Sunday, April 6, 2014

ಗೋಡೆ ಹಂಚಿಕೊಂಡವರ ಮನೆಯ ಸಾವು...





ನಾವಿರೋ ಅಪಾರ್ಟಮೆಂಟಿನ ಪ್ರತಿ ಫ್ಲೋರಿಗೆ ತಲಾ ನಾಲ್ಕು ಮನೆಗಳಂತೆ ಒಂದು ವಿಂಗಿಗೆ ೨೦ ಮನೆಗಳಿದ್ದಾವೆ. ನಮ್ಮ ಮನೆ ಮತ್ತು ಅದಕ್ಕೆ ತಾಗಿ ಇನ್ನೊಂದು ಮನೆಯಾದರೆ, ಎದುರಿಗೆ ಎದುರು ಬದುರಾಗಿ ಎರಡು ಮನೆಗಳು.  ಎಪ್ರಿಲ್ ಮೂರನೆಯ ತಾರೀಕು  (2014) ಸುಮಾರು ಆರುವರೆಯಷ್ಟು ಹೊತ್ತಿಗೆ ದಿನಸಿ ತರೋಣವೆಂದು ಬಾಗಿಲು ತೆರೆದರೆ ಬಾಗಿಲೆದುರಿಗೆ ಒಂದಿಷ್ಟು ಚಪ್ಪಲ್ಲುಗಳ ರಾಶಿ.  ನಮ್ಮ ಮನೆಗಂತೂ ಅಲ್ಲ, ಏನಿವತ್ತು ಪಕ್ಕದ ಮನೆಯಲ್ಲಿ...ಅಂದುಕೊಳ್ಳುತ್ತ ಮನೆ ಬಾಗಿಲಿಗೆ ಲಾಕ್ ಹಾಕಲೆಂದು ಹೊರಟವಳು ತೆರೆದೇ ಇದ್ದ ಪಕ್ಕದ ಮನೆಯತ್ತ ಕಣ್ಣು ಹಾಯಿಸಿದೆ. 

ಮನೆ ತುಂಬಾ ಜನ. ಎಲ್ಲ ಕೂತಿದ್ದರು. ಮಧ್ಯದಲ್ಲಿ ಬಿಳಿ ಚಾದರ ಹೊದ್ದುಕೊಂಡು ಯಾರೋ ಮಲಗಿದಂತೆ ಕಂಡಿತು. ಮರುಕ್ಷಣ ಗೊತ್ತಾಯಿತು. ಯಾರೋ ಸತ್ತಿದ್ದಾರೆ. ಯಾರು ಅಂತಲೂ ಗೊತ್ತಾಯಿತು. ಸುಮಾರು ಐದಾರು ತಿಂಗಳಿಂದ ಆಸ್ಪತ್ರೆ-ಮನೆ ಎಂದುಕೊಂಡಿದ್ದ ಅವರ ಮನೆ ಅಜ್ಜಿ. ಯಾವಾಗ ಆಯಿತೋ ಗೊತ್ತಿಲ್ಲ, ಬೆಳಿಗ್ಗೆಯಿಂದ ಮನೆಯೊಳಗೆ ಇದ್ದವಳಿಗೆ ಏನೂ ಗೊತ್ತಾಗಿಲ್ಲ. ದಿನಸಿ ತರುವದಕ್ಕೆಂದು ಬಾಗಿಲು ತೆಗೆದರೆ...ಎದುರಿಗೆ ಸಾವು ಮಲಗಿತ್ತು. ಬಿಳಿಚಾದರದೊಳಗೆ ಸಾವು ಮಲಗಿತ್ತು. 


ನಾನು ಸುಮಾರು ಎರಡು ನಿಮಿಷ ಅವಾಕ್ಕಾಗಿ ಆ ಮನೆಯೆದುರೇ ನಿಂತಿದ್ದೆ. ಗೋಡೆಗೆ ಒರಗಿ ಕೂತ ಅಜ್ಜಿಯ ಸೊಸೆ ನಿರ್ಭಾವುಕ ಕಣ್ಣುಗಳಿಂದ ನನ್ನನ್ನೆ ನೋಡುತ್ತಿದ್ದಳು. ಆ ಕ್ಷಣದಲ್ಲಿ ಹಾಗೆ ಕೈಚೀಲ ಹಿಡಿದುಕೊಂಡು ಅವರ ಮನೆಯೊಳಗೆ ಹೋಗಬೇಕಾ ಅಥವಾ ದಿನಸಿ ತರುವುದನ್ನ ಕ್ಯಾನ್ಸಲ್ ಮಾಡಿ ತೆಪ್ಪಗೆ ಮನೆಯೊಳಗೆ ಓಡಲಾ ಅಂತ ತಿಳಿಯಲಿಲ್ಲ. ಕೇವಲ ಸಂಬಂಧಿಕರನ್ನು ಮಾತ್ರ ನಿರೀಕ್ಷಿಸುತ್ತ ಕುಳಿತವರೆದುರು ನನ್ನ ಉಪಸ್ಥಿತಿ ಮುಜುಗುರವನ್ನುಂಟು ಮಾಡಬಹುದು ಎಂದೆನ್ನಿಸಿ ಮನೆಯೊಳಗೆ ಮರಳಿಹೋದವಳು ಬೆಪ್ಪಳಂತೆ ಸೋಫಾದ ಮೇಲೆ ಕೂತೆ.


ಕೂತವಳಿಗೆ ವಿಚಿತ್ರ ಸಂಕಟ. ನಮಗೂ ಅವರಿಗೂ ಕೇವಲ ಒಂದು ಗೋಡೆಯ ಫರಕ್ಕು. ಹಾಗಂತ ಅವರ ಜೊತೆ ವಿಶೇಷ ಆತ್ಮೀಯತೆ ಏನಿರಲಿಲ್ಲ. ಆ ಮನೆಯಲ್ಲಿ ಒಟ್ಟೂ ಐದು ಜನ, ಈಗ ಅಜ್ಜಿ ಹೋದ ಮೇಲೆ ನಾಲಕ್ಕೇ. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಮಕ್ಕಳೂ ಶಾಲೆ-ಟ್ಯೂಶನ್ ಅಂತ ಹೋದರೆ, ತೀರಿ ಹೋದ ಅಜ್ಜಿಯೊಬ್ಬಳೇ ಮನೆಯಲ್ಲಿ. ವರ್ಷ್‌ಕ್ಕೊಂದು ಬಾರಿ ಅರಿಶಿನ ಕುಂಕುಮಕ್ಕೆಂದು ಕರೆಯುತ್ತಾರೆ, ಆ ದಿನ ಹೋಗಿ ಬರುತ್ತಿದ್ದೆ. ಅದು ಬಿಟ್ಟರೆ ಮನೆಯ ಸೊಸೆ ಆವಾಗಾವಾಗ ಕೆಲಸಕ್ಕೆ ಹೊರಟಾಗ ಇಲ್ಲವೇ ಮರಳಿ ಬರುವಾಗ ಎದುರಾದರೆ, ಒಂದಿಷ್ಟು ಹರಟೆ ಹೊಡೆದು ನಮ್ಮ ನಮ್ಮ ದಾರಿ ಹಿಡಿಯುತ್ತೇವೆ. ತುಂಬ ಸಭ್ಯ ಜನ.

ಆ ಅಜ್ಜಿಗೆ ಆರೋಗ್ಯ ಸರಿ ಇರಲಿಲ್ಲ. ಉಬ್ಬಸ ರೋಗ. ನಾವು ಬಚ್ಚಲು ಮನೆಯಲ್ಲೋ ಅಥವಾ ಕಕ್ಕಸಿನಲ್ಲಿದ್ದರೆ ಅಜ್ಜಿಯ ಕೆಮ್ಮು ಕೇಳಿಸುತ್ತಿತ್ತು. ಅದು ಬಿಟ್ಟರೆ ಅವರ ಮನೆಯಲ್ಲಿ ತಮಟೆ ಬಾರಿಸಿದರೂ ನಮಗೆ ಕೇಳಿಸುವುದಿಲ್ಲ. ಮೊನ್ನೆ ಮೊನ್ನೆ ದೀಪಾವಳಿಗೆ ಮನೆಯವರೆಲ್ಲ ಸೇರಿ ಅಜ್ಜಿಗೆ ಸೋಮನಾಥದ ಜ್ಯೋತಿರ್ಲಿಂಗ ತೋರಿಸಲು ಕರೆದುಕೊಂಡು ಹೋಗಿದ್ರು. ಹೋಗಿ ಬಂದ ಅಜ್ಜಿ ತಾನು ಹನ್ನೆರಡೂ ಜ್ಯೋತಿರ್ಲಿಂಗಗಳನ್ನು ನೋಡಿ ಮುಗಿಸಿದೆ ಎಂದು ಹೆಮ್ಮಯಿಂದ ಹೇಳಿಕೊಂಡಿದ್ದಳು. ತಿಂಗಳಿಗೊಂದು ಸಲ ಕೆಮ್ಮು ತೀರಾ ಜಾಸ್ತಿಯಾಗಿ ಆಸ್ಪತ್ರೆಗೆ ಅಡ್ಮಿಟ್ಟಾಗುತ್ತಿದ್ದಳು. ಹುಶಾರಾದ ಮೇಲೆ ಮೆಲ್ಲಗೆ ಅವಳನ್ನು ಮಗ ನಡೆಸಿಕೊಂಡು ಬರುವಾಗ ಒಂದು ಪೇಲವ ನಗೆ ಬೀರಿ ’ಆಗಯೀ’ ಅನ್ನುತ್ತಿದ್ದಳು. ಅವಳ ಸಾವು ತೀರಾ ಅನಿರೀಕ್ಷಿತವೇನೂ ಅಲ್ಲ. 

ಆದರೂ...ಹೆಣದ ಮುಂದೆ ಹಚ್ಚಿಟ್ಟ ಅಗರಬತ್ತಿಯಿಂದ ಹೊರಟ ದಟ್ಟ ಸಾವಿನ ವಾಸನೆ ನಮ್ಮ ಮನೆಯೊಳಗೂ ಹರಡಿ ಉಸಿರುಗಟ್ಟಿಸುತ್ತಿತ್ತು. ತನ್ನ ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳ ವರೆಗೂ ಎಲ್ಲರೂ ಸಂತಸದಿಂದಿರಲಿ ಎಂದು ಮನೆಯ ಹಿರಿಮನಸ್ಸು ಹಚ್ಚಿಡುವ ಅಗರಬತ್ತಿಯ ವಾಸನೆಗೂ ಪರಲೋಕಕ್ಕೆ ಬಿಜಯಂಗೈದವರೆದುರು ಹಚ್ಚಿಡುವ ಅಗರಬತ್ತಿಯ ವಾಸನೆಗೂ ಭಯಂಕರ ವ್ಯತ್ಯಾಸವಿದೆ. ಒಂದೇ ಬ್ರಾಂಡಿನ ಅಗರಬತ್ತಿಯಾದರೂ ವಾಸನೆ ಬೇರೆ ಬೇರೆ!

ಸಾವು ಕಂಡಿದ್ದು ಈ ಮೊದಲೇನಲ್ಲ.  ನನ್ನ ಮದುವೆಯಾಗಿ ಒಂದು ತಿಂಗಳಿಗೇ ಅಪ್ಪ ತೀರಿಕೊಂಡಿದ್ದ. ಮೃತ ದೇಹವೊಂದನ್ನು ಕಣ್ಣಿಂದ ನೋಡಿದ್ದು ಅದೇ ಮೊದಲಬಾರಿ. ಆವತ್ತೂ ಅಜ್ಜಿಯ ಮೃತ ದೇಹವನ್ನು ನೋಡಿದ್ದಕ್ಕೆ ಸಂಕಟವಲ್ಲ.  ಕೇವಲ ಒಂದು ಗೋಡೆ...ಒಂದು ಗೋಡೆಯ ಫರಕ್ಕು ಇದ್ದವರ ಮನೆಯ ಸಾವು ಹಾಗೆ ಅಚಾನಕ್ಕಾಗಿ ದಿನಸಿ ತರುವ ವೇಳೆಯಲ್ಲಿ ಎದುರಾದದ್ದು ಮತ್ತು ನನಗೆ ಅದರ ಖಬರ‍್ರೇ ಇರದಿದ್ದದ್ದು ಸಂಕಟ. ಗೊತ್ತಿದ್ದರೆ ಏನು ಮಾಡುತ್ತಿದ್ದೆ ಮಹಾ? ಸಾವನ್ನು ತಡೆಯುತ್ತಿದ್ದೆನೆ? ಸಿಕ್ಕಾಪಟ್ಟೆ ದುಃಖ ಆದವರ ಥರ ಅವರ ಶೋಕದಲ್ಲಿ ಪಾಲ್ಗೊಳ್ಳುತ್ತಿದ್ದೆನೆ? ಸಾವು ದುಃಖ ಕೊಡುವುದು ಹೋದವರ ಅಭಾವ ತೀವ್ರವಾಗಿ ಕಾಡುವ ಗಳಿಗೆಗಳಲ್ಲಿ. ಅದು ಅವರು ಸತ್ತ ದಿನವೇ ಆಗಬೇಕಂತಿಲ್ಲ. ಕೆಲವೊಮ್ಮೆ ಬದುಕಿಯೂ ನಮ್ಮ ಪಾಲಿಗೆ ಸತ್ತವರ ಅಭಾವ ಅವರು ಬದುಕಿದ್ದಾಗಲೂ ಕಾಡುವುದಿಲ್ಲ. ಒಡನಾಡದ ಆ ಅಜ್ಜಿಯ ಅಭಾವ ನನ್ನನ್ನು ಕಾಡುವುದು ದೂರದ ಮಾತು. ಹಾಗೆಯೇ ಅವಳ ಸಾವಿಗೆ ನಾನು ದುಃಖಿಸುವುದೂ ದೂರದ ಮಾತು.

ಹಾಗೆ ಕಾಡುವುದೇ ಆದರೆ ಈ ಸಾವು ಎದುರಾದ ಸಂದರ್ಭ ಕಾಡುತ್ತದೆ.  ಔರಂಗಾಬಾದಿಗೆ ಬಂದು ೧೨ ವರ್ಷ್‌ಗಳಾದರೂ ಈ ಊರು ನನ್ನದಾಗಿಲ್ಲ. ಅಥವಾ ನಾನು ಇಲ್ಲಿಯವಳಾಗಿಲ್ಲ. ಅದು ನನ್ನ ಸಮಸ್ಯೆಯೇ ಆಗಿರಬಹುದು. ಅಪಾರ್ಟಮೆಂಟಿನ ಹೆಂಗಸರ ಇಳಿ ಮದ್ಯಾಹ್ನದ ಹರಟೆಗಳಲ್ಲೋ, ಕಿಟ್ಟಿ ಪಾರ್ಟಿಗಳಲ್ಲೋ ಶಾಮೀಲಾಗಿದ್ದರೆ ಊರು ನನ್ನೊಳಗೆ ಸೇರಿಕೊಳ್ಳುತ್ತಿತ್ತೇನೊ. ಮೊಸರನ್ನ, ಮಜ್ಜಿಗೆ ತಂಬುಳಿಯವರು ಎಲ್ಲಿದ್ದರೂ ಹೀಗೆಯೆ ಅನ್ನುತ್ತೀರಾ?! ಬೇಜಾರಿಲ್ಲ. ಈ ಊರು ಅಪರಿಚಿತವಾದರೇನಂತೆ ನನ್ನ ಏಕಾಂತದ ಕಮರಿಯೊಳಗೆ ಕಸಕಡ್ಡಿಗಳನ್ನ ಎಸೆದು ಆಟ ನೋಡುವುದಿಲ್ಲ. ಒಬ್ಬೊಂಟಿ ಯಾತ್ರಿಕನ ಪಕ್ಕದ ಸೀಟಿನಲ್ಲಿ ಕೂತ ನಿರ್ಭಾವುಕ ಸಹಪ್ರಯಾಣಿಕನಂತೆ ತನ್ನ ಪಾಡಿಗೆ ತಾನು ನಿನ್ನ ಪಾಡಿಗೆ ನೀನು ಅನ್ನುತ್ತದೆ. It heals!

ಮಾರನೆಯ ದಿನ ಅವರನ್ನ ಮಾತಾಡಿಸಿ ಬಂದೆ. ಮನಸ್ಸು ಸ್ವಲ್ಪ ಶಾಂತವಾಯಿತು. ಇವೆಲ್ಲ ಆದ ಮೇಲೆ ನನ್ನ ತಲೆಯೊಳಗೆ ಬಂದು ಕೂತ ಈ ಎರಡು ಸಂಗತಿಗಳನ್ನು ಹೊರಹಾಕಲಾಗುತ್ತಿಲ್ಲ:
೧.  ನನ್ನದಲ್ಲದ ಶಹರಿನಲ್ಲಿ ಗೋಡೆ ಹಂಚಿಕೊಂಡವರ ಮನೆಯ ಸಾವಿಗೂ ನನಗೂ ಸೂತಕದ ಬಂಧವಿಲ್ಲ.
೨. ಯಾವುದೋ ಒಂದು ಸಂಜೆ ದಿನಸಿ ತರಲೆಂದು ಬಾಗಿಲು ತೆರೆದವರೆದುರು ಆ ಸಾವು ಹಾಗೆ ಅಚಾನಕ್ಕಾಗಿ ಮಲಗಿರುತ್ತದೆ. ಅವರ ಪ್ರೈವೆಸಿಯನ್ನು ಮುರಿದು ನುಗ್ಗಲಾಗದೇ (sub clause-ಹಾಗೆ ನುಗ್ಗುವ ಸಂಬಂಧವಿರುವುದಿಲ್ಲ)  ನಾನು ನನ್ನ  ಮನೆಯೊಳಗೆ ನಡೆಯುತ್ತೇನೆ.

ಬದುಕು ನಿಜಕ್ಕೂ "ಘಾಚರ್ ಘೋಚರ್"!!









No comments:

Post a Comment