Saturday, April 26, 2014

ಗುಲ್ಜಾರ್ ಅವರ ಮತ್ತೆರಡು ಕವಿತೆಗಳು

ಸನ್ ಸೆಟ್ ಪಾಯಿಂಟ್ 

ಬಾ ಮುಳುಗಿ ನೋಡೋಣ
ಒಂದು-ಎರಡು...
ಚಂದ್ರನ ಮೇಲಿಂದ ಜಿಗಿಯೋಣ

ನಯನಗಳ ನಾವೆಯಲ್ಲಿ
ಕಳೆಯೋಣ   ರಾತ್ರಿ 
ಹರಿವ ತೊರೆಯ ಮೇಲೆ
ಹಾಸೋಣ ನಿದ್ದೆ
ನಡಿಯೇ ಮುಳುಗೋಣ...

ಬಾ ಮುಳುಗಿ ನೋಡೋಣ
ಒಂದು-ಎರಡು....
ಚಂದ್ರನ ಮೇಲಿಂದ ಜಿಗಿಯೋಣ

ನಡೀ  ಈ ನದಿಯನ್ನ ಕಟ್ಟಿಕೋ ನಿನ್ನ ಕಾಲುಗಳಲ್ಲಿ
ಹೋಗೋಣ   ಸಾಗರ ಸಂಗಮಕ್ಕೆ
ನಡೀ  ಸೂರ್ಯಾಸ್ತದ ರಂಗನ್ನ ಹೊದ್ದುಕೋ ಮೈ ಮೇಲೆ
ಗುನುಗುತ್ತ ಬುದ್ಧಂ ಶರಣಂ

ಬಾ ಮುಳುಗಿ ನೋಡೋಣ
ಒಂದು-ಎರಡು....
ಚಂದ್ರನ ಮೇಲಿಂದ ಜಿಗಿಯೋಣ

ಎಲ್ಲಾರೂ ಮಾಡಿದ್ದನ್ನೇ ಮಾಡಿದ್ರೆ ಏನು ಬಂತು?
ಇಲ್ಲಿವರೆಗೆ ಆಗದ್ದನ್ನ ಮಾಡಬೇಕಪ್ಪ!
ಯಾವುದು ಆಗಿಲ್ಲವೋ ಅದನ್ನ
ನಡೀ ಹಾಗಿದ್ರೆ... ಹಾರೋಣ

ನಡೀ ಈ ತಾರೆಗಳನ್ನ ತುಂಬಿಕೋ ಕಿಸೆಯಲ್ಲಿ
ಸಾಗೋಣ   ಬೆಳಕ ಬೀರುತ್ತ  
ನಡೀ ಸುತ್ತಿಕೋ ಈ ಮೋಡಗಳ ಮಫ್ಲರ್
ಸಾಗೋಣ  ಮಳೆಯ ಸುರಿಸುತ್ತ 

ನಡಿಯೇ ಮುಳುಗೋಣ...
(ಪ್ರೇಮದ ನದಿಯೊಳಗೆ)

[ಒಂದೇ ಕಾವ್ಯ ವಸ್ತುವನ್ನ ಎರಡು ಮೂರು ಮಗ್ಗುಲಿನಿಂದ ನೋಡುತ್ತಿರುತ್ತಾರೆ ಗುಲ್ಜಾರ್. ಅದು ಬಹುಶಃ ಅವರ ಮೂಡನ್ನ ಅವಲಂಬಿಸಿಯೋ ಅಥವಾ ಸಾಂದರ್ಭಿಕವೋ   ನನಗೆ ಗೊತ್ತಿಲ್ಲ."ಗಿರಾದೋ ಪರದೋ  ದಾಸ್ತಾನ್ ಖಾಲಿ ಹೋಗಯಾ" ಅಂತ ಶುರುವಾಗುವ ಹಾಡೊಂದಕ್ಕೆ ವ್ಯತಿರಿಕ್ತವೆನಿಸುವ "ಅಭೀ ನ ಪರದಾ ಗಿರಾವೊ ಠೆಹರೋ...ದಾಸ್ತಾನ್ ಔರ್ ಭೀ ಹೈ" ಹಾಡೂ ಬರೆಯುತ್ತಾರೆ!  ಕವಿಯ ಕಲ್ಪನೆಯ ಕ್ಷಿತಿಜಕ್ಕೆ ಆದಿ ಅಂತ್ಯಗಳಿವೆಯೇ?!]






ಈ ಆಟ ನಿರರ್ಥಕವಲ್ಲವೆ? 

ಈ ಆಟ ಕೊನೆಗೂ ಯಾಕಾಗಿ?
ಮನಸ್ಸು ಕಗ್ಗಂಟಾಗುವುದಿಲ್ಲವೆ?
ಎಷ್ಟೋ ಬಾರಿ ಆಡಿಬಿಟ್ಟಿದ್ದೇವೆ ನಾವು ನಮ್ಮ ಬದುಕಿನಲ್ಲಿ
ಆಡಿದ್ದೇವೆ ಆಡುತ್ತಲೇ ಇದ್ದೇವೆ
ಕೊನೆಗೂ ಆದದ್ದೇನು? ಎಲ್ಲ ಒಂದೇ  ತರ
ಕೊನೆಗೂ ಉಳಿಯೋದೇನು? ಏನು ಸಾಧಿಸ್ತೀವಿ?
ಜೀವನದುದ್ದಕ್ಕೂ  ಕತ್ತಲೊಳಗೆ ಒಬ್ಬರನ್ನೊಬ್ಬರು
ತಡಕಾಡುತ್ತ ಉಳಿವುದೇ ಪ್ರೇಮಾನಾ?
ಕೊನೆಗೂ ಯಾಕಾಗಿ?

ಒಂದು ಕತೆ ಇದೆ. ಕೇಳ್ತೀರಾ?

ಎರಡು ಪ್ರೇಮಿಗಳ ಕತೆ
ಇಬ್ರೂ ಚಂದ ಇದ್ರು ನೋಡಲಿಕ್ಕೆ
ಪುಟಿಯುವ ಯೌವ್ವನ
ಬುದ್ದಿವಂತರು
ಒಬ್ಬರನ್ನೊಬ್ಬರು ಅಂಕೆಯಿಲ್ಲದೇ ಪ್ರೀತಿಸ್ತಿದ್ರು
ಜನ್ಮ-ಜನ್ಮಾಂತರಗಳಲ್ಲೂ ಒಬ್ಬರನ್ನೊಬ್ಬರು ಕೈ ಬಿಡುವುದಿಲ್ಲವೆಂಬ ಪಣ
ಆದ್ರೆ ಇಬ್ರೂ ಬೇರೆಯಾದ್ರು
ಅವನು ಸೈನ್ಯ ಸೇರಿದ ಮರಳಿ ಬರಲಿಲ್ಲ
ನಾಪತ್ತೆಯಾಗಿಬಿಟ್ಟ.
ಜನ  ಅಂದ್ರು ಸತ್ತೋದ ಅಂತ
ಆದ್ರೆ ಅವಳಿಗೆ ಅಚಲ ವಿಶ್ವಾಸ ಬಂದೇ ಬರ‍್ತಾನೆ
ಬರ‍್ತಾನೆ ನೋಡ್ತಾ ಇರಿ ಅಂತ
ನಲವತ್ತು ವರ್ಷಗಳ ವರೆಗೆ
ನಿಯತ್ತಿನಿಂದ ಕಾದಳು
ಅಂತೂ ಒಂದು ದಿನ ಪ್ರಿಯತಮನ ಸಂದೇಶ ಸಿಕ್ಕಿತು
’ನಾನು ಮರಳಿದ್ದೇನೆ. ಶಿವನ ಗುಡಿಯಲ್ಲಿ ಸಿಗು’
ಇವಳಿಗೆ ಹೆಮ್ಮೆ. ನೋಡಿದ್ರಾ ನಾ ಹೇಳಿರಲಿಲ್ವಾ!
ಇವಳು ಅಲ್ಲಿಗೆ ಹೋದ್ಲು. ಒಬ್ಬ ಕೂತಿದ್ದ ಅಲ್ಲಿ
ಪ್ರೇಮಿ ಕಾಣಲಿಲ್ಲ
ಯಾರೋ ಕೂತಿದ್ರು
ಮುದುಕ ಅಂದ್ರೆ ಮುದುಕ
ಬೊಚ್ಚು ಬಾಯಿ ಬೊಕ್ಕ ತಲೆ
ಕೊಳಕಾದ ಕಣ್ಣುಗಳು
ಇವಳು ಗೊಣಗಿಕೊಂಡಳು
ಯಾರೋ ಸುಮ್ಮನೆ ಕಿತಾಪತಿ ಮಾಡಿರಬೇಕು
ಬೇಸರದಿಂದ ಮನೆಗೆ ಹೋದಳು
ಅಲ್ಲಿ, ಗುಡಿಯಲ್ಲಿ ಅವಳಿಗಾಗಿ ಕಾದೂ ಕಾದೂ ಅವನಿಗೂ ಸುಸ್ತಾಯ್ತು
ಯಾರೂ ಬರಲಿಲ್ಲ
ಹಕ್ಕಿ-ಪಿಕ್ಕಿಗಳೂ ಸಹಾ
ಯಾವುದೋ ಒಂದು ಮುದುಕಿ ಬಂದಿತ್ತು
ಬಿದ್ದೋಗಿರೋ ಸೊಂಟ ಹಿಡಕೊಂಡು
ಕೂದಲು ಸಿಕ್ಕು ಸಿಕ್ಕು
ಕಣ್ಣುಗಳಲ್ಲಿ ಪೊರೆ
ಗುಡಿಯೊಳಕೆ ಇಣುಕಿ ನೋಡಿದ್ಲು
ಏನೋ ಒಂದಿಷ್ಟು ಗೊಣಗಿದ್ಲು
ತನ್ನಷ್ಟಕ್ಕೆ ತಾನೇ ಮಾತಾಡ್ತಾ  ಹೊರಟೋದ್ಲು
ನಿರಾಶೆಯಾಯ್ತು ಇವನಿಗೆ ಪಾಪ
ಅಂದ...ಅವಳು ನನಗಾಗಿ ಕಾಯಲೇ ಇಲ್ಲ
ಮತ್ತೊಂದು ಮದುವೆಯಾಗಿ ನನ್ನ ಮರತೇ ಬಿಟ್ಲು
ಸಂದೇಶ ಕಳಿಸಿದ್ದೆ. ಆದ್ರೂ ಭೇಟಿ ಮಾಡಲಿಕ್ಕೆ ಬರಲಿಲ್ಲ...

ಯಾಕಾಗಿ? ಇಷ್ಟೆಲ್ಲ ಯಾಕಾಗಿ?


[ಈ ಹಾಡಿನ ಲಿರಿಕ್ಸ ಆಡಿಯೋ ಕೇಳಿ ಅನುವಾದಿಸಿದೆ. ಒಂದೆರಡು ಕಡೆ ಅವರ ಉಚ್ಛಾರ ನನಗೆ ತಿಳಿಯದೇ...ನನ್ನ ಭಾವಕ್ಕೆ ಅದು ಹೇಗನ್ನಿಸಿತೋ ಹಾಗೆ ಅನುವಾದಿಸಿದ್ದೇನೆ.  ಇದು ಯೂ-ಟ್ಯೂಬಿನಲ್ಲಿ ಲಭ್ಯವಿದೆ. "ಯೇ ಖೇಲ್ ಆಖಿರ್ ಕಿಸ್ ಲಿಯೆ"]










No comments:

Post a Comment