾಣ ತೊರೆವ ಮುನ್ನ
ಛಂಗನೆ ನೆಗೆದು, ಹೊರ ಬಿದ್ದು, ಗರಿ ಬಿಚ್ಚಿ
ಚಂದ್ರನ ಪಲ್ಲಂಗ ಸೇರುವ ಕವಿತೆಯ ಹಗಲು!
-ಪ್ರಜ್ಞಾ
No comments:
Post a Comment