Sunday, March 31, 2013

ಹೀಗೊಂದು ಸಂಭಾಷಣೆ



ಹೀಗೊಂದು ಸಂಭಾಷಣೆ: 

ಅಶೋಕ:  ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚ
ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚುವವರನೂ ಮೆಚ್ಚ ನಮ್ಮ ಕೂಡಲಸಂಗಮದೇವ

ಪ್ರಜ್ಞಾ:    ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚದವರ, 
ಏನು ತಿಳಿಯದಿರ್ದಡೆಯೂ  ಅಹುದಹುದೆನ್ನುವವರ ಕಂಡು ಮೆಚ್ಚದವರ ಕಿಚ್ಚು ಸೂರ ಸುಟ್ಟಿದ್ದು ಕಂಡು ಮರುಗಿದೆನೋ ಚೆನ್ನ ಮಲ್ಲಿಕಾರ್ಜುನ 

ಷಣ್ಮುಖ: ಕಿಚ್ಚು ಹಚ್ಚಿಯೂ ಸೂರು ಸುಡದಿರಲೆಂಬ ಒಡಲ ಕಳವಳವ ಮೆಚ್ಚನಾ ಸರ್ವಜ್ಞ

ಪ್ರಜ್ಞಾ:  ಋಷಿ ಮೂಲ, ನದಿ ಮೂಲ, ಸ್ತ್ರೀ ಮೂಲ, ಮತ್ತು ಕಿಚ್ಚಿನ  ಮೂಲ ಅರಿತೆನೆಂಬವರಿಹರೆ ಜಗದಿ
ಜಗ ಮೆಚ್ಚಿದೊಡೆ ಆನಂದ ಮನ ಮೆಚ್ಚಿದೊಡೆ ಪರಮಾನಂದ ಚೆನ್ನಮಲ್ಲಿಕಾರ್ಜುನ


Wednesday, March 27, 2013

ಮಾಯದೋಕುಳಿ

ತಿಳಿ ನೀರ ಕೊಳದೊಳಗೆ
ನಸು ಕೋಪದಿಂದ ಮಿಸುಕಿದ್ದ
ಚಂದಿರನ ಕಣ್ಣುಗಳಲ್ಲಿ ಕೆಂಡದೋಕುಳಿ

ತಿಳಿಗಡಲ ಅಲೆಯೊಳಗೆ 
ಮೆಲ್ಲುಸಿರ ಲಯದಂತೆ ಅವಿತಿದ್ದ 
ಕಾಲನ ನೊರೆಯಲ್ಲಿ ಮಾಯದೋಕುಳಿ


ಇಳಿಬಿಟ್ಟ ಸೆರಗು ಸರಿದದ್ದ ಲೆಕ್ಕಿಸದೆ
ಧಾವಿಸಿದ ಚಕೋರಿಯ 
ಕಾಲ್ದನಿಯ ಕಿಣಿ ಕಿಣಿಯಲ್ಲಿ ಲಜ್ಜೆಯೋಕುಳಿ

ಕಮಲದೆಲೆಯೊಳಗಿಂದ 
ಇಣು ಇಣಿಕಿ ನೋಡಿದ್ದ ಚಂದಿರನ 
ಬಿಂಬಾಧರಗಳ ಮೇಲೀಗ ನಗುವಿನೋಕುಳಿ

ಮತ್ತು...
ಕೊಳದ ತಿಳಿಯೊಳಗೀಗ ರಂಗಿನೋಕುಳಿ!