ನ್ಯಾಲಂನಿಂದ ಡೋಂಗ್ಬಾ ಹೋಗಿ ತಲುಪಲು ಸುಮಾರು ೭-೮ ಗಂಟೆಗಳು ಬೇಕು. ದಾರಿಯ ಮಧ್ಯೆ ಸಾಗ
ಎಂಬ ಊರನ್ನು ದಾಟಿ ಹೋಗುತ್ತೇವೆ. ಈ ದಾರಿಯಲ್ಲಿ ಹೋದವರಿಗೆ ಅನೂಹ್ಯ ವಾತಾವರಣದ ಟಿಬೇಟಿನ
ಪ್ರಸ್ಥಭೂಮಿಯ ಪರಿಚಯವಾಗುತ್ತದೆ.
ಮಧ್ಯಾಹ್ನದ ಹೊತ್ತಿಗೆ ಸಾಗಕ್ಕಿಂತ ಸ್ವಲ್ಪ ಹಿಂದೆಯೇ ಸಿಗುವ ಬ್ರಹ್ಮಪುತ್ರ ನದಿಯ
ತಟದಲ್ಲಿ ಊಟ. ಕೈಲಾಸ ಪರ್ವತದ ಬಳಿ ಉಗಮವಾಗುವ ಈ ನದಿ ಅಲ್ಲಿ ಝಾಂಗ್ಬೊ ಎಂಬ ಹೆಸರಿನಲ್ಲಿ
ಪ್ರಚಲಿತವಾಗಿದೆ, ನಾವು ಹೋದ ಸಮಯದಲ್ಲಿ ನದಿಯ ಹರವು ಚಿಕ್ಕದಾಗಿತ್ತು. ಇದೇ ನದಿ ಮಳೆಗಾಲದಲ್ಲಿ
ನಮ್ಮ ಆಸ್ಸಾಂ ನ ಜನತೆಯನ್ನು ತಲ್ಲಣಗೊಳಿಸುತ್ತದೆ. ಈ ನದಿ ಮಾನಸ ಸರೋವರದ ಬಳಿಯಿಂದೆಲ್ಲೋ
ಉಧ್ಭವಿಸಿ ರಿಬ್ಬನ್ ಎಳೆಯಂತೆ ಹರಿಯುತ್ತ ಹರಿಯುತ್ತ ಇದ್ದಕ್ಕಿದ್ದಂತೆ ಕಾಣದಾಗುತ್ತದೆ, ನಂತರ
ಮುಂದೆಲ್ಲೋ ಧುತ್ತೆಂದು ಹರಿಯತೊಡಗುತ್ತದೆ. ಆಶ್ಚರ್ಯವೆಂದರೆ ಅಂತಹ ನದಿ ಹರಿದರೂ ಆ ಜಾಗ
ಮರಳುಗಾಡಿನಂತಿದೆ. ಕೃಷಿ ಅಂತೇನಾದರೂ ಕಾಣಸಿಗುವುದು ನ್ಯಾಲಂನ ಬಳಿ ಮಾತ್ರ. ಅಲ್ಲಿಯವರೆಗೂ...
ಮುತ್ತಿಕ್ಕುವ ಬೆಳ್ಳಿ ಮೋಡಗಳ ಮರೆಯಲ್ಲಿ ನೆರಳು-ಬೆಳಕಿನಾಟವಾಡುವ ಬೋಳು ಬೋಳು ಪರ್ವತ
ಸಾಲುಗಳನ್ನೇ ನೋಡುತ್ತ ಹೋಗುತ್ತೇವೆ.
ಮೋಡದ ಛತ್ತರಿಯ ಕೆಳಗೆ ಬೆವರುವ
ಅಸಂತೃಪ್ತ ನಿರ್ಮೋಹಿಯಂತೆ ಒಮ್ಮೆ
ಸೂರ್ಯನ ತಾಪಕ್ಕೆ ಇಂಬಾದರೂ ಕುಂಚದ ಕಲೆಯಾದ
ಧೀರ ವಿರಹಿಯಂತೆ ಇನ್ನೊಮ್ಮೆ
ಹಾದಿಯಂಚಿಗೆ ಕಾವಲು ಕೂತ ಬರಡೆದೆಯ ಸೈನಿಕರಂತೆ ಮಗುದೊಮ್ಮೆ
ಅಲ್ಲಲ್ಲಿ ಬೆಳ್ಳಿ ಮುಕುಟ ಧರಿಸಿದ ಘನವೆತ್ತ
ರಾಜರಂತೆ ಕಾಣುವ ಹಿಮಶಿಖರಗಳು
ಬಯಲ ಭೇಧಿಸಿ ಹಾವಿನಂತೆ ಸಾಗುವ ಹಾದಿ
ಮರಳುಗಾಡೋ ಎಂಬಂತೆ ಮರಳ ದಿನ್ನೆಗಳು, ಚಂಚಲ ಹವಾಮಾನ,
ಮತ್ತು ಇವ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಸರಿ
ಸರಿದು ಸಾಗುವ ಏಕಾಂಗಿ ನದಿ
ಹಿಮ ಕರಗಿದ ಟಿಬೇಟಿಯನ್ ಕಣಿವೆಗಳ ಸೊಗಸಿದು!
ಎಳೆಂಟು ತಾಸುಗಳ ಸುದೀರ್ಘ ಪ್ರಯಾಣದ
ತರುವಾಯ ಸುಮಾರು ೫ ಗಂಟೆಗೆ ಡೋಂಗ್ಬಾ ತಲುಪಿದೆವು. ಹಿಮಾಲಯದ ಕಣಿವೆಗಳಲ್ಲಿ ಸುದೀರ್ಘ ಹಗಲು.
ಬೆಳಕು ನೋಡಿ ಇನ್ನೂ ಆರು ಗಂಟೆಯಿರಬೇಕು ಅಂದುಕೊಂಡರೆ ಆಗಲೇ ರಾತ್ರಿ ಒಂಬತ್ತಾಗಿರುತ್ತದೆ!
ಡೋಂಗ್ಬಾ ತಲುಪುವಷ್ಟರ ಹೊತ್ತಿಗೇ ಹಲವರಿಗೆ ಅಸ್ವಸ್ಥತೆ ಶುರುವಾಗಿತ್ತು. ಶೀತ, ನೆಗಡಿ,
ತಲೆನೋವು, ಜ್ವರ, ಸುಸ್ತು, ವಾಂತಿ, ಅಜೀರ್ಣ...ಸುಮಾರು ಹಣ್ಣಾಗಿದ್ದೆವು. ಪುಣ್ಯಕ್ಕೆ ನಮ್ಮ
ಜೊತೆ ಪ್ರಸೂತಿ ತಜ್ಞೆಯೊಬ್ಬರು ತಮ್ಮ ತಂದೆಯ ಜೊತೆ ಬಂದಿದ್ದರು. ಶೈಲಜಾ. ಅವರು ನಮ್ಮ ಫುಲ್ ಟೈಮ್ ಫಿಸಿಶಿಯನ್!
ನಮ್ಮ ದಿನಚರಿ ಹೀಗಿರುತ್ತಿತ್ತು.
ಬೆಳಿಗ್ಗೆ ನಸುಕಿಗೆ ’ಗರಂ ಪಾನೀ’ ಅನ್ನುತ್ತ ಎಬ್ಬಿಸಿಬಿಡುತ್ತಿದ್ದರು. ಹೂ ಬೆಚ್ಚಗಿನ ನೀರನ್ನು
ಒಂದು ಪಿಪಾಯಿಯಲ್ಲಿ ತಂದಿಡುತ್ತಿದ್ದರು. ಅದರಲ್ಲಿ ಹಲ್ಲುಜ್ಜಿ ಮುಖ ತೊಳೆದ ಶಾಸ್ತ್ರ ಮಾಡುವುದು.
ಅದಾದ ನಂತರ ’ಚಾ....ಯ್’ ಅನ್ನುತ್ತ ಬರುತ್ತಿದ್ದರು. ಆಮೇಲೆ ಬೆಳಗಿನ ನಾಷ್ಟಾ. ಮಧ್ಯಾಹ್ನ ಊಟ.
ರಾತ್ರಿ ಊಟಕ್ಕಿಂತ ಮೊದಲು ಎಲ್ಲರಿಗೂ ಸೂಪ್ ಸಿಗುತ್ತಿತ್ತು. ಅವಿಷ್ಟರ ನಡುವೆ ಪ್ರಯಾಣ.
ಇಲ್ಲಿ ನಾವುಳಿದಿದ್ದು ತಗಡು
ಹೊದಿಸಿದ ಷೆಡ್ಡುಗಳು. ಮಣ್ಣಿನ ಷೆಡ್ಡುಗಳೂ ಇವೆ. ೪ ಜನರಿಗೆ ಒಂದೊಂದು ರೂಮಿನ ವ್ಯವಸ್ಥೆಯಿತ್ತು.
ಬಸ್ಸಿಳಿಯುತ್ತಿದ್ದಂತೆಯೇ ನನ್ನ ತಮ್ಮ ಚಿಕ್ಕ ಮಕ್ಕಳ ಹಾಗೆ ಎಲ್ಲರಿಗಿಂತ ಮುಂಚೆ ಓಡಿ ಹೋಗಿ ನಾವು
ಐದು ಜನಕ್ಕೆ ರೂಮೊಂದನ್ನು ಹಿಡಿದು ನಿಲ್ಲುತ್ತಿದ್ದ. ಇದೇ ರೀತಿ ಪ್ರಯಾಣದ ಆರಂಭಕ್ಕೆ ಓಡಿ ಹೋಗಿ
ಬಸ್ಸಿನ ಸೀಟುಗಳನ್ನೂ ನಮಗಾಗಿ ಕಾಯ್ದಿರಿಸಿ ನಮ್ಮ ಭಾರವನ್ನೊಂದಿಷ್ಟು ಕಡಿಮೆ ಮಾಡುತ್ತಿದ್ದ.
ಆದರೆ, ಅವನ ಈ ಚಿಕ್ಕ ಸಹಾಯದ ಬದಲಿಗೆ ಅವನ ಹೆಂಡತಿಯೂ ಮತ್ತೂ ನಾನೂ ಕೂತಲ್ಲಿಯೇ ಅವನಿಗೆ ಊಟ,
ತಿಂಡಿ, ಬಿಸಿ ನೀರು, ಚಾ, ಸೇಬು ಹಣ್ಣು, ಸರಬರಾಜು ಮಾಡಿ ಸುಸ್ತಾಗುತ್ತಿದ್ದೆವು ಎನ್ನಿ! ಎದುರಾಡಿದರೆ
’ನಾನು ನಿಮಗೆ ರೂಮ್ ಹಿಡಿದು ಕೊಡೋದಿಲ್ವಾ, ಸೀಟು ಹಿಡಿಯೋದಿಲ್ವಾ?’ ಅನ್ನುವ ರೋಪ್ ಬೇರೆ.
ಮರುದಿನ ಬೆಳಿಗ್ಗೆ ಮತ್ತೆ ಪ್ರಯಾಣ.
ಮತ್ತೆ...ಹಾವು ಸರಿದಂತೆ ಕಾಣುವ ರಸ್ತೆ...ಇಕ್ಕೆಲಗಳಲ್ಲಿ ಪರ್ವತ ಶ್ರೇಣಿಗಳು...ನಿರ್ಮಾನುಷ...
ನೀರವ ಮೌನದ ವೀಥಿ...
ಮಧ್ಯಾಹ್ನ ಇಲ್ಲಿಯ ಸುಮಾರು ಒಂದು
ಗಂಟೆಗೆಯ ಹೊತ್ತಿಗೆ ’ಅಲ್ ನೋಡ್ರೀ ಬಂತು ಮಾನಸ ಸರೋವರ’ ಅಂತ ಸಹ ಪ್ರಯಾಣಿಕರು
ಮಿಸುಕಾಡತೊಡಗುವವರೆಗೆ ಬಸ್ಸಿನಲ್ಲಿ ಸದ್ದಿರಲಿಲ್ಲ. “ಓಹ್...ಹೌದಲ್ಲ..” ’ಅಂತೂ ಬಂದ್ವಲ್ಲ..”
ಎಂಬ ಉದ್ಗಾರಗಳು ಹೊರಟವು. ದೂರದಿಂದಲೇ ಗೋಚರಿಸಿದ ನೀಲಿ ಸರೋವರ...ಸರೋವರಕ್ಕೆ ಅಂಟಿದಂತಿದ್ದ
ಆಕಾಶ...ಆಕಾಶದಲ್ಲಿ ಸ್ತಬ್ದವಾಗಿದ್ದ ಬಿಳಿ ಮೋಡಗಳ ಗುಚ್ಛ...ಇನಿಯನನ್ನೇ ಧ್ಯಾನಿಸುತ್ತ ಮಲಗಿರುವ
ಅಪ್ಸರೆಯೊಬ್ಬಳ ಮೈಗಂಟಿದ ನೀಲಿ ಪಾರದರ್ಶಕ ಮೇಲ್ವಸ್ತ್ರದಂತೆ...ಚೌಕಟ್ಟಿಲ್ಲದ ಚಿತ್ರ.
ಇನ್ನು ಮುಂದಿನ ದಿನಗಳಲ್ಲಿ ಮಾನಸ
ಸರೋವರದ ವರೆಗೆ ಚಿಕ್ಕ ಚಿಕ್ಕ ವಿಮಾನಗಳು ಹಾರಾಡಿದರೂ ಆಶ್ಚರ್ಯವಿಲ್ಲ. ಯಾಕೆಂದರೆ ಈಗಲೇ ಅಲ್ಲಿಗೆ
ಹೆಲಿಕಾಪ್ಟರ್ ಗಳು ಹೋಗಿ ಬರುವಷ್ಟು ವ್ಯವಸ್ಥೆ ಮಾಡಲಾಗಿದೆ. ಹೆಲಿಕಾಪ್ಟರ್ ಹಾರಾಡುತ್ತವೋ
ಇಲ್ಲವೋ ನಿಖರವಾಗಿ ಗೊತ್ತಿಲ್ಲ, ಆದರೆ, ಸುಸಜ್ಜಿತ ತಂಗುದಾಣವಂತೂ ನಿರ್ಮಾಣವಾಗಿದೆ. ನಮ್ಮನ್ನು
ಅಲ್ಲಿ ಇಳಿಸಿ ಹೋಗುವ ಬಸ್ಸು ಮತ್ತೆ ಬರುವುದು ನಮ್ಮ ಪರಿಕ್ರಮವೆಲ್ಲ ಮುಗಿದ ದಿನ. ಅಲ್ಲಿಯವರೆಗೆ
ಅಲ್ಲಿಯ ತಿರುಗಾಟಕ್ಕೆಂದೇ ನಿಯಮಿಸಲಾದ ಬಸ್ಸುಗಳಿರುತ್ತವೆ. ಈ ಬಸ್ಸಿನಲ್ಲಿಯೇ ವಿಸ್ತಾರವಾದ
ಸರೋವರದ ಪ್ರದಕ್ಷಿಣೆಯೂ ಆಗುತ್ತದೆ.
ಆ ತಂಗುದಾಣದಲ್ಲಿಯೇ ಮದ್ಯಾಹ್ನದ ಊಟ
ಮುಗಿಸಿ ನಾವೆಲ್ಲ ಆ ಬಸ್ಸಿನಲ್ಲಿ ಸರೋವರದ ಪ್ರದಕ್ಷಿಣೆ ನಡೆಸಿದೆವು. ಅದು ಒಂದಿಷ್ಟೂ ಸಮಾಧಾನವಾಗಲಿಲ್ಲ. ನಡೆದು ಹೋಗಬೇಕಿತ್ತು. ಸಿನೆಮಾ ಪರದೆಯ ಮೇಲೆ ಓಡುವ
ಮಾನಸ ಸರೋವರದ ಚಿತ್ರದಂತೆ. ಏನೇನೂ ತೃಪ್ತಿಯಾಗಲಿಲ್ಲ. ಅಂತೂ ಒಂದೆಡೆ ನಿಲ್ಲಿಸಿದರು. ಅದೃಷ್ಟಕ್ಕೆ ಆದಿನ, ಆ ಹೊತ್ತಿಗೆ ನಿಚ್ಚಳವಾದ ಹಗಲಿತ್ತು. ಅಲ್ಲಿ ಯಾವಾಗ ಬಿಸಿಲಿರುತ್ತದೆ
ಯಾವಾಗ ಮಳೆಯಾಗುತ್ತದೆ ಎಂದು ಹೇಳುವುದು ಕಷ್ಟ.
ಹವಾಮಾನ ಅನುಕೂಲಕರವಾಗಿರದಿದ್ದರೆ ಸರೋವರದಲ್ಲಿ
ಮುಳುಗೇಳುವ ಅವಕಾಶ ಸಿಗುವುದಿಲ್ಲ. ನಮ್ಮ ಅದೃಷ್ಟ. ಊರ ಕಡೆಯ ಹೊಳೆಯಲ್ಲಿ ಮಿಂದಂತೆ ಸರೋವರದಲ್ಲಿ ಮುಳುಗೆದ್ದೆವು. ಕಲ್ಮಶಗೊಳ್ಳದ ಕನ್ನಡಿಯಂತಹ
ತಿಳಿ.
ತಿಳಿಗೊಂಡ
ಮನಸ್ಸಿನಂತೆ. ಸುಮ್ಮ
ಸುಮ್ಮನೆ ಇದಕ್ಕೆ ಮಾನಸ ಸರೋವರ ಅಂದಿರಲಿಕ್ಕಿಲ್ಲ! ಊಂಹೂ…ಇನಿಯನನ್ನೆ ಚಿಂತಿಸುತ್ತ ನೀಲಿ ಸೆರಗಿನ
ಆ ಅಪ್ಸರೆ ಸುಖಾ ಸುಮ್ಮನೆ ನಿದ್ದೆ ಹೋಗಿಲ್ಲ. ಧ್ಯಾನಸ್ಥಳಾಗಿದ್ದಾಳೆ. ತನ್ನಲ್ಲೇ ಇನಿಯನನ್ನು ಸ್ಥಾಪಿಸಿಕೊಂಡ
ಬಳಿಕ ಸಿದ್ದಿಸಿದ ತುರ್ಯಾವಸ್ಥೆ ಅದು. ವಿಚಲಿತ ಮನಸ್ಸು ತಿಳಿಗೊಂಡದ್ದು ಅದು.
ಸರೋವರದ ವೈಶಿಷ್ಟ್ಯ ಅಲ್ಲಿಗೇ
ನಿಲ್ಲುವುದಿಲ್ಲ. ಸರೋವರದ ಒಂದು ದಿಕ್ಕಿಗೆ ಪುರಾಣ ಪ್ರಸಿದ್ಧವಾದ ಮೇರು ಪರ್ವತ ಶೃಂಖಲೆ ಹಾಗೂ
ಇನ್ನೊಂದು ದಿಕ್ಕಿಗೆ ಕೈಲಾಸ ಪರ್ವತವಿದೆ. ಅದಲ್ಲದೇ ಕೈಲಾಸವನ್ನು ನಡುವಿಟ್ಟುಕೊಂಡು ಅಲ್ಲಿ ಎರಡು
ಸರೋವರಗಳು. ಒಂದು ಬದಿಗೆ ಮಾನಸ ಸರೋವರವಾದರೆ ಇನ್ನೊಂದು ಬದಿಗೆ ರಾಕ್ಷಸ ಸರೋವರ. ನಮಗೆ
ಇವೆಲ್ಲವನ್ನೂ ನೋಡುವ ಭಾಗ್ಯ ಪ್ರಾಪ್ತಿಯಾಯಿತು. ಅಷ್ಟೆಲ್ಲ ಮುಗಿಸಿ ನಮ್ಮ ಬೇಸ್ ಕ್ಯಾಂಪಿಗೆ
ತೆರಳಿದೆವು. ಸಂಜೆಯಾಗುತ್ತಿದ್ದಂತೆ ಜೋರಾಗಿ ಶುರುವಾದ ಮಳೆ ರಾತ್ರಿಯಿಡೀ ಸುರಿಯಿತು. ಮರುದಿನ
ನಮ್ಮ ಕೈಲಾಸ ಪರಿಕ್ರಮ ಆರಂಭಗೊಳ್ಳುತ್ತದೆ.
ಕೈಲಾಸ ಪರಿಕ್ರಮವೆಂದರೆ ಕೈಲಾಸ
ಪರ್ವತದ ಪ್ರದಕ್ಷಿಣೆಯಷ್ಟೆ. ಈ ಪರಿಕ್ರಮವನ್ನು ಒಂದು ದಿನದಲ್ಲಿ, ಮೂರು ದಿನದಲ್ಲಿ ಅಥವಾ
ಕೈಲಾಸವನ್ನು ಇನ್ನೂ ಹತ್ತಿರದಿಂದ ನೋಡಬಯಸುವವರು ಇನ್ನೂ ಜಾಸ್ತಿ ದಿನಗಳನ್ನ ಸೇರಿಸಿಕೊಳ್ತಾರಂತ
ಕೇಳಿದ್ದೇನೆ. ನಾವು ಮೂರು ದಿನದ ಪರಿಕ್ರಮವನ್ನು ಮಾಡಿದೆವು. ಇದನ್ನ ಹೋದವರೆಲ್ಲ ಮಾಡಲೇಬೇಕೆಂಬ
ನಿಯಮವೇನಿಲ್ಲ. ಹೋಗಲಾಗದಿದ್ದವರು, ನಿಶ್ಯಕ್ತರಾದವರು ದಾರ್ಚಿನ್ ಎಂಬಲ್ಲಿ ಉಳಿದುಕೊಂಡು
ಪರಿಕ್ರಮದ ತಂಡ ಮರಳಿದ ಮೇಲೆ ಅವರ ಜೊತೆ ಸೇರಬಹುದು. ಆದರೆ, ಪರಿಕ್ರಮ ಮಾಡದೇ ಇದ್ದರೆ
ಅಲ್ಲಿಯವರೆಗೆ ಹೋಗಿ ಏನೂ ಪ್ರಯೋಜನವಿಲ್ಲ. ಯಾಕೆಂದು ಮುಂದಿನ ಭಾಗದಲ್ಲಿ ಹೇಳುತ್ತೇನೆ.
[ಕ್ಷಮಿಸಿ, ಈ ಕತೆ
ತಿಳಿದುಕೊಂಡದ್ದಕ್ಕಿಂತ ಉದ್ದವಾಗುತ್ತಿದೆ. ಮುಂದೆ ಹೋಗಬಯಸುವ ಮತ್ತು ಅಂತರ್ಜಾಲದಲ್ಲಿ ಮಾಹಿತಿ
ಸಂಗ್ರಹಿಸಲಾಗದ ಕೆಲವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವೊಂದು ವಿವರಗಳನ್ನು ಒದಗಿಸಬೇಕು
ಅನಿಸಿತು. ಇಲ್ಲಿಯವರೆಗಿನ ಕತೆಯಲ್ಲಿ ಏನಾದರೂ ಬಿಟ್ಟುಹೋಯಿತು ಎಂದು ಆಸಕ್ತರಿಗೆ ಅನಿಸಿದರೆ
ದಯವಿಟ್ಟು ತಿಳಿಸಿ. ಬರೆಯುವಾಗ ಎಲ್ಲವೂ ನೆನಪಾಗುತ್ತಿರುವುದಿಲ್ಲ!]
ಚೆನ್ನಾಗಿದೆ. ನಿಮ್ಮ ಅನುಭವ ಬರಹ. ಇತ್ತೀಚೆಗೆ ನಾವೂ ಮಾನಸ ಕೈಲಾಸ ಯಾತ್ರೆ ಹೋಗಿದ್ದೆವು. ನೋಡಿ ಅದರ ವಿವರಕ್ಕೆ www.rukminimala.wordpress.com
ReplyDeleteಮಾಲಾ