ಮರುದಿನ ನಮ್ಮ ಯಾತ್ರೆಯ ಮೂರನೆಯ ದಿನ.
ಚುಮು ಚುಮು ನಸುಕಿಗೇ ಎದ್ದು ಒಂದು ಬಕೀಟು ಬಿಸಿ ನೀರಿಗೆ ತಲಾ ನೂರು ರುಪಾಯಿಗಳನ್ನು
ತೆತ್ತು ಸ್ನಾನ ಮಾಡಿದ್ದೇ ಕೊನೆ. ಈ ಮಧ್ಯೆ ಮಾನಸ ಸರೋವರದಲ್ಲಿ ಒಮ್ಮೆ ಮುಳುಗೇಳಲು ಅವಕಾಶ
ಸಿಕ್ಕಿತ್ತು. ಅದನ್ನು ಬಿಟ್ಟರೆ ಮತ್ತೆ ಸೋಪು ಹಚ್ಚಿ ಸ್ನಾನ ಮಾಡಿದ್ದು ಮರಳಿ ಕಠ್ಮಂಡುವಿಗೆ ಬಂದ
ಮೇಲೇ. ಅಂದರೆ ೧೨ ನೆಯ ದಿನ.
ಅಂತೂ ಗಡಿ ದಾಟುವ ಸಂಭ್ರಮ ಶುರುವಾಯ್ತು. ಆ ಬದಿಯಲ್ಲಿ ಚೈನಾ ಏಜೆಂಟ್ ಬಂದಿದ್ದಾನೆ ಎಂಬ
ಸುದ್ದಿ ಬಂತು. ನಾವಿದ್ದ ಹೊಟೆಲ್ಲಿನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬೋಟಿಕೋಸಿ ನದಿಗೆ
ಅಡ್ಡಲಾಗಿ ಕಟ್ಟಲಾದ ’ಸ್ನೇಹ ಸೇತುವೆ’ಯನ್ನು ಕಾಲ್ನಡಿಗೆಯಿಂದ ಕ್ರಮಿಸಿ, ಇಮಿಗ್ರೇಶನ್ ವಿಧಿಗಳನ್ನು
ಪೂರೈಸಿದರೆ ಗಡಿ ದಾಟಿದಂತೆ. ಸರಿ. ನಾವೆಲ್ಲರೂ ಸೇತುವೆಯನ್ನು ಸೇರಿಕೊಂಡಿದ್ದಾಯಿತು. ಆ ಸೇತುವೆಯ
ಅರ್ಧಕ್ಕೆ ಒಂದು ಕೆಂಪು ರೇಖೆಯನ್ನ ಎಳೆಯಲಾಗಿದೆ. ಅದು ಗಡಿ. ಅಲ್ಲಿಂದ ಮುಂದೆ ಚೀನಾದ ಸೈನಿಕರ
ಕಣ್ಗಾವಲಿರುತ್ತದೆ. ಅಪ್ಪಿ ತಪ್ಪಿ ಎಲ್ಲಿಯಾದರೂ ಒಂದೆರಡು ಫೋಟೋ ತೆಗೆಯುವ ಎಂದು ನಿಮ್ಮ ಮೊಬೈಲ್
ಫೋನನ್ನೋ ಅಥವಾ ಕ್ಯಾಮೆರಾವನ್ನೋ ಹೊರ ತೆಗೆದರೆ ನಿಮ್ಮ ಕ್ಯಾಮೆರಾ ಅಥವಾ ಮೊಬೈಲನ್ನ ಕಸಿದು
ಎಸೆಯುತ್ತಾರಂತೆ. ಆದರೆ, ಮರಳಿ ಬರುವಾಗ ಒಂದಿಷ್ಟು ವಿದೇಶಿಯರು ಪೋಟೋ ತೆಗೆಯುತ್ತಾ ಇದ್ದಿದ್ದನ್ನ
ನೋಡಿದೆವು. ಆದರೆ ಸೇತುವೆಯ ಮೇಲಲ್ಲ, ಇಮಿಗ್ರೇಶನ್ ಕೇಂದ್ರದ ಬಳಿ. ನಾವೂ ಇಮಿಗ್ರೇಶನ್ ಕೇಂದ್ರ
ದಾಟಿದ ಮೇಲೆ ಕದ್ದು ಫೋಟೋ ಹೊಡೆದೆವೆನ್ನಿ!
ಸರದಿಯಲ್ಲಿ ನಿಂತು ಇಮಿಗ್ರೇಶನ್ ವಿಧಿ ಪೂರೈಸುವಾಗ ನಮ್ಮ ಗುಂಪಿನ ಮಹಾಮಾಯಿಯವರನ್ನ ಒಂದು
ಬದಿಗೆ ನಿಲ್ಲಿಸಿದ್ದರು.ಅವರು ಮಂಗಳೂರಿನಿಂದ ಬಂದವರು. ನಮಗೆಲ್ಲ ಕಳವಳ. ಏನಾಯಿತೋ ಏನೋ ಎಂದು.
ಆಮೇಲೆ ನೋಡಿದರೆ ಅವರ ಫೋಟೋ ದಲ್ಲಿ ಅವರು ಸ್ವಲ್ಪ ಬೇರೆ ಕಂಡರಂತೆ. ಒಳಗೆ ಮತ್ತೆ ತಪಾಸಣೆ ನಡೆಸಿ
ಅವರನ್ನು ಬಿಟ್ಟುಕೊಟ್ಟರು. ಒಂದು ಸಾಲಿನಲ್ಲಿ ನಾವು ಸಾಗುತ್ತಿದ್ದರೆ, ಇನ್ನೊಂದು ಸಾಲಿನಲ್ಲಿ
ನೇಪಾಳಿ ಮತ್ತು ಟಿಬೇಟಿಯನ್ ಕಾರ್ಮಿಕರು ನಿತ್ಯದ ಕೆಲಸಗಳಿಗೆಂದು ಗಡಿ ದಾಟುತ್ತಿದ್ದರು. ಅವರ
ಕೈಯ್ಯಲ್ಲೂ ಪರವಾನಿಗೆ ಪತ್ರದಂಥದ್ದೇನೋ ಇತ್ತು. ಅಂತೂ ಅವೆಲ್ಲ ಮುಗಿದು ಚೀನಿ ಮಾರ್ಗದರ್ಶಕನ ಜೊತೆ
ಬಸ್ಸಿನಲ್ಲಿ ನ್ಯಾಲಂನತ್ತ ಹೊರಡುವಲ್ಲಿಯವರೆಗೆ ನೆಮ್ಮದಿಯಿರಲಿಲ್ಲ.
ಹೀಗೆ ಕಾಲ್ನಡಿಗೆಯಲ್ಲಿ ಗಡಿ ದಾಟುವುದು ನಿಜಕ್ಕೂ ಒಂದು ಭಾವುಕ ಘಳಿಗೆ. ಇದೇ ಹೀಗಾಗಿದ್ದರೆ ಭಾರತ – ಪಾಕಿಸ್ತಾನದ ನಡುವಿನ ಗಡಿ
ದಾಟುವಾಗ ಹೇಗಾಗಬಹುದು ಎಂದು ಊಹಿಸಿಕೊಳ್ಳುತ್ತಿದ್ದೇನೆ!
ನ್ಯಾಲಂನತ್ತ ಸಾಗುವ ಹಾದಿ ಘಟ್ಟ ಪ್ರದೇಶವನ್ನು ಬಳಸಿಕೊಂಡು ಸಾಗುತ್ತದೆ. ನಿಜಕ್ಕೂ
ಮನಮೋಹಕ. ನಮ್ಮ ಪಶ್ಚಿಮ ಘಟ್ಟಗಳ ನೆನಪಾಗುತ್ತದೆ. ದಾರಿಯುದ್ದಕ್ಕೂ ಜಲಪಾತಗಳು. ಒಂದಲ್ಲ ಎರಡಲ್ಲ! ಸಮುದ್ರ ಮಟ್ಟದಿಂದ
ಸುಮಾರು ೧೨ ಸಾವಿರ ಅಡಿಗಳಿಗೂ ಮೇಲ್ಪಟ್ಟು ಎತ್ತರದಲ್ಲಿರುವ ನ್ಯಾಲಂನಿಂದಲೇ ವಾತಾವರಣ ಬದಲಾಗುತ್ತ
ಹೋಗುತ್ತದೆ. ಕೊರೆಯುವ ಶೀತಲ ಗಾಳಿ, ಚಿಕ್ಕ ಏರು ಹತ್ತಿದರೂ ಆಯಾಸ, ಸಣ್ಣಗೆ ತಲೆ ನೋವು...ಎಲ್ಲ
ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ನಿಜ ಹೇಳ ಬೇಕೆಂದರೆ ಅಲ್ಲಿ ಒಂದಿಡೀ ದಿನ
ನಮ್ಮನ್ನಿಟ್ಟು ಹಿಮಾಲಯದ ವಾತಾವರಣಕ್ಕೆ ನಮ್ಮನ್ನು ತಯಾರು ಮಾಡುವವರಿದ್ದರು. ಆದರೆ, ಒಂದು ದಿನ
ಕಡೋರಿಯಲ್ಲಿ ಚೀನಾದ ಮಾರ್ಗದರ್ಶಕನ ಸಲುವಾಗಿ ವೃಥಾ ಕಳೆದಿದ್ದರಿಂದ ಆ ಅವಕಾಶ ಸಿಗಲಿಲ್ಲ. ಅಲ್ಲದೇ
ನಮಗೆಂದು ಕಾದಿರಿಸಿದ್ದ ಛತ್ರವನ್ನು (ಡಾರ್ಮಿಟರಿ) ಇನ್ಯಾರಿಗೋ ಕೊಟ್ಟು ತಡವಾಗಿ ಹೋದ ನಮ್ಮನ್ನು ಉಳಿಸಿದ
ಛತ್ರಕ್ಕೆ ಗಂಡಸರು-ಹೆಂಗಸರಾದಿಯಾಗಿ
ಎಲ್ಲರಿಗೂ ಚಿಲಕವಿಲ್ಲದ ಒಂದು ಕೊಳಕು ಕಕ್ಕಸು ಕೋಣೆ. ಇಲ್ಲಿಂದ ಮುಂದೆ ಉಳಿಯುವ ವ್ಯವಸ್ಥೆ ಇಂತಹ ಛತ್ರಗಳಲ್ಲೇ
ಇತ್ತು ಮತ್ತು ಇಲ್ಲಿಂದ ಮುಂದೆ ನಮ್ಮಲ್ಲಿ ಬಹುತೇಕರು ಬಹಿರ್ದೆಶೆಗೆ ಕಕ್ಕಸು ಕೋಣೆಗಳನ್ನ ಬಳಸಲಿಲ್ಲ. ಓಡಾಡುವ ದಾರಿಯಲ್ಲೇ
ಷೆರ್ಪಾಗಳು ಪಾತ್ರೆ ತೊಳೆಯುತ್ತಿದ್ದುದರಿಂದ ಹೊರಗೆ ಹೋಗಿ-ಬಂದು ಮಾಡುವಾಗ ಮೂಗು ಮುಚ್ಚಿಕೊಂಡೇ
ಇರಬೇಕಿತ್ತು. ಇದ್ದಿದ್ದರಲ್ಲಿಯೇ ಒಳ್ಳೆಯ ಹಜಾರವೊಂದನ್ನ ಹೆಂಗಸರಿಗೆ ಕೊಟ್ಟಿದ್ದರು. ಧಾರವಾಢದ
ಮಂಜು, ರತ್ನಾ, ವಿದ್ಯಾ ಆಂಟಿಯರು, ಮಂಗಳೂರಿನ ಮಾಯಿ, ಬೆಂಗಳೂರಿಂದ ಬಂದ ಡಾಕ್ಟರ್ ಶೈಲಜಾ, ನಾನು,
ಚಿಕ್ಕಮ್ಮ, ತಮ್ಮನ ಹೆಂಡತಿ ಶ್ಯಾಮಲಾ...ಅವಳೇ ಎಲ್ರಿಗಿಂತ ಚಿಕ್ಕವಳು. ತಲೆಗೊಂದೊಂದು ಮಾತು,
ಸಲಹೆ. ಬೆಳಗಾಗುವುದರ ಒಳಗೆ ನಾವೆಲ್ಲ ಒಂದೇ ದೋಣಿಯ ಪಯಣಿಗರು ಅನ್ನುವ ಭಾವ ಹುಟ್ಟಿತ್ತು.
ಇಲ್ಲಿಂದ ಮುಂದೆ ಯಾತ್ರೆ ಮುಗಿಯುವಲ್ಲಿಯವರೆಗೆ ನಮ್ಮ ಊಟದ ವ್ಯವಸ್ಥೆ ಷೆರ್ಪಾಗಳದ್ದು.
ಕಠ್ಮಂಡುವಿನಿಂದ ಬರುವಾಗ ನಮ್ಮ ಜೊತೆ ಷೆರ್ಪಾಗಳ ತಂಡವೊಂದು ಬಂದಿತ್ತು, ಈ ತಂಡವು ನಮ್ಮ ಜೊತೆಯೇ
ಬಂದು ಯಾತ್ರೆ ಮುಗಿಯುವಲ್ಲಿಯವರೆಗೆ ನಮ್ಮ ಊಟ, ತಿಂಡಿ ಮತ್ತಿತರೆ ಸುರಕ್ಷತೆಗಳ ವ್ಯವಸ್ಥೆಯನ್ನು
ನೋಡಿಕೊಳ್ಳುತ್ತದೆ. ನಮ್ಮ ಜೊತೆ ಬಂದ ತಂಡದ ನಾಯಕನ ಹೆಸರು ಸಾಂಗೇ ಎಂದಾಗಿತ್ತು. ಒಳ್ಳೇ
ಪೊಗದಸ್ತಾದ ನೇಪಾಳಿ ಠೊಣಪ! ಈ ಷೆರ್ಪಾಗಳು ವರ್ಷಕ್ಕೆ ಮೂರು-ನಾಲ್ಕು ಬಾರಿಯಂತೆ ಅದೆಷ್ಟು ಬಾರಿ
ಕೈಲಾಸ ಸುತ್ತಿದ್ದಾರೋ. ನುರಿತ ಸಿಪಾಯಿಗಳ ಹಾಗೆ ಚಕಚಕನೇ ಮೂರು ಹೊತ್ತಿನ ಅಡುಗೆ ಮಾಡಿ, ನಮ್ಮನ್ನೆಲ್ಲ
ಕರೆದು ಬಡಿಸಿ, ಪಾತ್ರ-ಪಗಡೆ
ತೊಳೆದುಕೊಂಡು, ವ್ಯಾನಿಗೆ ಏರಿಸಿ ಮತ್ತೊಂದು ಜಾಗದಲ್ಲಿ ಬೀಡು ಬಿಡಲು ಸನ್ನಧ್ಧರಾಗುವ ಇವರೇ
ಪರಿಕ್ರಮದ ಸಮಯದಲ್ಲಿ ದಾದಿಯರಂತೆ, ಯಾವುದೋ ಜನ್ಮದ ಗೆಳೆಯರಂತೆ, ಅಣ್ಣ-ತಮ್ಮಂದಿರಂತೆ
ಜೊತೆಯಾಗುತ್ತಾರೆ. ನಾವೆಲ್ಲ ತಪ್ಪದೇ ದಿನಕ್ಕೊಂದು ಡೈಮಾಕ್ಸ್ ಗುಳಿಗೆ ನುಂಗುವಂತೆ
ನೋಡಿಕೊಳ್ಳುವುದು ಇವರ ಇನ್ನೊಂದು ಜವಾಬ್ದಾರಿಯಾಗಿತ್ತು.
ಭೂಮಟ್ಟದಿಂದ ಎತ್ತರೆತ್ತರಕ್ಕೆ ಹೋದಂತೆಲ್ಲ ಆಮ್ಲಜನಕದ ಕೊರತೆಯಿಂದ ಉಂಟಾಗುವ
ಅಸ್ವಸ್ಥತೆಯನ್ನು altitude sickness ಎಂದು ಕರೆಯುತ್ತಾರೆ. ಎತ್ತರೆತ್ತರರಕ್ಕೆ ಹೋದಂತೆ ತಲೆನೋವು,
ವಾಂತಿ ಬಂದ ಹಾಗೆ ಆಗುವುದು, ಎದೆ ಬಡಿತ ಜೋರಾಗುವುದು, ನಿದ್ದೆಯ ಅಮಲು, ಹಸಿವಿಲ್ಲದಿರುವುದು
ಮತ್ತು ವಿಪರೀತ ದಣಿವು ಇವೆಲ್ಲ ಆ ಅನಾರೋಗ್ಯದ ಸೂಚನೆಗಳು. ಒಂದು ಹೆಜ್ಜೆ ಎತ್ತಿಡುವುದೂ ಪ್ರಯಾಸದ
ಕೆಲಸವಾಗುತ್ತದೆ. ನ್ಯಾಲಂನಿಂದ ಮುಂದೆ ಮಾನಸ ಸರೋವರದತ್ತ ಸಾಗಿದಂತೆಲ್ಲ ಆಲ್ಟಿಟ್ಯೂಡ್
ಹೆಚ್ಚಾಗುತ್ತ ಹೋಗುತ್ತದೆ. ಮಾನಸ ಸರೋವರ ಸುಮಾರು ೧೫ ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಕೈಲಾಸ
ಪರಿಕ್ರಮದ ಎರಡನೆಯ ದಿನ ನಾವು ಏರಲಿರುವ ಡೋಲ್ಮಾ ಲಾ ಪಾಸ್ ಸುಮಾರು ೧೮ ಸಾವಿರ ಅಡಿಗಳ
ಎತ್ತರದಲ್ಲಿದೆ. ಅಥವಾ ಅದಕ್ಕಿಂತ ಜಾಸ್ತಿಯೇ ಇರಬೇಕು. ಅಲ್ಲಿಯ ವಾತಾವರಣಕ್ಕೆ ದಿಢೀರೆಂದು
ಹೋದವರು ಹೊಂದಿಕೊಳ್ಳುವುದು ತುಂಬ ಕಷ್ಟ. ಅಭ್ಯಾಸವಿಲ್ಲದವರು ವಿಪರೀತ ತೊಂದರೆ ಅನುಭವಿಸುತ್ತಾರೆ. ಯಾತ್ರೆಗೆ ಹೋಗುವವರು ಈ ಅಸ್ವಸ್ಥತೆಯನ್ನು ನಿರ್ಲಕ್ಷಿಸುವಂತಿಲ್ಲ. ಈ ಡೈಮಾಕ್ಸ ಗುಳಿಗೆಗಳು ನಮ್ಮ
ಸಂಕಷ್ಟವನ್ನ ಬಹುಮಟ್ಟಿಗೆ ಕಡಿಮೆ ಮಾಡುತ್ತವೆ. ಅವುಗಳನ್ನು ಮುಂಚಿತವಾಗಿಯೇ ಸೇವಿಸಲು
ಪ್ರಾರಂಭಿಸಬೇಕು. ನಾವು ಕಡೋರಿಯಲ್ಲಿದ್ದಾಗಲೇ, ಅಂದರೆ ಎರಡನೆಯ ದಿನದ ರಾತ್ರಿಯಿಂದಲೇ ನಮ್ಮ
ಡೈಮಾಕ್ಸ್ ಸೇವನೆ ಶುರುವಾಗಿತ್ತು.
ಮರುದಿನ ಬೆಳಿಗ್ಗೆ ಅಲ್ಲಿಂದ ಹೊರಟು ಡೋಂಗ್ಬಾ ಎಂಬ ಜಾಗಕ್ಕೆ ಹೋಗಿ
ಸೇರಿಕೊಳ್ಳಬೇಕಿತ್ತು. ಅದರ
ಮಾರನೆಯ ದಿನ ಮಾನಸ ಸರೋವರ ತಲುಪುತ್ತೇವೆ.
No comments:
Post a Comment