ತಂಗಿ,
ನೀನಿಲ್ಲದ ನೈರೋಬಿಯಲ್ಲಿ ಕಾಲ ನಿಂತು ಹೋಗಿದೆಯೆನಿಸುತ್ತಿದೆ. ಒಮ್ಮೊಮ್ಮೆ ದೂರದ ವೈಯ್ಯಾಕಿ ರಸ್ತೆಯಲ್ಲಿ ಓಡಾಡುವ ವಾಹನಗಳ ಸದ್ದನ್ನು ಆಲಿಸುತ್ತ ಬಾಲ್ಕನಿಯಲ್ಲಿ ನಿಲ್ಲುತ್ತೇನೆ. ಕಾಳು ತಿನ್ನಲು ಬರುವ ಹಕ್ಕಿಗಳ ಚಿಲಿಪಿಲಿ ಕೇಳಲು ಓಡಿ ಬರುತ್ತೇನೆ. ಆಲಿವ್ ಥ್ರಶ್ ಒಮ್ಮೊಮ್ಮೆ ಹಾಡುತ್ತವೆ. ಇತ್ತ ನಿನ್ನ ಕೋಣೆಯ ಹೊರಗಿನಿಂದ ಕಾಣುವ ಜಕರಾಂಡ ಮರವು ಬೀಸುವ ಗಾಳಿಯ ರಭಸಕ್ಕೆ ಸುಯ್ದಾಡುತ್ತಿರುತ್ತದೆ. ಬಿರು ಬಿಸಿಲಿನ ಮಧ್ಯಾಹ್ನದಲ್ಲಿ ಹಕ್ಕಿಗಳು ಒಂದೂ ಕಾಣುವುದಿಲ್ಲ. ಜಗತ್ತು ಚಲಿಸುತ್ತಿದೆಯೆಂಬುದು ಭ್ರಾಂತಿಯೋ ಎಂಬಂತೆ ಬಾಲ್ಕನಿಯ ಹಕ್ಕಿಗಳು, ಅವುಗಳ ಚಿಲಿಪಿಲಿ, ವೈಯ್ಯಾಕಿ ರಸ್ತೆಯ ವಾಹನಗಳು, ಸುಯ್ಗುಡುವ ಗಾಳಿ, ಜಕರಾಂಡ ಮರ ಎಲ್ಲವೂ ಇದ್ದಕ್ಕಿದ್ದಂತೆ ಚೌಕಟ್ಟಿನ ಚಿತ್ರಗಳಾಗಿಬಿಡುತ್ತವೆ. ನೆಲ ಒರೆಸುತ್ತ ಕೋಣೆಯೊಳಗೆ ಬಂದ ಮೇರಿ ತನ್ನ ಗೆಳತಿಯ ತಂಗಿ ಹದಿನಾರರ ಪೋರಿ ಪ್ಯೂರಿಟಿಗೆ ಹೆಣ್ಣು ಮಗುವಾಯಿತು ಎಂದು ಹಲ್ಲು ಕಿರಿಯುತ್ತಾಳೆ. ’You know, her boy friend Ken ran away...' ಎನ್ನುತ್ತ ಬಾಯಿ ಕಳೆದವಳು ಅಲ್ಲೇ ಚಿತ್ರವಾಗುತ್ತಾಳೆ. ಚೌಕಟ್ಟಿನೊಳಗಿಂದ ಅವಳ ಅರೆ ತೆರೆದ ಬಾಯಿ ಕಾಣುತ್ತದೆ. ಅವಳ ಹಿಂದೆ ಕಾಳು ತಿನ್ನಲು ಬಗ್ಗಿದ ಥ್ರಶ್, ವೈಯ್ಯಾಕಿ ರಸ್ತೆಯ ಮಟಾಟುಗಳು ಮತ್ತು ಎಲೆಯುದುರಿದ ಜಕರಾಂಡ ಮರ. ಇತ್ತ ಭುವಿಯೂ ಅಲ್ಲ ಅತ್ತ ನಭವೂ ಅಲ್ಲದ ಇರುಕಿನಲ್ಲಿ ಒಂದು ಹಣ್ಣೆಲೆ.
ಹೀಗಿರುತ್ತಲಿರುವಾಗ...
ಇಲ್ಲಿನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಮೂರು ದಿನಗಳ ಇಸ್ರೇಲಿ ಚಿತ್ರೋತ್ಸವ ನಡೆಯುತ್ತಿದೆ. ಇವತ್ತು ’The Band's Visit' ಎನ್ನುವ ಸಿನೆಮಾವನ್ನು ನೋಡಿ ಬಂದೆ. ಒಬ್ಬಳೇ ಹೋಗಿದ್ದೆ. ಈಜಿಪ್ತಿನ ಪೋಲೀಸ್ ಆರ್ಕೆಸ್ಟ್ರಾ ತಂಡವೊಂದು ಇಸ್ರೇಲಿಗೆ ಹೋಗಿ ತಾವು ತಲುಪಬೇಕಾಗಿದ್ದ ಊರನ್ನಲ್ಲದೆ ಬೇರೆ ಯಾವುದೋ ಊರನ್ನು ತಲುಪಿ ಅಲ್ಲಿನ ಜನಜೀವನದೊಂದಿಗೆ ಮುಖಾಮುಖಿಯಾಗುವ ಕತೆ. ದೇಶ-ಧರ್ಮ-ಸಂಸ್ಕೃತಿಗಳ ಎಲ್ಲೆಗಳಾಚೆ, ರಾಜಕೀಯ ಪ್ರೇರಿತ ರಕ್ತಪಾತದಾಚೆ ಇರುವ ಸಾಮಾನ್ಯ ಮನುಷ್ಯರ ಜಗತ್ತನ್ನು ತಿಳಿ ಹಾಸ್ಯದ ಹಂದರದಲ್ಲಿ ಬಿಚ್ಚಿಡುವ ’The Band's Visit' ಸಿನೆಮಾ. ಹಾಗಿದ್ದರೆ ಎಷ್ಟು ಚೆನ್ನ ಎನಿಸುವ ಜಗತ್ತು. ಇಸ್ರೇಲ್ ಮತ್ತು ಅರಬ್ ಸಮುದಾಯಗಳ ಸಂಘರ್ಷದ ಹಿನ್ನೆಲೆಯಲ್ಲಿ ಗ್ರಹಿಸುವುದಾದರೆ ಈ ಸಿನೆಮಾವು ವೈರುದ್ಧ್ಯಗಳ ನಡುವೆಯೂ ಮನುಷ್ಯ ಮನುಷ್ಯರ ನಡುವೆ ಸಾಮರಸ್ಯ ಸಾಧಿಸಬಲ್ಲ ಅಂಶಗಳನ್ನು ಶೋಧಿಸುತ್ತದೆ. ಕೆಲವೊಮ್ಮೆ ಎಲ್ಲವನ್ನೂ ಸರಳೀಕರಿಸಿ ಸಮನ್ವಯಗೊಳಿಸಿಬಿಡುವ ನೋಟಗಳು ಪೂರ್ಣಸತ್ಯವನ್ನು ಹೇಳುತ್ತಿರುವುದಿಲ್ಲ ಎಂಬ ಒಂದು ಅಂಶವನ್ನೂ ಮನಸ್ಸಿನಲ್ಲಿ ಇಟ್ಟುಕೋ.
ನಾನು ಸಮಯಕ್ಕಿಂತ ಸ್ವಲ್ಪ ಮುಂಚೆಯೇ ಹೋಗಿದ್ದರಿಂದ ನ್ಯಾಶನಲ್ ಮ್ಯೂಸಿಯಂನ ಹೊರಗೆ ಬೆಂಚಿನ ಮೇಲೆ ಕೂತಿದ್ದೆ. ಸ್ವಲ್ಪ ಹೊತ್ತಿಗೆ ಕಛೇರಿಗೆ ಹೋಗುವವರು ಹಾಕಿಕೊಳ್ಳುವ ಒಂದು ಚರ್ಮದ ಚೀಲವನ್ನು ಮಣಿಕಟ್ಟಿಗೆ ನೇತು ಹಾಕಿಕೊಂಡಿದ್ದ ಒಬ್ಬಾತ ನಾನಿದ್ದ ಕಡೆ ಬಂದ. ಹಿಂದೆ ದೂರದರ್ಶನದಲ್ಲಿ ’ವ್ಯೋಮಕೇಶ ಭಕ್ಷಿ’ ಎಂಬ ಒಂದು ಧಾರಾವಾಹಿ ಬರುತ್ತಿತ್ತು. ಅದರಲ್ಲಿ ವ್ಯೋಮಕೇಶ ಭಕ್ಷಿಯ ಪಾತ್ರದಲ್ಲಿ ರಜಿತ್ ಕಪೂರ್ ಎನ್ನುವಾತ ನಟಿಸುತ್ತಿದ್ದ. ನಾನಿದ್ದಲ್ಲಿಗೆ ಬಂದವನು ಪಕ್ಕಾ ರಜಿತ್ ಕಪೂರನ ಹಾಗೆಯೇ ಕಾಣುತ್ತಿದ್ದ. ಅವನು ನನ್ನ ವರೆಗೆ ಬಂದವನು ಹಿಂದಿರುಗಿದ, ಮತ್ತೆ ಮರಳಿದ. ಸೀದಾ ನನ್ನ ಬಳಿ ಬಂದು ’ಚಿತ್ರೋತ್ಸವ ಎಲ್ಲಿ ನಡೆಯುತ್ತಿದೆ’ ಎಂದು ಕೇಳಿದ. ನಾನು ಎಲ್ಲಿ ಎಂದು ಹೇಳಿದೆ. ಅವನ ಕೈಗೆ ಜೋತು ಬಿದ್ದಿದ್ದ ಚೀಲವು ಬಾಯಿ ತೆರೆದುಕೊಂಡಿತ್ತು. ಅದರೊಳಗೆ ಎರಡು ನೀರಿನ ಬಾಟಲಿ ಒಂದಿಷ್ಟು ಕಡತಗಳಿದ್ದದ್ದು ಕಂಡಿತು. ಮತ್ತೆ ನೀವೂ ಅದಕ್ಕೇ ಬಂದಿದ್ದಾ ಎಂದು ಕೇಳಿದ. ಹೌದು ಎಂದೆ. ನಿಮಗೆ ಇಸ್ರೇಲಿ ಸಿನೆಮಾ ಇಷ್ಟವಾ ಎಂದು ಕೇಳಿದ. ಇಲ್ಲಪ್ಪ, ಹೇಗಿರಬಹುದು ಅಂತ ನೋಡಲಿಕ್ಕೇ ಬಂದಿದ್ದು ಎಂದೆ. ಅಂತರ್ಜಾಲದಲ್ಲಿ ಸಿನೆಮಗಳನ್ನು ನೋಡಬಹುದು ಗೊತ್ತಿಲ್ವಾ ಎಂದು ಕೇಳಿದ. ಗೊತ್ತಿದೆ. ಆದರೆ ಎಲ್ಲಾ ಸಿನೆಮಾಗಳೂ ಸಿಗೋದಿಲ್ಲ ಎಂದೆ. ಒಂದೆರಡು ವೆಬ್ ಸೈಟ್ ಹೆಸರು ಹೇಳಿದ. ನಾನು ಅಷ್ಟರವರೆಗೂ ಗಮನಿಸಿರಲಿಲ್ಲ. ಅವನು ತಾನು ಹಾಕಿದ್ದ ದೊಗಳೆ ದೊಗಳೆ ಪ್ಯಾಂಟಿನ ಝಿಪ್ ಹಾಕಿರಲಿಲ್ಲ. ಮಧ್ಯ ವಯಸ್ಕ. ಭಾರತೀಯ ಮೂಲದವನು.
ಅವನಿಗೆ ಮಾತಾಡುವ ಹುಕಿ. ಅಲ್ಲಿಯೇ ಕೂರಿ ಎಂದೆ, ಅವನು ಕೂರಲಿಲ್ಲ. ಜನ ಇದ್ದಾರಾ ಎಂದು ಕೇಳಿದ. ಅಷ್ಟೇನೂ ಕಾಣಲಿಲ್ಲ. ಇನ್ನೂ ಸಮಯವಿದೆಯಲ್ಲ ಎಂದೆ. ’ಇಲ್ಲಿಯ ಜನಕ್ಕೆ ಇಂಥದ್ದರಲ್ಲಿ ಆಸಕ್ತಿ ಇಲ್ಲ. ನನಗೆ ಇವತ್ತಿನವರೆಗೂ ಅವರ ಜೊತೆ ಸಂಪೂರ್ಣವಾಗಿ ಬೆರೆಯಲು ಆಗುತ್ತಿಲ್ಲ. ನನಗೆ ವಿಜ್ಞಾನ, ತಂತ್ರಜ್ಞಾನಗಳ ಬಗೆಗೆ ತಿಳಿದುಕೊಳ್ಳುವುದೆಂದರೆ ಇಷ್ಟ. ಅವರೆಲ್ಲ ಸೇರಿದರೆ ರಾಜಕಾರಣದ ಮಾತು ಇಲ್ಲ ಎಂದರೆ ಒಂದಿಷ್ಟು ಕ್ರಿಶ್ಚಿಯನ್ ಸ್ಟಫ್ ಇರುತ್ತದೆ. ನನ್ನಜ್ಜ ಪೋರಬಂದರಿನಿಂದ ಇಲ್ಲಿಗೆ ಬಂದ. ಬಿಸಿನೆಸ್ ಆಗುತ್ತೆ, ದುಡ್ಡು ಮಾಡಬಹುದು ಅಂತ ಬಂದ. ಏನು ದುಡ್ಡು ಮಾಡುತ್ತಾರೆ? ಇಲ್ಲಿ ಜನಕ್ಕೆ ವ್ಯವಹಾರದ ಹಿಕ್ಮತ್ತೇ ಗೊತ್ತಿಲ್ಲ. ಇವರಿಗೆ ವೈಜ್ಞಾನಿಕವಾಗಿ ಮುಂದುವರೆಯುವುದೇ ಬೇಕಿಲ್ಲ. ಸ್ಪೇಸ್ ಸೈನ್ಸ್, ನ್ಯೂಕ್ಲಿಯರ್ ಸೈನ್ಸ್ ನಲ್ಲಿ ಏನು ಸಾಧಿಸಿದ್ದಾರೆ? ನನಗೆ ಅದೆಲ್ಲ ಇಷ್ಟ. ಭಾರತದವರು ಮಂಗಳ ಗ್ರಹಕ್ಕೆ spacecraft ಕಳಿಸಿದರಲ್ಲ, (ಮಂಗಳಯಾನ, 2014) I was there. ಮೋದಿಗೆ ಕಣ್ಣಲ್ಲಿ ನೀರು ಬಂದಿತ್ತು.' ಎನ್ನುತ್ತ ಪ್ಯಾಂಟಿನ ಝಿಪ್ ಮೇಲೇರಿಸಿಕೊಂಡ. ಮಂಗಳಯಾನದ ಪ್ರಾಜೆಕ್ಟ್ ನಲ್ಲಿ ಇವನೂ ಏನೋ ಇರಬಹುದು, ವಿಜ್ಞಾನಿ ಅಥವಾ ತಾಂತ್ರಿಕ ಸಲಹೆಗಾರರ ಥರದಲ್ಲಿ ಎಂದುಕೊಂಡೆ ಮನಸ್ಸಿನಲ್ಲೇ. ಆದರೆ ಈಗ ಇಲ್ಲೇಕೆ ಇದ್ದಾನೆ? ಬಹುಶಃ ತಾನು ಅಲ್ಲಿದ್ದೆ ಅಂದರೆ ತಾನು ಭಾರತದಲ್ಲಿದ್ದೆ ಎಂಬ ಅರ್ಥದಲ್ಲಿ ಹೇಳಿದ್ದನೆ? ಬಗೆಹರಿಯಲಿಲ್ಲ. ತಾನು ಹಿಂದಿ ಸಿನೆಮಾ ನೋಡುವುದಿಲ್ಲ, ಹಾಲಿವುಡ್ ಸಿನೆಮಾಗಳನ್ನೂ ನೋಡುವುದಿಲ್ಲ. ತನಗೆ ವಿಜ್ಞಾನ, ತಂತ್ರಜ್ಞಾನದ ಬಗೆಗೆ ತಿಳಿದುಕೊಳ್ಳುವುದರಲ್ಲಿ ಆಸಕ್ತಿ ಎಂದ. ಹಾಗಿದ್ದರೆ ಇಲ್ಲಿ ಸಿನೆಮಾ ನೋಡುವುದಕ್ಕೆ ಯಾಕೆ ಬಂದಿದ್ದನೋ. ಅವನ ಮಾತು ಮತ್ತೆ ಸ್ಪೇಸ್ ಟೆಕ್ನಾಲಜಿಯತ್ತ ಹೊರಳಿತ್ತು. ’ಇಲ್ಲಿ ಎಷ್ಟೊಂದು ಭೂಮಿ ಇದೆ, ಸಂಪನ್ಮೂಲಗಳಿದ್ದಾವೆ. ಸರಿಯಾಗಿ ಬಳಸಿಕೊಳ್ಳಲು ಇಲ್ಲಿನವರಿಗೆ ಗೊತ್ತಿಲ್ಲ. ಇವರಿಗೆ ಅದೆಲ್ಲ ಬೇಡ, ಬರೀ ರಾಜಕಾರಣ’ ಎಂದ.
’ಅದಕ್ಕೆಲ್ಲ ಸಮಯ ತೆಗೆದುಕೊಳ್ಳುತ್ತದೆ, ನಿಧಾನವಾಗಿ ಇಲ್ಲಿಯೂ ಎಲ್ಲ ಶುರುವಾಗುತ್ತದೆ ಬಿಡಿ. ಅದು ನಿಧಾನವಾದಷ್ಟೂ ಒಳ್ಳೆಯದೇ’ ಎಂದು ನಾನೆಂದೆ. ಅದು ಅಸಂಭವ ಎನ್ನುವ ರೀತಿಯಲ್ಲಿ ಕೈಯ್ಯಲ್ಲಾಡಿಸುತ್ತ ನಕ್ಕು ಅಲ್ಲಿಂದ ಹೊರಟ. ಹೋಗುವಾಗ ನಾನು ಕುತೂಹಲ ತಡೆಯಲಾರದೇ ಕೇಳಿದೆ. ನೀವು ಸಂಶೋಧನೆಯಲ್ಲೇನಾದರೂ ತೊಡಗಿಕೊಂಡಿದ್ದೀರಾ ಎಂದು. ಇಲ್ಲ ಇಲ್ಲ ನಾನು ವಿಮಾ ಕಂಪೆನಿಯಲ್ಲಿದ್ದೇನೆ ಎಂದು ತನ್ನ ವಿಸಿಟಿಂಗ್ ಕಾರ್ಡ್ ಅನ್ನು ನನ್ನ ಕೈಗಿತ್ತು ಹೋದ. ನನಗೆ ಮನಸ್ಸಿನಲ್ಲಿಯೇ ನಗು. ನನಗೆ ಅಚ್ಚರಿಯಾಗಿದ್ದೇನೆಂದರೆ ಅವನು ಅಷ್ಟೆಲ್ಲ ಬಡಬಡಾಯಿಸಿದರೂ ಅವನು ಯಾವಾಗ ಹೋಗುತ್ತಾನಪ್ಪ ಎಂದು ನನಗೆ ಅನಿಸಿರಲಿಲ್ಲ. ಬದಲಿಗೆ ಅವನ ಮಾತನ್ನು ಇನ್ನಷ್ಟು ಹೊತ್ತು ಕೇಳುತ್ತ ನಿಲ್ಲೋಣವೆನಿಸಿತ್ತು.
ಸ್ವಲ್ಪ ಹೊತ್ತಿಗೆ ನಾನೂ ಥಿಯೇಟರಿನೊಳಕ್ಕೆ ಹೋಗಿ ಕೂತೆ. ಅವನೆಲ್ಲಿದ್ದಾನೆ ಎಂದು ಕಣ್ಣು ಹಾಯಿಸಿದೆ. ಮುಂದುಗಡೆಯ ಸಾಲಿನಲ್ಲಿ ಕೂತಿದ್ದವ ಕೈ ಅಲ್ಲಾಡಿಸಿದ. ಸಿನೆಮಾ ಶುರುವಾಗುವುದಕ್ಕೂ ಮುಂಚೆ ಸುಮಾರು ಬಾರಿ ಒಳಗೆ-ಹೊರಗೆ ಅಡ್ಡಾಡಿದ, ಸೆಲ್ ಫೋನಿನಿಂದ ಕೂತವರ ಫೋಟೋ ತೆಗೆದ. ಅಷ್ಟು ಹೊತ್ತಿಗೆ ಸುಮಾರು ಜನವಾಗಿದ್ದರು. ಐಷಾರಾಮಿ ಸಿನೆಮಾ ಮಂದಿರಗಳಲ್ಲಿ ಹಿಂದಿ ಸಿನೆಮಾಗಳನ್ನು ನೋಡಲು ಹೋದರೆ ಎಣಿಸಿ ಎಣಿಸಿ ನಾಲ್ಕೈದು ಜನರನ್ನು ನೋಡಿ ನೋಡಿ ಬೇಸತ್ತ ನನಗೆ ಇವತ್ತು ಸಮಾಧಾನವಾಗಿತ್ತು. ಸಿನೆಮಾ ವೀಕ್ಷಣೆಯ ಅಸಲಿ ಮಜಾ ಇರುವುದೇ ತುಂಬಿದ ಸಿನೆಮಾ ಮಂದಿರಗಳಲ್ಲಿ ಕೂತು ವೀಕ್ಷಿಸುವದರಲ್ಲಿ. ನನ್ನ ಸಾಲಿನಲ್ಲಿ ನಾನೊಬ್ಬಳೇ ಕೂತಿದ್ದೆ. ಹಿಂದಿನಿಂದ ಹಾಯ್ ಎನ್ನುತ್ತ ಒಬ್ಬಳು ಬಂದು ನನ್ನ ಪಕ್ಕ ಕೂತಳು. ಮಾತಾಡುತ್ತ ಅವಳು ಇಥಿಯೋಪಿಯದವಳೆಂದು ಗೊತ್ತಾಯಿತು. ಕೂತ ಹತ್ತು ಹದಿನೈದು ನಿಮಿಷಕ್ಕೇ ಅವಳು ಯಾರದೋ ಫೋನ್ ಬಂತೆಂದು ಹೋದಳು. ಸಿನೆಮಾ ಮುಗಿಯುವವರೆಗೆ ಪಕ್ಕದಲ್ಲಿ ಕೂರಬಾರದಿತ್ತೆ ಎಂದು ಮತ್ತೆ ಅಂದುಕೊಂಡೆ.
15/11/2018
**
ಇವತ್ತು Desperado Square ಎನ್ನುವ ಸಿನೆಮಾವನ್ನು ನೋಡಿ ಬಂದೆ. ಇಸ್ರೇಲಿನಲ್ಲಿ ನಮ್ಮ ಹಳೆಯ ಹಿಂದಿ ಸಿನೆಮಾಗಳು ಬಲು ಜನಪ್ರಿಯವಾಗಿದ್ದವು ಎಂದು ನನಗೆ ಈ ಸಿನೆಮಾ ನೋಡಿದ ಮೇಲೆ ಗೊತ್ತಾಯಿತು. ಇಸ್ರೇಲಿನ ಪುಟ್ಟ ಪಟ್ಟಣವೊಂದರಲ್ಲಿ ಮುಚ್ಚಿ ಹೋಗಿದ್ದ ಸಿನೆಮಾ ಮಂದಿರವೊಂದನ್ನು ಮತ್ತೆ ಸಜ್ಜುಗೊಳಿಸಿ ಆರಂಭಿಸುವ ಕತೆ ಇರುವ Desperado Square ನಲ್ಲಿ ಮೊದಲ ದಿನ ತೋರಿಸುವ ಸಿನೆಮಾ ಯಾವುದು ಗೊತ್ತಾ? ರಾಜ್ ಕಪೂರ್ ಅವರ ಸಂಗಮ್. ಅಯ್ಯೋ ರಾಜ್ ಕಪೂರ್ ಅಂತೆ, ಸಂಗಮ್ ಅಂತೆ...ಎಂದು ನೀನು ಅಣಕ ಮಾಡು ಅಡ್ಡಿಲ್ಲ.
ಸಿನೆಮಾ ಶುರುವಾಗಲು ಸಮಯವಿದ್ದದ್ದರಿಂದ ಹೊರಗೆ ನಿಂತಿದ್ದೆ. ವ್ಯೋಮಕೇಶ ಭಕ್ಷಿ ಇವತ್ತೂ ಬಂದಿದ್ದ. ನಿನ್ನೆ ಹೇಗಿತ್ತು ಎಂದು ಕೇಳಿದೆ. ' ಥೋ. ಸರಿ ಇರಲಿಲ್ಲ. All Bums. ಇಷ್ಟ ಆಗಲಿಲ್ಲ’ ಎನ್ನುತ್ತ ಆಚೆ ಹೋದ. ಅವನು ನಿನ್ನೆಯ ಅಷ್ಟೂ ಸಿನೆಮಾಗಳನ್ನು ನೋಡಿದ್ದ. ಅವನು ಆಚೆ ಹೋದ ನಂತರ ಉದ್ದ ಸ್ಕರ್ಟ್ ಧರಿಸಿದ ಭಾರತೀಯ ಮೂಲದ ಮುದುಕಿಯೊಬ್ಬಳು ಆವತ್ತು ತೋರಿಸಿದ ಮೊದಲ ಸಿನೆಮಾ ಮುಗಿದ ಮೇಲೆ ಹೊರಗೆ ಬಂದಳು. ಅವಳನ್ನು ನಾನು ವೆಂಕಟೇಶ್ವರ ದೇವಸ್ಥಾನದಲ್ಲಿ ಒಮ್ಮೆ ನೋಡಿದ್ದೆ. ಅವಳೂ ’ನಿನ್ನನ್ನು ಎಲ್ಲೋ ನೋಡಿದ್ದೇನೆ. ಪರಿಚಿತ ಮುಖ’ ಎನ್ನುತ್ತ ಬಂದು ಕೈಕುಲುಕಿದಳು. ಎರಡನೆಯದಕ್ಕೆ ನಿಲ್ಲದೆ ಮನೆಗೆ ಹೊರಟಿದ್ದಳು. ಯಾಕೆ ಎಂದು ಕೇಳಿದೆ. ಇಲ್ಲ ಮನೆ ದೂರದಲ್ಲಿದೆ, ಮಟಾಟುದಲ್ಲಿ ಬಂದೆ, ಮತ್ತೆ ಮಟಾಟುದಲ್ಲೇ ಹೋಗಬೇಕು. ಒಬ್ಬಳೆ ಬಂದಿದ್ದೇನೆ, ಕತ್ತಲಾಯಿತಲ್ಲ ಎಂದಳು. ಎರಡನೆಯದು ನಿಮಗೆ ಇಷ್ಟವಾಗಬಹುದು. ರಾಜಕಪೂರ್ ಅವರ ಸಂಗಮ್ ಅನ್ನು ಇಸ್ರೇಲಿನ ಜನ ಎಷ್ಟು ಪ್ರೀತಿಸಿದ್ದರು ಎಂಬುದನ್ನು ನೋಡಬಹುದು ಇರಿ ಎಂದೆ. ಓಹೋ ಹೌದಾ! ಛೇ. ನೋಡಬೇಕಿತ್ತಲ್ಲಾ, ನಿಮ್ಮ ಮನೆ ಎಲ್ಲಿ ಎಂದು ನನ್ನನ್ನು ಕೇಳಿದಳು. ನಾನು ಊಬರ್ ನಲ್ಲಿ ಹೋಗುತ್ತೇನೆ ಎಂದು ತಿಳಿದ ಮೇಲೆ ನಾನು ಮನೆಗೆ ಹೋಗುವ ದಾರಿಯಲ್ಲಿ ಮಟಾಟು ಸಿಗುವ ಜಾಗವೊಂದಿದೆ, ತನ್ನನ್ನು ಅಲ್ಲಿ ಡ್ರಾಪ್ ಮಾಡಲು ಸಾಧ್ಯವೆ ಎಂದು ಆಕೆ ಕೇಳಿದಳು. ನಾನು ನಿನಗೆ ಅಪರಿಚಿತೆ, ಹೀಗೆ ಕೇಳುತ್ತಿದ್ದೇನೆ ಎಂದು ಬೇಸರ ಮಾಡಿಕೊಳ್ಳಬೇಡ ಎಂದೂ ಸೇರಿಸಿದಳು. ಅಯ್ಯೋ ಅದಕ್ಕೇನಂತೆ ಖಂಡಿತ ಡ್ರಾಪ್ ಮಾಡುತ್ತೇನೆ, ನೀವು ನಿಶ್ಚಿಂತೆಯಿಂದ ಸಿನೆಮಾ ನೋಡಿ ಎಂದೆ. ಅವಳ ಮುಖ ಅರಳಿತ್ತು. ಇಂತಹ ಕಾರ್ಯಕ್ರಮಗಳಿಗೆ ತಾನು ಒಬ್ಬೊಬ್ಬಳೇ ಹೋಗುತ್ತೇನೆ. ಜೊತೆಗೆ ಬರಲು ಆಸಕ್ತಿ ಇರುವವರು ಇಲ್ಲ. ಇಲ್ಲಿ ಭಾರತೀಯರ ಹಲವಾರು ಸಮುದಾಯಗಳಿವೆ, ಅವರವರ ಸಂಘ ಸಂಸ್ಥೆಗಳಿವೆ. ಅಲ್ಲಿಗೆಲ್ಲ ಹೋಗುವುದಿಲ್ಲ ಅಂತಲ್ಲ, ಆದರೆ ಅಲ್ಲೆಲ್ಲ ಉಸಿರು ಕಟ್ಟುತ್ತಿರುತ್ತದೆ. I feel like... I am shrinking into something. ಇಲ್ಲಿ ಇಸ್ರೇಲ್, ಈಜಿಪ್ಟ್, ಸೋಮಾಲಿಯ ಮತ್ತು ಇನ್ಯಾವ ಬದಿಯವರು ಇದ್ದಾರೋ ಗೊತ್ತಿಲ್ಲ, ಇವರೆಲ್ಲರೊಂದಿಗೆ ನೋಡುವುದು ಖುಷಿ ಕೊಡುತ್ತದೆ. ಇವತ್ತು ನೀನು ಸಿಕ್ಕಿದ್ದು ಒಳ್ಳೆಯದಾಯಿತು, Thank you dear ಎಂದಳು. ನನ್ನ ಮನಸ್ಸಿನಲ್ಲಿರುವುದನ್ನೇ ನೀವು ಹೇಳುತ್ತಿದ್ದೀರಿ ಎಂದು ನಾನೆಂದೆ. ಅವಳೂ ಇಲ್ಲಿಯೇ ಹುಟ್ಟಿ ಬೆಳೆದವಳು. ವ್ಯೋಮಕೇಶ ಭಕ್ಷಿಯ ಅಜ್ಜನ ಹಾಗೆ ಅವಳ ಅಜ್ಜನೋ ಮತ್ತಜ್ಜನೋ ದುಡ್ಡು ಮಾಡಬಹುದು ಎಂದು ಇಲ್ಲಿಗೆ ಬಂದಿರಬೇಕು.
Deasparado Square ನಲ್ಲಿ ಅಪ್ಪ ಕನಸಿನಲ್ಲಿ ಬಂದು ಹೇಳಿದ ಎಂದು ಮಗನೊಬ್ಬ ಮುಚ್ಚಿ ಹೋಗಿದ್ದ ಸಿನೆಮಾ ಮಂದಿರವೊಂದನ್ನು ಮರಳಿ ಆರಂಭಿಸುತ್ತಾನೆ. ಅದು ಅವನ ಅಪ್ಪ ನಡೆಸುತ್ತಿದ್ದ ಸಿನೆಮಾ ಮಂದಿರವಾಗಿತ್ತು. ಮರಳಿ ಶುರು ಮಾಡಿದ ದಿನ ಪ್ರದರ್ಶನಗೊಂಡ ಸಿನೆಮಾ ರಾಜ್ ಕಪೂರ್ ಅವರ ಸಂಗಮ್. ಊರಿನ ಹಳೆಯ ತಲೆಮಾರಿಗೆಲ್ಲ ಹುಚ್ಚು ಹಿಡಿಸಿದ ಅದೇ ಸಿನೆಮಾವನ್ನೇ ಆ ದಿನ ತೋರಿಸಬೇಕೆಂದುಕೊಳ್ಳುವ ಮಗನಿಗೆ ತನ್ನ ತಾಯಿ, ತನ್ನ ಅಪ್ಪ ಮತ್ತು ಚಿಕ್ಕಪ್ಪನಿಗೆ ಸಂಬಂಧಿಸಿದ ಕತೆಯೊಂದು ಕೂಡ ಗೊತ್ತಾಗುತ್ತದೆ. ಸಂಗಮ್ ಸಿನೆಮಾದ ಹಾಡುಗಳು ತೆರೆಯ ಮೇಲೆ ಬಂದಾಗ ನನ್ನ ಪಕ್ಕದಲ್ಲಿ ಕೂತ ಮುದುಕಿಯೂ ’ಬೋಲ್ ರಾಧಾ ಬೋಲ್ ಸಂಗಮ್ ಹೋಗಾ ಕೀ ನಹೀ...’ ಎನ್ನುತ್ತ ಗುನುಗತೊಡಗಿದ್ದಳು. ಸಿನೆಮಾ ಮುಗಿದ ನಂತರ ಆಕೆ ನನ್ನನ್ನು ಬಿಗಿಯಾಗಿ ತಬ್ಬಿಕೊಂಡಳು. ನನ್ನೊಳಗೆ ಜಗತ್ತು ಚಲಿಸಿದ ಭಾವ.
ಇಬ್ಬರೂ ಎದ್ದು ಹೊರಟಾಗ ವ್ಯೋಮಕೇಶ ಭಕ್ಷಿ ಮತ್ತೆ ತಗುಲಿಕೊಂಡ. ಹೇಗಿತ್ತು ಎಂದು ಕೇಳಿದರೆ ’Big Bum' ಎಂದ. ಅವನು ಮೂರೂ ದಿನದ ಎಲ್ಲಾ ಸಿನೆಮಾಗಳನ್ನೂ ನೋಡುವವನಿದ್ದ ಮತ್ತು ’All bums you know' ಎನ್ನುತ್ತ ಹೊರಬೀಳುವವನಿದ್ದ. ನಂಗಂತೂ ಇಷ್ಟವಾಯಿತಪ್ಪ, ಎಂತೆಂತಹ ಜನ ಇರ್ತಾರೆ ಅಲ್ವಾ! ಅವನಿಗೆ ಹ್ಯಾಗೆ ಇಷ್ಟ ಆಗಲಿಲ್ಲ ಎಂದು ಬೈದುಕೊಳ್ಳುತ್ತ ಮುದುಕಿ ನನ್ನೊಂದಿಗೆ ಹೆಜ್ಜೆ ಹಾಕಿದಳು.
ಇವತ್ತಿಗೆ ಮೊದಲು ಅವಳೆಲ್ಲಿದ್ದಳೋ... ಆ ವಿಮಾ ಕಂಪೆನಿಯ ಅಕೌಂಟಂಟ್ ಎಲ್ಲಿದ್ದನೋ... ಇನ್ನು ಭೇಟಿಯಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಹೃದಯ ಕಲಕುವಂತಹ ಯಾವುದೂ ನಮ್ಮ ನಡುವೆ ಆಗಲಿಲ್ಲ. ಅತಿ ಸಾಮಾನ್ಯವೆನಿಸುವಂತಹ ಒಂದು ಭೇಟಿ. ಆದರೆ ನಾವು ಮೂವರೂ ಮೂವರಿಗೂ ಪರಿಚಿತವಾದ ಲೋಕವೊಂದರ ವಿಭಿನ್ನ ತಂತುಗಳೇನೋ ಎಂದು ಅನಿಸುತ್ತಿದೆ. I felt as if we were co-travelers of some unknown destination.
ಅಮ್ಮ, ಸ್ವಲ್ಪ ನಂಗೆ ಅರ್ಥವಾಗುವ ಹಾಗೆ ಬರಿ ಎಂದೆಯಾ? ಎಂದಾದರೂ ನಿನಗೆ ಅರ್ಥವಾದೀತು ಎಂದು ಬರೆದಿದ್ದೇನೆ.
16/11/2018
ಇಂತಿ,
ನಿನ್ನ ಅಮ್ಮ