ಮೂಲ: ಫಿರೋಜ್ ನವರೋಜಿ
ಕನ್ನಡಕ್ಕೆ: ಪ್ರಜ್ಞಾ
ಬೆಟ್ಟದ ಸೀಮೆಯ ಚಳಿಗಾಲದ ಒಂದಿರುಳು. ತಾತ್ಪೂರ್ತಿಕವಾಗಿ ಸ್ಟೇಶನ್ನಿನ ಪ್ಲಾಟ್‌ಫಾರ್ಮ್ ಮಾಡಲಾಗಿದ್ದ ಸಣ್ಣ
ಜಾಗವೊಂದರಲ್ಲಿ ಒಂದಿಷ್ಟು ಜನರ ಗುಂಪು. ದಟ್ಟ ಮಂಜು ಕವಿದಿತ್ತು. ಅದ್ಯಾವಾಗಲೋ ನಡುರಾತ್ರಿ
ಕಳೆದಿತ್ತು. ರೈಲಿನ ಸದ್ದು. ನಿಧಾನವಾಗಿ ಇವರತ್ತ ಬರುತ್ತಿದ್ದ ರೈಲಿನೊಳಗೆ ಒಬ್ಬಾತ ಇನ್ನೂ
ಓದುತ್ತಲೇ ಇದ್ದ. ಅದು ಪಶ್ಚಿಮ ರಿಫ್ಟ್ ನ ಲುಂಬ್ವಾ. ಲುಂಬ್ವಾ ಸಮೀಪಿಸುತ್ತಿದ್ದಂತೆಯೇ ರೈಲು
ನಿಂತಿತ್ತು. ಅದು ಆ ರೈಲಿನ ನಿಗದಿತ ನಿಲ್ದಾಣವಲ್ಲ, ಆದರೂ ಆವತ್ತು ಅದು ಅಲ್ಲಿ ನಿಂತಿತ್ತು. ಪುಸ್ತಕ
ಓದುತ್ತಿದ್ದ ಮನುಷ್ಯ ಎದ್ದು ಕಿಡಕಿಯನ್ನು ಸರಿಸಿ ಹೊರಗೆ ನೋಡಿದ್ದ.
ಆತನ ಹೆಸರು ಚಾರ್ಲಿ ಆಂಡ್ರ್ಯೂಸ್. 1904ರಲ್ಲಿ ರೆವರೆಂಡ್ ಚಾರ್ಲ್ಸ್ ಎಫ್ ಆಂಡ್ರ್ಯೂಸ್ ರವರು ಭಾರತಕ್ಕೆ ಮಿಶನರಿಯಾಗಿ ಬಂದಿದ್ದವರು. ದಿಲ್ಲಿ
ವಿಶ್ವವಿದ್ಯಾಲಯದಲ್ಲಿ ಅವರು ಶಾಂತಿನಿಕೇತನಕ್ಕೆ ತೆರಳಿ ಅಲ್ಲಿ ರವೀಂದ್ರರೊಂದಿಗೆ ಸ್ವಲ್ಪ
ಸಮಯವಿದ್ದರು. ಆಮೇಲೆ ಪ್ರೊಫೆಸರ್ ಗೋಖಲೆಯವರ ಕೋರಿಕೆಯಂತೆ ಗಾಂಧಿಯವರ ”ಸತ್ಯಾಗ್ರಹ’ ಹೇಗೆ
ನಡೆಯುತ್ತಿದೆ ಎಂಬುದನ್ನು ನೋಡುವ ಉದ್ದೇಶದಿಂದ
ಅವರು ದಕ್ಷಿಣ ಆಫ್ರಿಕಾಕ್ಕೆ ಹೋದರು. ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮರು ನಡೆಸುತ್ತಿದ್ದ
ಹೋರಾಟದಲ್ಲಿ ತಾವೂ ಜೊತೆಯಾದರು ಮತ್ತು ಆ ಒಡನಾಟದಲ್ಲಿ ಗಾಂಧಿಯವರೊಂದಿಗೆ ಆಂಡ್ರ್ಯೂಸ್ ಅವರ
ಬಾಂಧವ್ಯವು ಗಟ್ಟಿಯಾಗಿ ಬೆಸೆಯಿತು. ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಅಲ್ಲಿ
ಬ್ರಿಟೀಶರ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸಿದರು ಮತ್ತು ಅವರೊಂದಿಗೆ ಆಂಡ್ರ್ಯೂಸ್ ರವರೂ
ಜೊತೆಯಾದರು.
ಈಗ, ಅಂದರೆ 1920 ರಲ್ಲಿ ಗಾಂಧಿಯವರ ಈ ವಿಶ್ವಾಸಪಾತ್ರ ಸ್ನೇಹಿತರು ಕೀನ್ಯಾದಲ್ಲಿದ್ದರು. ಇಲ್ಲಿಯ ಭಾರತೀಯರನ್ನು
ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ವರದಿ ಮಾಡಲು ಅದಕ್ಕಿಂತ ಮುಖ್ಯವಾಗಿ ಬಿಳಿಯ
ವಸಾಹತುಗಾರರು ಕೀನ್ಯಾದಲ್ಲಿ ತಮ್ಮ ಸ್ವ-ಆಡಳಿತಕ್ಕಾಗಿ
ಮತ್ತು ಜನಾಂಗೀಯ ಸಾರ್ವಭೌಮತ್ವವನ್ನು ಊರಲಿಕ್ಕಾಗಿ ನಡೆಸುತ್ತಿದ್ದ ತೀವ್ರ ರಾಜಕೀಯದಾಟಗಳನ್ನು
ಗಮನಿಸುವುದಕ್ಕಾಗಿ ಗಾಂಧಿಯವರೇ ಅವರನ್ನು ಕೀನ್ಯಾಕ್ಕೆ ಕಳುಹಿಸಿ ಕೊಟ್ಟಿದ್ದರು.
ರೈಲು ನಿಲುಗಡೆಗೆ ಬರುತ್ತಿದ್ದಂತೆ
ಅವರಿಗೆ ರೈಲಿನ ಸರತಕ್ಕೆ ಒಂದಿಷ್ಟು ಲಾಟೀನುಗಳು
ಕಂಡವು. ನಿಲ್ಲುವ ಹೊತ್ತಿಗೆ ರೈಲಿನ ಲೋಹದ
ಬ್ರೇಕುಗಳು ಮಾಡುತ್ತಿದ್ದ ಸದ್ದಿನ ನಡುವೆ
ಅವರಿಗೆ ಒಂದಿಷ್ಟು ದನಿಗಳು ಕೇಳಿಸಿದವು. ಕೆಲವರು ಅನ್ನುತ್ತಿದ್ದರು, ’ಇಲ್ಲಿ, ಇಲ್ಲಿ.’
ಇನ್ನೊಂದು ಬದಿಯಿಂದಲೂ ಮಂದ ಸ್ವರದಲ್ಲಿ ’ಇಲ್ಲಿ...ಇಲ್ಲಿ..’ ಎಂದದ್ದು ಕೇಳಿಸಿತು. ’ಅಲ್ಲ
ಅಲ್ಲ....ಇಲ್ಲಿ...’ ಮತ್ತೆಲ್ಲಿಂದಲೋ ಕೇಳಿಸಿತ್ತು. ಕೆಲವರು ಹಳಿಗೆ ಹಾಸಲಾಗಿದ್ದ ಜಲ್ಲಿಕಲ್ಲಿನ
ರಾಶಿಯಲ್ಲಿ ಕಾಲಿಟ್ಟು ಜಾರುತ್ತ ಹುಡುಕುತ್ತಿದ್ದರು. ಕಲ್ಲಿಗೋ ಮತ್ತೊಂದಕ್ಕೋ ಎಡವಿಕೊಳ್ಳುತ್ತ
ಅವರೆಲ್ಲಿದ್ದಾರೆ ಎಂದು ಡಬ್ಬಿಯೊಳಗೆ ಇಣುಕತೊಡಗಿದ್ದರು. ತಾಯಂದಿರು ತಮ್ಮ ಮಕ್ಕಳನ್ನು
ಕರೆಯುತ್ತಿದ್ದರು, ’ಎಯ್ ಎಲ್ಲಿಗೆ ಹೊರಟೆ? ಇಲ್ಲಿ ಬಾ, ನಿಂತುಕೋ ’ ಎಂದು.
ಕೊನೆಗೂ ಒಂದು ಕಿಡಕಿಯೊಳಗೆ ಅವರು ಕಂಡರು.
ಸರಸರನೆ ಆ ಬೋಗಿಯ ಕೆಳಗೆ ಅವರಿದ್ದ ಕಿಡಕಿಯ ಎದುರು ಲಾಟೀನುಗಳು ಜಮಾಯಿಸಿದವು. ಅದನ್ನು ನೋಡಿ
ಅವರಿಗೆ ತಾವು ನೋಡಿದ ಒಂದು ಚಿಕ್ಕ ಊರಿನ
ದೀಪಾವಳಿಯ ಹಣತೆಗಳ ನೆನಪಾಯಿತು. ಸೀರೆಯುಟ್ಟು ಕೈಯಲ್ಲಿ ಹೂಮಾಲೆ ಹಿಡಿದ ಮಹಿಳೆಯರೆಲ್ಲ ಸಂಕೋಚದಿಂದ ಒಂದು ಮೂಲೆಗೆ ನಿಂತಿದ್ದರು. ಎಲ್ಲ ಒಂದೇ
ಸಲ ಮಾತನಾಡಲು ಶುರು ಮಾಡಿದರು. ’ಮಿಸ್ಟರ್ ಆಂಡ್ರ್ಯೂಸ್, ಮಿಸ್ಟರ್ ಆಂಡ್ರ್ಯೂಸ್’ ಸಣ್ಣ
ಹುಡುಗನೊಬ್ಬನ ದನಿ. ತಾಯಿಯೊಬ್ಬಳು ಮುಂದೆ ಬಂದು ’ನಮಸ್ತೆ’ ಎಂದಳು. ಆಂಡ್ರ್ಯೂಸ್ ವರು ಅವಳಿಗೆ
ಕೈಮುಗಿದು ತಲೆ ಬಾಗಿಸಿದ್ದರು. ಶಾಲೆಯ ಸಮವಸ್ತ್ರದಲ್ಲಿದ್ದ ಸ್ವಲ್ಪ ದೊಡ್ಡ ವಯಸ್ಸಿನ
ಹುಡುಗನೊಬ್ಬ ಕೈ ಮೇಲೆತ್ತಿ ಏನನ್ನೋ ಕೊಡುವವನಂತೆ ಅಲುಗಾಡಿಸುತ್ತಿದ್ದ. ಆಂಡ್ರ್ಯೂಸ್ ರವರು
ಅದನ್ನು ಇಸಿದುಕೊಂಡು ತಮ್ಮ ಬೋಗಿಯೊಳಗಿನ ಬೆಳಕಿನಲ್ಲಿ ಹತ್ತಿರ ಹಿಡಿದು ನೋಡಿದರು. ಒಂದು
ಶಿಲ್ಲಿಂಗಿನ ನಾಣ್ಯವಾಗಿತ್ತು. ನಂತರ ಹೊರಗೆ ತಲೆ
ಹಾಕಿ, “ಇದನ್ನು ಬಾಪೂಗೆ ಕೊಡುತ್ತೇನೆ. ಅವರಿದನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ,
ಧನ್ಯವಾದ,” ಎಂದರು.
ಎಲ್ಲರಿಗೂ ಅವರೊಂದಿಗೆ ಮಾತನಾಡುವ ತವಕ.
ಯಾರೋ ಒಬ್ಬರು ಸುಮ್ಮನಿರಿಸುವ ತನಕ ಅವರೆಲ್ಲ ಗೌಜಿ ಮಾಡುತ್ತಲೇ ಇದ್ದರು. ಶ್ರೀಯುತ ಬೇರಟ್ ರವರು
ಕೆಮ್ಮಿ ಗಂಟಲು ಸರಿ ಮಾಡಿಕೊಂಡರು. ಕತ್ತಲಿನ ಮೌನದೊಳಗೆ ಅವರ ದನಿ ಅಗತ್ಯಕ್ಕಿಂತ ದೊಡ್ಡದಾಗಿ
ಕೇಳಿಸಿತು. ಅವರು ಭಾಷಣದ ತಯಾರಿಯಲ್ಲಿದ್ದರು. ಶ್ರೀಯುತ ಬೇರಟ್ ರವರು ಕಿಸುಮು ಉಚ್ಚ ನ್ಯಾಯಾಲಯದ
ಸೀನಿಯರ್ ಕ್ಲರ್ಕ್ ಆಗಿದ್ದರು. ಆ ದಿನ ಬೆಳಿಗ್ಗೆ ಅವರಿಗೆ ಕಾಂಗ್ರೆಸ್ಸಿನಿಂದ ನಿರ್ದಿಷ್ಟ
ಸೂಚನೆಗಳು ಸಿಕ್ಕಿದ್ದವು. ಅದನ್ನು ಕೇಳಿ ತಕ್ಷಣ ಅವರು ಲುಂಬ್ವಾಗೆ ಧಾವಿಸಿ ಬಂದಿದ್ದರು.
ದಾರಿಯಲ್ಲಿ ಅವರು ಉಚ್ಚ ನ್ಯಾಯಾಲಯದ ಮುಖ್ಯ
ನ್ಯಾಯಾಧೀಶರು ಹಿಂದೊಮ್ಮೆ ಕ್ರಿಮಿನಲ್ ಅಪೀಲ್ ಸೆಶನ್ಸ್ ಉದ್ಘಾಟಿಸುವಾಗ ಮಾಡಿದ ಭಾಷಣವನ್ನು
ನೆನಪು ಮಾಡಿಕೊಳ್ಳುತ್ತ ಬಂದಿದ್ದರು. ಮುಖ್ಯ ನ್ಯಾಯಾಧೀಶರು ಏನೇನು ಹೇಳಿದ್ದರೋ ಅದನ್ನೆಲ್ಲ ಆದಷ್ಟರ
ಮಟ್ಟಿಗೆ ತಾನು ತನ್ನ ಭಾಷಣದಲ್ಲಿ ಅಳವಡಿಸಿಕೊಳ್ಳಬೇಕು
ಎಂದು ಬೇರಟ್ ರವರು ಅಂದುಕೊಳ್ಳುತ್ತ ಬಂದಿದ್ದರು. ಆದರೆ ಸ್ಟೇಶನ್ ಮಾಸ್ಟರ್ ಇವರ ಕಿವಿಯಲ್ಲಿ
ಉಸುರಿದ್ದರು, “ಬೇಗ ಮುಗಿಸಿ, ರೈಲು ಇಲ್ಲಿ ಜಾಸ್ತಿ ಹೊತ್ತು
ನಿಲ್ಲುವುದಕ್ಕಾಗುವುದಿಲ್ಲ” ಎಂದು. ಶ್ರೀಯುತ
ಬೇರಟ್ ರವರು ಸ್ಟೇಶನ್ ಮಾಸ್ಟರ್ ಹೇಳಿದ್ದನ್ನು ಕೇಳಿಯೂ ಕೇಳದವರ ಹಾಗಿದ್ದರು. ಇವನು ಯಾರು ನನಗೆ
ಹೇಳಲಿಕ್ಕೆ? ನಾನಾದರೋ ಮುಖ್ಯ ನ್ಯಾಯಾಧೀಶರು
ಮತ್ತು ಇತರ ಕಿರಿಯ ನ್ಯಾಯಾಧೀಶರುಗಳ ಜೊತೆ ದಿನಾ ಓಡಾಡಿಕೊಂಡು ಇರುವವನು, ಇವನಿಗೇನು ಗೊತ್ತು
ಎಂಬಂತೆ ತಮ್ಮ ಭಾಷಣವನ್ನು ಪ್ರಾರಂಭಿಸಿಯೇ ಬಿಟ್ಟರು.
‘ಮಾನ್ಯ ರೆವರಂಡ್
ಆಂಡ್ರ್ಯೂಸ್ ರವರೇ, ಶಾಂತಿಯನ್ನು ಕೋರಿ ನಾವೆಲ್ಲ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಸ್ವಾತಂತ್ರ್ಯಕ್ಕಾಗಿ ನೀವೆಲ್ಲ ಸೇರಿ ಹೋರಾಟ ನಡೆಸುತ್ತಿದ್ದೀರಿ, ಅದಕ್ಕಾಗಿ ನಿಮಗೂ
ಆಭಾರಿಯಾಗಿದ್ದೇವೆ. ನಕುರುದಲ್ಲಿ ಕೆಲವರಿಂದ ನಿಮಗೆ ತೊಂದರೆಯಾಯಿತಂತೆ, ಆ ಕೆಟ್ಟ ಕೃತ್ಯವನ್ನು
ನಾವು ಖಂಡಿಸುತ್ತೇವೆ. ಅದರ ನಂತರ ನಿಮಗೆ ಚಿಕಿತ್ಸೆ ಕೊಡಿಸಲಾಯಿತು ಎಂದು ಕೇಳಿದೆವು. ಅದೆಲ್ಲ ಆದರೂ
ನೀವು ನಿಮ್ಮ ಉದ್ದೇಶದಿಂದ ಹಿಂದೆ ಸರಿದಿಲ್ಲ. ನಮಗೆಲ್ಲ ಸಹಾಯ ಮಾಡುತ್ತಿದ್ದೀರಿ. ನೀವು ತುಂಬಾ
ಒಳ್ಳೆಯವರು. [ಗುಂಪಿನೊಳಗೆ ಸಮ್ಮತಿ ಸೂಚಕ ದನಿಗಳು ಕೇಳಿಬಂದವು] ನಮಗೆ ಗೊತ್ತು, ಮಹಾತ್ಮ
ಗಾಂಧಿಯವರನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ನೀವು
ಸಾಕಷ್ಟು ದೂಷಣೆಯನ್ನು ಹೊತ್ತಿದ್ದೀರಿ, ಹೊಡೆತ ತಿಂದಿದ್ದೀರಿ. ಗಾಡ್ ಸೇವ್ ದ ಕಿಂಗ್’ ಎಂದು ಹೇಳಿ
ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿಬಿಟ್ಟರು. “ನನ್ನ ಕಿರಿ ಮಗಳು ಈಗ ನಿಮಗೆ ಹೂಮಾಲೆಯನ್ನು
ಅರ್ಪಿಸುತ್ತಾಳೆ” ಎಂದವರೆ ತಮ್ಮ ಪುಟ್ಟ ಮಗಳನ್ನು ಕಿಡಕಿಯ ಬಳಿ ಎತ್ತಿಹಿಡಿದರು. ಆಗ ಅಲ್ಲಿದ್ದ ಹೆಂಗಸರೂ ತಮ್ಮ ಕೈಲಿದ್ದ ಮಾಲೆಯನ್ನು
ಪುಟ್ಟ ಹುಡುಗಿಗೆ ಕೊಡತೊಡಗಿದರು. ಆ ಹುಡುಗಿ ಎಲ್ಲ ಮಾಲೆಗಳನ್ನೂ ಒಂದೊಂದಾಗಿ ಆಂಡ್ರ್ಯೂಸ್
ರವರಿಗೆ ರವಾನಿಸಿದಳು. ಹೂಮಾಲೆ ಯಾಕೆ ಹಾಕಲಾಗುತ್ತದೆ ಎಂಬುದರ ಅರಿವಿದ್ದ ಆಂಡ್ರ್ಯೂಸ್ ರವರು
ಸ್ವಲ್ಪ ಭಾವುಕರೇ ಆದರು. ಧನ್ಯವಾದ ಧನ್ಯವಾದ ಎನ್ನುತ್ತ ಮಾಲೆಗಳನ್ನು ತಾವೇ ತಮ್ಮ ಕೊರಳಿಗೆ
ಹಾಕಿಕೊಂಡರು. ಕೆಲವರು ಚಪ್ಪಾಳೆ ತಟ್ಟಿದರು.
ಇತ್ತ ಸ್ಟೇಶನ್ ಮಾಸ್ತರ್ ಅತ್ತಿಂದಿತ್ತ
ಶತಪಥ ಮಾಡುತ್ತಿದ್ದ. ರೈಲು ಆವತ್ತು ಅಚಾನಕ್ಕಾಗಿ ಅಲ್ಲಿ ಯಾಕೆ ನಿಂತಿತು ಮತ್ತು ಯಾಕೆ ಅಷ್ಟು
ಹೊತ್ತು ನಿಂತಿತು ಎಂಬುದಕ್ಕೆಲ್ಲ ಅವನು ತನ್ನ ಮೇಲಾಧಿಕಾರಿಗಳಿಗೆ ಸಮಜಾಯಿಶಿ ನೀಡಬೇಕಿತ್ತಲ್ಲ.
ಹಾಗಾಗಿ ಆದಷ್ಟು ಬೇಗ ರೈಲು ಹೊರಟರೆ ಸಾಕು ಎಂದು ಅವನಿಗೆ ಅನಿಸುತ್ತಿತ್ತು. ಅದು ಪ್ಯಾಸೆಂಜರ್
ರೈಲು ಮತ್ತು ಅದು ಯಾವತ್ತೂ ಲುಂಬ್ವಾದಲ್ಲಿ ನಿಲ್ಲುತ್ತಿರಲಿಲ್ಲ. ಆದರೆ ಆವತ್ತು ಸಂಜೆ
ನಕುರುದಲ್ಲಿನ ಸ್ಟೇಶನ್ ಮಾಸ್ಟರನಿಂದ ಅವನ ಸ್ಟೇಶನ್ನಿಗೊಂದು ಕರೆ ಬಂತು. ನಕುರು ಸ್ಟೇಶನ್
ಮಾಸ್ಟರ್ ಅವಸರ ಅವಸರವಾಗಿ ಪಂಜಾಬಿಯಲ್ಲಿ ಒಂದಿಷ್ಟು ಸೂಚನೆಗಳನ್ನು ಕೊಟ್ಟಿದ್ದ, ಅವನು ಹೇಳಿದ್ದು
ಇವನಿಗೆ ಅಷ್ಟು ಸ್ಪಷ್ಟವಾಗಿರಲಿಲ್ಲ. ಅದು ಅಧಿಕೃತವಾದ ಹೊರಡಿಸಲ್ಪಟ್ಟ ಆದೇಶವಲ್ಲವಾದ್ದರಿಂದ
ಅವನಿಗೆ ತಾನೇನು ಮಾಡಬೇಕೆಂಬುದು ಅರ್ಥವಾಯಿತು. ಆವತ್ತಿನ ರೈಲಿಗೆ ಬರುವ ಡ್ರೈವರ್ ಬಿಷನ್ ಸಿಂಗ್
ಬೇಡಿಗೂ ವಿಷಯ ಗೊತ್ತಿದೆ ಎಂಬುದು ತಿಳಿದುಬಂದಿದ್ದರಿಂದ ನಕುರುವಿನ ಸ್ಟೇಶನ್ ಮಾಸ್ಟರ್ ಹೇಳಿದ
ಕೆಲಸಕ್ಕೆ ಲುಂಬ್ವಾದವನು ಒಪ್ಪಿಕೊಂಡ. ಆದರೆ ಎಲ್ಲವೂ ಬೇಗ ಬೇಗ ಮುಗಿದು ರೈಲು ಬೇಗನೇ ಅಲ್ಲಿಂದ
ಹೊರಟರೆ ಮುಂದಿನ ಸಮಜಾಯಿಶಿಗೆ ಅನುಕೂಲವಾದೀತು ಎಂದಿತ್ತು ಅವನ ಮನಸ್ಸಿನಲ್ಲಿ.
ಎರಡು ದಿನಗಳ ಹಿಂದಷ್ಟೇ ಕೀನ್ಯಾದ
ಭಾರತೀಯರಿಗೆಲ್ಲ ಒಂದು ಸುದ್ದಿ ಸಿಕ್ಕು ಅವರೆಲ್ಲ ದಿಗಿಲುಗೊಂಡಿದ್ದರು. ಮಹಾತ್ಮ ಗಾಂಧಿಯವರ ಪರಮಾಪ್ತರಾದ
ರೆವರಂಡ್ ಆಂಡ್ರ್ಯೂಸ್ ರವರು ನಕುರುವಿಗೆ ಬಂದಿದ್ದರು. ಹಾಗೆ ಬಂದಾಗ ಅವರನ್ನು ಕೆಲ ಬ್ರಿಟೀಶ್ ವಸಾಹತಿಗರು ರೈಲಿನಿಂದ ಹೊರಗೆಳೆದು
ಹಲ್ಲೆ ಮಾಡಿದ್ದರು ಎಂಬ ಸುದ್ದಿಯು ಕೀನ್ಯಾದ ಭಾರತೀಯರನ್ನು ಘಾಸಿಗೊಳಿಸಿತ್ತು. ನಂತರ ಆಂಡ್ರ್ಯೂಸ್
ರವರನ್ನು ಆಸ್ಪತ್ರೆಗೆ ಕರೆದುಕಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು.
ಲಂಡನ್ನಿನಲ್ಲಿ ವಸಾಹತುಗಳ ವಿಭಾಗದ ಆಗಿನ
ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ವಿನ್ಸ್ಟನ್ ಚರ್ಚಿಲ್ ರವವರಿಗೆ ನಕುರುದಲ್ಲಾದ ದುರ್ಘಟನೆಯ ಸುದ್ದಿ
ತಲುಪಿತು. ಅದನ್ನು ಕೇಳಿದ ಅವರು ಆ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ
ಶಿಕ್ಷೆಯಾಗಬೇಕಿತ್ತು ಎಂದು ಹೇಳಿದ್ದರಂತೆ. ಚರ್ಚಿಲ್ ರವರ ಅಭಿಪ್ರಾಯದಿಂದ ಕೀನ್ಯಾದ ಭಾರತೀಯರಿಗೆ
ಸ್ವಲ್ಪ ಸಮಾಧಾನವಾಗಿತ್ತು. ಆದರೆ ಆಂಡ್ರ್ಯೂಸ್ ರವರು ಆ ಪ್ರಸಂಗವನ್ನು ಬೆಳೆಸಲು ಇಚ್ಛಿಸಲಿಲ್ಲ.
ಅದು ಗೊತ್ತಾದ ಮೇಲಂತೂ ಭಾರತೀಯ ಸಮುದಾಯಕ್ಕೆ ರೆವರಂಡ್ ರವರ ಮೇಲಿನ ಗೌರವ ಇಮ್ಮಡಿಯಾಯಿತು. ಇವರು
ಖಂಡಿತ ಮಹಾತ್ಮರ ಪ್ರತಿನಿಧಿಯಾಗಲು ಯೋಗ್ಯರಿದ್ದಾರೆ ಎಂದು ಅವರೆಲ್ಲ ಮಾತಾಡಿಕೊಂಡರು.
ಆಂಡ್ರ್ಯೂಸ್ ರವರ ಮೇಲೆ ನಕುರುದಲ್ಲಾದ ಹಲ್ಲೆಯನ್ನು
ಮಹಾತ್ಮರಿಗೆ ತೋರಿಸಿದ ಅಗೌರವ ಎಂದೇ ಕೀನ್ಯಾದ ಭಾರತೀಯ ಸಮುದಾಯವು ತೀರ್ಮಾನಿತು. ಎಲ್ಲರಿಗೂ
ಸಿಟ್ಟು ಬಂದಿತ್ತು. ಪೂರ್ವ ಆಫ್ರಿಕಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಶಾಖೆಗಳಿದ್ದ ನೈರೋಬಿ, ನೈವಾಶ, ನಕುರು, ಕಿಸುಮು ಮತ್ತಿತರ
ಕೇಂದ್ರಗಳಲ್ಲಿ ಈ ಕುರಿತು ಭರದಿಂದ ಚರ್ಚೆಗಳಾದವು. ಬಿಳಿಯರ ಸರ್ವಾಧಿಕಾರವನ್ನು ತಾವು
ಖಂಡಿಸುತ್ತೇವೆ ಎಂಬುದನ್ನು ಬಿಳಿಯರಿಗೆ ತೋರಿಸಿಕೊಡುವ ತುರ್ತು ಭಾರತೀಯ ಸಮುದಾಯಕ್ಕೆ ಬಂತು.
ಅಲ್ಲದೇ ರೆವರಂಡ್ ಆಂಡ್ರ್ಯೂಸ್ ರವರು ವಸಾಹತಿನ ಭಾರತೀಯರ ಸಲುವಾಗಿ ಏನೆಲ್ಲ ಕೆಲಸ
ಮಾಡುತ್ತಿದ್ದಾರೆ, ಅವರಿಗೆ ತಮ್ಮ ಬೆಂಬಲವಿದೆ, ತಾವು ಅವರಿಗೆ ಋಣಿಯಾಗಿದ್ದೇವೆ ಎಂದು
ತೋರಿಸಬೇಡವೆ? ಎಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದರು.
ಆ ರಾತ್ರಿಯಂದು ಆ ರೈಲಿನ ಮೊದಲ ಅನಿಗದಿತ ನಿಲುಗಡೆಯು
ಲುಂಬ್ವಾದಲ್ಲಾಯಿತು. ಆಂಡ್ರ್ಯೂಸ್ ರವರನ್ನು ಸ್ವಾಗತಿಸಿ ಸನ್ಮಾನಿಸಿದವರಲ್ಲಿ ಶ್ರೀಯುತ ಬೇರಟ್
ರವರ ಪಂಗಡದವರು ಮೊದಲಿಗರಾದರು. ನಂತರದ ನಿಲ್ದಾಣದಲ್ಲಿಯೂ ಲುಂಬ್ವಾದ್ದೇ ಸನ್ನಿವೇಶವು ಪುನರಾವರ್ತಿತಗೊಂಡಿತು. ಪಂಡಿತ ರಾವಲ್
ರವರು ಆಂಡ್ರ್ಯೂಸ್ ರವರಿಗಾಗಿ ಪ್ರಾರ್ಥಿಸಿದರು. ಮೂರು ಹುಡುಗಿಯರು ಸೇರಿ
ಒಂದು ಭಜನೆಯನ್ನು ಹಾಡಿದರು. ಪಂಡಿತರು ಆಂಡ್ರ್ಯೂಸ್ ರವರಿಗೆ ಪ್ರಸಾದ ಕೊಟ್ಟರು. ಅದನ್ನು
ಸ್ವೀಕರಿಸಿದ ರೆವರಂಡ್ ರವರು ತಮ್ಮ ಅರೆಮರ್ಧ ಹಿಂದಿಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.
ಅದನ್ನು ಕೇಳಿ ನೆರೆದವರ ಮುಖದಲ್ಲಿ ಹರ್ಷದ ಬೆಳಕು. ಅದು ಆ ಇರುಳಿನ ಕತ್ತಲನ್ನು ಬೆಳಗಿಸಿತ್ತು.
ರೈಲು ಕಿಬೋಸನ್ನು ತಲುಪಿದಾಗ ನಸುಕು
ಹರಿದಿತ್ತು. ಅಲ್ಲಿ ಕಾಯುತ್ತಿದ್ದ ಸಿಖ್ ಸಭೆಯ ಅಧ್ಯಕ್ಷರು ಕೈಯಲ್ಲಿ ಖಡ್ಗ ಹಿಡಿದ ಸದೃಢಕಾಯರಾದ
ನಾಲ್ಕು ಯುವಕರನ್ನು ತಮ್ಮ ರಕ್ಷಣೆಗೆಂದು ಇರಿಸುತ್ತೇನೆ, ಒಪ್ಪಿಕೊಳ್ಳಿ ಎಂದು ಆಂಡ್ರ್ಯೂಸ್
ರವರನ್ನು ಪ್ರಾರ್ಥಿಸಿಕೊಂಡರು. ಆದರೆ
ಆಂಡ್ರ್ಯೂಸ್ ರವರು ಅದನ್ನು ನಿರಾಕರಿಸಿದರು. ಮಹಾತ್ಮರು ನಕುರುವಿನಲ್ಲಿ ಆದಂತಹ ಘಟನೆಗೆ
ಹಿಂಸಾತ್ಮಕ ಉತ್ತರವನ್ನು ಕೊಡಬಯಸುವುದಿಲ್ಲ. ಹಾಗಿದ್ದಮೇಲೆ ಯಾಕೆ ಎಂದು ಅವರು ನಿರಾಕರಿಸಿದರು.
ರೈಲು ಕಿಸುಮು ನಿಲ್ದಾಣವನ್ನು ಒಂದು ಗಂಟೆ
ತಡವಾಗಿ ತಲುಪಿತು. ರೈಲು ತಡವಾಗಿದ್ದಕ್ಕೆ ಫಸ್ಟ್
ಕ್ಲಾಸ್ ಬೋಗಿಯಲ್ಲಿದ್ದ ಯುರೋಪಿಯನ್ ಪ್ರಯಾಣಿಕರು ಕುಪಿತಗೊಂಡಿದ್ದರು. ರೈಲು ಬೇಕಾಬಿಟ್ಟಿ ನಿಲ್ಲಿಸಬಾರದ
ಕಡೆಯೆಲ್ಲ ನಿಲ್ಲುತ್ತ ಬಂತು. ಕೆಟ್ಟ ಗದ್ದಲ, ಅನಾಗರಿಕ ಸಂಗೀತ, ಎಲ್ಲಕ್ಕಿಂತ
ಹೆಚ್ಚಾಗಿ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ಗೊತ್ತಿಲ್ಲದ ಕೊಳಕು ಜನರ ಬಗ್ಗೆ ಅವರಿಗೆ
ಕಡಿಮೆಯೇ ಆಗದ ತಿರಸ್ಕಾರ ಇವೇ ಸಂಗತಿಗಳು ಅವರು ಸಲ್ಲಿಸಿದ
ದೂರಿನ ಪತ್ರದಲ್ಲಿ ತುಂಬಿಕೊಂಡಿದ್ದವು. ನೈರೋಬಿ ರೇಲ್ವೆ ನಿಲ್ದಾಣದ ಆಡಳಿತ ವರ್ಗಕ್ಕೆ
ಯುರೋಪಿಯನ್ನರ ದೂರು ಪತ್ರದಿಂದ ಅಸಮಾಧಾನವಾಗಿತ್ತು. ಇನ್ನು, ನಿಜವೋ ಸುಳ್ಳೋ, ತಮ್ಮ ಧಾರ್ಮಿಕ ಆಚರಣೆಗಳನ್ನು ಮಹಾತ್ಮರ ದೂತನ ಸಲುವಾಗಿ ಬೇಕಾಬಿಟ್ಟಿ
ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟು ರೇಲ್ವೆ ಅಧಿಕಾರಿಗಳು
ಅಕ್ರಮವೆಸಗಿದರು ಎಂದು ನೈರೋಬಿಯಲ್ಲಿದ್ದ
ಭಾರತೀಯ ಧಾರ್ಮಿಕ ಸಂಸ್ಥೆಗಳಿಂದಲೂ ದೂರು
ಬರತೊಡಗಿದರೆ ಎಂಬ ಯೋಚನೆಯೂ ಅವರನ್ನು ಚಿಂತೆಗೀಡುಮಾಡಿತ್ತು.
ಕಿಸುಮುವಿನಿಂದ ಹಿಂತಿರುಗುವಾಗ ಮತ್ತೆ
ಆಂಡ್ರ್ಯೂಸ್ ರವರ ಮೇಲೆ ಹಲ್ಲೆ ನಡೆದರೆ ಅಥವಾ ಅದಕ್ಕೆ ಪ್ರತಿಯಾಗಿ ರೇಲ್ವೆ ಸಿಬ್ಬಂದಿಗಳು ಮತ್ತೆ
ಅದೇ ರೀತಿ ರೈಲನ್ನು ಅನಧಿಕೃತವಾಗಿ ನಿಲ್ಲಿಸಿ ಮತ್ತೆ ಪ್ರಯಾಣಕ್ಕೆ ವಿಳಂಬ ಮಾಡಿದರೆ ಅದು ಎಷ್ಟೇ
ಶಾಂತಿಯುತವಾಗಿ ನಡೆದರೂ ಅಪಾಯವೇ ಸರಿ, ಮತ್ತದೇ ಘಟನೆ ಮರುಕಳಿಸುವುದು ತಮಗೆ ವೃಥಾ ತಲೆನೋವು ಎಂದು ನೈರೋಬಿಯ
ರೇಲ್ವೆ ಅಧಿಕಾರಿಗಳಿಗೆ ಅನಿಸಿತ್ತು. ಅದರಂತೆ ಪೊಲೀಸ್ ಕಮೀಶನರ್ ಅವರಿಗೊಂದು ಎಚ್ಚರಿಕೆಯ ಫೋನ್
ಕರೆ ಹೋಯಿತು. ಅದರ ನಂತರದ ವಾರದಲ್ಲಿ ಆಂಡ್ರ್ಯೂಸ್ ರವರು ನೈರೋಬಿಯಿಂದ ಮರಳಿ ಹೋಗುವಾಗ ರೈಲಿನಲ್ಲಿ
ಅವರಿಗೆ ವಿಶೇಷ ರಕ್ಷಣಾ ವ್ಯವಸ್ಥೆಯನ್ನು ಒದಗಿಸಲಾಗಿತ್ತು.
ಆವತ್ತು ಲುಂಬ್ವಾದಲ್ಲಿ ರೈಲು ನಿಧಾನವಾಗಿ
ನಿಲ್ದಾಣವನ್ನು ಬಿಟ್ಟು ಹೊರಟಿತ್ತು. ಗಾರ್ಡ್
ಇದ್ದ ಬೋಗಿಯ ಕೆಂಪು ದೀಪವು ಕಣ್ಣಿನಿಂದ ಮರೆಯಾಗಿ ಕೊನೆಗೆ ಕತ್ತಲಿನೊಳಗೆ ಒಂದಾಯಿತು.
ನೆರೆದ ಗುಂಪು ಸಾವಕಾಶವಾಗಿ ಚದುರತೊಡಗಿತು. ಎಲ್ಲ ಒಬ್ಬೊಬ್ಬರೇ ಮರಳತೊಡಗಿದರು. ಮೆಲುದನಿಯ
ಮಾತಿನೊಂದಿಗೆ. ಅವರಲ್ಲೊಬ್ಬ ಪಿಸುಗುಟ್ಟಿದ್ದ, “ನಿಮಗೆ ಗೊತ್ತೆ? ದಕ್ಷಿಣ ಆಫ್ರಿಕಾದಲ್ಲಿ
ಗಾಂಧಿಯವರನ್ನು ಕೂಡ ಹೀಗೆಯೇ ರೈಲಿನಿಂದ ಹೊರದೂಡಲಾಗಿತ್ತು, ಅವರೂ ಸ್ವಾತಂತ್ರ್ಯಕ್ಕಾಗಿ
ಹೋರಾಡುತ್ತ ಹೊಡೆತ ತಿಂದಿದ್ದರು. ಈಗ ಅವರ ಮಿತ್ರರಿಗೂ ಅದೇ ರೀತಿಯಾಗಿದೆ." ಹಾಗೆ ಹೇಳಿದವನ ಸಹಚರ
ಉತ್ತರಿಸಿದ್ದ, “ಇದೆಲ್ಲ ದೇವರೇ ಮಾಡಿಸಿದ್ದು."
ಆ ರಾತ್ರಿಯನ್ನು ಅವರೆಲ್ಲ ಮರೆಯಲೇ
ಸಾಧ್ಯವಿರಲಿಲ್ಲ. ಆ ರಾತ್ರಿ ರೈಲಿನ ಸಂಚಾರವನ್ನು ವಿಳಂಬಗೊಳಿಸಿ ತಾವು ನಡೆಸಿದ ಅಸಹಕಾರದ
ಸತ್ಯಾಗ್ರಹದಿಂದ ಬಿಳಿಯರಿಗೆ ಸಿಟ್ಟು ಬಂದಿದೆ ಮತ್ತು ತಮ್ಮ ಸತ್ಯಾಗ್ರಹ ಯಶಸ್ವಿಯಾಯಿತು ಎಂದು
ಶ್ರೀಯುತ ಬೇರಟ್ ರವರು ಪೂರ್ವ ಆಫ್ರಿಕಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿದ್ದ
ಎಮ್ ಎ ದೇಸಾಯಿ ಅವರಿಗೆ ಹೆಮ್ಮೆಯಿಂದ ವರದಿ
ಸಲ್ಲಿಸಿದರು. ಹಾಗಂತ, ರೆವರಂಡ್ ಆಂಡ್ರ್ಯೂಸ್ ರವರ ಮಾತುಗಳಿಂದ ಪ್ರಭಾವಿತರಾಗಿ ಅಥವಾ ಸ್ವಾತಂತ್ರ್ಯದ
ಹೋರಾಟದಿಂದ ಪ್ರೇರಿತರಾಗಿ ತಾವು ಕೂಡಿಟ್ಟ ಅಲ್ಪಸ್ವಲ್ಪ ಹಣವನ್ನೇನೂ ಅವರು ಸ್ವಾತಂತ್ರ್ಯ ಹೋರಾಟದ
ಸಲುವಾಗಿ ವಿನಿಯೋಗ ಮಾಡಲಿಲ್ಲ. ಮನೆಗಳಲ್ಲಿ ಮಕ್ಕಳು ತಮ್ಮ ತಾಯಂದಿರಿಗೆ ಆ ರಾತ್ರಿಯ ಕತೆ ಹೇಳು ಎಂದು
ಪೀಡಿಸಿದವು.
ಅದಾಗಿ ವರ್ಷಗಳೇ ಉರುಳಿದವು. ಗಾಂಧಿಯವರನ್ನು
ಹತ್ಯೆ ಮಾಡಲಾಯಿತು ಎಂಬ ಸುದ್ದಿ ಕೀನ್ಯಾವನ್ನು ತಲುಪಿದಾಗ ಅಲ್ಲಿನ ಜನ ಆವತ್ತಿನ ರಾತ್ರಿ ತಾವೂ ಹೇಗೆ
ಆ ಚಳುವಳಿಯ ಒಂದು ಭಾಗವಾಗಿದ್ದೆವು ಮತ್ತು ಹೇಗೆ ತಾವು ಮಹಾತ್ಮರ ಸನಿಹಕ್ಕೆ ಹೋಗಿದ್ದೆವು ಎಂಬುದನ್ನು ನೆನಪಿಸಿಕೊಂಡರು.
****************************************************************
[ಫಿರೋಜ್ ನವರೋಜಿಯವರು ಕೀನ್ಯಾದಲ್ಲಿ
ಹುಟ್ಟಿ ಬೆಳೆದು ಕೀನ್ಯಾದಲ್ಲಿಯೇ ವಾಸಿಸುತ್ತಿರುವ ಲೇಖಕರು. ವೃತ್ತಿಯಿಂದ ವಕೀಲರು ಮತ್ತು ಮಾನವ ಹಕ್ಕುಗಳ ಪರ ಇರುವ
ಹೋರಾಟಗಾರರು. ಅವರ ಹಿರಿಯರು ಬಹಳ ಹಿಂದೆಯೇ ಕೀನ್ಯಾಕ್ಕೆ ವಲಸೆ ಬಂದ ಭಾರತೀಯರು. ಪ್ರಸ್ತುತ
ಕತೆಯನ್ನು ಅವರ ’ದುಕ್ಕಾವಾಲಾ’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಇದು ಫಿರೋಜ್ ರವರು ತಮ್ಮ ಅನುಭವಗಳ ಸಂಚಿಯಿಂದ ಹೊರತೆಗೆದ ಒಂದು ಕತೆ. ‘ದುಕ್ಕಾವಾಲಾ‘ ಇಂಗ್ಲೀಶಿನಲ್ಲಿ
ಪ್ರಕಟವಾಗಿದೆ. ಸಾಹಿತ್ಯಿಕವಾಗಿ ಈ ಕತೆಯು ಅಷ್ಟೇನೂ ಗಾಢವಾಗಿ ಸೆಳೆಯುವಂಥದ್ದಲ್ಲ. ಸ್ವದೇಶದಲ್ಲಿ ನಡೆಯುತ್ತಿದ್ದ
ಸ್ವಾತಂತ್ರ್ಯ ಚಳುವಳಿ ಮತ್ತು ಗಾಂಧಿಯವರು ಆ ಹೊತ್ತಿಗೆ ನಡೆಸುತ್ತಿದ್ದ ಅಸಹಕಾರ ಆಂದೋಲನದ ಕಾವು
ಕೀನ್ಯಾಕ್ಕೂ ಹರಡಿದ ಒಂದು ಸಂದರ್ಭವನ್ನು ಈ ಕತೆಯು ಹಿಡಿದಿಡುವುದರಿಂದ ಈ ಕತೆಯನ್ನು
ಅನುವಾದಿಸಬೇಕೆಂದು ನನಗೆ ಅನಿಸಿತು,]