ಅವರು ಎಷ್ಟು
ನಿರುದ್ವಿಗ್ನರೆನಿಸುತ್ತಿದ್ದರೋ ಅಷ್ಟೇ ವಿಲಕ್ಷಣವೆನಿಸುತ್ತಿದ್ದರು. ಅವರ ಬಗ್ಗೆ ಹೇಳಲು ಹೊರಟರೆ..... ಕೊಲಾಬಾದ ಅವರ ಮನೆ ಕಣ್ಣ ಮುಂದೆ ಬರುತ್ತದೆ. ಮರದಂಕಣದ
ಮನೆ. ಮನೆಗೊಂದು ವರಾಂಡ, ಆ ವೆರಾಂಡದ ಮೇಲೆ ಹರಡಿರುತ್ತಿದ್ದ ಬೋಗನ್ ವಿಲ್ಲಾದ ನೆರಳು ಮತ್ತು...ಎದುರಿಗೆ ಒಂದು
ಚಿಕ್ಕ ಕರವಸ್ತ್ರದಳತೆಯ ಗಾರ್ಡನ್..... ಆ ಗಾರ್ಡನ್ನಿನಲ್ಲೊಂದು ಯಾರೂ ಉಪಯೋಗಿಸದಿದ್ದ ಖಾಲಿ ಉಯ್ಯಾಲೆ,..
ಕೊಲಾಬದಲ್ಲಿ ಅವರಿದ್ದ ಮನೆಯ
ಏರಿಯಾವನ್ನು ಪ್ರತಿ ವಾರಾಂತ್ಯದ ಮಧ್ಯಾಹ್ನಗಳಲ್ಲಿ ನೋಡಬೇಕು ನೀವು. ಕರ್ಫ್ಯೂ ವಿಧಿಸಿದ್ದಾರೇನೋ
ಅನ್ನುವಷ್ಟು ನೀರವ. ಮಿಸ್ಟರ್ ಪಿಂಟೋ ದಂಪತಿಗಳಿಗೆ ಎಷ್ಟು ನೆನಪಿದೆಯೋ ಅಷ್ಟು ವರುಷಗಳ ಹಿಂದಿನಿಂದಲೂ
ಅದು ಹೀಗೆಯೆ. ಲಾಗಾಯ್ತಿನಿಂದಲೂ ಹೀಗೆಯೇ. ಅಂತಿಪ್ಪ ರಜಾದಿನಗಳಲ್ಲಿ ಪಿಂಟೋ ದಂಪತಿಗಳು ಮಧ್ಯಾಹ್ನ
ಎರಡರಿಂದ ನಾಲ್ಕರವರೆಗೆ ಜಗತ್ತಿನ ಮಟ್ಟಿಗೆ ಅದೃಶ್ಯರಾಗುತ್ತಿದ್ದರು. ಅದಾದ ನಂತರ ಒಂದಿಷ್ಟು ವಿಧ್ಯಾರ್ಥಿಗಳು
ಒಬ್ಬೊಬ್ಬರಾಗೇ ಮನೆಯ ಮೆಟ್ಟಿಲೇರಲು ಶುರು ಮಾಡುತ್ತಿದ್ದರು. ಅವರೆಲ್ಲ ಪಿಂಟೋರವರ ಸಾರ್ವಜನಿಕ
ಭಾಷಣ ಕಲೆಯ ಕ್ಲಾಸುಗಳ ವಿದ್ಯಾರ್ಥಿಗಳು. ನಾಲ್ಕು ಜನರ ಮುಂದೆ ನಿಂತು ಮಾತಾಡುವಾಗ ತಾವು ಹೇಗೆ ನಿಲ್ಲಬೇಕು,
ತಮ್ಮ ಹಾವಭಾವ ಹೇಗಿರಬೇಕು, ಮುಖಚರ್ಯೆ ಹೇಗಿರಬೇಕು ಎಂಬುದನ್ನೆಲ್ಲ ಕರಗತ ಮಾಡಿಕೊಳ್ಳಲು
ಬರುತ್ತಿದ್ದರು. ಅವರಿಗೆಲ್ಲ ಜ್ಯೂಲಿಯಸ್ ಸೀಜರ್‌ನ
ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮಾತಾಡಿದ ಬ್ರೂಟಸ್‌ನೆ ರೋಲ್ ಮಾಡೆಲ್. ಅವನ ಆತ್ಮಬಲವನ್ನು ತಾವು ಅಂತಸ್ಥಗೊಳಿಸಿಕೊಳ್ಳುವ ದಿನವನ್ನ ಎದುರು ನೋಡುತ್ತ......ಮೆಟ್ಟಿಲೇರುತ್ತಿದ್ದರು.
ಇಡೀ ಮುಂಬೈಯಲ್ಲಿ ಸಾರ್ವಜನಿಕ ಭಾಷಣ
ಕಲೆಯ ಮಟ್ಟಿಗೆ ಹೇಳೋದಾದರೆ ಅದರ ಆಳ-ಅಗಲಗಳನ್ನು ತಿಳಿದವರು ಮಿಸ್ಟರ್ ಪಿಂಟೋ ಒಬ್ಬರೇ ಆಗಿದ್ದರು. ಪೂರ್ಣ ಹೆಸರು ಮಿಸ್ಟರ್ ಡೇನಿಯಲ್ ಪಿಂಟೋ. ಬಿಸಿಲುಗಂದು
ಬಣ್ಣದ ಮುಖ, ಯಾವತ್ತೂ ಹೇಗ್ ಹೇಗೋ ಇದ್ದವರಲ್ಲ. ಗಡ್ಡ-ಮೀಸೆ ಶೇವ್ ಮಾಡಿಕೊಂಡು ಠಾಕುಠೀಕಾಗಿ ಇರುತ್ತಿದ್ದರು.
ಯಾವಾಗಲೂ ಅವರು ಧರಿಸುತ್ತಿದ್ದುದು ಇಂಡಿಗೋ
ನೀಲಿ, ಬೂದಾ ಇಲ್ಲವೆ ಕಡು ನೀಲಿ ಬಣ್ಣದ ಸೂಟ್. ಕೆಂಪು ಸಸ್ಪೆಂಡರ್ ಬೆಲ್ಟನ್ನು ಸಿಕ್ಕಿಸಿಕೊಂಡ
ಪ್ಯಾಂಟು, ಅದರೊಳಗೆ ಟಕ್ ಮಾಡಿದ ಬಿಳಿ ಅಂಗಿ ಮತ್ತು ಮಾಮೂಲು ಆಕ್ಷಫರ್ಡ್ ಟೈ -ಇವಿಷ್ಟಿಲ್ಲದೇ ಪಿಂಟೋರವರನ್ನು
ಊಹಿಸಿಕೊಳ್ಳುವುದ ಅಸಾಧ್ಯವಾಗಿತ್ತು. ಕೆಲವೊಮ್ಮೆ ಮಾಮೂಲು ಟೈ ಬದಲಿಗೆ ಬೋ-ಟೈ ಇರುತ್ತಿತ್ತು.
ಆವಾಗೆಲ್ಲ ಅವರು ಖುಷಿ ಖುಷಿ ಅನಿಸುತ್ತಿದ್ದರು. ಇವೆಲ್ಲದರ ಜೊತೆಗೆ ಮಿರಿ ಮಿರಿ ಮಿಂಚುವ ಹಾಗೆ
ಚೆರ್ರಿ ಪಾಲಿಶ್ ಹಚ್ಚಿ ತಿಕ್ಕಿ-ತೀಡಿದ ಶೂಗಳು ಇರದಿದ್ದರೆ ವರ್ಣನೆ ಪೂರ್ಣವೆನಿಸುವುದಿಲ್ಲ.
ಅವರ ಮಡದಿ ಶ್ರೀಮತಿ ಮಾರ್ಗರೆಟ್ ಪಿಂಟೋ.
ಅವರ ಗಂಡನಿಗಿಂತಲೂ ತುಸು ಎತ್ತರದ ಆಳ್ತನ. ಭುಜಮಟ್ಟ ಇದ್ದ ಕೂದಲನ್ನ ತುಸು ಹಿಂದಕ್ಕೆ ಏರಿಸಿ ಪಫ್
ಮಾಡಿಕೊಳ್ಳುತ್ತಿದ್ದರು. ವಯೋಮಾನಕ್ಕೆ ತಕ್ಕಂತೆ ಬಿಳಿಯಾದ ಕೂದಲಿಗೆ ಸಮೀಪದ ಪಾರ್ಲರ್ ಒಂದರಲ್ಲಿ
ಆವಾಗಾವಾಗ ಬಣ್ಣ ಹಾಕಿಸಿಕೊಳ್ಳುತ್ತಿದ್ದರು. ಈಜಿಪ್ಶಿಯನ್ ಶೈಲಿಯ ಉದ್ದನೆಯ ಸ್ಕರ್ಟ ಮತ್ತು ಅದರ ಮೇಲೆ ಸಾಮಾನ್ಯವಾಗಿ ಕಂದು ಅಥವಾ
ಅದಕ್ಕೆ ಸಮೀಪದ ರಂಗಿನ ಹೆಣಿಕೆಯ ಅಂಗಿಗಳನ್ನ ತೊಡುತ್ತಿದ್ದರು. ವಾರಾಂತ್ಯಗಳಲ್ಲಿ ಹೆಚ್ಚು
ಆರಾಮವೆನಿಸುವ ಮನೆಯುಡುಪುಗಳನ್ನ ಇಷ್ಟ ಪಡುತ್ತಿದ್ದರು, ಸ್ಲ್ಯಾಕ್ಸ ಮತ್ತು ಮೇಲೊಂದು ಅಳ್ಳಕವಾದ
ಕಸೂತಿ ಅಂಗಿ, ಅದಿಲ್ಲದೇ ಇದ್ದರೆ ನೆಲ ಗುಡಿಸಿಕೊಂಡು ಹೋಗುವಷ್ಟು ಉದ್ದವಿದ್ದ ಬಾಟಿಕ್
ಪ್ರಿಂಟಿನ ಕಫ್ತಾನ್ [ಅಳ್ಳಕವಾದ ನಿಲುವಂಗಿ] ತೊಟ್ಟಿರುತ್ತಿದ್ದರು.
ಪಿಂಟೋರವರು ಸಣಕಲು ಆಸಾಮಿ, ಆದರೆ ಅವರ
ಪತ್ನಿ ಅವರ ಎರಡರಷ್ಟು ದಪ್ಪವಿದ್ದರು. ದಪ್ಪ ಇರೋದು ಅಥವಾ ತೆಳ್ಳಗಿರೋದು ಕೆಲವೊಮ್ಮೆ ಆನುವಂಶಿಕವಾಗಿರುತ್ತದೆ
ಬಿಡಿ. ಮನೆಯೊಳಗೆ ಪತ್ನಿಯ ತೂಕದ ಕುರಿತು ಪಿಂಟೋರವರು ರೇಗಿಸುತ್ತಲೇ ಇರುತ್ತಿದ್ದರು. ಆದರೆ
ವಿಧ್ಯಾರ್ಥಿಗಳೆದುರು ಎಚ್ಚರ ವಹಿಸುತ್ತಿದ್ದರು. ವೃತ್ತಿ ಮರ್ಯಾದೆಯನ್ನ ಕಾಪಾಡಿಕೊಳ್ಳಬೇಕಲ್ಲ
ಅದಕ್ಕೆ. ಕೊನೆಯ ಕಾಲಕ್ಕೆ ತಾನು ಗೋವಾಕ್ಕೆ ಮರಳುತ್ತೇನೆ ಎಂದವರೆಂದರೆ, ಅವರ ಪತ್ನಿ ಇಲ್ಲ
ಪುಣೆಗೆ ಹೋಗೋಣ ಎನ್ನುತ್ತಿದ್ದರು. “ಡಿಯರ್, ಈಗ ಎಲ್ಲರೂ ಪುಣೆಗೆ ಹೋಗಿರಲು ಇಷ್ಟಪಡುತ್ತಾರೆ,
ಗೊತ್ತಾ?” ಪಿಂಟೋರವರಿಗೆ ಅದು ಸರಿ
ಬರುತ್ತಿರಲಿಲ್ಲ. ’ಎಲ್ಲರೂ ಎಂದರೆ...ಯಾರೆಲ್ಲರೂ? ಏನು ಹಂಗಂದ್ರೆ?” ಆಗ ಅವರ ಪತ್ನಿ
ಕುಡಿಗಣ್ಣಲ್ಲಿಯೇ ಕೆಂಡ ಕಾರುತ್ತ ’ಡ್ಯಾನಿ, ಸಾಕು ಸಾಕು...ನಿಮಗೆ ಗೊತ್ತಿಲ್ವಾ’ ಎನ್ನುವಂತ ನೋಟ
ಬೀರಿದರೆ ಸಾಕು ಪಿಂಟೋ ಮುಂದುವರೆಸುತ್ತಿರಲಿಲ್ಲ. ’ಹೌದಮ್ಮ. ನೀನು ಹೇಳೋದು ಗೊತ್ತಾಯ್ತು.
ನಿವೃತ್ತಿಯ ನಂತರ ಎಲ್ಲಿರಬೇಕು, ಏನು-ಎತ್ತ ಎಂಬುದರ ಬಗ್ಗೆ ಈಗಿನಿಂದಲೇ ಗಂಭೀರವಾಗಿ ಯೋಚಿಸಿ
ಎಲ್ಲ ತಯಾರಿ ಮಾಡಬೇಕು.’ ಅನ್ನುತ್ತ, ಪತ್ನಿಯ ಮಾತಿಗೆ ಸಮ್ಮತಿ ಸೂಚಿಸುತ್ತಿದ್ದರು.
ತರಗತಿಯಲ್ಲಿ ಪ್ರತಿ ಅಕ್ಷರ, ಪ್ರತಿ ಸ್ವರ, ಪ್ರತಿ ಮಾತ್ರೆಯನ್ನೂ ಕರಾರುವಕ್ಕಾಗಿ
ಉಚ್ಚರಿಸಬೇಕಿತ್ತು. ಆ ಮಟ್ಟಿಗೆ ಅವರು ಪ್ರೊಫೆಸರ್
ಹಿಗ್ಗಿನ್ಸ್ ರವರೇ. ಅವರ ಪತ್ನಿಯೂ ಅವರಷ್ಟೇ
ಕರಾರುವಕ್ಕಾಗಿ ಇಂಗ್ಲೀಷ್ ಮಾತಾಡುತ್ತಿದ್ದರು. ಪಿಂಟೋರವರ ಉಚ್ಚಾರ ನೂರಕ್ಕೆ ನೂರು ಪ್ರತಿಶತ
ಬ್ರಿಟಿಷ್, ಲಂಡನ್ ಟೈಮ್ಸಿನ ಇಂಗ್ಲೀಷ್ ಕೂಡ ಅವರ ಇಂಗ್ಲೀಷ್ ಮುಂದೆ ಏನೂ ಅಲ್ಲ. ಅವರ
ಪದೋಚ್ಚಾರಣೆಯ ಏರಿಳಿತ ಪಕ್ಕಾ ಬ್ರಿಟಿಷ್ ಅನಿಸುತ್ತಿತ್ತು. ಅವರ ಉಚ್ಚಾರಣೆಯ ಸ್ಪಷ್ಟತೆ ಮತ್ತು
ಅವರ ಶಿಕ್ಷಣದ ಬಗ್ಗೆ ಯಾರೂ ಬೊಟ್ಟು ಮಾಡುವಂತಿರಲಿಲ್ಲ. ಹಾಗೇನಾದರೂ ಸಂಶಯಿಸಿದವರು ನರಕಕ್ಕೆ
ಹೋಗಬೇಕಾದೀತು. ಅವರು ಹುಟ್ಟತಾನೇ ಎಲ್ಲ ಕಲಿತು ಬಂದಿದ್ದಾರೇನೋ ಅನ್ನುವಷ್ಟು ಸುಲಲಿತ ಭಾಷೆ
ಮತ್ತು ನಡೆನುಡಿ ಮತ್ತು ಹುಟ್ಟಾ ಸಂಭಾವಿತರು.
ಶ್ರೀಯುತ ಪಿಂಟೋ ದಂಪತಿಗಳು ತಮ್ಮ
ಬದುಕಿನ ಬಗ್ಗೆ ಮತ್ತು ಜಗದ ರೀತಿಯ ಬಗ್ಗೆ ಯಾವುದೇ ತಂಟೆ ತಕರಾರುಗಳಿಲ್ಲದೆ ತಮ್ಮಷ್ಟಕ್ಕೆ ತಾವು
ನೆಮ್ಮದಿಯಿಂದ ಇದ್ದಂತ ದಂಪತಿಗಳು. ತಾಜಾ ಮೋಸಂಬಿ ರಸ, ಕಾರ್ನ್ ಫ್ಲೇಕ್ಸ್, ಬೇಯಿಸಿದ ಮೊಟ್ಟೆ
ಮತ್ತು ನೀಲಗಿರಿ ಚಹಾವನ್ನೊಳಗೊಂಡ ಬೆಳಗಿನ ಉಪಹಾರ ಮರದ ಕೆತ್ತನೆಯಿರುವ ಪುಟ್ಟ ಮೇಜಿನ ಮೇಲೆ
ನಡೆಯುತ್ತಿತ್ತು. ಅವರ ಮನೆಯ ಇನ್ನೊಬ್ಬ ಸದಸ್ಯನಾದ ಟೆಡ್ಡಿ, ಮುದಿ ಲ್ಯಾಬ್ರಡಾರ್ ತನ್ನ ಪಾಲಿನ
ಟೋಸ್ಟಿನ ಸಲುವಾಗಿ ಅವರ ಪ್ರಾರ್ಥನೆಯೆಲ್ಲ ಮುಗಿಯುವವರೆಗೆ ಸಹನೆಯಿಂದ ಕಾಯುತ್ತ
ಕುಳಿತಿರುತ್ತಿತ್ತು, ಮಧ್ಯಾಹ್ನದ ಊಟ ಸರಿಯಾಗಿ ಒಂದು ಗಂಟೆಗೆ ಹಾಗೂ ರಾತ್ರಿಯ ಊಟ ಸರಿಯಾಗಿ ಎಂಟು
ಗಂಟೆಗೆ ಆಗಬೇಕು, ಕ್ರಿಸ್ಮಸ್ ವೇಳೆಗೆ ಶ್ರೀಯುತ ಪಿಂಟೋರವರಿಗೆ ಸ್ಕಾಚ್ ಮತ್ತು ಶ್ರೀಮತಿ
ಪಿಂಟೋಗೆ ಒಂದೆರಡು ಗುಟುಕು ಶೆರಿ ಆಗಲೇಬೇಕಿತ್ತು. ತಿಂಗಳಿಗೊಮ್ಮೆ ತೋಳಿಗೆ ತೋಳು ಸೇರಿಸಿ ಒಪೆರಾ
ನೋಡಲು ಹೋಗುತ್ತಿದ್ದರು. ಅಥವಾ ಯಾವುದಾದರೂ ಪಾಶ್ಚಿಮಾತ್ಯ ಸಂಗೀತದ ಕಛೇರಿ ಯಾದರೂ ಆದೀತು ಇಲ್ಲವೇ
ಜೆ.ಜೆ. ಕಲಾಮಂದಿರದಲ್ಲಿ ಯಾರದ್ದಾದರೂ ಚಿತ್ರಗಳ ಪ್ರದರ್ಶನವಿದ್ದರೂ ಆದೀತು.
ಅವರ ತರಗತಿಗಳು ವಾರಾಂತ್ಯದಲ್ಲಿ ಮಾತ್ರ ಇರುತ್ತಿದ್ದವು.
ಅದೂ ಎಲ್ಲರಿಗೂ ಮುಕ್ತ ಪ್ರವೇಶವಿರಲಿಲ್ಲ. ವಿದ್ಯಾರ್ಥಿಗಳನ್ನು
ಸಂದರ್ಶನದ ಮೂಲಕ ಆರಿಸಿ, ಯಾರಿಗೆ ನಿಜವಾಗಿಯೂ ವಿಶೇಷ ತರಗತಿಗಳ ಅಗತ್ಯವಿದೆಯೋ
ಅದನ್ನು ಕೂಲಂಕುಶವಾಗಿ ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಎಷ್ಟರಮಟ್ಟಿಗೆ
ಶ್ರದ್ಧೆ ಇದೆ ಮತ್ತು ಅವರೆಷ್ಟು ಪ್ರಾಮಾಣಿಕವಾಗಿ ಅದರಲ್ಲಿ ತೊಡಗಿಸಿಕೊಳ್ಳಬಲ್ಲರು, ಕಲಿಯಲೇಬೇಕೆಂಬ ತೀವ್ರ ಆಸಕ್ತಿ ಎಷ್ಟಿದೆ ಎಂಬುದನ್ನೆಲ್ಲ ಗಮನಿಸಿ ಆ ಆಧಾರದ ಮೇರೆಗೆ ಅವಕಾಶ
ನೀಡಲಾಗುತ್ತಿತ್ತು. ವಾರದ ದಿನಗಳಲ್ಲಿ ಪಿಂಟೋ ಇಂಡೋ-ಅಮೇರಿಕನ್
ಸೊಸೈಟಿಯಲ್ಲಿನ ವಿದ್ಯಾರ್ಥಿಗಳಿಗೆ ತರಬೇತು ನೀಡಲು ಹೋಗುತ್ತಿದ್ದರು. ಕೆಲವೊಮ್ಮೆ ಆ ತರಗತಿಗಳು
ಫೋರ್ಟ್ ಏರಿಯಾದಲ್ಲಿ [ದಕ್ಷಿಣ ಮುಂಬೈನ ಫೋರ್ಟ್ ಜಾರ್ಜ್] ಅಥವಾ ತಾಜ್ ಮಹಲ್ ಹೊಟೆಲ್ಲಿನವರು
ಬಿಟ್ಟುಕೊಟ್ಟಿದ್ದ ಕಾನ್‌ಫರೆನ್ಸ್ ಹಾಲಿನಲ್ಲಿ ನಡೆಯುತ್ತಿದ್ದವು. ಅವರ ಹೆಂಡತಿ ಒಂದಿಷ್ಟು
ಶಾಲೆಗಳಿಗೆ ಪಿಯಾನೋ ಕಲಿಸಲು ಹೋಗುತ್ತಿದ್ದರು.
ವಾರಾಂತ್ಯದ ತರಗತಿಗಳಿಗೆ ಪ್ರವೇಶ
ಪಡೆಯುವುದು ಸುಲಭವಿರಲಿಲ್ಲ. ಒಂದು ಬ್ಯಾಚಿಗೆ ಹತ್ತೆಂದರೆ ಹತ್ತೇ ವಿದ್ಯಾರ್ಥಿಗಳಿಗೆ
ಅವಕಾಶವಿರುತ್ತಿತ್ತು. ತರಗತಿಗಳು ಕೊಲಾಬಾದ ಅವರ
ಮನೆಯಲ್ಲಿ ನಡೆಯುತ್ತಿದ್ದವು. ಅವು ಸುಮ್ಮನೇ ಮನೆಯಲ್ಲಿ ಹೊತ್ತು ಹೋಗದೇ ಬಂದು ಕುಳಿತುಕೊಳ್ಳುವ
ಹವ್ಯಾಸಿ ತರಗತಿಗಳಾಗಿರಲಿಲ್ಲ. ಶ್ರೀಯುತ ಪಿಂಟೋ ಒಳ್ಳೇ ಶಿಸ್ತಿನ ಸಿಪಾಯಿ. ವಿದ್ಯಾರ್ಥಿಗಳನ್ನು
ಸರಿಯಾಗಿ ದುಡಿಸಿಕೊಳ್ಳುತ್ತಿದ್ದರು. ಏನು ಮಹಾ
ಯಕಶ್ಚಿತ್ ಒಂದು ಟ್ಯೂಶನ್ ಕ್ಲಾಸಿನ ಶಿಕ್ಷಕ, ನಾವು ಫೀಸ್ ಕೊಟ್ಟರೆ ತಾನೇ ಅವನ ತರಗತಿಗಳು
ನಡೆಯುವುದು ಎಂಬ ಉಡಾಳರಿಗೆ ಅಲ್ಲಿ ಜಾಗವಿರಲಿಲ್ಲ. ಅವರ ನೀತಿ ಸಂಹಿತೆಯಲ್ಲಿ ಅಲ್ಪಪ್ರಾಣ,
ಮಹಾಪ್ರಾಣಗಳಿಗೆ ಎಷ್ಟು ಪ್ರಾಮುಖ್ಯತೆ ಇತ್ತೋ ಅಷ್ಟೇ ಪ್ರಾಮುಖ್ಯತೆ ಶಿಸ್ತಿನ ನಡವಳಿಕೆಗೂ
ಇತ್ತು. ಇದಕ್ಕೆ ಸಂಬಂಧಿಸಿ ಒಂದು ಘಟನೆ ಇದೆ. ಒಮ್ಮೆ ಏನಾಯಿತೆಂದರೆ, ಒಬ್ಬ ಶ್ರೀಮಂತರ ಮನೆಯ
ಹುಡುಗ ಬಹುಶಃ ಗಾಂಜಾವನ್ನು ಚೆನ್ನಾಗೇ ಏರಿಸಿಕೊಂಡಿದ್ದ ಅಂತ ಕಾಣುತ್ತದೆ, ಅದರ ಅಮಲಿನಲ್ಲಿ
ಹುಚ್ಚುಚ್ಚಾಗಿ ಆಡತೊಡಗಿದ. ಮೇಷ್ಟ್ರನ್ನು ಅವಾಚ್ಯ ಶಬ್ಧಗಳಲ್ಲಿ ನಿಂದಿಸತೊಡಗಿದ. ನೀವೊಬ್ಬ
ದಗಾಕೋರರು, ಹಾಗೆ ಹೀಗೆ ಎಂದೆಲ್ಲ. ಮಿಸ್ಟರ್ ಪಿಂಟೋ ನಿಧಾನವಾಗಿ ಎದ್ದು ಬಂದು ನಗುತ್ತ ಅವನ ಕಿವಿ
ಹಿಡಿದೆಳೆದುಕೊಂಡು ಬಾಗಿಲವರೆಗೆ ಕರೆದೊಯ್ದು,“ ಒಳ್ಳೇದು ಕಣಪ್ಪ. ನೀನಿನ್ನು ದಯಮಾಡಿಸು. ನಿನ್ನ
ಫೀಸನ್ನು ಅಂಚೆಯ ಮೂಲಕ ಹಿಂದಿರುಗಿಸಲಾಗುವುದು” ಎಂದು ಹೇಳಿ ಸ್ವಸ್ಥಾನಕ್ಕೆ ಹಿಂದಿರುಗಿದರು. ಮುಖದಲ್ಲಿ
ನಗೆ ಮಾಸಿರಲಿಲ್ಲ. ಮರಳಿದವರು ಒಮ್ಮೆ ಕೈಕೊಡವಿ ಏನೂ ಆಗದವರಂತೆ ನಮ್ಮನ್ನೆಲ್ಲ ನೋಡುತ್ತ
ಕೇಳಿದ್ದರು “ಸರಿ, ಎಲ್ಲಿದ್ವಿ ನಾವು?”
ನಾನು ವಾರಕ್ಕೆ ಮೂರುದಿನಗಳ ಕೋರ್ಸಿಗೆ
ಪ್ರವೇಶ ಪಡೆದಿದ್ದೆ. ಅದು ಫೋರ್ಟ್ ಏರಿಯಾದಲ್ಲಿದ್ದ ಇಂಡೋ-ಅಮೆರಿಕನ್ ಸೊಸೈಟಿಯ ಹವಾನಿಯಂತ್ರಿತ ಕೊಠಡಿಯಲ್ಲಿ
ನಡೆಯುತ್ತಿತ್ತು. ಒಂದು ಅಂಡಾಕೃತಿಯ ಮೇಜಿನ ಸುತ್ತ ನಾವು ಸುಮಾರು ಮೂವತ್ತರಿಂದ ಮೂವತ್ತೈದು ಜನ, ಮಾತಾಡುವುದೇ
ದೊಡ್ಡ ಸವಾಲಾದ ಮಂದಿ ಕೂರುತ್ತಿದ್ದೆವು.
ಒಂದರ್ಥದಲ್ಲಿ ನಮ್ಮನ್ನು ವಾಕ್‌ಶಕ್ತಿಹೀನರೆಂದರೂ ಆದೀತು. ಹಾಗೆ ಸವಾಲಾದವರದ್ದು ಒಬ್ಬೊಬ್ಬರದು
ಒಂದೊಂದು ಕತೆ. ಆಗಷ್ಟೇ ಪ್ರತಿಷ್ಠಿತ ಕಾಲೇಜುಗಳಲ್ಲಿ ಮ್ಯಾನೇಜ್ ಮೆಂಟ್ ಪದವಿ ಮುಗಿಸಿ ಹೊರಬಿದ್ದವರು,
ಹೊಸದಾಗಿ ನೌಕರಿ ಸೇರಿದವರು ತಮ್ಮ ತಮ್ಮ ವಾಕ್
ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸೇರಿದ್ದರು. ಒಂದಿಷ್ಟು ಮಂದಿ ಗೃಹಿಣಿಯರೂ ಇದ್ದರು.
ಗಂಡಂದಿರೆಲ್ಲ ಸ್ವಂತ ವ್ಯಾಪಾರ ವಹಿವಾಟು ಉಳ್ಳವರೆಂದು ಕಾಣುತ್ತದೆ, ಅವರ ಕಛೇರಿಗಳಿಗೆ ಬರುವ
ಗ್ರಾಹಕರ ಜೊತೆ ಇಂಗ್ಲೀಷಿನಲ್ಲಿ ನಿಭಾಯಿಸಬೇಕಾದ್ದರಿಂದ ಅವರೆಲ್ಲ ಮಾತಿನ ಹಿಕ್ಮತ್ತನ್ನು ಕಲಿಯಲು ಸೇರಿದ್ದರು. ನಲವತ್ತರ
ಆಸುಪಾಸಿನಲ್ಲಿದ್ದ ಒಬ್ಬ ಮಧ್ಯವಯಸ್ಕ, ಒಳ್ಳೇ ಕಾಸು ಕೂಡಿಟ್ಟವರೆಂದು ತೋರುತ್ತದೆ, ಇನ್ನಷ್ಟು
ಸೊಗಸುಗಾರಿಕೆಯನ್ನು ಸಂಪಾದಿಸಲು ಸೇರಿದ್ದರು. ನಾನೂ ಅಲ್ಲಿದ್ದೆ. ಹದಿಮೂರು-ಹದಿನಾಲ್ಕರ ವಯಸ್ಸಿನ
ತರುಣ...ಒಬ್ಬ ಗಂಡಸಾಗಬೇಕೆಂದು ಬಯಸುತ್ತ,.. ಅದನ್ನೇ ಎದುರು ನೋಡುತ್ತ,.. ಅದಕ್ಕಾಗಿ ತವಕದಿಂದ
ಪ್ರಾರ್ಥಿಸುತ್ತ...
ಅಲ್ಲಿ ಸೇರುವ ವೇಳೆಗಾಗಲೇ ನನಗೆ ನನ್ನ
ಹೆಣ್ಣಿಗತನದ ಬಗ್ಗೆ ಅರಿವುಂಟಾಗಿತ್ತು. ಜೊತೆಗೆ ಅಗತ್ಯಕ್ಕಿಂತಲೂ ಜಾಸ್ತಿಯಾಗಿ
ಹೇರಿಕೊಂಡಿದ್ದ ಬೊಜ್ಜು ಈಗಾಗಲೇ ಇದ್ದ
ಮುಜುಗುರವನ್ನ ಇಮ್ಮಡಿಗೊಳಿಸಿತ್ತು. ಆ ವಾಸ್ತವವನ್ನು ಮರೆಯಲೆತ್ನಿಸಿದರೂ ಪ್ರತಿದಿನ ನೆನಪು
ಮಾಡಿಕೊಡಲು ನನ್ನ ಸ್ನೇಹಿತರು, ಸಹಪಾಠಿಗಳು ಸದಾ ಸನ್ನದ್ಧರಾಗಿರುತ್ತಿದ್ದರು. ಎಲ್ಲರೂ ನನ್ನನ್ನು
’ಫ್ಯಾಟೀ’ ಎಂದೇ ಕರೆಯುತ್ತಿದ್ದರು. ಅದಿಲ್ಲದಿದ್ದರೆ ’ಪ್ಯಾನ್ಸಿ’. ಒಮ್ಮೊಮ್ಮೆ ಎರಡೂ
ಬಳಕೆಯಾಗುತ್ತಿತ್ತು. ’ಗೇ’ [ಸಲಿಂಗಿ] ಅನ್ನುವ ಪದವಿನ್ನೂ ಎಲ್ಲೆಡೆ ಬಳಕೆಗೆ ಬಂದಿರಲಿಲ್ಲ.
ಬೀದಿಯಲ್ಲಿ
ಹುಡುಗರ ಜತೆ ಕ್ರಿಕೆಟ್ಟಾಟ ಆಡುವದಕ್ಕಿಂತ ಹುಡುಗಿಯರೊಂದಿಗೆ ಕುಂಟಬಿಲ್ಲೆ ಆಡುವುದನ್ನ ಹೆಚ್ಚು
ಇಷ್ಪಡುತ್ತಿದ್ದೆ. ಶಾಲೆಯ ಫುಟ್ಬಾಲ್ ತಂಡಗಳಿಗಂತೂ ಸೇರುವ ಪ್ರಶ್ನೆಯೆ ಇರಲಿಲ್ಲ. ಆದರೇನಂತೆ?
ನನ್ನ ಅಮ್ಮನಿಗೆ ನನ್ನಲ್ಲಿ ಯಾವ ದೋಷವೂ ಕಂಡಿರಲಿಲ್ಲ, ಅವಳ ಪ್ರೀತಿ ಕಿಂಚಿತ್ತೂ
ಕಮ್ಮಿಯಾಗಲಿಲ್ಲ. ಅಪ್ಪನಿಗೂ ಅವೆಲ್ಲ ಸಮಸ್ಯೆಯಾಗಲಿಲ್ಲ. ಅಪ್ಪ ಅಂದರೆ ಸುರಲೋಕದಿಂದಿಳಿದ ದೇವತೆಯೇ
ಎನಿಸುವಷ್ಟು ಒಳ್ಳೆಯವನು. ಅಪ್ಪ- ಅಮ್ಮ ಇಬ್ಬರೂ ಮದುವೆಯಾದಾಗ ಹೆಚ್ಚುಕಮ್ಮಿ ಮದುವೆಯ ವಯಸ್ಸು
ಮೀರಿತ್ತು. ನಾನು ಹುಟ್ಟಿದ್ದೂ ಅಪ್ಪನಿಗೆ ನಲವತ್ತಾದ ನಂತರವೇ. ಅವನು ನನಗೆ ಅಪ್ಪ ಮತ್ತು ಅಜ್ಜ ಎರಡೂ ಆಗಿದ್ದ, ಟು ಇನ್ ಒನ್.
ನಾನ್ಯಾಕೆ
ಹೀಗಾದೆ ಅನ್ನುವುದಕ್ಕೆ ಸುಲಭವಾಗಿ ಒದಗಿ ಬರುವ ಕಾರಣವೆಂದರೆ ಮನೆಯಲ್ಲಿನ ವಿಪರೀತ ಮುದ್ದು. ನನ್ನ
ಅಪ್ಪ-ಅಮ್ಮ ನನ್ನನ್ನು ಅಗತ್ಯಕ್ಕಿಂತ ಜಾಸ್ತಿಯಾಗಿ ಕಾಪಿಡುತ್ತಿದ್ದರು. ಅತಿ ಅನಿಸುವಷ್ಟು
ಕಾಳಜಿ. ಶಾಲೆಯಲ್ಲಿ ಯಾರಾದರೂ ನನ್ನನ್ನು ಚುಡಾಯಿಸಿದರೆ ಅಥವಾ ಗೇಲಿ ಮಾಡಿದರೆ ನನ್ನಮ್ಮ
ನನ್ನನ್ನು ಬರಸೆಳೆದು ಮುತ್ತಿಕ್ಕಿ ಮುಜುಗುರ ಮಾಡುತ್ತಿದ್ದಳು. ಗೂಡೊಳಗೇ ಬಚ್ಚಿಟ್ಟು ಕಾವ ಒಬ್ಬನೇ
ಮಗ ಮುದ್ದು ನಾನಾಗಿದ್ದೆ, ಅಪ್ಪ-ಅಮ್ಮ ಇಬ್ಬರೂ ಒಮ್ಮತಕ್ಕೆ ಬಂದು ನನ್ನನ್ನು ಪಂಚಗಣಿಯ
ಬೋರ್ಡಿಂಗ್ ಶಾಲೆಗೆ ಸೇರಿಸುವ ನಿರ್ಣಯ ತೆಗೆದುಕೊಂಡರು. ಅಲ್ಲಿಯ ವಾತಾವರಣಕ್ಕೆ ನಾನು
ಗಟ್ಟಿಯಾದರೂ ಆಗಬಹುದೆಂಬ ಆಸೆಯಿತ್ತೇನೋ. ಅದೊಂದು ಮಹಾದುರಂತವಾಯಿತು. ಆ ಶಾಲೆಯ ಬಹುತೇಕ ಮಕ್ಕಳ
ಪಾಲಕರಲ್ಲಿ ಒಂದೋ ಅಪ್ಪ ತೀರಿಕೊಂಡಿರುತ್ತಿದ್ದರು, ಇಲ್ಲ ಅಮ್ಮ. ಅಥವಾ ಇಬ್ಬರ ವಿಚ್ಛೇದನವಾಗಿದ್ದಿರುತ್ತಿತ್ತು.
ವಿಚ್ಛೇದನಕ್ಕೂ ಮುನ್ನ ಅಪ್ಪ ಅಮ್ಮನ ಮಧ್ಯೆ ನಡೆದ ಕಹಿ ಪ್ರಸಂಗಗಳನ್ನೂ, ಹೊಗೆಯಾಡುವ
ವೈಷಮ್ಯವನ್ನೂ ಈ ಮಕ್ಕಳು ನೋಡಿದ್ದವು. ನನಗೆ ಅಂತಹ ಅನುಭವವೇನೂ ಆಗಿರಲಿಲ್ಲ. ನನಗೇನಾದರೂ
ಸಮಸ್ಯೆಗಳಿದ್ದವು ಎಂದರೆ ಅವು ನನ್ನ ವ್ಯಕ್ತಿತ್ವದ ನ್ಯೂನತೆಗಳನ್ನು ಕುರಿತೇ ಆಗಿದ್ದವು.
ಪಂಚಗಣಿಯ
ಶಾಲೆಯನ್ನು ಸೇರಿದ ಕೆಲವು ದಿನಗಳಲ್ಲಿಯೇ ನನಗೆ ಸಾಯುವಷ್ಟು ಬೇಸರ ಬಂದಿತ್ತು. ಶೌಚಾಲಯದಲ್ಲಿ
ನನ್ನನ್ನಿಟ್ಟು ಸತತ ಎರಡು ದಿನ ರಯಾಗಿಂಗ್ (ragging) ಮಾಡಿದ್ದರು. ನನ್ನ ಪರಿಸ್ಥಿತಿ
ಶೋಚನೀಯವಾಗಿತ್ತು. ಊಟ ತಿಂಡಿ ಮಾಡಲಾಗುತ್ತಿರಲಿಲ್ಲ, ನೀರು ಕುಡಿಯಲೂ ಆಗುತ್ತಿರಲಿಲ್ಲ. ಟೀನಾ ಮತ್ತು ಚಿಂಕೀ ಕಪಾಡಿಯಾ ಕೂಡ ಅದೇ ಶಾಲೆಯಲ್ಲಿ
ಓದುತ್ತಿದ್ದರು. ನನ್ನ ಸಂಕಷ್ಟವನ್ನು ನೋಡಲಾಗದೇ ಟೀನಾ ಸಲಹೆ ಇತ್ತಿದ್ದಳು, ’ನಿನಗೆ ಖುಷಿ
ಇಲ್ಲದಿದ್ದ ಮೇಲೆ ಇಲ್ಯಾಕೆ ಇದ್ದೀ? ಇದು ನಿನ್ನ ಬದುಕು, ನೀನು ನಡೆಸಬೇಕು. ಓಡೋಗು ಇಲ್ಲಿಂದ’
ಎಂದಿದ್ದಳು.
ನಾನು ಅದನ್ನೇ
ಮಾಡಿದ್ದೆ. ತತ್ ಕ್ಷಣ ಮುಂಬೈಗೆ ಹೋಗುವ ಯಾವುದಾದರೂ ಬಸ್ಸನ್ನು ಹಿಡಿಯಬೇಕಿತ್ತು. ನನ್ನ ಹತ್ತಿರ
ಟಿಕೆಟ್ಟಿಗಾಗುವಷ್ಟು ಹಣವಿತ್ತು. ಶಾಲೆಯ ಕ್ಯಾಂಪಸ್ಸಿನಿಂದ ಬಸ್ ನಿಲ್ದಾಣದವರೆಗೆ ಇದ್ದ ಕಾಡಿನ ಹಾದಿಯಲ್ಲಿ ಕತ್ತಲೆಯನ್ನೂ ಲೆಕ್ಕಿಸದೇ
ಓಡಿದ್ದೆ. ಏರುತಗ್ಗುಗಳ ಆ ಹಾದಿಯಲ್ಲಿ ಹೆದರಿಕೆಯಾಗಿತ್ತು. ಆದರೂ ಓಡಿದ್ದೆ, ದಾರಿ ಮಧ್ಯದಲ್ಲಿ
ಇಳಿಜಾರೊಂದರಲ್ಲಿ ಜಾರಿ ಬಿದ್ದೆ. ಮೈಯ್ಯೆಲ್ಲ ತರಚು ಗಾಯ. ಅಲ್ಲಿಯವರೇ ಆದ ಒಂದಿಷ್ಟು ಜನ
ನನ್ನನ್ನು ನೋಡಿ ಮರಳಿ ಶಾಲೆಗೆ ಕರೆತಂದರು. ಆಮೇಲೆ ತೀವ್ರ ಜ್ವರ ಬಂದು ಶಾಲೆಯ ಆಸ್ಪತ್ರೆಯಲ್ಲಿ
ದಾಖಲಾಗಿದ್ದೆ.
ಅದಾದ ಕೆಲವು
ಗಂಟೆಗಳಿಗೇ ಅಪ್ಪ ಅಲ್ಲಿದ್ದರು. ಅಮ್ಮ ಬರಲಿಲ್ಲ. ಅವನನ್ನು ನೋಡುತ್ತಿದ್ದಂತೆಯೇ ನಾನು ಅಳಲು
ಆರಂಭಿಸಿದ್ದೆ, ’ನನಗೆ ಇಲ್ಲಿರಲಾಗುವುದಿಲ್ಲ, ನಿಮ್ಮನ್ನು ಬಿಟ್ಟು ಇರಲಾಗುವುದಿಲ್ಲ,
ಕರೆದುಕೊಂಡು ಹೋಗಿ’......ಅದೇನು ಅಂಥಾ ಯೋಗ್ಯ ಕಾರಣವೇನೂ ಆಗಿರಲಿಲ್ಲ ಬೋರ್ಡಿಂಗ್ ಶಾಲೆಯಿಂದ
ಹೊರಬೀಳಲು. ಆದರೆ ಅಪ್ಪ ರಾಜಿಯಾಗಿದ್ದರು. ನಾನು ಮನೆಗೆ ಬಂದೆ. ಅಮ್ಮನಿಗೆ ಸ್ವಲ್ಪ
ನಿರಾಶೆಯಾಗಿತ್ತು ಅಂತ ಕಾಣಿಸುತ್ತದೆ. ತಾನೂ ಹಾಗೆ ಬೋರ್ಡಿಂಗ್ ಶಾಲೆಯಲ್ಲಿ ಕಲಿತದ್ದರಿಂದ ಮಗನೂ
ಹಾಗೇ ಮಾಡಲಿ, ಸ್ವಲ್ಪ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸಿದ್ದ ಅವಳಿಗೆ ನಿರಾಶೆಯಾಗಿದ್ದು ಸಹಜ. ’ಅಮ್ಮ, ಕ್ಷಮಿಸು. ನಾನು
ನೀನಲ್ಲ’ ಎಂದಷ್ಟೇ ಹೇಳಲು ನನಗೆ ಸಾಧ್ಯವಾಯಿತು. ಅಮ್ಮ ಕರಗಿದ್ದಳು. ಆದರೂ ಅವಳಿಗೆ ಚಿಂತೆಯಾಗಿದ್ದ ಒಂದು ಸಂಗತಿಯೆಂದರೆ, ನಾನೂ ಎಲ್ಲರಂತೆ
ಮೀಡಿಯೋಕರ್ [ಮಾಮೂಲಿ] ಆಗಿಬಿಡುತ್ತೆನೆ ಎನ್ನುವುದು. ’ನಿನ್ನ ಕಷ್ಟ ನನಗರ್ಥವಾಗುತ್ತದೆ.
ಆದರೆ ಯಾವ ವಿಶೇಷ ಸಾದನೆಯಿಲ್ಲದೆ ಮಾಮೂಲಿ ಅನಿಸಿಕೊಂಡರೆ ನಿನಗದು ಸಹ್ಯವೆ’
ಎಂದು ಕೇಳಿದ್ದಳು. ನನ್ನ ಬಳಿ ಅದಕ್ಕೆ ಉತ್ತರವಿರಲಿಲ್ಲ. ನಿಜ ಹೇಳಬೇಕೆಂದರೆ ನಾನದುವರೆಗೂ ಒಂದು
ಟ್ರೋಫಿಯನ್ನಾಗಲೀ, ಮೆಡಲನ್ನಾಗಲಿ, ಅಥವಾ ಒಂದು ಸಮಾಧಾನಕರ ಬಹುಮಾನವನ್ನೂ ಪಡೆದಿರಲಿಲ್ಲ.
ಮರಳಿ ಗೂಡಿಗೆ ಬಂದೆ. ಮುಂಬೈಯಲ್ಲಿನ ಶಾಲೆ ಮನೆಗೆ ಕೂಗಳತೆಯಷ್ಟು ದೂರದಲ್ಲಿತ್ತು. ಮನೆ ಮಲಬಾರ್ ಹಿಲ್ ನ ಅಕ್ರೋಪೋಲಿಸ್
ಏರಿಯಾದಲ್ಲಿತ್ತು. ಇಲ್ಲಿ ಹಿತವಾಗಿತ್ತು. ಅಮ್ಮ ಹತ್ತಿರದಲ್ಲೇ ಇದ್ದ ಹಾಗೆ, ಅದೇನು
ಪ್ರಯೋಜನವಾಗುತ್ತಿತ್ತು ಅಂತಲ್ಲ. ಹೆಣ್ಣಪ್ಪಿ ಹೆಣ್ಣಪ್ಪಿ ಅಂತನ್ನಿಸಿಕೊಳ್ಳೋದೇನೂ
ತಪ್ಪಿರಲಿಲ್ಲ. ಅದೃಷ್ಟವಶಾತ್, ನಾನು ಪ್ರೌಢಶಾಲೆಯಲ್ಲಿ ಓದುತ್ತಿರುವ ಸಮಯದಲ್ಲಿ ಶ್ರೀಯುತ
ಪಿಂಟೋರವರ ಸಾರ್ವಜನಿಕ ಭಾಷಣ ತರಬೇತು ಶಾಲೆಯ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ಜಾಹಿರಾತು
ಕಣ್ಣಿಗೆ ಬಿತ್ತು. ಗುಟ್ಟಾಗಿ ಸೇರಿಬಿಟ್ಟೆ.
ಫೀಸ್ ಕಟ್ಟಬೇಕಿತ್ತಲ್ಲ. ಆಗ ಎಲ್ಲರೂ ಒಂದಿಲ್ಲೊಂದು
ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದರಲ್ಲವಾ, ಹಾಗೆ
ನಾನೂ ಒಂದು ಕಂಪ್ಯೂಟರ್ ಕೋರ್ಸ್ ಮಾಡುತ್ತೇನೆ ಎಂದು ಅಪ್ಪ ಮತ್ತು ಅಮ್ಮನಿಗೆ ಸುಳ್ಳು ಹೇಳಿ
ದುಡ್ಡು ಇಸಗೊಂಡು ಪಿಂಟೋರವರ ಕ್ಲಾಸಿಗೆ ಕಟ್ಟಿದೆ. ಅವರೆದುರು ಸುಳ್ಳಾಡಿ ಅಭ್ಯಾಸವಿರಲಿಲ್ಲ ಆದರೆ ಅದು ಅನಿವಾರ್ಯವಾಗಿತ್ತು. ಫೀಸ್ ಕಟ್ಟಿಯಾಯಿತು,
ಇನ್ನು ದಿನಾ ಅಡ್ಡಾಡಬೇಕಲ್ಲ, ಯಾರಿಗೂ ಗೊತ್ತಾಗದ ಹಾಗೆ ಕ್ಲಾಸಿಗೆ ಹೋಗಿ ಬರುವುದೊಂದು ದೊಡ್ಡ
ತಲೆಬಿಸಿಯಾಗಿತ್ತು. ಯಾರಾದರೂ ನೋಡುತ್ತಿದ್ದಾರಾ ಎಂದು ಆಚೆ ಈಚೆ ಕಣ್ಣು ಕಾಯಿಸುತ್ತ ಟ್ಯಾಕ್ಸಿ
ಹತ್ತುತ್ತಿದ್ದೆ, ಡ್ರೈವರನಿಗೆ ಇಂತಾ ಜಾಗಕ್ಕೆ
ಹೋಗಬೇಕೆಂದು ಪಿಸುದನಿಯಲ್ಲಿ ಉಸುರುತ್ತಿದ್ದೆ. ಅವನಿಗೆ ಇದ್ಯಾಕೆ ಈ ನಮನಿ ಮಾಡುತ್ತಿದ್ದಾನೆ ಈ
ಹುಡುಗ ಅಂತ ಅನಿಸಿರಲಿಕ್ಕೂ ಸಾಕು, ಆದರೆ, ನನ್ನ ನದರಿಗೆ ಬಂದ ಹಲವರು ಆ ರೀತಿ
ಮಾಡುತ್ತಿದ್ದುದರಿಂದ ಅವರನ್ನು ನೋಡಿಯೇ ನಾನೂ ತಲೆ ಉಪಯೋಗಿಸಿದ್ದು.
ಒಂದೆರಡು ವಾರಗಳ
ನಂತರ, ಒಂದು ದಿನ ಎಂದಿನಂತೆ ಕ್ಲಾಸ್ ಮುಗಿಸಿ ಮನೆಗೆ ಹೊರಡಲು ಅನುವಾದೆ, ಅಷ್ಟರಲ್ಲಿ ಪಿಂಟೋರವರು
ಸ್ವಲ್ಪ ನಿಲ್ಲು ತಡೆದು ಹೋಗುವಿಯಂತೆ ಎಂದರು. ವಾತ್ಸಲ್ಯಭರಿತ ದನಿಯಲ್ಲಿ ಕೇಳಿದರು, ’ಮಗನೆ,
ನಿಂಗೇನೋ ಚಿಂತೆ ಇದ್ದಂತಿದೆ. ಏನದು, ನಂಗೆ ಹೇಳು. ಈ ವಯಸ್ಸಿನಲ್ಲಿ ಹೇಗಿರಬೇಕಿತ್ತು ನೀನು!
ನಗುನಗುತ್ತ...ಒಳ್ಳೇ ಆತ್ಮವಿಶ್ವಾಸದಿಂದ ನಳನಳಿಸುತ್ತ ಇರಬೇಕಿತ್ತು.’ ಅವರ ಮಾತಿಗೆ ಸುಮ್ಮನೆ
ತಲೆಯಾಡಿಸಿದೆ. ಏನು ಹೇಳಬೇಕೆಂದು ತೋಚಲಿಲ್ಲ. ಅವರು ಮುಂದುವರೆಸಿದರು. ’ನಾನೂ ನಿನ್ನ ಮನೆಯ ಒಬ್ಬ
ಸದಸ್ಯ ಎಂದೇ ಅಂದುಕೋ. ಮುಂದಿನ ವಾರದಿಂದ ನಮ್ಮ ಮನೆಯಲ್ಲಿ ನಡೆಯುವ ತರಗತಿಗಳಿಗೆ ಬಾ ಬೇಕಾದರೆ,
ಅಲ್ಲಿ ಜಾಸ್ತಿ ವಿದ್ಯಾರ್ಥಿಗಳು ಇರೋದಿಲ್ಲ, ನಿನ್ನ ಬಗ್ಗೆ ಜಾಸ್ತಿ ಗಮನ ಕೊಡುವುದು
ಸಾಧ್ಯವಾಗುತ್ತದೆ’
ನನಗೆ
ಗಲಿಬಿಲಿಯಾಯಿತು. ಆ ವಿಶೇಷ ತರಗತಿಗಳಿಗೆ ಎಲ್ಲಿಂದ ಹಣ ಹೊಂದಿಸೋದು? ಅವರು ನನ್ನ ಮನಸ್ಸನ್ನು
ಓದಿದವರಂತೇ ಹೇಳಿದರು, ’ಫೀಸಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಬಾ ಸುಮ್ಮನೆ’. ಆಯಿತು ಎಂದು
ಗೋಣಲ್ಲಾಡಿಸಿ ಹೊರಟೆ. ’ಅಲ್ಲಯ್ಯ, ಈಗಲಾದರೂ ನಗಪ್ಪಾ!’ ಎಂದಿದ್ದರು.
ನನ್ನ
ಜೀವಮಾನದಲ್ಲೇ ಅಷ್ಟು ಖುಷಿ ಯಾವತ್ತೂ
ಆಗಿರಲಿಲ್ಲ. ನಾನು ಬಾಯೊಡೆದು ಹೇಳದೇ ಇದ್ದರೂ ನನ್ನೊಳಗಿನ ತುಮುಲವನ್ನು ಅರ್ಥಮಾಡಿಕೊಂಡು ಅದಕ್ಕೆ
ಸ್ಪಂದಿಸುವವರೊಬ್ಬರು ಈ ಜಗತ್ತಿನಲ್ಲಿ ಇದ್ದಾರೆ ಅನ್ನೋದೇ ನನಗೊಂದು ಸಂಭ್ರಮದ ಸಂಗತಿಯಾಗಿತ್ತು.
ನಾನೊಬ್ಬ ವಿಲಕ್ಷಣ ವ್ಯಕ್ತಿಯೇನಲ್ಲ ಹಾಗಾದರೆ. ನಾನು ಹೇಗಿದ್ದೇನೋ ಹಾಗಿರುವದು ನನ್ನ
ಆಯ್ಕೆಯಿಂದಲ್ಲ, ಹಾಗಲ್ಲದೇ ಬೇರೆ ಥರ ನನ್ನನ್ನು ನಿಭಾಯಿಸಿಕೊಳ್ಳುವುದು ನನಗೆ ಗೊತ್ತಿರಲಿಲ್ಲ
ಅದಕ್ಕೆ. ಅದನ್ನು ಯಾರೋ ಒಬ್ಬರು ಗುರುತಿಸಿಬಿಟ್ಟರಲ್ಲ. ಅಂತೂ ಇಂತೂ ನನ್ನನ್ನು ಪಿಂಟೋ ಒಬ್ಬರೇ
ಪಾರು ಮಾಡಬಲ್ಲರು ಎನಿಸಿಬಿಟ್ಟಿತು. ಕೇವಲ ಕೆಲವೇ ಕೆಲವು ವಿಧ್ಯಾರ್ಥಿಗಳಿಗೆ ಲಭ್ಯವಾಗುವ ಅವಕಾಶ
ನನ್ನದೂ ಆಗಿತ್ತು. ಪಿಂಟೋರವರು ನಡೆಸುತ್ತಿದ್ದ ವಾರಾಂತ್ಯದ ತರಗತಿಗಳ ಅದೃಷ್ಟವಂತ ವಿದ್ಯಾರ್ಥಿಗಳ
ಗುಂಪಿನಲ್ಲಿ ಈಗ ನಾನೂ ಇದ್ದೆ. ನನ್ನ
ಭವಿಷ್ಯಕ್ಕೆ ಇದೊಂದು ಕ್ವಾಂಟಮ್ ಜಿಗಿತವಾಯಿತು.
ಕೊಲಾಬಾ ಮನೆಯ
ಬ್ಯಾಚನ್ನು ಸೇರಿದ್ದಕ್ಕೆ ನನಗೆ ದೊರೆತ ಅಮೂಲ್ಯ ನಿಧಿಯೆಂದರೆ ಶ್ರೀಮತಿ ಪಿಂಟೋ. ಅದೊಂಥರಾ ಹೆಚ್ಚುವರಿ
ಬೋನಸ್ ಆಯಿತು ಅಂತಿಟ್ಟುಕೊಳ್ಳಿ. ಮೊದಲರೆಡು ವಾರ ಅವರು ನನ್ನನ್ನು ಗಮನಿಸಿರಲಿಕ್ಕಿಲ್ಲ
ಎಂದುಕೊಂಡೇ ಕಳೆದೆ. ಇದ್ದಕ್ಕಿಂದ್ದಂತೆ ಒಂದು ದಿನ, ’ನಾನೂ ಗಮನಿಸ್ತಾ ಇದೀನಿ.
ಡೇನಿಯಲ್ ನಿನ್ನ ಬಗ್ಗೆ ಮಾತಾಡ್ತಿರ್ತಾರೆ’ ಎಂದು ಹೇಳಿ ನನ್ನನ್ನು ಬೆಚ್ಚಿ
ಬೀಳಿಸಿದ್ದರು.
’ನನ್ನ ಬಗ್ಗೆ
ಒಳ್ಳೊಳ್ಳೇದನ್ನೇ ಹೇಳಿದಾರೆ ಅಂತ ಅಂದುಕೋತೀನಿ’ ಎಂದಿದ್ದೆ ನಾನು ಮುಖ ಕೆಂಪಾಗಿಸಿಕೊಂಡು.
’ಹೌದೌದು.’
ಎನ್ನುತ್ತ ಹೆದರಿಸುವ ರೀತಿಯಲ್ಲಿ ನನ್ನತ್ತ ಬಾಗಿದರು. ’ಡೇನಿಯಲ್ ಯಾವತ್ತೂ ಯಾರ ಬಗ್ಗೂ
ಕೆಟ್ಟದಾಗಿ ಮಾತಾಡುವುದಿಲ್ಲ. ಹಾಗಂತ ಹೊಗಳ್ತಾನೂ ಕೂರೋದಿಲ್ಲ’
ನನ್ನ ಮೋರೆ
ಇನ್ನೂ ಕೆಂಪಾಯಿತು. ಅವರ ಕೈಯ್ಯೊಳಗೊಂದು ಆಲ್ಯುಮಿನಿಯಮ್ ಫಾಯಿಲ್ ಸುತ್ತಿದ ಪೊಟ್ಟಣವೊಂದಿತ್ತು. ’ಸೇಬಿನ ಕಡುಬು ಬೇಯಿಸಿದ್ದೆ. ಇದು ನಿನಗೆ ತೊಗೊ’ ಎನ್ನುತ್ತ ಅದನ್ನು ನನ್ನ ಕೈಗಿತ್ತರು.
ನನಗೆ ಅದನ್ನು ನಂಬಲೇ ಆಗಲಿಲ್ಲ. ಕೈಯ್ಯಲ್ಲಿದ್ದದ್ದು
ಬಾಂಬೋ ಎನ್ನುವಂತೆ ಅದನ್ನು ದಿಟ್ಟಿಸಿದ್ದೆ.
’ಅರೇ, ಅದ್ಯಾಕೆ
ಆಗೆ ನೋಡ್ತಿದ್ದಿ? ಅದಕ್ಕೇನು ವಿಷ ಹಾಕಿಲ್ಲ’ ಎಂದವರು ದೊಡ್ಡದಾಗಿ ನಕ್ಕರು.
’ಖಂಡಿತ ಇಲ್ಲ ಶ್ರೀಮತಿ
ಪಿಂಟೊ’. ನಾನು ಸ್ವಲ್ಪ ಸಾವರಿಸಿಕೊಂಡು ಹೇಳಿದೆ. ಕೈಯ್ಯಲ್ಲಿದ್ದ ಕಡುಬಿನ ಪೊಟ್ಟಣದ ಬಗ್ಗೆ
ಎಲ್ಲಿಲ್ಲದ ಮಮತೆ ಉಕ್ಕಿ ಬಂತು. ’ತುಂಬಾ ಧನ್ಯವಾದಗಳು. ನನಗೆ ಸೇಬಿನ ಕಡುಬೆಂದರೆ ಇಷ್ಟ. ಆದರೂ
ನಾನು ಅತಿಯಾಗಿ ತಿನ್ನೋಕೆ ಹೆದರುತ್ತೇನೆ, ತೂಕ ಜಾಸ್ತಿಯಾದರೆ ಕಷ್ಟ’ ಎಂದೆ.
’ನಾನ್ಸೆನ್ಸ್! ನೀನಿನ್ನೂ ಬೆಳೆಯೋ ಹುಡುಗ. ಈ ವಯಸ್ಸಿನ ಕೊಬ್ಬು ಉಳಿಯೋದಿಲ್ಲ ಹೆದರಬೇಡ’
’ನಿಜವಾಗಿಯೂ?’ ......
ಆ ಕಡುಬನ್ನ ಮನೆಗೆ
ಒಯ್ದರೆ ನೂರೆಂಟು ಪ್ರಶ್ನೆಗಳೇಳುತ್ತವೆ. ಎಲ್ಲಿಂದ ತಂದೆ ಎಂದು ಕೇಳಿದರೆ ಸುಳ್ಳು ಹೇಳುವುದು
ಕಷ್ಟವಾಗಬಹುದೆಂದೆನ್ನಿಸಿ ದಾರಿಯಲ್ಲೇ ಟ್ಯಾಕ್ಸಿ ಒಳಗೆ ಕೂತಾಗ ಗಬಗಬನೆ ತಿಂದು ಮುಗಿಸಿದೆ.
ಮನೆಗೆ ತಲುಪುತ್ತಿದ್ದಂತೆ ಅಪ್ಪ ಕೇಳಿದ್ದರು, ’ಮತ್ತೆ…ಕಂಪ್ಯೂಟರ್ ಕ್ಲಾಸ್ ಹೇಗೆ ನಡೀತಾ ಇದೆ? ಬೇಕಾ ನಿಂಗೊಂದು ಕಂಪ್ಯೂಟರ್?’
ಎಂದು.
’ಅಯ್ಯೋ ಬೇಡ ಬೇಡ’ ಎಂದು ಅನಗತ್ಯವಾಗಿ ಕಿರುಚಿದ್ದೆ.
’ಯಾಕೆ ಬೇಡ? ಮನೆಯಲ್ಲೇ ಕಂಪ್ಯೂಟರ್ ಇದ್ದರೆ ಒಳ್ಳೆಯದೇ ಅಲ್ವಾ.
ಇಲ್ಲೇ ಅಭ್ಯಾಸ ಮಾಡಬಹುದು. ಗಂಟೆಗಟ್ಟಲೇ ಹೊರಗಿರೋದು ತಪ್ಪುತ್ತದೆ’
’ಬೇಡಪ್ಪ! ಅಲ್ಲೇ ಕಲೀಬೇಕಂತೆ ಸರ್ ಹೇಳಿದಾರೆ’ ಅಂದೆ.
’ಅದೇನು ಎಲ್ಲರಿಗೂ ಅದೇ ರೂಲ್ಸಾ?’
ಹೀಗೆ ಮುಂದುವರೆದೆರೆ
ನನ್ನ ಗುಟ್ಟೆಲ್ಲ ರಟ್ಟಾಗುವ ಸಂಭವನೀಯತೆ ಹೆಚ್ಚಾಗಿದ್ದುದರಿಂದ ಅಪ್ಪನ ಕುತೂಹಲವನ್ನ ಅಲ್ಲೇ ಮೊಟಕುಗೊಳಿಸುವ
ಕೊನೆಯ ಯತ್ನ ಮಾಡಿದೆ ’ಥೂ ಏನಪ್ಪ ನೀವು. ಮುಗೀತಾನೆ
ಇಲ್ಲ ಪ್ರಶ್ನೆಗಳು’
’ಅರೆ
ಯಾರ್....ನಿಂಗೆ ಸಹಾಯ ಮಾಡೋಣ ಅಂತನೇ ಕೇಳಿದ್ದು’
’ನನಗೆ
ಹೇಗನ್ನಿಸುತ್ತದೆಯೋ ಹಾಗೆ ಇರಲಿಕ್ಕೆ ಬಿಡ್ತೀರಾ ಅಪ್ಪ, ನಿಮಗೇನೂ ಅಭ್ಯಂತರವಿಲ್ಲದಿದ್ದರೆ’ ಎಂದೆ
ಸಿಡಿಮಿಡಿಗೊಂಡವರ ಥರ.
’ನೀವು
ಸುಮ್ನಿರಿ. ಅವನಿಗೆ ಹೇಗೆ ಬೇಕೋ ಹಾಗಿರಲಿ. ಮತ್ತೆ... ಅವನಿಗೆ ಯಾರ್ ಅಂತೆಲ್ಲ ಅನ್ನಬೇಡಿ’
ಅದೃಷ್ಟಕ್ಕೆ ಅಮ್ಮ ಮಧ್ಯ ಪ್ರವೇಶಿಸಿದಳು. ನಿರಾಳವಾಯಿತು.
ಪಿಂಟೋರವರ ಮನೆ
ಸ್ವರ್ಗದಂತಿತ್ತು. ಪಿಂಟೋರವರ ಮಡದಿ ದಿನಾ ತರಗತಿಯ ಅವಧಿ ಮುಗಿದ ನಂತರ ನನ್ನೊಬ್ಬನನ್ನೇ ಕರೆದು
ಸ್ಯಾಂಡ್ವಿಚ್, ಕೇಕ್ ಮತ್ತು ತರಾವರಿ ಮನೆಯಲ್ಲೇ
ಮಾಡಿದ ತಿನಿಸುಗಳನ್ನು ತಿನ್ನಿಸುತ್ತಿದ್ದರು. ಜೊತೆಗೆ ಗಮಗಮಿಸುವ ಕಾಫಿ ಬೇರೆ ಇರುತ್ತಿತ್ತು.
ಆದರೆ, ಈ ಬಗ್ಗೆ ಬೇರೆ ವಿದ್ಯಾರ್ಥಿಗಳಿಗೆ ತಿಳಿಸಬೇಡ ಎನ್ನುತ್ತಿದ್ದರು. ಹೇಳಿದ್ದರೆ ಅವರಿಗೆ
ಬೇಸರವಾಗುತ್ತಿತ್ತು ಅನ್ನುವುದಂತೂ ಸತ್ಯ. ಅಲ್ಲದೇ ತರಗತಿಯಲ್ಲಿ ವಿಶೇಷ ಸವಲತ್ತನ್ನು ಪಡೆದವನು
ಎಂಬ ನೋಟವನ್ನು ಭರಿಸಲು ನನಗೂ ಇಷ್ಟವಿರಲಿಲ್ಲ. ’ಟೀಚರ್ಸ್ ಪೆಟ್’ ಟೀಚರ್ಸ್ ಪೆಟ್’ ಎನ್ನುವ
ಬಿರುದು ಯಾರಿಗೆ ಬೇಕಿತ್ತು?!
ಹೀಗಿದ್ದ ಈ ಭಾಷಣ
ಕಲೆಯ ಗುರು ಮತ್ತು ಪಿಯಾನೋ ಬೋಧಕಿಯ ಜೋಡಿಯನ್ನು ನೋಡಿದರೆ ಮೇಲ್ನೋಟಕ್ಕೆ ಇವರೆಷ್ಟು ವರ್ಣರಂಜಿತ,
ಎಷ್ಟೊಂದು ಲವಲವಿಕೆಯ ಜೋಡಿ ಎನಿಸುತ್ತಿತ್ತು. ಆದರೆ ಅಂತರಾಳದಲ್ಲಿ ಅಡಗಿರಬಹುದಾದ ಒಂಟಿತನದ ದುಗುಡ, ಅವ್ಯಕ್ತ ವಿಷಾದದ ಬಗ್ಗೆ ನನಗೆ ಸೂಟು
ಬಡಿದಿತ್ತು. ನನಗೆ ಅರ್ಥವಾಗದ ಸಂಗತಿಯೆಂದರೆ, ಅವರಿಬ್ಬರೂ ನನ್ನನ್ಯಾಕೆ ಅಷ್ಟು
ಹಚ್ಚಿಕೊಂಡಿದ್ದರು ಅನ್ನುವುದು. ಈ ಪ್ರಶ್ನೆಗೂ ಅರ್ಥವಿಲ್ಲ. ಅವರ ಪ್ರೀತಿ ನನಗೆ
ಅಗತ್ಯವಿದ್ದಷ್ಟು ಮತ್ಯಾರಿಗೂ ಇರಲಿಲ್ಲ. ಬದುಕಿನಲ್ಲಿ ತುರ್ತಿನ ಮಾರ್ಪಾಟು ಆಗಬೇಕಿದ್ದುದು ನನಗೇ
ಆಗಿತ್ತು.
ಮಿಸ್ಟರ್ ಪಿಂಟೋ
ಬಾರಿಬಾರಿಗೂ ನನಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದರು. ಏನೆಂದರೆ, ನಾನೊಬ್ಬ ಎಲ್ಲರಂತೆ
ಇರುವ ಮನುಷ್ಯ. ಅಷ್ಟಲ್ಲದೇ ನನ್ನ ವ್ಯಕ್ತಿತ್ವದ ಒಟ್ಟಾರೆ ವಿಕಸನಕ್ಕೂ ನೀರೆರೆಯುತ್ತಿದ್ದರು. ಆದರೆ
ನನ್ನ ವ್ಯಕ್ತಿತ್ವದಲ್ಲಿನ ಕೆಲವು ನ್ಯೂನತೆಗಳನ್ನು ನಾನೇ ಸರಿಪಡಿಸಿಕೊಳ್ಳಬೇಕಿತ್ತು.
’ಎಲ್ಲವನ್ನೂ ಕೈತುತ್ತು ನೀಡಿ ಉಣಿಸಲಾಗುವುದಿಲ್ಲ’. ಒಂದು ದಿನ ವಿಪರೀತ ರೇಗಿದ್ದರು. ’ಮಾತಾಡುತ್ತಿರುವಾಗ ನಿನ್ನ ಕೈಗಳು
ಓಲಾಡುತ್ತಿರುತ್ತವೆ, ಮಣಿಕಟ್ಟು ಬಳಕುತ್ತದೆ, ಸುಧೃಡವಾಗಿ ನಿಲ್ಲುವುದಿಲ್ಲ ನೀನು. ನಿನ್ನ ವರ್ತನೆ
ನೋಡಿದರೆ ಥೇಟ್ ಹುಡುಗೀನೇ. ನೀನದನ್ನ ಮೊದಲು ಒಪ್ಕೊ. ನಿನ್ನನ್ನ ನೀನು ಅರ್ಥ ಮಾಡಿಕೊಂಡು
ಒಪ್ಪಿಕೊಳ್ಳೋದನ್ನ ಕಲಿ. ವಾಸ್ತವ ಜಗತ್ತಿಗೆ ಬಾ. ಹುಟ್ಟಿನಿಂದ ಪಡೆದುಕೊಂಡ ದೈಹಿಕ
ವಿಶಿಷ್ಟತೆಯನ್ನು ಅಲ್ಲಗಳೆಯುವುದಕ್ಕಾಗುವುದಿಲ್ಲ. ನಾವು ಏನೋ ಅದೇ ಆಗುವುದನ್ನ ಕಲಿಯಬೇಕು.
ಇನ್ಯಾವಾಗ ನೀನು ಬೆಳೆಯೋದು? ಯಾವಾಗ ಗಂಡಸಾಗುವುದು?’ ಅವರ ಮಾತಿನ ಮೊನಚಿಗೆ ನನ್ನ ಕಣ್ಣಾಲಿಗಳು
ತುಂಬಿ ಬಂದಿದ್ದವು. ಆದರೂ ಅವರು ಕರಗಲಿಲ್ಲ.
’ಬದುಕಿನ
ಸಂದೂಕಿನೊಳಗೆ ನೀನು ಏನಾಗಿದ್ದೀಯೋ ಅದನ್ನ ಬಿಟ್ಟು ಹೋಗಬೇಡ. ನಿನ್ನ ಮೇಲೆ ಹಿಡಿತವಿಟ್ಟುಕೋ.
ನಾನು ಸಾಧಿಸಿಯೇ ತೀರುತ್ತೇನೆ ಎಂದು ನಿನಗೆ ನೀನೆ ಹೇಳ್ಕೋ. ಹಾದಿ ಮಧ್ಯದಲ್ಲಿ ಅದೆಷ್ಟೇ
ಅವಮಾನಗಳನ್ನು ಸಹಿಸಬೇಕಾಗಿ ಬಂದರೂ ಹೆದರಬೇಡ. ಇವತ್ತು ನಿನ್ನನ್ನ ಅವಮಾನಿಸಿದವರು ನಾಳೆ ತಮ್ಮ
ಮಾತುಗಳನ್ನ ತಾವೇ ನುಂಗುತ್ತಾರೆ, ನೋಡ್ತಾ ಇರು’ ಅವರಿಂದ ನಾನು ಕಲಿತ ಗುರುಮಂತ್ರ ಇದಾಗಿತ್ತು.
ಆಕರ್ಷಕ
ಮಾತುಗಾರಿಕೆ ಒಂದು ಕಲೆ. ಅದನ್ನು ನಾನು ರೂಢಿಸಿಕೊಳ್ಳಬೇಕೆಂದರೆ ಕೆಲವೊಂದಿಷ್ಟು ಮಾರ್ಪಾಟುಗಳು
ಅಗತ್ಯವಾಗಿದ್ದವು. ಮೊದಲನೆಯದಾಗಿ ಆಕರ್ಷಕ ಗಂಡು ದನಿಯನ್ನು ಅಂತರ್ಗತ ಮಾಡಿಕೊಳ್ಳಬೇಕಿತ್ತು.
ಅದನ್ನು ಸರಿಪಡಿಸಲು ಶ್ರೀಮತಿ ಪಿಂಟೋರವರು ಟೊಂಕ ಕಟ್ಟಿ ನಿಂತಿದ್ದರು. ಪ್ರಯತ್ನಪೂರ್ವಕವಾಗಿಯಾದರೂ
ಗಂಡಸಿನ ಒಡಕಲು ದನಿಯನ್ನು ರೂಢಿಗತ ಮಾಡಿಕೊಳ್ಳಬೇಕಿತ್ತು. ಹೇಗೆ ರೂಢಿ ಮಾಡಿಕೊಳ್ಳುವುದು?
ಪಿಂಟೋರವರ ಮಡದಿ ಹುರಿದುಂಬಿಸುತ್ತಿದ್ದರು. ಸುಮ್ಮನೇ ಗಂಡಸಿನ ದನಿಯಲ್ಲಿ ಮಾತಾಡ್ತಾ ಹೋಗು
ಎನ್ನುತ್ತಿದ್ದರು. ಸ್ವತಃ ತಾವೇ ಗಂಡಸಿನ ದನಿಯಲ್ಲಿ ಅಣಕು ಸಂಭಾಷಣೆ ನಡೆಸುತ್ತಿದ್ದರು.
’ಹೂಂ...ಮಾತಾಡು ಸುಳ್ ಸುಳ್ಳೇ. ನಿಧಾನವಾಗಿ ಅಭ್ಯಾಸವಾಗ್ತದೆ’ ಅನ್ನುತ್ತಿದ್ದರು. ದಿನಾ
ಅಭ್ಯಾಸಕ್ಕೆಂದು ಆಲ್ ಫ್ರೆಡ್ ನೋಯ್ಸ್ ರವರ ಹೈವೇ ಮ್ಯಾನ್ ಕವಿತೆಯನ್ನು ಆರಿಸಿಕೊಂಡೆ.
ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಗಂಡಸಿನ ದನಿಯಲ್ಲಿ ಹೇಳಿಕೊಳ್ಳುತ್ತಿದ್ದೆ.
ಒಮ್ಮೆ ನನ್ನಮ್ಮ ಅದನ್ನ ನೋಡಿ ಹುಬ್ಬನ್ನ ಬಿಲ್ಲಾಗಿಸಿದಳು. ನಾನೂ ನನ್ನ ಬಿಲ್ಲಿಗೆ
ಹೆದೆಯೇರಿಸಿದೆ. ’ಕವಿತೆಯ ಟೆಸ್ಟ್ ಹತ್ತಿರ ಬರ್ತಾ ಇದೆ. ಇಂಗ್ಲೀಷ್ ಸಾಹಿತ್ಯದ ಕ್ಲಾಸಿಗೆ.
ಅದಕ್ಕೇ ಉರು ಹೊಡೀತಾ ಇದೀನಿ. ತೊಂದರೆ ಇಲ್ವಲ್ಲ?’
’ಅಯ್ಯೋ ನಂಗೇನು
ತೊಂದರೆ? ಆದರೆ ಅವಶ್ಯಕತೆಗಿಂತ ಜಾಸ್ತಿ ಕಷ್ಟ ಪಡುತ್ತಾ ಇದ್ದಿ ಅನಿಸ್ತಾ ಇದೆಯಲ್ಲ ಯಾಕೆ?’
’ಓಹ್ಹೋ ಅಮ್ಮಾ!
ಪ್ರತಿ ಪದವೂ ಅದರ ಉಚ್ಚಾರವೂ ಕರಾರುವಕ್ಕಾಗಿರಬೇಕು. ಕೇಳೀಗ...’ ಎನ್ನುತ್ತ ಅವಳೆದುರು ಮತ್ತೊಂದು
ಸುಳ್ಳನ್ನು ಪೋಣಿಸಿದ್ದೆ. ಜೊತೆಗೆ ಅದು ನಿಜವೆಂದು ಬಿಂಬಿಸಲು ಅವಳೆದುರು ಜೋರುದನಿಯಲ್ಲಿ
ಕವಿತೆಯನ್ನು ವಾಚಿಸಲಾರಂಭಿಸಿದೆ.
ಹೊಯ್ದಾಡುವ ಮರಗಳ
ನಡುವೆ
ಗಾಳಿಯಿತ್ತು
ಕತ್ತಲ ತೆರೆಯಪ್ಪಳಿಸಿದ ಹಾಗೆ.
ಮೋಡಗಟ್ಟಿದ
ಕಡಲ ಮೇಲೆ
ಚಂದ್ರನಿದ್ದ
ತೊನೆದಾಡುತ್ತ ಬೀಭತ್ಸ ನೌಕೆಯ ಹಾಗೆ.
ಕೆನ್ನೀಲಿ
ಬಂಜರುಗಾಡಿನ ಒಳಗೆ
ಹಾದಿಯಿತ್ತು
ಬೆಳದಿಂಗಳ ರಿಬ್ಬನ್ನಿನ ಹಾಗೆ.
ಹೆದ್ದಾರಿಯ
ಸರದಾರ ಸವಾರಿ ಮಾಡಿಕೊಂಡು ಬಂದ...
ಸವಾರಿ
ಮಾಡಿಕೊಂಡು ಬಂದ... ಸವಾರಿ ಮಾಡಿಕೊಂಡು ಬಂದ...
ಹಳೆಯ
ಛತ್ರದವೆರೆಗೆ...
ಮುಂದಿನದನ್ನು
ಹೇಳುವ ಮೊದಲೇ ಅಮ್ಮ ಜಾಗ ಖಾಲಿ ಮಾಡಿದ್ದಳು...ಎಲ್ಲ ಅಯೋಮಯವೆಂಬಂತೆ ಕಣ್ಣುಗುಡ್ಡೆಗಳನ್ನು
ತಿರುಗಿಸುತ್ತ. ನನ್ನ ಕವಿತಾವಾಚನದ ರಿಹರ್ಸಲ್ ಬಗ್ಗೆ ಅವಳಿಗೆ ಅನುಮಾನ ಮೂಡಿತ್ತು ಅಂತ
ಕಾಣುತ್ತದೆ. ಇಲ್ಲೇನೋ ನಡೀತಾ ಇದೆ ಅಂತ ಅನಿಸಿರಬೇಕು. ಅದೇನು ಅನ್ನುವದನ್ನ ಅವಳಿಂದ
ಮುಚ್ಚಿಟ್ಟಿದ್ದಕ್ಕೆ ಕಾರಣಗಳಿರಬೇಕು ಅನ್ನುವುದನ್ನೂ ಅವಳು ಅರಿತುಕೊಂಡಿರುತ್ತಾಳೆ. ಇದಕ್ಕೆ
ವ್ಯತಿರಿಕ್ತವಾಗಿ ಪಿಂಟೋರವರ ಮನೆಯಲ್ಲಿ ನಾನು ಮುಕ್ತವಾಗಿ ಅಭ್ಯಸಿಸುತ್ತಿದ್ದೆ. ಸುಮಾರು ಎರಡು
ವರ್ಷಗಳೆ ಕಳೆದಿರಬೇಕು, ಒಂದೇ ಕವಿತೆಯನ್ನು ಬಾರಿ ಬಾರಿಗೂ ಗಟ್ಟಿದನಿಯಲ್ಲಿ ಹೇಳುತ್ತ, ಅದರ
ಸ್ವರಗತಿಗಳನ್ನು ತಿದ್ದಿಕೊಳ್ಳುತ್ತ, ಸುಮಾರು ಎರಡು ವರ್ಷ ಸವೆದದ್ದನ್ನು ಕಣ್ಣಾರೆ ಕಂಡವರು
ಅವರಿಬ್ಬರೆ. ಒಮ್ಮೆಯೂ ಅಸಹನೆ ವ್ಯಕ್ತಪಡಿಸಲಿಲ್ಲ, ಸಾಕು ಹೋಗೆನ್ನಲಿಲ್ಲ, ಅದಿರಲಿ, ಅದಷ್ಟನ್ನು ಕಲಿಯಲಿಕ್ಕೆ ಅಂದುಕೊಂಡದ್ದಕ್ಕಿಂತ ಜಾಸ್ತಿ
ವೇಳೆ ಹಿಡಿಯಿತು ಎನ್ನುವುದರ ಸುಳಿವೂ ನನಗೆ ಸಿಗದ
ಹಾಗೆ ವರ್ತಿಸುತ್ತಿದ್ದರು. ನನ್ನಿಂದ ಫೀಸ್ ತೆಗೆದುಕೊಳ್ಳೋದನ್ನ ನಿಲ್ಲಿಸಿದ್ದರು. ಕೊನೆ ಕೊನೆಗೆ
ವಾರದ ಕೊನೆಯಲ್ಲಿನ ಊಟಗಳಿಗೆ ನಾನೂ ಜೊತೆಯಾಗುತ್ತಿದ್ದೆ. ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬದ
ಸಂಭ್ರಮಗಳಲ್ಲಿ ಕೂಡ. ಮನೆಯಲ್ಲಿ ಮತ್ತು ಶಾಲೆಯಲ್ಲಿ ಯಾರೂ ನನ್ನ ವ್ಯಕ್ತಿತ್ವದಲ್ಲಾಗುತ್ತಿದ್ದ
ಮಾರ್ಪಾಟುಗಳನ್ನು ಗಮನಿಸಿದಂತಿರಲಿಲ್ಲ. ಅಪ್ಪ-ಅಮ್ಮನಿಗೆ ಬಹುಶಃ ಮಗ ದೊಡ್ಡವನಾಗುತ್ತಿರುವುದರಿಂದ
ಅವನಲ್ಲಿ ಇವು ಸಹಜವಾಗೇ ಆದ ಬದಲಾವಣೆಗಳು ಅಂತ ಅನಿಸರಬೇಕು.
ನೋಡುತ್ತ
ನೋಡುತ್ತ...ನಾನು ಕಾಲೇಜು ಸೇರಿದ್ದೆ. ಇನ್ನು ಪಿಂಟೋ ಕ್ಲಾಸುಗಳು ಅನಿವಾರ್ಯವೇನಾಗಿರಲಿಲ್ಲ.
ಹಾಗಾಗಿ ಅವರಿಗೆ ವಿದಾಯ ಹೇಳುವ ಸಮಯ ಬಂದೇ ಬಿಟ್ಟಿತ್ತು.
“
ಒಳ್ಳೇದು. ನಿನಗಿನ್ನು ನಾವು ಬೇಡ. ನಿನ್ನಿಂದ ನಾವು ಬಯಸುವುದು ಒಂದನ್ನೇ...ಕರಣ್...”
ಎಂದಿದ್ದರು ಶ್ರೀಮತಿ ಪಿಂಟೋ.
“ದಯವಿಟ್ಟು
ಹೇಳಿ...” ಎಂದೆ.
“ಸಂಪರ್ಕದಲ್ಲಿರು.
ಇದನ್ನೊಂದೇ ನಾವು ಬಯಸೋದು. ನಿನ್ನ ಡ್ಯಾನಿ ಅಂಕಲ್ ಮತ್ತು ಮ್ಯಾಗೀ ಆಂಟಿಯನ್ನ ಮರೆತುಬಿಡಬೇಡ.”
ಹಾಗೆಂದವರು
ಸುಮಾರು ಹೊತ್ತಿನವರೆಗೆ ನನ್ನನ್ನು ತಮ್ಮ ಎದೆಗವುಚಿಕೊಂಡು ನಿಂತರು. ಇನ್ನೇನು ಹೊರಟೆ ಅನ್ನುವ
ವೇಳೆಗೆ ನನ್ನ ಗಲ್ಲಕ್ಕೆ ಮತ್ತು ಹಣೆಗೆ ಮುತ್ತಿಕ್ಕಿದರು. ಮಿಸ್ಟರ್ ಪಿಂಟೋ ಅಷ್ಟೇನೂ ಭಾವುಕರಾಗದಿದ್ದರೂ
ಬಲವಾಗಿ ಕೈಕುಲುಕುತ್ತ ಉತ್ಸಾಹದ ದನಿಯಲ್ಲಿ ಹಾರೈಸಿದರು. ’ಹುಡುಗಾ, ಈ ಸಲ ಮ್ಯಾಗಿ ಹೇಳಿದ್ದನ್ನ
ಒಪ್ಪುತ್ತೇನೆ! ’ ಎನ್ನುತ್ತ ದೊಡ್ಡದಾಗಿ ನಕ್ಕರು. ’ಮರೀಬೇಡ ನಮ್ಮನ್ನ. ಸಂಪರ್ಕದಲ್ಲಿರು. ನಾವು
ನಿನ್ನನ್ನ ಮಿಸ್ ಮಾಡ್ತೀವಿ’
ಗಾರ್ಡನ್ನಿನ
ಉಯ್ಯಾಲೆ...ಖಾಲಿ ಉಯ್ಯಾಲೆ...ವೆರಾಂಡದಿಂದ ಕಾಣುತ್ತಿತ್ತು. ಅಲ್ಲಿ ಅಳಲಿಲ್ಲ. ಕಣ್ಣೀರನ್ನು ಕಟ್ಟಿ ಹಿಡಿದಿದ್ದೆ.
ಅವರೂ ಅದನ್ನ ಬಯಸುತ್ತಿರಲಿಲ್ಲ. ’ಮಾರಾಯ...ಗಂಡಸರು ಅಳಬಾರದು’ ಅಂತ ಚಟಾಕಿ ಹಾರಿಸುತ್ತಿದ್ದರು. ಆದರೆ,
ಅವರಿಂದ ಬೀಳ್ಕೊಟ್ಟು ಟ್ಯಾಕ್ಸಿಯಲ್ಲಿ ಕೂತವನಿಗೆ ತಡೆಯಲಾಗಲಿಲ್ಲ. ಮನೆ ತಲುಪುವವರೆಗೂ ಅಳುತ್ತಲೇ
ಇದ್ದೆ. ವಿನಾಕಾರಣ, ನನ್ನಿಂದ ಏನನ್ನೂ ಬಯಸದೇ ನನ್ನ ಮೇಲೆ ಸುರಿದ ಅವರ ಪ್ರೀತಿಗೆ ತಿರುಗಿ
ನಾನೇನು ಕೊಟ್ಟಿದ್ದೆ? ಅವರು ನನ್ನೆದೆಗೆ ಸುರಿದದ್ದನ್ನೆಲ್ಲ ನಿರ್ಭಿಡೆಯಿಂದ ಬಾಚಿಕೊಂಡಿದ್ದೆ
ಅಷ್ಟೆ. ಆವಾಗ ಅಷ್ಟು ಅರ್ಥವಾಗಿರಲಿಲ್ಲ. ಈಗ...ನಲವತ್ತರ ಅಂಚಿನಲ್ಲಿ ಎಲ್ಲ ಅರಿವಾಗುತ್ತಿದೆ. ಅವರಿಗಿಲ್ಲದ
ಮಗ ನಾನಾಗಿದ್ದೆ. ಆದರೆ, ಸ್ವಂತ ಮಗನಿದ್ದಿದ್ದರೆ ನೀಡುತ್ತಿದ್ದ ಆದರ, ಪ್ರೀತಿ, ಗೌರವಗಳನ್ನು
ನನ್ನಿಂದ ಒದಗಿಸುವದು ಸಾಧ್ಯವಾಗಲೇ ಇಲ್ಲ. ನಾನವರಿಗೆ ಮಗನಂತೆ ಕಂಡೆ, ಆದರೆ, ನನಗವರು ತಂದೆ –ತಾಯಿಯರಂತೆ
ಕಂಡಿರಲಿಲ್ಲ. ಅದಾಗುವುದು ಸಾಧ್ಯವೂ ಇರಲಿಲ್ಲ. ಒಂದು ವೇಳೆ ಅದಕ್ಕೆ ಸಮಾನವಾದ ಸ್ಥಾನ
ನೀಡಿದ್ದರೂ, ನನ್ನ ಅಪ್ಪ-ಅಮ್ಮನ ಜಾಗವನ್ನು ಅವರು ತುಂಬಲಾಗುತ್ತಿರಲಿಲ್ಲ. ಪಿಂಟೋ ದಂಪತಿಗಳಿಗೂ
ಅದು ಗೊತ್ತಿತ್ತು. ಅದಕ್ಕೆ ಅವರು
ಸಂಪರ್ಕದಲ್ಲಿರು ಎಂದಷ್ಟೇ ಹೇಳಿ ಬೀಳ್ಕೊಟ್ಟಿದ್ದರು.
ನನ್ನಿಂದ
ಅದೂ ಸಾಧ್ಯವಾಗಲಿಲ್ಲ, ಅಪರಾಧಿ ನಾನು.
ಅಲ್ಲಿಂದ
ಹೊರಹೊಂಟವನಿಗೆ ಮುಂದೆಂದೂ ತನ್ನ ದನಿಯ ಬಗ್ಗಾಗಲಿ, ಆಂಗಿಕ ಹಾವಭಾವಗಳ ಬಗ್ಗಾಗಲೀ ಜಿಗುಪ್ಸೆ
ಹುಟ್ಟಲಿಲ್ಲ. ತನ್ನ ಸಮವಯಸ್ಕರೊಂದಿಗೆ ಸಲೀಸಾಗಿ ವ್ಯವಹರಿಸಬಲ್ಲವನಾಗಿದ್ದ. ಅವರ ಮಧ್ಯೆ ತಾನೊಬ್ಬ
ಬೇರೆ ಅನ್ನುವ ಭಾವ ಕೊನೆಯಾಗಿತ್ತು. ಪಿಂಟೋ ದಂಪತಿಗಳು ನನ್ನ ಫೋನ್ ನಂಬರ್ ಕೂಡ
ಇಟ್ಟುಕೊಂಡಿರಲಿಲ್ಲ. ಕೇಳಿರಲೇ ಇಲ್ಲ. ಅವರು ಕೇಳದಿದ್ರೇನಂತೆ, ನಾನಾದರೂ ಕೊಡಬಹುದಿತ್ತು. ಆದರೆ,
ಎಲ್ಲಿಯಾದರೂ ಮನೆಗೆ ಕರೆ ಮಾಡಿ ನನ್ನ ಅಪ್ಪ-ಅಮ್ಮನಿಗೆ ಎಲ್ಲ ಗೊತ್ತಾಗಿ ರಾದ್ದಾಂತವಾಗುವುದು ಬೇಡ
ಎಂದು ನಾನೂ ಕೊಟ್ಟಿರಲಿಲ್ಲ. ಅಪ್ಪ ಮಾತ್ರ ನಾನು ಕಂಪ್ಯೂಟರ್ ಖರೀದಿಸಲು ಯಾಕೆ
ನಿರಾಕರಿಸುತ್ತಿದ್ದೇನೆಂದು ತೆಲೆಕೆಡಿಸಿಕೊಳ್ಳುವುದನ್ನ ನಿಲ್ಲಿಸಿರಲಿಲ್ಲ. ಎರಡು ವರ್ಷಗಳವರೆಗೆ
ಕಾಪಾಡಿಕೊಂಡು ಬಂದಿದ್ದ ನನ್ನ ಗುಟ್ಟುಗಳನ್ನು, ಸುಳ್ಳುಗಳನ್ನು ಅವರ ಮುಂದೆ ಏಕಾಏಕಿ
ಬಿಚ್ಚಿಡುವುದು ನನ್ನಿಂದಲೂ ಸಾಧ್ಯವಾಗಿರಲಿಲ್ಲ.
ಹುರುಳಿಲ್ಲದ
ಆ ಬೀಳ್ಕೊಡುಗೆಯ ನಂತರ,... ವರ್ಷಗಳೇ ಕಳೆದ ನಂತರ... ಒಂದು ದಿನ ಸ್ವ ಪ್ರೇರಿತನಾಗಿ ಅವರಿಗೆ ಕರೆ
ಮಾಡಿದೆ. ಆ ಬದಿಯಲ್ಲಿ ಪಿಂಟೋರವರ ಮಡದಿ ಇದ್ದರು. ನನ್ನ ಮಾರ್ಪಟ್ಟ ದನಿ ಕೇಳಿ ಅವರಿಗೆ ತುಂಬ
ಖುಷಿಯಾಯಿತು. ಹೇಗೆ ನಡೀತಿದೆ ಕಾಲೇಜು ಎಂದೆಲ್ಲ ಕೇಳಿದರು. ನಾನು ಎಲ್ಲವನ್ನೂ ಸಾದ್ಯಂತವಾಗಿ
ವಿವರಿಸಿ, ’ಎಲ್ಲಿ ಪಿಂಟೋ ಸರ್? ಮಾತಾಡಬಹುದಾ? ’ ಎಂದು ಕೇಳಿದೆ.
’ಓಹ್.
ಅವರೆಲ್ಲಿ? ಬಿಟ್ಟು ಹೋದರು ನಮ್ಮನ್ನೆಲ್ಲ’. ಅವರ ದನಿಯ ಕಸುವು ಉಡುಗಿತ್ತು. ’ಏನು
ಮಾಡೋದು...ಎಲ್ಲ ಒಂದಿಲ್ಲ ಒಂದು ದಿನ ಹೋಗಲೇ ಬೇಕಲ್ಲ. ನಿನ್ನ ನೋಡಿದ್ರೆ ಖುಷಿಪಡ್ತಿದ್ರು. ಆದರೆ
ತೊಂದರೆ ಕೊಡೋದು ಯಾಕೆ ಅಂತ....ಸುಮ್ಮನಾದ್ವಿ’
’ಈಗ
ಬರಬಹುದಾ ನಿಮ್ಮನ್ನ ನೋಡೋಕೆ, ಮಿಸೆಸ್ ಪಿಂಟೋ?’
ಒಂದು
ಗಳಿಗೆ ಸುಮ್ಮನಿದ್ದ ಅವರು, ಆಮೇಲೆ ಹೇಳಿದ್ದರು, ’ಖಂಡಿತಾ ಬಾ. ಯಾವಾಗ ಬೇಕಿದ್ರೂ ಬಾರಪ್ಪ. ಈ
ಮುದುಕಿಗೆ ಸಂತೋಷವಾಗ್ತದೆ’
ಕೊಲಾಬಾ
ಮನೆಯಲ್ಲಿ ಯಾವತ್ತೂ ವಿರಾಜಮಾನವಾಗಿರುತ್ತಿದ್ದ ಪಿಯಾನೋ ಸ್ವಸ್ಥಾನದಲ್ಲಿರಲಿಲ್ಲ. ಶ್ರೀಮತಿ ಪಿಂಟೋರವರು
ಪಿಯಾನೋವನ್ನ ಮಾರಿಬಿಟ್ಟಿದ್ದರು. ಅವರೂ ಸಣ್ಣಗಾಗಿಬಿಟ್ಟಿದ್ದರು. ಮೊದಲಿನ ಅರ್ಧದಷ್ಟೂ ಇರಲಿಲ್ಲ.
ಪಿಯಾನೋ ಕ್ಲಾಸುಗಳನ್ನ ನಿಲ್ಲಿಸಿದ್ದರಂತೆ. ಉಳಿದಷ್ಟು ಆಯುಸ್ಸನ್ನ ಓದಿನಲ್ಲೋ ಪ್ರಾರ್ಥನೆಯಲ್ಲೋ
ಕಳೆಯೋಣವೆಂದು ಅಂದುಕೊಂಡಿದ್ದೇನೆ ಎಂದರು. ಅವರ ಜೊತೆ ಈಗ ಅವರ ಸೋದರ ಸೊಸೆ ಮೈರಾ ಇದ್ದರು.
ಮಿಸ್ಟರ್ ಪಿಂಟೋರವರ ಸಾವಿನ ನಂತರ ಟೆಡ್ಡಿ ಕೂಡ ಅವರನ್ನು ಹಿಂಬಾಲಿಸಿದ್ದ. ’ಇನ್ನು ನನ್ನ ಸರದಿ’
ಎನ್ನುತ್ತ ಮುಗುಳ್ನಕ್ಕರು ಶ್ರೀಮತಿ ಪಿಂಟೋ..... ’ಅರೆ ಅಷ್ಟ್ಯಾಕೆ ನೊಂದುಕೊಳ್ತೀಯ?
ಟೆಡ್ಡಿ...ಢ್ಯಾನಿ...ಕೊನೆಗೆ ನಾನು... ಎಲ್ರೂ ಒಳ್ಳೇ ಇನಿಂಗ್ಸನ್ನೇ ಮುಗಿಸಿದ್ದೇವೆ ಬಿಡು.’
ಮಿಸ್ಟರ್
ಪಿಂಟೋ ಸುಳಿವುಕೊಡದೇ, ಇದ್ದಕ್ಕಿದ್ದಂತೆ ಒಂದು ದಿನ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆವತ್ತು
ಇಂಡೋ ಅಮೇರಿಕನ್ ಸೊಸೈಟಿಯಿಂದ ಮನೆಗೆ ಮರಳಿದವರಿಗೆ ಯಾಕೋ ಸುಸ್ತೆನಿಸಿತಂತೆ. ವೈದ್ಯರು
ಬರುವುದರೊಳಗಾಗಿ ಎಲ್ಲ ಮುಗಿದಿತ್ತು. ಇದನ್ನ ಮಿಸೆಸ್ ಪಿಂಟೋ ಹೇಳಲಿಲ್ಲ, ಅವರ ಸೊಸೆ ಮೈರಾ.
ಮೆಟ್ಟಿಲಿಳಿಯುವಾಗ ಹೇಳಿದ್ದರು. ಆಂಟಿಯೂ ಇನ್ನು ಹೆಚ್ಚು ದಿನ ಇರುವ ಸಾಧ್ಯತೆ ಇಲ್ಲ, ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದೂ ಹೇಳಿದ್ದರು.
ಆದಾಗೆಲ್ಲ ಒಮ್ಮೆ ಬಂದು ಮಾತಾಡಿಸಿಕೊಂಡು ಹೋಗಿ ಎಂದಿದ್ದರು.
ಅವರಿಗಾಗಿ
ಏನನ್ನಾದರೂ ಮಾಡಬಹುದಾದ ಆ ಅವಕಾಶವೂ ನನ್ನಿಂದ ಕೈತಪ್ಪಿ ಹೋಯಿತು. ಒಂದು ವಾರಕ್ಕೆ ಇಂಗ್ಲೆಂಡಿಗೆ
ಹೋಗುವವನಿದ್ದೆ.
ನನ್ನ
ಮತ್ತು ಅವರ ಕೊನೆಯ ಭೇಟಿಯಾದ ದಿನ ಕೈಯ್ಯಲ್ಲಿ ಒಂದಿಷ್ಟು ಡೇರೆ ಹೂಗಳನ್ನ ಹಿಡಿದುಕೊಂಡು
ಹೋಗಿದ್ದೆ. ಅವರದನ್ನ ಮೈರಾಗೆ ಕೊಟ್ಟು ಅಲ್ಲೇ ಇದ್ದ ಖಾಲಿ ವಾಸಿನಲ್ಲಿ ಜೋಡಿಸಿಡಲು ಹೇಳಿದರು.
ಅವರ ಕಿರುನಗುವಿನಿಂದ ತಿಳಿಯುತ್ತಿತ್ತು, ಅವರಿಗೆ ಅದು ಖುಷಿ ಕೊಟ್ಟಿದೆ ಎನ್ನುವುದು. ’ಒಳ್ಳೇ
ಕೆಲಸ ಮಾಡಿದೆ ಕಣಪ್ಪ. ಡ್ಯಾನಿಗೆ ಕೆಂಪು ಗುಲಾಬಿಗಳೆಂದರೆ ಪ್ರೀತಿ. ನನಗೆ ಡೇರೆ ಹೂ ಇಷ್ಟ. ಈಗ
ಯಾರೂ ಹೂ-ಗೀ ತರೋದಿಲ್ಲ ಇಲ್ಲಿ...’ ಅಲ್ಲಿಗೆ ನಿಲ್ಲಿಸಿದರು. ನಾನು ಇಂಗ್ಲೆಂಡಿಗೆ
ಹೋಗುತ್ತಿದ್ದೇನೆ ಎಂದು ತಿಳಿದು ಹಾರೈಸಿದ್ದರು. ನೀನು ಅಷ್ಟಷ್ಟು ದೂರ ಹೋದರೆ ನಿಮ್ಮಮ್ಮ ಏನು
ಮಾಡ್ತಾರೆ ಅಂತ ಕೇಳಿದರು. ’ಹುಷಾರು ಕಣಪ್ಪ. ಅಲ್ಲಿ ವಿಪರೀತ ಚಳಿಯಂತೆ. ಬೆಚ್ಚಗಿರು ಯಾವಾಗಲೂ’
ಎಂದಂದು ಬೀಳ್ಕೊಟ್ಟಿದ್ದರು.
ಹೊರಡುವಾಗ
ಮತ್ತೆ ಉಸುರಿದ ಕೊನೆಯ ಸಾಲು ’ಮರೀಬೇಡ...ಸಂಪರ್ಕದಲ್ಲಿರು’.
ಮತ್ತೆ
ನನ್ನಿಂದದು ಸಾಧ್ಯವಾಗಲಿಲ್ಲ. ಕೆಲವು ವಾರಗಳ ನಂತರ ನೆನಪಾಗಿ ಕರೆ ಮಾಡಿದಾಗ...ಮೈರಾ
ಫೋನೆತ್ತಿಕೊಂಡರು. ’ಅವರಿಲ್ಲ’ ಎಂದರು.
ಹೋಗುವವರು
ಸುಮ್ಮನೆ ಹೋಗಲಿಲ್ಲ. ಅವರಿಂದಾಗಿ ನಾನು ಗಂಡಸಾಗಿದ್ದೆ. ಚಿಕ್ಕದೋ ದೊಡ್ಡದೋ,,,ಕನಸುಗಳನ್ನ
ಸಾಕಾರಗೊಳಿಸಿಕೊಳ್ಳುವುದನ್ನ ಕಲಿಸಿ ಹೋದರು. ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಭೆಯ
ನಿರ್ವಹಣೆಯನ್ನು ಮಾಡುವ, ಸಾರ್ವಜನಿಕ ವೇದಿಕೆಯಲ್ಲಿ ಘನವಾಗಿ ಮಾತಾಡುವ, ಕಿರುತೆರೆಯ
ಕಾರ್ಯಕ್ರಮಗಳನ್ನು ನಿರ್ವಹಿಸುವ, ರಿಯಾಲಿಟಿ ಶೋಗಳಲ್ಲಿ ನಿರ್ಣಾಯಕನಾಗುವ, ಈ ಎಲ್ಲ ಬಗೆಯ
ಯಶಸ್ಸಿನ ಹಿಂದೆ ಅವರಿದ್ದಾರೆ.
ಈಗ
ಯಾರಾದರೂ ’ಎಷ್ಟು ಚೆನ್ನಾಗಿ ಸ್ಫುಟವಾಗಿ ಮಾತಾಡ್ತೀಯಲ್ಲ ಕರಣ್’ ಎಂದು ಅಭಿನಂದಿಸುವಾಗೆಲ್ಲ,,,
ನನ್ನ ಹೃದಯ ಕೊಲಾಬಾದ ಆ ಮನೆ ಮತ್ತು ಗಾರ್ಡನ್ನಿನ ಆ ಖಾಲಿ ತೂಗುಯ್ಯಾಲೆಯತ್ತ ಧಾವಿಸುತ್ತದೆ.
ಕನ್ನಡಕ್ಕೆ-
ಪ್ರಜ್ಞಾ ಶಾಸ್ತ್ರಿ
ಈ ಕತೆ ಬರೆದವರು ಹಿಂದೀ ಸಿನೆಮಾ ಜಗತ್ತಿನ ಜನಪ್ರಿಯ ನಿರ್ದೇಶಕ ಕರಣ್ ಜೋಹರ್‌ರವರು. ಈ ಕತೆ ಮತ್ತು ಉಳಿದಂತೆ ೨೨ ಸಿನೆಮಾ ಮಂದಿಯ ಕತೆಗಳನ್ನು ಖ್ಯಾತ ಚಿತ್ರ ವಿಮರ್ಶಕರೂ, ನಿರ್ದೇಶಕರೂ ಆದ ಖಲೀದ್ ಮೊಹಮದ್‌ರವರು ಸಂಪಾದಿಸಿದ್ದಾರೆ. ಆ ಪುಸ್ತಕದ ಹೆಸರು ’ಫ್ಯಾಕ್ಷನ್’ (FACTION). ಇಲ್ಲಿರುವ ಕತೆಗಳನ್ನು ನಿಜ ಬದುಕಿನ ಘಟನೆಗಳನ್ನಾಧರಿಸಿ ಹೆಣೆದ ಕಾಲ್ಪನಿಕ ಕತೆಗಳು ಅನ್ನಬಹುದೇನೋ. ಈ ಕತೆಯಲ್ಲಿ ಕೂಡ ಕರಣ್‌ರವರ ವೈಯಕ್ತಿಕ ಬದುಕಿನ ಝಲಕನ್ನು ಓದುಗರು ಗುರುತಿಸಬಹುದು.