Saturday, January 17, 2015

ಲಲ್ಲಾ ಎಂಬ ಅಸೀಮರೂಪಿ ಕಡಲು



ಲಾಲ್ ದೀದಿ, ಲಲ್ಲೇಶ್ವರಿ, ಲಲ್ಲಾ ಅರೀಫಾ ಹಾಗೂ ಲಾಲ್ ಡೇಡ್ ಎಂದೆಲ್ಲ ಕರೆಯಿಸಿಕೊಳ್ಳುವ ಹದಿನಾಲ್ಕನೆಯ ಶತಮಾನದ ಈ ಕಾಶ್ಮೀರಿ ಶಿವ ಶರಣೆ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವುಂಡು, ಸಂಸಾರವನ್ನು ತ್ಯಜಿಸಿ, ಶೈವ ಮಾರ್ಗವನ್ನು ಹಿಡಿದವಳು. ಕಾಶ್ಮೀರಿ ಪಂಡಿತರ ಕುಟುಂಬದ ಈಕೆಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಯಿತಂತೆ. ಅವಳ ಅತ್ತೆಯಿಂದ ಸಾಕಷ್ಟು ಗೋಳು ಅನುಭವಿಸಿ, ನಂತರದಲ್ಲಿ ಶೈವ ಪಂಥದ ಸಿದ್ದರೊಬ್ಬರನ್ನು ಅನುಸರಿಸಿ ತಾನೂ ಸನ್ಯಾಸಿನಿಯಾದಳಂತೆ. ನಮ್ಮ ಅಕ್ಕಮಹಾದೇವಿಯನ್ನು ನೆನಪಿಸುವ ಲಲ್ಲಾ ಬತ್ತಲೆಯಾಗಿ ಓಡಾಡುತ್ತಿದ್ದಳೆಂದೂ ಕತೆ ಹೇಳುತ್ತಾರೆ. ಅಕ್ಕನಂತೆಯೆ ವಚನಗಳನ್ನು ರಚಿಸಿದ್ದಾಳೆ. ಜಾತಿ, ಪಂಥ, ಮತಧರ್ಮಗಳ ಚೌಕಟ್ಟನ್ನು ಮೀರಿ ಜನ ಅವಳನ್ನು ಗೌರವಿಸುತ್ತಿದ್ದರಂತೆ. ಇಂತಿಪ್ಪ ಲಲ್ಲಾಳೇ ಸಚ್ಚಿದಾನಂದನ್ ಅವರ Lal Ded speaks against borders ಎಂಬ ನೀಳ್ಗವಿತೆಯ ಮೂಲ ದನಿ. 

ಸಚ್ಚಿದಾನಂದನ್ ಅವರ ಕಾವ್ಯವು ಭಾರತದ ಅನೇಕ ಸೂಫಿ ಸಂತರು ಮತ್ತು  ಭಕ್ತಿ ಪಂಥದ ದಾರ್ಶನಿಕರನ್ನು  ಸಮಕಾಲೀನ ಪ್ರಜ್ಞೆಯೊಳಗೆ ಪುನರ್-ಸೃಜಿಸುತ್ತದೆ. ಅದು ಒಂದು ಬಗೆಯಲ್ಲಿ ಸಮಕಾಲೀನ ಸಾಮಾಜಿಕ ಅವಸ್ಥಾಂತರಕ್ಕೆ ನೀಡುವ ಪ್ರತಿಕ್ರಿಯೆಯೂ ಹೌದು ಮತ್ತು ಪ್ರತಿರೋಧಕ್ಕೆ ಹೊಸ ಕಾವ್ಯ ಮೀಮಾಂಸೆಯೊಂದನ್ನು, ಪರ್ಯಾಯ ಪರಿಭಾಷೆಯೊಂದನ್ನು ಅರಸುವ ಪ್ರಕ್ರಿಯೆಯೂ ಹೌದು ಎನ್ನುತ್ತಾರೆ ಕವಿ. ಅದೇ  ನಿಟ್ಟಿನಲ್ಲಿ, ಲಾಲ್ ಡೇಡ್ ಬಗ್ಗೆ ಇರುವ  ನೀಳ್ಗವಿತೆ ಕೂಡ ಕಾಶ್ಮೀರದ  ಹಿಂಸಾತ್ಮಕ  ಸ್ಥಿತ್ಯಂತರಗಳ  ಹಿನ್ನೆಲೆಯಲ್ಲಿ ಮನುಷ್ಯ ನಿರ್ಮಿತ ಹಾಗೂ ಮನುಷ್ಯರಲ್ಲಿ ಸ್ವಭಾವಜನ್ಯವಾಗಿ ಇದ್ದಿರಬಹುದಾದ ಎಲ್ಲ ಎಲ್ಲೆಗಳನ್ನೂ ಮೀರುವ ದನಿಯಾಗಿದೆ. 


# ೧

ಕಳೆದ ರಾತ್ರಿ
ಚಿನಾರ್ ಮರವೊಂದು ಚೀತ್ಕರಿಸಿ
ಓಡಿದ್ದ ಕಂಡೆ. ತತ್ತರಿಸಿ ಹೊಯ್ದಾಡುತ್ತಿದ್ದವು
ಅದರ ಎಲೆ, ಟೊಂಗೆಗಳು.
ಬೇರುಗಳಿಂದ ರಕ್ತ ಜಿನುಗುತ್ತಿತ್ತು.
ಹಿಂತಿರುಗಿ ನೋಡಲೂ ಭಯವದಕ್ಕೆ.
ಆಕಾಶವೇ  ಮಗುಚಿ ಬಿದ್ದಿತ್ತು
ದಾಲ್ ಸರೋವರದೊಳಕ್ಕೆ.
ಅದೀಗ ಬೆಂಕಿಯುಗುಳುವ ನದಿ.


ಮೊಸಳೆಯ ದೇಹ ಮತ್ತು ಸಾವಿರ ಡ್ರ್ಯಾಗನ್ ಮುಖಗಳುಳ್ಳ
ಒಂದು ಭಯಾನಕ ಪಶು ಕೋರೈಸುತ್ತಿದ್ದ
ಸರೋವರದೊಳಗಿಂದ ಎದ್ದು ಬಂತು.
ಅದರ ಕಣ್ಣುಗಳು ಮಿಂಚಿನ ಸೆಳಕನ್ನೇ ಉಗುಳುತ್ತಿದ್ದವು.
ಪ್ರತಿ ಉಗುರಿನಲ್ಲೂ ನವಜಾತ ಶಿಶುವಿನ
ಶವ ನೇತಾಡುತ್ತಿತ್ತು, ಹತ್ತು ಸಾವಿರ ಉಗುರುಗಳಿಗೆ
ಹತ್ತು ಸಾವಿರ ಶವಗಳು.
ಸೀಳೊಡೆದ ಅದರ ತುಟಿಯಿಂದ
ತೊಟ್ಟಿಕ್ಕುವ ವಿಷ ಬಿದ್ದಲ್ಲೆಲ್ಲ
ಅಣ್ಣ ತಮ್ಮಂದಿರು ಬಡಿದಾಡಿಕೊಂಡರು
ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ
ಕೇಸರಿ ಮತ್ತು ಚಂದನದ ಮರಗಳು
ಬಾಡಿ ಹೋದವು.
ಅದರ ಉಸಿರಾಟವೆಬ್ಬಿಸಿದ ಧೂಳಿನ ಬಿರುಗಾಳಿಯಲ್ಲಿ
ಸೂರ್ಯ ಕಾಣದಾದ,
ಹೆಂಗಸರು ದಿಕ್ಕು ತಪ್ಪಿ ಹೊಯ್ದಾಡಿದರು
ಒಂದು ಕಾಲಕ್ಕೆ ತಾವರೆಗಳನ್ನು ತುಂಬಿಕೊಂಡು
ಹೋಗುತ್ತಿದ್ದ ನಾವೆಗಳಲ್ಲಿ ಈಗ ಗತಿ-ಗೋತ್ರವಿಲ್ಲದ
ಶವಗಳ ಮೌನಯಾತ್ರೆ. ಮೂಳೆಗಳ ಮಳೆಯಾಗಿತ್ತು.


ಅಳಿದುಳಿದು ಪಾಳುಗೊಂಡಿದ್ದರ ಮೇಲೆ
ನಿಸ್ತೇಜ ಹಿಮದ ಗುಪ್ಪೆ
ಅದರ ನಡುವೆ ನಡೆದಿತ್ತು ಶಿವನ ತಾಂಡವ
ಅವನ ಡಮರಿನ ನಾದಕ್ಕೆ ನಾ ಎದ್ದೆ.

#೨

ಏಕಾಂಗಿಯಾಗಿ ಕೂತಿದ್ದೇನೆ  ನಾ ಕಂಗೆಟ್ಟು
ವಿಷ ಕುಡಿದ ಗಂಟಲೀಗ ನೀಲಿ ನೀಲಿ
ಮೈತುಂಬ ಹೂವರಳಿದ
ದೇವದಾರು ವೃಕ್ಷಗಳೆಲ್ಲಿ ಕಾಣೆ
ಶಿವನೆಲ್ಲಿ ಎಂದು ಕೇಳಿದ ಕ್ಷಣ ಮಾಯ.


ಕಣಿವೆಯ ಸಂತರೇ ಹೇಳಿ
ಅರೆಬೆಂದ ಮಡಿಕೆಗಳಲ್ಲಿ ನೀರು ಸೋರುವ ಹಾಗೆ
ಹೃದಯಗಳಿಂದ ನಮ್ಮ ಮಾತುಗಳು
ಬತ್ತಿ ಹೋಗಿದ್ದು ಯಾವಾಗ?


ಸರಹದ್ದುಗಳನ್ನು ನಂಬುವವರ ಜೊತೆ
ವಸಂತಗಳೂ, ತಾರೆಗಳೂ,
ಮಾತನಾಡುವುದಿಲ್ಲ
ನನಗೆ ಸರಹದ್ದುಗಳಲ್ಲಿ ನಂಬಿಕೆಯಿಲ್ಲ:
ಮರಳ ಕಣಗಳಿಗೆ ಗೊತ್ತಿರುತ್ತದೆಯೆ
ತಾವಿರುವ ತಾಣದ ಹೆಸರು


ಸೇಬಿನ ಮರದ ಬೇರುಗಳು
ಮನುಷ್ಯ ನಿರ್ಮಿಸಿದ ಗೋಡೆಗಳಡಿಯಲ್ಲಿ
ಪರಸ್ಪರ  ಒಂದನ್ನೊಂದು ತಡಕಾಡುತ್ತಿರುತ್ತವೆ.
ಗಾಳಿ, ನೀರು ಮತ್ತು ಬೇರುಗಳು
ಎಂತಹ ಗೋಡೆಯನ್ನಾದರೂ ಶಿಥಿಲಗೊಳಿಸಬಲ್ಲವು
ಹಕ್ಕಿಗಳು ತಮ್ಮ ಮೊನಚು ರೆಕ್ಕೆಗಳಿಂದ
ಲಟ್ಟನೆ ಮುರಿದು ಹಾಕುತ್ತವೆ ಸೀಮಾರೇಖೆಗಳನ್ನ
ನಕ್ಷೆಯ ಮೇಲಿನ ಗೆರೆಗಳು ಒಂದು
ಒಣ ಎಲೆಯನ್ನು ಕೂಡ ನಿಲ್ಲಿಸಲಾರವು.


ನಾವು ನದಿಗಳಾಗೋಣ ಬನ್ನಿ.  


# ೩

ಭೂಮಿಯಿಂದಾಚೆ ಪಯಣಿಸಿದ್ದೆ ನಾನು
ನಾಕ ನರಕಗಳೆಂಬ ಆ ಲೋಕಕ್ಕೆ
ಯಾವ ಅನುಮತಿಯ ಸೊಲ್ಲಿಗೂ ಕಾಯಲಿಲ್ಲ.
ತನುವಿತ್ತು ಇಲ್ಲೆ
ಕಾಮನಬಿಲ್ಲೇರಿದ್ದು ಆತುಮ.
ಹಾದಿಯಲ್ಲಿ ಹದ್ದೊಂದು
ಇಬ್ಭಾಗವಾಗಿದ್ದ  ಅದು ಕಂಡಿತ್ತು, ಒಂದೆಡೆ
ಚೂಪುಕೊಂಬಿನ ಮೋಡಗಳನ್ನೂ
ಇನ್ನೊಂದೆಡೆ ಅಡವಿಯಲ್ಲಿ ಪಾಂಡವರ ತಾಯಿ
ಉರುವಲಾಯುವುದನ್ನೂ ಕಂಡಿತ್ತು.
ಹೇಸರಗತ್ತೆಯನ್ನೇರಿ ಕಾಳಿಂದಿಯತ್ತ
ಹೊರಟ ಗೊಲ್ಲರ ಕೃಷ್ಣ ಕಂಡ
ಅವನ ಬಟ್ಟೆ ಪೂರ್ತಿ ಕೆಸರಾಗಿತ್ತು.
ಶಿವನ ನಂದಿ ಗದ್ದೆ ಊಳುವುದ ನೋಡಿತ್ತು.
ಹೊಲ ಗದ್ದೆಗಳನ್ನು ಕಾಯುತ್ತ
ಬೆಟ್ಟ ಗುಡ್ಡಗಳಲ್ಲಿ ಅಂಡಲೆಯುತ್ತಿದ್ದ ಪಾರ್ವತಿಯನ್ನೂ,
ಬೆಟ್ಟದ ಜೋಪಡಿಯೊಂದರಲ್ಲಿ ಸಣ್ಣಗೆ ಗುನುಗುತ್ತಿದ್ದ ಸೀತೆಯನ್ನೂ ಕಂಡಿತ್ತು.
ಕೇಳಿ ಬಂದಿತ್ತು ಲವನ ಕೇಕೆ
ಹುಲಿಯೊಂದರ ಗವಿಯೊಳಗಿಂದ.

#

ಮಟ ಮಟ ಮಧ್ಯಾಹ್ನಕ್ಕೇ  ಕತ್ತಲು ಕವಿಯುತ್ತದೆ.
ನಾವು ಜ್ವಾಲಾಮುಖಿಗಳ ಮೇಲೆ
ವೈನ್ ಹೀರುತ್ತ ಕೂರುತ್ತೇವೆ
ಗೋರಿಗಳ ಅಂಚಿನಲ್ಲಿ ಕುಣಿಯುತ್ತೇವೆ
ಚಂದ್ರನ ಕೆಳಗೆ ಆರಾಮವಾಗಿ ಒರಗಿಕೊಂಡು
ನಂದಿಯಂತೆ ಹೊಳೆವ ಕಣ್ಣುಳ್ಳ
ಕೋಗಿಲೆಯೊಂದು ಉಲಿದಿತ್ತು
ರಕ್ತಕ್ಕೆ ಮೇರೆಗಳಿಲ್ಲ. ಮತ್ತೊಬ್ಬನೊಳಗೆ
ಹರಿದುಕೊಂಡು ಹೋಗುವುದು ನಿನ್ನೊಳಗಿನ ರಕ್ತವೇ.
ಒಲುಮೆಯ ಸ್ಪರ್ಶಕ್ಕೆ ಒಂದರೊಳಗೊಂದು
ಐಕ್ಯವಾಗುತ್ತದೆ ಇಬ್ಬರ ರಕ್ತವೂ
ಹಗೆತನದ ಸ್ಪರ್ಶಕ್ಕೆ ಅದೇ ರಕ್ತ ಚೀತ್ಕರಿಸಿ ಹೊರಗೆ ಧುಮ್ಮಿಕ್ಕುತ್ತದೆ.
ವಸ್ತ್ರಗಳೂ ಮೇರೆಗಳೇ.
ಅದಕ್ಕಾಗಿಯೆ ನಾನು ಕಳಚಿಟ್ಟಿದ್ದೇನೆ ಬಟ್ಟೆಗಳನ್ನು  
ನನ್ನ ಶಿವನನ್ನು ತಲುಪಲೋಸುಗ.
ಕೊಳದ ಮೇಲಿನ ಮಂದ ಮಾರುತಂತೆ  ನಾನು ಬತ್ತಲೆ
ನನ್ನೀ ಅಧರಗಳೇ ಉರಿವ ಬತ್ತಿಗಳು
ಸ್ತನಗಳೇ ಪುಷ್ಪಗಳು, ಕಟಿಯೇ ಧೂಪ. ಇಗೋ
ನನ್ನನ್ನೇ ಸಮರ್ಪಿಸಿಕೊಂಡೆ ಪರಶಿವನಿಗೆ.


ಕೇಳಿ ಅಶ್ವತ್ಥ ಮತ್ತು ಮುತ್ತುಗವನ್ನು
ಆತುಮಕ್ಕೆ ಮತಧರ್ಮ[1]ವಿಲ್ಲ.
ಪ್ರಕೃತಿ ಎಲ್ಲವನ್ನೂ ಪೋಷಿಸುತ್ತದೆ.


ಅಲ್ಲಿ ಕಾಣುವ ನೀಲ ಆಕಾಶವೇ
ನೀಲಕಾಂತನ ಕಂಠ

# ೫        

ಆಗಸವೇರುತ್ತಿದ್ದ ಬಾನಾಡಿ ಹಕ್ಕಿಯನ್ನು ಕೇಳಿದೆ
ಅವಳ ಹಾಡಿನ ಅರ್ಥ ಏನೆಂದು
ಅವಳು ಸಾಯುವುದರೊಳಗೆ ಹೇಳಿ ಹೋಗೆಂದೆ
ಇಷ್ಟೇ ಹೇಳಿದ್ದು ಅವಳು:
ಮಿನುಗುವುದನ್ನು ನಿಲ್ಲಿಸಿದರೆ.
ನಂದಿಹೋಗುತ್ತಿರುವ ಕೆಂಡ ಬದುಕುಳಿಯುವುದಿಲ್ಲ
ಹಸಿದವರಿಗಾಗಿ ಅವಳ ಹಾಡನ್ನ
ಬೇಯಿಸುತ್ತಿದ್ದುದ ಕಂಡೆ.
ಚಳಿಯಲ್ಲಿ ನಡುಗುತ್ತಿದ್ದವರಿಗಾಗಿ
ಅವಳ ಹಾಡು ಮಗ್ಗವನ್ನೇರಿತ್ತು, ಮರುಕ್ಷಣ,
ನೆರಳಿಲ್ಲದವರಿಗಾಗಿ ಸರಸರನೆ
ಬಿಲ್ಲಿನಂತೆ ಬಾಗಿ ಸೂರಾಗಿದ್ದ ಕಂಡೆ.
ಆಗ ಅರಿತೆ ಪ್ರಾರ್ಥನೆಯ ಅರ್ಥ
ಪ್ರತಿ ಶಿಲೆಯೂ ಶಂಭುವಾಗಿತ್ತು.
ಕಂಡ ಕಂಡ ರಕ್ತನಾಳಗಳಲ್ಲಿ ತತ್ತಿಯಿಟ್ಟಿತ್ತು ಕೋಗಿಲೆ
ಪ್ರತಿ ನರವೂ ಶತತಾಂತ್ರಿಯ[2] ತಂತಿಯಾಗಿತ್ತು


ಚಿರತೆಯ ಗವಿಯೊಳಗೆ ನರ್ತಿಸಿದ್ದೆ ನಾನು
ಶಬ್ಧ ಚೌಕಟ್ಟಿನಾಚೆ ಬಂದಿತ್ತು

  
# ೬

ನಾನೊಂದು ಸರೋವರ
ಅಮೇಯ ನೀಲಿಯ ಸರೋವರ
ಶಿವ ನನ್ನ ತೀರ
ಅಸೀಮ  ಹಸಿರಿನ ತೀರ
ಕಬ್ಬಿಣದ ಪರದೆಗಳಿಲ್ಲ, ಬೇಲಿ ಸಾಲುಗಳಿಲ್ಲ
ಮಳೆ ಮತ್ತು ಹರಿಣಗಳು ಮೇಯಲಿ ಇಕ್ಕೆಲಗಳಲ್ಲಿ
ಹೋಯ್, ಮರದ ಹಸುವಿನ ಹಾಲ ಕರೆಯುತ್ತಿದ್ದೀರಾ
ತೋಳುಗಳು ಎದೆಗವಚಿಕೊಳ್ಳುವುದಕ್ಕಿವೆ.
ಲೋಭವನ್ನು ಜಯಿಸಿದವಳಿಗೆ
ಕತ್ತಿ ಯಾಕೆ ಬೇಕು?
ಭೋಗಾಪೇಕ್ಷೆಯಿಲ್ಲದವಳಿಗೆ ಅವಕುಂಠನ ಬೇಕೆ?
ಶಿಲೆಯಂತೆ ನಡೆ
ಒನಕೆಯಂಬರು, ಶಿವನೆಂಬರು
ಮಲಿನ ಮಾಡಬೇಡ ಅಷ್ಟೆ.  


ನನ್ನ ಕಂಠವನ್ನು ನೋಡು, ಅದು
ಬ್ರಹ್ಮನ ಪಾನಪಾತ್ರೆ.
ನೋಡಿಲ್ಲಿ, ಭುಜದ ಇಕ್ಕೆಲಗಳಲ್ಲಿ ಕಪೋತವೂ
ಸಿಂಹವೂ ಕುಳಿತಿವೆ.
ನಾನು ಭವಿಷ್ಯದ ಬಾಲ್ಯ, ನಾನು
ಏಳೇಳು ಜನ್ಮ ಹೊಂದಿದ ಬಾದಾಮ್ ಮರ.


ನಾನೊಂದು ವರ್ಣಮಾಲೆ.       
 

# ೭

ನನಗೆ ಎಲ್ಲೆಗಳಲ್ಲಿ ನಂಬಿಕೆಯಿಲ್ಲ.
ಜನುಮದಿಂದ ಜನುಮಕ್ಕೆ ಹರಿಯುವವರನ್ನು
ಯಾವ ಕೋಟೆಯೂ ತಡೆಯಲಾರದು.
ನಾವು ಹಿಂದೆ ಇದ್ದೆವು, ಮುಂದೆ ಇರಲಿದ್ದೇವೆ.
ಅನಂತವು ಅನುದಿನವೂ ಪಲ್ಲವಿಸುತ್ತದೆ,
ಹಾಗೆ ಚಂದ್ರನೂ ಕೂಡ. 


ಅಮ್ಮನ ಮಡಿಲಲ್ಲಿ ರಚ್ಚೆ ಹಿಡಿದ ಮಗುವಿನಂತೆ
ಮಾಂಸದ ತಡಿಕೆಯೊಳಗೆ ಚಡಪಡಿಸುತ್ತಿರುವ
ಮನವೇ ಕೇಳು,
ಕ್ಷುಲ್ಲಕ ಮೋಹಗಳನ್ನು ಮೀರು
ಬೆಳೆ ಬಯಲ ಭವ್ಯದವರೆಗೆ.
ದಿಕ್ಕುಗಳೇ ಇಲ್ಲದ ತಾಣಕ್ಕೆ ನಡೆ
ಇಂದ್ರಿಯಗಳ ಗ್ರಹಿಕೆಯಾಚೆ
ಅರಿವಿಗೆ ಎಲ್ಲೆಗಳಿರುವುದಿಲ್ಲ,
ಜೀವನ್ಮುಕ್ತನ ಅರಿವಿನ ಬೆಳಕು ಪಾರವಿಲ್ಲದ್ದು.  


ರಕ್ತದ ದುರ್ಗಂಧವೇ ಮೈತುಂಬಿ ಅರಳುವ
ವ್ಯರ್ಥ ಮುಂಜಾವುಗಳಿಗೆ ಇಗೋ ವಿದಾಯ
ಸಿಡಿಮದ್ದಿನ ರುಚಿ ಹೊಂದಿದ
ಇತಿಹಾಸದ ಮಳೆಗಳಿಗೆ ಇಗೋ ವಿದಾಯ.

  
ಮರಳಿ ಬನ್ನಿ ದ್ರಾಕ್ಷಿಯ ತೋಟಗಳೆ,
ಮರಳಿ ಬನ್ನಿ  ಕುರಿ ಮರಿಗಳೆ,
ಗುಬ್ಬಚ್ಚಿಗಳೆ, ತಾವರೆ ಕೊಳಗಳೆ:
ಮರಳ ಕಣದಾಂತರ್ಯದಿಂದ
ಅನಂತವು ಕರೆಯುತ್ತಿದೆ, ಎನ್ನಿ.






ಮೂಲ: ಕೆ. ಸಚ್ಚಿದಾನಂದನ್[1996] [Lal Ded speaks against borders]
ಕನ್ನಡಕ್ಕೆ: ಪ್ರಜ್ಞಾ





[1] ರಿಲಿಜನ್ ಅನ್ನುವ ಅರ್ಥದಲ್ಲಿ.  ಈ ಅಡಿ ಟಿಪ್ಪಣಿ ನನ್ನದು. 
[2] ಸಂತೂರ್ 

1 comment:

  1. ಇವಳು ಶರಣೆಯೂ ಹೌದು, ಕವಿಯೂ ಹೌದು! ಕಣ್ಣು ತೆರೆಸುವ ಮನೋಭಾವ ಹಾಗು ಕಣ್ಣು ಕೋರೈಸುವ ಕಾವ್ಯಸಾಮರ್ಥ್ಯ! ಸಚ್ಚಿದಾನಂದನ್ ಅವರ ಕವನವನ್ನು ಸೊಗಸಾಗಿ ಅನುವಾದಿಸಿದ್ದೀರಿ.

    ReplyDelete