Saturday, January 3, 2015

ಪುಟ್ಟನ ಆಕಾಶ



ಪುಟ್ಟನಿಗೆ ಹಾಲೆಂದರೆ ವಾಕರಿಕೆ. ಊಟ ಮಾಡಲು ಬೇಸರ. ಮೀಯಲು ಆಲಸ್ಯ. ರಾತ್ರಿ ಬೇಗ ಮಲಗಲು ಒಲ್ಲ. ಅದಕ್ಕೆ ಅವನ ಅಮ್ಮನಿಗೂ ಗುಮ್ಮನಿಗೂ ದೋಸ್ತಿ. ಅವಳು ಕರೆದಾಗಲೆಲ್ಲ ಅವಳ ಹೆಗಲೇರಿ ಬರುವ ಕರಿಕಂಬಳಿ ಮುಸುಕಿನ ಗುಮ್ಮನ ಮುಖ ಯಾವತ್ತೂ ಕಂಡಿಲ್ಲ. `ಕಣ್ಣುಗಳು ಕೆಂಡದಂತೆ, ಹಣೆಯ ಮಧ್ಯಕ್ಕೆ ಒಂದು ಕೊಂಬುಂಟು, ಒಂದೊಂದು ಕೈಗೂ ಆರಾರು ಬೆರಳು, ಪಾದ ನೆಲಕ್ಕೆ ಊರುವುದಿಲ್ಲ' ಎಂದು ಅಮ್ಮ ಹೇಳಿದ್ದನ್ನು ಕೇಳಿದ್ದು. ಒಳ್ಳೆಯ ಮಕ್ಕಳನ್ನು ಕಂಡರೆ ಏನೂ ಮಾಡುವುದಿಲ್ಲ. ಒಳ್ಳೆಯ ಅಂದರೆ... ಕುಡಿ ಅಂದ ಕೂಡಲೇ ಹಾಲು ಕುಡಿಯುವ, ಏನು ಬಡಿಸುತ್ತಾರೋ ಅದನ್ನು ಶ್ರದ್ಧೆಯಿಂದ ಊಟ ಮಾಡುವ, ಹೊತ್ತಿಗೆ ಸರಿಯಾಗಿ ಮೀಯುವ ಮತ್ತು ನಿದ್ದೆ ಮಾಡುವ ಮಕ್ಕಳು. ಹಠ ಮಾಡುವ ಮಕ್ಕಳನ್ನು ಕಂಡರೆ ಸಿಟ್ಟು. ಜಾಸ್ತಿ ರಂಪ ಮಾಡಿದರೆ ಸೀದಾ ಎತ್ತಿಕೊಂಡು ಹೋಗಿ ಕುಟ್ಟಪ್ಪೆಕುಳಿಯೊಳಗೆ ಕೂಡಿಹಾಕುತ್ತಾನೆ. ಆಮೇಲೆ, ಅಮ್ಮ ಕೈಮುಗಿದು ಬೇಡಿಕೊಂಡರೆ ಬಿಟ್ಟುಬಿಡುತ್ತಾನಂತೆ. 

ಪುಟ್ಟನಿಗೆಂದೂ ಹಾಗಾಗಿಲ್ಲ. ಅಮ್ಮ ಗುಮ್ಮನನ್ನು ಕರೆಯುವವರೆಗೆ ಮಾತ್ರ ಅವನ ಹಠ. ಅತ್ತ ಗುಮ್ಮ ತನ್ನ ಕರಿಕಂಬಳಿಯನ್ನು ಹೊದ್ದು ಇತ್ತ ಮುಖ ಮಾಡುವಷ್ಟರಲ್ಲಿ ಪುಟ್ಟನ ತಟ್ಟೆಯ ಹಾಲು ಖಾಲಿ. ಹಾಗಾಗಿ ಇದುವರೆಗೂ ಅವನು ಕುಟ್ಟಪ್ಪೆಕುಳಿಯನ್ನು ನೋಡಿಲ್ಲ.
ಇವತ್ತೂ ಎಂದಿನಂತೆ ಅಮ್ಮ ಗುಮ್ಮನನ್ನು ಆಹ್ವಾನಿಸಿ, ಗುಮ್ಮ ರೆಡಿಯಾಗಿ ಬರುವುದರೊಳಗೆ ಸೊರಸೊರ ಎಂದು ಹಾಲು ಕುಡಿದು, ಚಾದರವನ್ನ ಮೈ ಪೂರ್ತಿ ಸುತ್ತಿಕೊಂಡು ಟಪಕ್ಕನೆ ನಿದ್ದೆ ಹೋದ.

ಮಧುಮತಿ ಟೀಚರ್ ಇವತ್ತು ಕೆಂಪು ಸೀರೆ ಉಟ್ಟಿದ್ದರು. ಕೆಂಪೆಂದರೆ ಪುಟ್ಟನ ಫೇವರಿಟ್ ಬಣ್ಣ. ಅವನ ಬಳಿ ಮೂರು ಕೆಂಪು ಶರ್ಟ್‌ಗಳಿವೆ. ಯಾತ್ರೆಯಿಂದ ಮರಳಿದ ಅಜ್ಜಿ ತಂದ ಸೀರೆಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೋ ಎಂದು ಅಮ್ಮನಿಗೆ ಹೇಳಿದರೆ, ಇವನು ಮಧ್ಯೆ ಕೈ ಹಾಕಿ ಕೆಂಪುಬಣ್ಣದ ಸೀರೆ ಎತ್ತಿಕೊಟ್ಟಿದ್ದ. ಅಪ್ಪನ ಕಾರು ಕೆಂಪು. ಮನೆಯ ಫ್ರಿಜ್ಜು ಕೆಂಪು. ಪಾಟಿಚೀಲ ಕೆಂಪು. ಕಂಪಾಸ್ ಬಾಕ್ಸ್ ಕೂಡ ಕೆಂಪು.

ಊಟದ ಬ್ರೇಕ್. ಎಲ್ಲ ಮಕ್ಕಳೂ ತಮ್ಮ ತಮ್ಮ ಊಟದ ಡಬ್ಬಿ ಹಿಡಿದು ಸಾಲಾಗಿ ನೆಲದ ಮೇಲೆ ಕೂತರು. ಪುಟ್ಟನ ಅಮ್ಮ ಪಲಾವ್ ಕಳಿಸಿದ್ದಳು. ಪಲಾವ್ ಕೂಡ ಪುಟ್ಟನ ಫೇವರಿಟ್. ಇನ್ನೇನು ಬಾಯಿಗಿಡುವಷ್ಟರಲ್ಲಿ ಮಧುಮತಿ ಟೀಚರ್ ಓಡುತ್ತ ಬಂದರು. ಧಡಧಡ ಬಾಗಿಲು ಹಾಕಿ, `ಮಕ್ಕಳಾ! ಎಲ್ರೂ ಬೇಗ ಬೇಗ ನಿಮ್ಮ ಬೆಂಚಿನ ಕೆಳಗೆ ಮಲಗಿ, ಬೇಗ ಬೇಗ...' ಅಂದರು. ಏದುಸಿರು ಬಿಡುತ್ತ, ತಾವೂ ಒಂದು ಡೆಸ್ಕಿನ ಕೆಳಗೆ ಅಡಗಿ ಕೂತರು.
ಪುಟ್ಟನಿಗೆ ಆಶ್ಚರ್ಯ. ಅರೆ, ಇದ್ಯಾವ ಆಟ?! ಕಣ್ಣಮುಚ್ಚೆ ಕಾಡೇಗೂಡೆ? ಮಜವೋ ಮಜ!! ಈಗ ನಮ್ಮನ್ನು ಹಿಡಿಯುವವರು ಯಾರು? ನಾನಂತೂ ಮೊದಲು ಸಿಗಬಾರದು ಅವರ ಕಣ್ಣಿಗೆ. ಇದ್ದ ಜಾಗದಲ್ಲಿಯೇ ಇನ್ನಷ್ಟು ಮುದುರಿ ಮಲಗಿದ. 
ಅದೇನದು ಹೊರಗೆ? ಪಟಾಕಿ ಸದ್ದಾ? ಇವತ್ಯಾಕೆ? ಅಯ್ಯಬ್ಬಾ! ಅರೆ? ಇನ್ನೂ ಯಾಕೆ ಯಾರೂ ನಮ್ಮನ್ನು ಹುಡುಕಿಕೊಂಡು ಬರುತ್ತಿಲ್ಲ... ಮಧುಮತಿ ಟೀಚರ್ರಿಗೆ ಕಿರುಬೆರಳು ತೋರಿಸಿದ. ಟೀಚರ್ ಕಣ್ಣು ಬಿಟ್ಟು ಹೆದರಿಸಿದರು. ಧಡ್ ಧಡ್ ಧಡ್... ಯಾರೋ ಬಾಗಿಲನ್ನು ಒದೆಯುತ್ತಿದ್ದರು. ಕಳ್ಳ ಆದವರು ಇರಬೇಕು. ಬಾಗಿಲು ಹಾಕೇ ಇದ್ದರೆ ಹೇಗೆ ಹುಡುಕುತ್ತಾನೆ ಅವನು? ಬಾಗಿಲು ಒಮ್ಮಿಂದೊಮ್ಮೆಲೇ ಮುರಿದುಬಿತ್ತು.
ಪುಟ್ಟನ ಎದೆ ಡವಡವ. ಅರೇ! ಇವನು ಅಮ್ಮನ ಗುಮ್ಮನಂತಿದ್ದಾನೆ. ಕರಿಕಂಬಳಿ ಗುಮ್ಮ. ಅಯ್ಯೋ! ಶಾಲೆಗೆ ಯಾಕೆ ಬಂದ? ಅಮ್ಮ ಕಳಿಸಿರಬೇಕು. ನಾನು ಚಡ್ಡಿ ಒದ್ದೆ ಮಾಡಿಕೊಂಡಿದ್ದು ಗೊತ್ತಾಗಿರಬೇಕು. ಏನು ಮಾಡಲಿ, ಹೋಗುತ್ತೇನೆಂದರೂ ಟೀಚರ್ ಬಿಡಲಿಲ್ಲ. ಗುಮ್ಮನ ಕೈಲಿ ಅದೇನದು? ಅರೆರೆರೆ! ಎಂತಾ ಪಿಸ್ತೂಲು. ಅಪ್ಪನಿಗೆ ಹೇಳಬೇಕು, ತಂದುಕೊಡು ಅಂತ. ಅಲ್ಲಲ್ಲ... ಅತ್ತೆಗೆ ಹೇಳುತ್ತೇನೆ.
ಅಯ್ಯೋ ಇದೇನಾಯ್ತು! ಅದ್ಯಾರು ಮೀನಾ... ಅಯ್ಯೋ ಪ್ರವೀಣ.. ರಾಜೇಶ... ಹಜೀರಾ.... ಕಾವ್ಯ?
ಗುಮ್ಮ ಪಿಸ್ತೂಲಿಂದ ಒಂದೇ ಸಮನೆ ಗುಂಡು ಹಾರಿಸುತ್ತಿದ್ದಾನೆ. ದೇವ್ರೇ ಮಧುಮತಿ ಟೀಚರ್... ಎಲ್ಲ ಕೆಂಪು ಕೆಂಪು... ಗುಮ್ಮ ನನ್ನನ್ನೂ ನೋಡಿದ... ಪಿಸ್ತೂಲು ನನ್ನತ್ತ ಗುರಿ... ಅಮ್ಮಾ.... ಗುಮ್ಮನ್ನ ವಾಪಾಸ್ ಹೋಗು ಹೇಳೇ... ಇನ್ಮೇಲೆ ಸುಸ್ಸು ಬಂದರೆ ಟೀಚರ್ ಬ್ಯಾಡ ಅಂದರೂ ಟಾಯ್ಲೆಟ್ಟಿಗೆ ಓಡ್ತೀನಿ... ಅಮ್ಮಾ... ಅಮ್ಮಾ...

ಅಮ್ಮ ಕತ್ತಲಲ್ಲೇ ತಡವಿ ಅವನನ್ನು ಅವುಚಿಕೊಂಡಳು. ಹಾಸಿಗೆ ಒದ್ದೆ ಒದ್ದೆ.

ಬೆಳಗ್ಗೆ... ಅಮ್ಮ ಗದರಿಸುವುದರ ಒಳಗೇ ಹಾಲು ಖಾಲಿ. 
`ಅಮ್ಮ, ಇವತ್ತಿಂದ ನನ್ನ ಫೇವರಿಟ್ ಬಣ್ಣ ಯಾವುದು ಹೇಳು?'
`ಕೆಂಪು’ ಎನ್ನುತ್ತ ಅಮ್ಮ ನಕ್ಕಳು. 
`ಊಹೂಂ... ಅಲ್ಲ ನೀಲಿ. ಆಕಾಶದ ಬಣ್ಣ.'


-ಪ್ರಜ್ಞಾ 

2 comments:

  1. ಕ್ರೂರ ವಾಸ್ತವವನ್ನು ಮುಗ್ಧ ಕಣ್ಣುಗಳಿಂದ ತೋರಿಸಿದ್ದೀರಿ. ಕಥೆಯ ಕೊನೆಯನ್ನು ಓದಿದಾಗ ಮನಸ್ಸು ನಿರಾಳವಾಯಿತು. ದೇವರೆ, ಗುಮ್ಮ ನಿಜವಾಗದಿರಲಿ.

    ReplyDelete
  2. chenda bareeteeri Prajnya. puttana kanasu anta gottaagi manassu niraaLavaayitu. :-)
    malathi

    ReplyDelete