Saturday, September 21, 2013

ಕೈಲಾಸ-ಮಾನಸ ಯಾತ್ರೆ ೬

ಕೈಲಾಸ ಪರಿಕ್ರಮಣ ಕೇವಲ ಹಿಂದೂ ಸಂಪ್ರದಾಯದ ಭಕ್ತರಿಗೆ ಮಾತ್ರ ಮುಖ್ಯವಾದದ್ದಲ್ಲ. ತಮ್ಮ ಮೊದಲ ತೀರ್ಥಂಕರ ಋಷಭದೇವ ನಿರ್ವಾಣ ಹೊಂದಿದ್ದು ಕೈಲಾಸ ಪರ್ವತದ ಮೇಲೇ ಎಂದು ಜೈನ ಪರಂಪರೆಯವರು ನಂಬುತ್ತಾರೆ. ಋಷಭದೇವ ನಿರ್ವಾಣ ಹೊಂದಿದ ಅಷ್ಟಪಾದ ಪರ್ವತವೆಂದರೆ ಇದೇ ಕೈಲಾಸ ಪರ್ವತ ಎಂಬುದು ರೂಢಿಯಲ್ಲಿದೆ. ಬಾನ್ ಎಂಬ ಟಿಬೇಟಿನ ಒಂದು  ಪ್ರಕಾರದ ಬೌದ್ಧ ಸಂಪ್ರದಾಯದವರಿಗೆ ಹಾಗೂ ಗುರು ರಿನ್-ಪೊ-ಚೆ (ಪದ್ಮ ಸಂಭವ) ಯನ್ನು ಅನುಸರಿಸುವ ತಾಂತ್ರಿಕ ಬೌದ್ಧರಿಗೆ ಕೂಡ ಈ ಜಾಗ ಅತೀ ಮಹತ್ವದ್ದು. ಟಿಬೇಟಿನಲ್ಲಿ ತಾಂತ್ರಿಕ ಬುದ್ಧ ಪರಂಪರೆಯನ್ನು ಬೆಳೆಸಿದ ಕೀರ್ತಿ ಗುರು ರಿನ್-ಪೊ-ಚೆ ಗೆ ಸಲ್ಲುತ್ತದೆ. ಅದು ವಜ್ರಯಾನ ಸಂಪ್ರದಾಯ ಎಂದು ಕೇಳಿ ತಿಳಿದಿದ್ದೇನೆ.

ಎಲ್ಲರಿಗೂ ಗೊತ್ತಿರುವಂತೆ ಹಿಂದೂಗಳು ಇದನ್ನ ಪರಶಿವನ ಆವಾಸ ಎಂದು ಭಾವಿಸುತ್ತಾರೆ. ಈ ಕೈಲಾಸ ಪರ್ವತವು ಸಿಂಧೂ (ಇಂಡಸ್), ಸಟ್ಲೇಜ್, ಬ್ರಹ್ಮಪುತ್ರಾ ಹಾಗೂ ಘಾಘರಾ ನದಿಯ  ಉಗಮ ಸ್ಥಾನ ಎಂದು ಹೇಳಲಾಗುತ್ತದೆ. ಪ್ರಾಯಶಃ ಕೈಲಾಸದ ಆಸುಪಾಸಿನಲ್ಲೆಲ್ಲೋ ಇವು ನಾಲ್ಕೂ ಉಗಮಿಸುತ್ತವೆ. ಘಾಘರಾ ನದಿ ಅಲ್ಲಿಂದ ಹರಿದು ಬಂದು ಕೊನೆಗೆ ಗಂಗಾ ನದಿಯನ್ನು ಸೇರುತ್ತದೆ. ನಾವು ಯಾತ್ರೆಗೆ ಹೋಗುವುದೆಂದು ನಿರ್ಧರಿಸಿಯಾದ ಮೇಲೆ ಮಾನಸ ಸರೋವರದ ಬಗ್ಗೆ, ಕೈಲಾಸ ಪರಿಕ್ರಮಣದ ಬಗ್ಗೆ ವಿವರ ಸಂಗ್ರಹಿಸಿದ್ದು. ಅದಕ್ಕೂ ಮೊದಲು ಅದು ಯಾತ್ರೆಗಳಲ್ಲೇ ಶ್ರೇಷ್ಠವಾದ ಒಂದು ಯಾತ್ರೆ  ಮತ್ತು ಕಷ್ಟಕರವಾದ ಯಾತ್ರೆ ಎಂದಷ್ಟೇ ಗೊತ್ತಿತ್ತು.

ಮಾನಸ ಸರೋವರದಲ್ಲಿ ಬೀಡು ಬಿಟ್ಟ ರಾತ್ರಿ ಘೋರಾಕಾರ ಮಳೆ. ನಾಳೆ ಪರಿಕ್ರಮಣ ರದ್ದಾಗಬಹುದು ಅಂತ ಅಂದುಕೊಂಡಿದ್ದೆವು. ಆದರೆ ಬೆಳಗಾಗುತ್ತಿದ್ದಂತೆಯೇ ಎಲ್ಲ ತಿಳಿಯಾಗಿತ್ತು. ಆ ದಿನ ಮಧ್ಯಾಹ್ನದ ಹೊತ್ತಿಗೆ ಅಲ್ಲಿಂದ ಹೊರಟು ದಾರ್ಚಿನ್ ಎಂಬಲ್ಲಿ ತಂಗಬೇಕಿತ್ತು. ಹೊರಡಲು ಸಮಯವಿದ್ದಿದ್ದರಿಂದ ನಾವು ಸರೋವರದ ಆಸುಪಾಸಿನ ಜಾಗವನ್ನು ನೋಡಿ ಬರಲು ಹೊರಟೆವು. ಅಲ್ಲಿ ಮಂದಿರವಿಲ್ಲ. ಹಾಗಾಗಿ ಪೂಜೆ, ತರಾವರಿ ಸೇವೆ, ಆರತಿ, ತೆಂಗಿನಕಾಯಿ ಒಡೆಸುವುದು ಇತ್ಯಾದಿ ಪದ್ಧತಿಯಿಲ್ಲ. ಬೇರೆ ಬೇರೆ ಟ್ರಾವೆಲ್ಸ್ ನವ್ರ ಮೂಲಕ ಬಂದ ಕೆಲವು ಯಾತ್ರಿಗಳು ಅಲ್ಲಲ್ಲೇ ಗುಂಪು ಗುಂಪಾಗಿ ಹೋಮ-ಹವನ ಮಾಡುತ್ತಿದ್ದರು. ಅದೇನು ಕಡ್ಡಾಯವಲ್ಲ.

ಮಾನಸ ಸರೋವರದ ಆಸುಪಾಸಿನಲ್ಲಿ ಸುಮಾರು ಬೌದ್ಧ ಗೊಂಪಾಗಳಿವೆ. ಕೆಲವೊಂದಿಷ್ಟು ಗೊಂಪಾಗಳು ಈಗ ಭಗ್ನಗೊಂಡಿವೆ. ಗೊಂಪಾಗಳೆಂದರೆ ಧ್ಯಾನ ಮಂದಿರಗಳು. ಬೌದ್ಧ ಮಠಗಳೆಂದೂ ಅವುಗಳನ್ನು ಅರ್ಥೈಸಬಹುದು. ಈ ಜಾಗದಲ್ಲಿ ಗುರು ರಿನ್-ಪೊ-ಚೆ ಬಂದು ತಂಗಿದ್ದನೆಂದೂ ಹೇಳಲಾಗುತ್ತದೆ. ನಮಗೆ ಎಲ್ಲವನ್ನೂ ನೋಡಲಾಗಲಿಲ್ಲ. ನಿಜ ಹೇಳಬೇಕೆಂದರೆ ಪರಿಕ್ರಮಣದ ದಾರಿಯಲ್ಲೂ ಹಲವು ಗೊಂಪಾಗಳು ಸಿಗುತ್ತವೆ. ಆದರೆ ನಮ್ಮ ಯಾತ್ರೆಯ ಮಿತಿಯಲ್ಲಿ ಅವೆಲ್ಲವನ್ನೂ ನೋಡುವದಕ್ಕೆ ಆಗಿಲ್ಲ. ಅಲ್ಲೇ ಗುಡ್ಡವೊಂದರ ನೆತ್ತಿಯ ಮೇಲಿದ್ದ ’ಜಿ’ವು’ (ಅಥವಾ ’ಚಿ’ವು’ ಅಂತ ಇರಬೇಕು) ಗೊಂಪಾವೊಂದನ್ನು ನೋಡಿ ಬಂದೆವು. ಮಣಿಸರಗಳನ್ನು ಮಾರುತ್ತ ಬಂದ ಟಿಬೆಟಿಯನ್ ಅಜ್ಜಿಯೊಬ್ಬಳಿಂದ ಒಂದಿಷ್ಟು ಖರೀದಿಯೂ ಆಯಿತು.

ಮಧ್ಯಾಹ್ನ ಅಲ್ಲಿಂದ ಹೊರಟು ದಾರ್ಚಿನ್ ತಲುಪಿದೆವು. ದಾರ್ಚಿನ್ ನಿಂದ ಪರಿಕ್ರಮಣ ಆರಂಭವಾಗುತ್ತದೆ. ಮೊದಲನೆಯ ದಿನ ದಾರ್ಚಿನ್ ಇಂದ ಸುಮಾರು ೧೨ ಕಿ.ಮಿ ದೂರದ ದಿರಾಪುಕ್ ವರೆಗೆ ನಡೆಯಬೇಕು. ಎರಡನೆಯ ದಿನ ದಿರಾಪುಕ್ ನಿಂದ ಹೊರಟು, ಡೋಲ್ಮಾ ಲಾ ಪಾಸ್ (೧೮, ೬೦೦ ಅಡಿಗಳು) ದಾಟಿ ಸುಮಾರು ೩೨ ಕಿ.ಮಿ ನಡೆದು ಜುತುಲ್ ಪುಕ್ ತಲುಪಬೇಕು. ಮೂರನೆಯ ದಿನ ಅಲ್ಲಿಂದ ಹೊರಟು ಸುಮಾರು ೭-೮ ಕಿ.ಮಿ ನಡೆದರೆ ಮರಳಿ ದಾರ್ಚಿನ್ ಗೆ ಕರೆದುಕೊಂಡು ಹೋಗುವ ಬಸ್ಸು ಕಾಯುತ್ತಿರುತ್ತದೆ. ದಾರ್ಚಿನ್ ನಲ್ಲಿ ಕೂಡ ಖರೀದಿ-ಗಿರೀದಿ ಮಾಡಬಹುದು. ಆದರೆ ಶಿವನ ಭಕ್ತರು ಬಂಧು ಮಿತ್ರರಿಗೆ ಕೊಡಲೆಂದು ಶಿವಲಿಂಗ, ಮೂರ್ತಿ, ಜಪಸರ, ಇತ್ಯಾದಿಗಳನ್ನು ಹುಡುಕಿದರೆ ನಿರಾಸೆಯಾಗುತ್ತದೆ. ಅಲ್ಲಿರುವವೆಲ್ಲ ಟಿಬೇಟಿಯನ್ ಅಂಗಡಿಗಳು. ಅವೆಲ್ಲ ಬೇಕೆಂದರೆ ನೇಪಾಲದಲ್ಲೇ ಖರೀದಿ ಮಾಡುವುದು ಒಳ್ಳೆಯದು. ನಾವಿಲ್ಲಿ ಬೆತ್ತದ ಊರುಗೋಲುಗಳನ್ನು ಖರೀದಿ ಮಾಡಿದೆವು. ಖರೀದಿ ಮುಗಿಸಿ ನಮ್ಮ ಬಿಡಾರದತ್ತ ಹೊರಳಿದರೆ ಎದುರಿನ ಬೆಟ್ಟಗಳ ಸಾಲಿನಲ್ಲಿ ಹಿಮಗಿರಿಯೊಂದು ಕಂಡಿತು. ನೋಡಿದರೆ ಕೈಲಾಸದ ಶಿಖರವಂತೆ! ನಮ್ಮ ಬಿಡಾರದ ಕಿಟಕಿಯಿಂದಲೂ ಅದು ಕಾಣುತ್ತಿತ್ತು. ಸಾಮಾನ್ಯವಾಗಿ ಮೋಡ ಮುಸುಕೇ ಇರುತ್ತದಂತೆ. ನಾವು ಬಾಯಿ ಬಿಟ್ಟುಕೊಂಡು ಎಲ್ಲರನ್ನೂ ಕರೆ ಕರೆದು ತೋರಿಸುವಷ್ಟರಲ್ಲಿ ಮತ್ತೆ ಮೋಡ ಮುಸುಕೇ ಬಿಟ್ಟಿತು.

ಆ ರಾತ್ರಿ ಎಲ್ಲರಿಗೂ  ಒಂಥರಾ ಸಂಭ್ರಮ... ಕಳವಳ... ಆತಂಕ. ನಾಳೆ ಹೇಗೋ ಏನೋ, ನಮ್ಮ ಹತ್ರ ಆಗುತ್ತೋ ಇಲ್ಲವೋ...ಆದರಲ್ಲೂ ನಮ್ಮ ಷೆರ್ಪಾಗಳು ಎಲ್ಲರ ಕೋಣೆಗೂ ಬಂದು ಒಂದಿಷ್ಟು ಹೆದರಿಸಿ ಹೋಗಿದ್ದರು. ನಾವು ಏನೇನು ಮುನ್ನೆಚ್ಚೆರಿಕೆ ತೆಗೆದುಕೊಳ್ಳಬೇಕು, ಹೇಗೆ ನಡೆಯಬೇಕು, ಮುಂತಾದವುಗಳ ಬಗ್ಗೆ ತರಬೇತು ಮಾಡಲು ಬಂದವರು ಅಲ್ಲಿ ಎಚ್ಚರಿಕೆ ವಹಿಸದ ಕೆಲವರು ಹೇಗೆ ಪ್ರಾಣ ಬಿಟ್ಟರು ಎಂಬ ಕತೆಗಳನ್ನು ಸಾದ್ಯಂತವಾಗಿ ವಿವರಿಸಿ ನಮ್ಮ ಬೆವರಿಳಿಸಿದ್ದರು. “ಅದೆಂತದೇ ಆಗಲಿ ಹೋಪದೇಯ” ಅಂತ ನನ್ನ ಚಿಕ್ಕಮ್ಮ ವೀರ ರಾಣಿ ಕಿತ್ತೂರು ಚೆನ್ನಮ್ಮನಂತೆ ಕಹಳೆ ಮೊಳಗಿಸಿದಳು.

ಪರಿಕ್ರಮಣದ ಮೂರು ದಿನಗಳಿಗೆಂದು ಒಂದು ಚಿಕ್ಕ ಬ್ಯಾಗ್ ಪ್ಯಾಕ್ ತಯಾರಾಯಿತು. ಜಾಸ್ತಿ ಏನೂ ತುಂಬುವಂತಿಲ್ಲ. ಅಲ್ಲಿ ನಮ್ಮ ನಮ್ಮ ಪ್ರಾಣ ಹೊರುವುದೇ ಕಷ್ಟವಾದಾಗ ಲಗೇಜು ಹೊರುವುದು ಎಲ್ಲಿ ಬಂತು? ಒಂದಿಷ್ಟು ಒಣ ದ್ರಾಕ್ಷಿ, ಬಾದಾಮು, ಒಣಗಿದ ಬಾಳೆ ಹಣ್ಣು (ಸುಕೇಲಿ ಅಂತೀವಿ), ಒಣಗಿದ ಅಂಜೂರ ಇತ್ಯಾದಿ ತುಂಬಿಕೊಂಡಿದ್ದೆವು. ಪ್ರತಿಯೊಬ್ಬರಿಗೂ ಒಂದೊಂದು ಥರ್ಮಾಸ್ ಫ್ಲಾಸ್ಕ ಬೇಕು ಬಿಸಿ ನೀರು ತುಂಬಿಟ್ಟುಕೊಳ್ಳಲು. ಆಮೇಲೆ ಒಂದು ಟಾರ್ಚ, ಔಷಧಗಳು, ಕಾಲು ನೋವಿಗೆ ಮೂವ್ ಇತ್ಯಾದಿ. ಹಾಕಿದ್ದ ಬಟ್ಟೆಯಲ್ಲಿಯೇ ಮೂರು ದಿನ ಕಳೆಯಬೇಕು. ಇನ್ನು ಅಲ್ಲಿಯ ಹವಾಮಾನಕ್ಕೆಂದು ಒಂದರ ಮೇಲೊಂದು ಲೇಯರ್ ಬಟ್ಟೆ ತೊಡಬೇಕು. ಮೊದಲು ಥರ್ಮಲ್ ಒಳ ಉಡುಪು, ಅದರ ಮೇಲೆ ಮಾಮೂಲು ಬಟ್ಟೆ, ಅದರ ಮೇಲೆ ಉಣ್ಣೆಯ ಜರ್ಕಿನ್, ಅದರ ಮೇಲೆ ಒಂದು ಡೌನ್ ಜ್ಯಾಕೆಟ್! ಡೌನ್ ಜ್ಯಾಕೆಟನ್ನು ನಮ್ಮ ಟ್ರಾವೆಲ್ಸನವರೇ ಬಾಡಿಗೆಗೆ ಕೊಟ್ಟಿದ್ದರು. ಈವಿಷ್ಟು ಬೇಕೇ ಬೇಕು. ಏಯ್ ನಂಗ್ ಚಳಿ ಗಿಳಿ ಹೆದರಿಕೆ ಇಲ್ಲ, ಘೋರಾಕಾರ ಚಳಿಯಲ್ಲೂ ಬನಿಯನ್ ಕೂಡ ಹಾಕ್ಕೊಳ್ಳದೇ ಇರ್ತೀನಿ ಅನ್ನುವ ಒಣ ಜಂಭ ಬ್ಯಾಡ!

ದಾರ್ಚಿನ್ನಿನಿಂದ ಹೊರಟು ಅನತಿ ದೂರದಲ್ಲಿರುವ ಯಮದ್ವಾರ ಎಂಬ ಜಾಗದವರೆಗೆ ವಾಹನ ಬರುತ್ತದೆ. ಅಲ್ಲಿಂದ ನಮ್ಮ ಪರಿಕ್ರಮಣ ಆರಂಭ. ಈ ಪರಿಕ್ರಮಣವನ್ನು ಕುದುರೆಯ ಮೇಲೂ ಮಾಡಬಹುದು. ಮೂರೂ ದಿನಗಳಿಗೆಂದು ಕುದುರೆಯನ್ನು ಬಾಡಿಗೆಗೆ ಗೊತ್ತು ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲ, ಆದಷ್ಟು ನಡೀತೀನಿ ಆಗೋದಿಲ್ಲ ಅಂದ್ರೆ ಕುದುರೆ ಮೇಲೆ ಹೋಗುತ್ತೀನಿ ಅನ್ನಬೇಡಿ. ಮಧ್ಯೆ ಕುದುರೆ ಸಿಕ್ಕರೆ ಸಿಕ್ಕೀತು ಇಲ್ಲದಿದ್ದರೆ ಇಲ್ಲ. ಇನ್ನು ಕಾಲ್ನಡಿಗೆಗೆ ಹೋಗುವವರು ತಮ್ಮ ಬ್ಯಾಗ್ ಪ್ಯಾಕ್ ಹೊರಲೆಂದು ಪೋರ್ಟ್‌ರ್ ಗಳನ್ನು ಗೊತ್ತು ಮಾಡಿಕೊಳ್ಳುತ್ತಾರೆ. ಅದು ಒಳ್ಳೆಯದು. ಎರಡನೆಯ ದಿನದ ಪರಿಕ್ರಮ ದಲ್ಲಿ ಕೈಲಿದ್ದ ಊರುಗೋಲೂ ಭಾರವಾಗತೊಡಗುತ್ತದೆ. ನಾನು ಹೇಳಿದ್ನಲ್ಲಾ ಯಮದ್ವಾರ ಅಂತ...ಅಲ್ಲಿ ಕುದುರೆಯವರೂ, ಪೋರ್ಟ್‌ರುಗಳೂ ಎಲ್ಲ ತಯಾರಾಗಿ ನಿಂತಿರುತ್ತಾರೆ.

ನಮಗೆ (ಅಂದರೆ ನಾವು ಐದು ಜನ) ಪೋರ್ಟರ್ ಸಿಗದಿದ್ದರಿಂದ ನಮ್ಮ ಷೆರ್ಪಾಗಳೇ ಇಬ್ಬಿಬ್ಬರ ಲಗೇಜನ್ನು ಒಬ್ಬೊಬ್ಬರು ಹೊತ್ತುಕೊಂಡು ಬರುತ್ತೇವೆ ಅಂದರು. ಒಳ್ಳೆಯದಾಯಿತು ಅಂದುಕೊಂಡೆವು. ಯಾಕೆಂದರೆ ಎಲ್ಲ ಚೈನೀಸ್ ಪೋರ್ಟರುಗಳು. ಷೆರ್ಪಾಗಳ ಜೊತೆ ಹಿಂದಿಯಲ್ಲಾದರೂ ಮಾತಾಡಬಹುದು. ಏನಾದರೂ ಜಗಳ-ಪಿಗಳ ಶುರುವಾದರೆ ಅವರು ಚೀನೀ ಭಾಷೆಯಲ್ಲಿ ಮತ್ತು ನಾವು ಹರುಕು ಮುರುಕು ಹಿಂದಿಯಲ್ಲಿ ಒಬ್ಬರಿಗೊಬ್ಬರು ತಿಳಿಸಿ ಹೇಳುವಷ್ಟರಲ್ಲಿ ಪ್ರಾಣ ಹೋಗಿರುತ್ತದೆ ಅಂತ ಲೆಕ್ಕಾಚಾರ ಹಾಕಿ ಖುಷಿ ಪಟ್ಟೆವು! ಆದರೆ, ಚೈನೀಸ್ ಪೋರ್ಟ್‌ರುಗಳನ್ನ ಗೊತ್ತು ಮಾಡಿಕೊಂಡವರಿಗೆ ಅಂತಹ ಕೆಟ್ಟ ಅನುಭವವೇನೂ ಆಗಲಿಲ್ಲವಂತೆ. 

ಮೊದಲ ದಿನ

ಆ ಘಳಿಗೆ ಬಂದೇ ಬಿಟ್ಟಿತು. ಯಮದ್ವಾರ ಅಂತ ಯಾಕೆ ಹೆಸರಿಟ್ಟಿದ್ದಾರೋ ಗೊತ್ತಿಲ್ಲ. ಆ ಹೆಸರು ಕೇಳಿಯೇ ಭಯವಾಗಿತ್ತು. ಅಲ್ಲಿ ಒಂದು ಚಿಕ್ಕ ಗುಡಿ ಇದೆ. ಅದರೊಳಗೆ ಆಡು, ಮೇಕೆಗಳ ತಲೆ ತರಿದು ನೇತು ಹಾಕಿದ್ದಾರೆ. ಹಸಿ ಹಸಿ ತಲೆಗಳಲ್ಲ ಒಣ ಒಣ ತಲೆಗಳು!! ಆ ಗುಡಿಯನ್ನ ಮೂರು ಸುತ್ತು ಹಾಕಿ ಗುಡಿಯೊಳಗಿರುವ ಘಂಟೆಯನ್ನು ಬಾರಿಸಿ ’ಯಮಧರ್ಮ ರಾಯ ನಿನ್ನ ಕಣ್ಣು ನನ್ನ ಮೇಲೆ ಬೀಳದಿರಲಿ’ ಎಂದು ಪ್ರಾರ್ಥನೆ ಮಾಡಿಕೊಂಡು ಹೋಗುವ ಪದ್ಧತಿಯಂತೆ. ಆ ಗುಡಿ ನೋಡಿಯೇ ಅರ್ಧ ಜೀವ ಬಾಯಿಗೆ ಬಂದಿತ್ತು. ನಾವೂ ಸುತ್ತು ಹಾಕಿ, ಘಂಟೆ ಬಾರಿಸಿಯೇ ಹೊರಟೆವು.

ನಡೆಯುವವರು ಅತ್ಯಂತ ನಿಧಾನವಾಗಿ ನಡೆಯುತ್ತ ಹೋಗಬೇಕು. ಜೊತೆಯಲ್ಲಿದ್ದವರು ಜೋರಾಗಿ ನಡೆಯುತ್ತಿದ್ದಾರೆ, ನಾನು ಹಿಂದೆ ಬೀಳುತ್ತೇನೆ ಮತ್ತು ಎಲ್ಲರಿಗಿಂತ ಮುಂಚೆ ಸೇರೋಣ ಎಂಬ ಆತುರ ಬೇಡ. ಸಮತಟ್ಟಾದ ಹಾದಿಯಲ್ಲಿ ಕಷ್ಟವಾಗುವುದಿಲ್ಲ. ಆದರೆ, ಚಿಕ್ಕ ಏರಿದ್ದರೂ ಹತ್ತಲಾಗುವುದಿಲ್ಲ. ಅವರವರ ಶಕ್ತಿಗನುಸಾರವಾಗಿ ನಡೆಯುತ್ತ ಹೋಗಬೇಕು. ಮತ್ತೇನೆಂದರೆ ಎಲ್ಲರೂ ಒಟ್ಟಿಗೇ ಹೋಗಿ ಸೇರಲಾಗುವುದಿಲ್ಲ. ಯಾಕ್ ಎಂಬ ಹೆಸರಿನ ನದಿಯಗುಂಟ ಹೋಗಬೇಕು. ಹಾದಿ ಅಗಲವಾಗೇ ಇದೆ. ಆದರೆ, ಏರು ಹತ್ತುವಾಗ ಮಾತ್ರ ಎರಡು ಹೆಜ್ಜೆ ನಡೆಯುವುದು, ಆಮೇಲೆ ಸುಧಾರಿಸಿಕೊಂಡು ಮತ್ತೆ ಎರಡು ಹೆಜ್ಜೆ ನಡೆಯುವುದು. ಅಂತಹ ಕಡಿದಾದ ಏರೇನೂ ಅಲ್ಲ. ಇಷ್ಟು ಚಿಕ್ಕ ಏರಿಗೆ ಹೀಗಲ್ಲ ಅಂತ ಅನಿಸಿತ್ತು. ಏದುಸಿರು ಬಂದಂತಾದರೆ, ಊರುಗೋಲನ್ನ ನೆಲಕ್ಕೆ ಗಟ್ಟಿಯಾಗಿ ಊರಿಕೊಂಡು ಅದರ ಮೇಲೆ ನಮ್ಮೆದೆ ಆನಿಸಿ ಅರ್ಧ ನಿಮಿಷ ನಿಂತುಕೊಂಡರೆ ಸ್ವಲ್ಪ ಆರಾಮವಾಗುತ್ತದೆ. ಇದನ್ನ ಷೆರ್ಪಾಗಳು ಹೇಳಿಕೊಟ್ಟಿದ್ದರು. ಬೌದ್ಧ ಭಕ್ತರೊಬ್ಬರು ಹೆಜ್ಜೆ ಹೆಜ್ಜೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತ ಹೊರಟಿದ್ದರು. ಹೀಗೇ ಮಾಡುತ್ತ ಇಡೀ ಪರಿಕ್ರಮಣ ಮುಗಿಸುವುದಕ್ಕೆ ಎಷ್ಟು ದಿನ ಹಿಡಿದೀತೋ ಗೊತ್ತಿಲ್ಲ. ಎರಡನೆಯ ದಿನಕ್ಕೆ ಹೋಲಿಸಿದರೆ ಮೊದಲನೆ ದಿನ ಅಂತಹ ಕಷ್ಟವಾಗಲಿಲ್ಲ.

ನಾವು ದಿರಾಪುಕ್ ತಲುಪುವ ಹೊತ್ತಿಗೆ ಮದ್ಯಾಹ್ನದ ಮೂರು-ನಾಲ್ಕು ಗಂಟೆಯಾಗಿರಬೇಕು. ನಮ್ಮ ಗುಂಪಿನಲ್ಲಿ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ನಾನು ಮೊದಲು ಹೋಗಿ ಸೇರಿದೆವು. ದಿರಾಪುಕ್ ಸಮೀಪಿಸಿದಂತೆ ಒಂದು ದೊಡ್ಡ ಏರು ಸಿಗುತ್ತದೆ. ಅದನ್ನು ಏರಲು ಸುಮಾರು ಅರ್ಧಗಂಟೆಯೇ ಹಿಡಿದಿತ್ತು. ಅಯ್ಯಬ್ಬ ಅನ್ನುತ್ತ ಏರಿನ ತುದಿಗೆ ತಲುಪಿದರೆ ನಮ್ಮ ಸುಸ್ತೆಲ್ಲ ಮಾಯವಾಗುವಂತಹ ದೃಶ್ಯ.



ಬಲಕ್ಕೆ ತಿರುಗಿದರೆ ತೆಳುವಾಗಿ ಭಸ್ಮ ಲೇಪಿಸಿಕೊಂಡಂತೆ ಹಿಮ ಬಳಿದ ಕೈಲಾಸನ ಉತ್ತರದ ಮುಖ ಗೋಚರಿಸುತ್ತದೆ. ಕೈ ಚಾಚಿದರೆ ಕೈಲಾಸ ಅನ್ನುವಷ್ಟು ಹತ್ತಿರದಲ್ಲಿ! ಕೈಲಾಸದ ಈ ಮುಖವನ್ನು ಬಹಳಷ್ಟು ಫೋಟೋಗಳಲ್ಲಿ, ಭಿತ್ತಿಚಿತ್ರಗಳಲ್ಲಿ ನೋಡಿರುತ್ತೀರಿ. ಎರಡು ಬೆಟ್ಟಗಳ ಸಂದಿಯಲ್ಲಿ ಹಿಮಶಿಖರ ಕಾಣುತ್ತದೆ. ಮುಂಜಾವಿನ ಸೂರ್ಯ ಕಿರಣಗಳು ಸೋಕಿದಾಗ ಬಂಗಾರವರ್ಣ ವಾಗುವ ಕೈಲಾಸ ಶಿಖರ ಅಂದು ಚಂದ್ರಕಳೆ ಹೊತ್ತಿತ್ತು. ನಾವು ಅಲ್ಲೇ ಕೂತು ಬಿಟ್ಟೆವು. ಅವರ್ಣನೀಯ ಆನಂದ ಎನ್ನುವುದನ್ನು ಬಹಳಷ್ಟು ಬಾರಿ ಬಳಸುತ್ತೇವೆ, ಓದುತ್ತೇವೆ. ಬರೆಯುತ್ತೇವೆ. ಆವತ್ತು ನಾವದನ್ನ ಅನುಭವಿಸಿದೆವು. 

***ಮುಂದುವರೆಯುವುದು!      



                                                                                   


No comments:

Post a Comment