Wednesday, March 25, 2015

ಹೀಗೆ ಸುಮ್ಮನೇ....



ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ?

ಅದು ಒಂದು ಘನೀಭವಿಸಿದ ಹನಿಯಾದಾಗ. ಆಕಾಶವನ್ನ ಕಲ್ಪಿಸಿಕೊ. ಅದರ ಒಡಲೊಳಗಿದ್ದ ರಹಸ್ಯವನ್ನೆಲ್ಲ ಬಸಿದು ಮೋಡ ಕಟ್ಟಿ ಆ ಮೋಡದ ಒಂದು ಅಂಶ ಆ ಕವಿತೆಯೊಳಗಿನ ಹನಿಯಾದಾಗ. ಆ ಹನಿಯ ಜಾಡು ಹಿಡಿದು ಆಕಾಶದ ಒಡಲನ್ನು ತಲುಪುವ ರೋಚಕ ಯಾನವೊಂದನ್ನು ಊಹಿಸಿಕೋ. ಆ ಯಾನ ನನ್ನದು. ಯಾನಕ್ಕೆ ದಾರಿ ಕೊಡುವವನು ಕವಿ. ತಲೆ ಕೆಡೋದಿಲ್ಲವಾ!

ಏನಿಲ್ಲ. ನೆನಪುಗಳನ್ನ ಕೆದಕುತ್ತದ. ಕಲಕುತ್ತದೆ. ಕನಸುಗಳನ್ನ ಬಿತ್ತುತ್ತದೆ. ಹೊಳೆಯೊಳಗೆ ಸುಳಿ ಇರ‍್ತದೆ ನೋಡು ಹಾಗೆ...ಯಾವ ಅಂತರಿಕ್ಷಕ್ಕೆ ಕೊಂಡೊಯ್ಯುತ್ತದೋ ಯಾರು ಬಲ್ಲರು...

ಈ ಕೊಳವನ್ನೇ ತೊಗೋ. ಆ ಹಣ್ಣೆಲೆ ಯಾವುದೋ ಮರದ ನಂಟಿನ ತೊಟ್ಟು ಕಳಚಿಕೊಂಡು ಬಂಧಮುಕ್ತನಾದ ಭ್ರಮೆಯಲ್ಲಿ ತುಪ್ಪಳದಷ್ಟು ಹಗುರವಾಗಿ ನೀರಿಗೆ ಬಿತ್ತು.  ಅಲ್ಲಿಗೆ ಈ ಕತೆ ಮುಗಿಯಿತು ಎನ್ನೋಣವಾ?

ಆದರೆ ಈ ಕೊಳಕ್ಕೇನೋ ಆದಂತಿದೆ. ಅಗಣಿತ ಭಾವಗಳನ್ನು ಬಸಿರಾಗಿಸಿಕೊಂಡು ಹಾಗೆ ಎಷ್ಟೋ  ಸಮಯದಿಂದ ಮಡುಗಟ್ಟಿ ಮೇಲ್ನೋಟಕ್ಕೆ ತಿಳಿಯಾಗಿದ್ದ ಅದಕ್ಕೆ ಏನೋ ಆದಂತಿದೆ. ಇಲ್ಲದಿದ್ದರೆ ತುಪ್ಪಳದಷ್ಟು ಹಗುರಾದ ಆ ಎಲೆಯ ಸ್ಪರ್ಶಕ್ಕೆ  ಹಾಗೆ ಯಾಕೆ ಅಲೆಯ ತೇರೆದ್ದಿದೆ?

ಅಷ್ಟೇ ಅಲ್ಲ,  ಹಗುರಾದೆ ಎಂದುಕೊಂಡಿದ್ದ ಎಲೆಯೊಳಗಿನ್ನೂ ಬಚ್ಚಿಟ್ಟುಕೊಂಡ ಕತೆಯ ಗಂಟೊಂದಿದೆ ಎಂದೇ ಲೆಕ್ಕ. ಅದಕ್ಕೇ ಕೊಳ ಕಂಪಿಸಿದ್ದು, ಅಲೆಯ ತೇರೆದ್ದಿದ್ದು. ಮೌನ ಮಾತಾದದ್ದು.

ಅಲ್ಲೊಂದು ಕವಿತೆ ಹುಟ್ಟಿದೆ. ಅಲ್ಲಿಗೆ ಈ ಕತೆ ಈಗಷ್ಟೇ ಶುರುವಾಯಿತು ಅನ್ನೋಣವಾ?!


-ಪ್ರಜ್ಞಾ