Monday, October 20, 2014

ಗಾಂಧಿ ಮತ್ತು ಕವಿತೆ


Photo Courtesy: Wikipedia 

















ಒಂದು ದಿನ ಒಂದು ಬಡಕಲು ಕವಿತೆ
ಗಾಂಧಿಯ ಆಶ್ರಮಕ್ಕೆ ಬಂತು
ಒಮ್ಮೆ ಅವರನ್ನು ನೋಡಬೇಕು ಎಂದು.
ರಾಮನ ಧ್ಯಾನದಲ್ಲಿ ನೂಲು ತೆಗೆಯುತ್ತ
ಕುಳಿತಿದ್ದ ಗಾಂಧಿ ಕವಿತೆಯನ್ನು ಗಮನಿಸಲಿಲ್ಲ
ತಾನು ಭಜನೆಯಲ್ಲವೆಂಬ ಸಂಕೋಚ ಹೊತ್ತು
ಬಾಗಿಲಲ್ಲೇ ಕಾಯುತ್ತ ನಿಂತಿತ್ತು ಕವಿತೆ



ಮೆತ್ತಗೆ ಕೆಮ್ಮಿತ್ತು ಕವಿತೆ ತಡೆಯಲಾಗದೆ
ಗಾಂಧಿ ದನಿ ಬಂದತ್ತ  ನೋಡಿದರು
ನರಕ ಕಂಡ  ಚಶುಮದೊಳಗಿಂದ
ನೂಲು ತೆಗೆದಿದ್ದೀಯಾ ಯಾವತ್ತಾದರೂ?
ಕೇಳಿದರು ಕವಿತೆಯನ್ನ
ತಿಪ್ಪೆ ಗುಡಿಸಿದ್ದೀಯ? ಮಲ ಹೊತ್ತಿದ್ದೀಯಾ?
ನಸುಕಿನಲ್ಲೇ ಎದ್ದು, ಅಡುಗೆ ಒಲೆಗೆ ಕಟ್ಟಿಗೆ ತಳ್ಳಿ,
ಕೆಂಡವೂದಿ, ಎದ್ದ ಹೊಗೆಯಲ್ಲಿ ಕಣ್ಣು-ಮೂಗು ಕೆಂಪಾಗಿಸಿಕೊಂಡಿದ್ದುಂಟೋ?
ಯಾವತ್ತಾದರೂ  ಹೊಟ್ಟೆಗಿಲ್ಲದೆ ಕಂಗಾಲಾಗಿದ್ದೆಯಾ?


ಕವಿತೆ ಹೇಳಿತು, ಹುಟ್ಟಿದ್ದು ಅಡವಿಯಲ್ಲಿ
ಶಿಕಾರಿಯೊಬ್ಬನ ಬಾಯಿಂದ ಹೊರಬಿದ್ದೆ
ಮೀನುಗಾರನೊಬ್ಬನ ಕೊಪ್ಪಲಿನಲ್ಲಿ ಬೆಳೆದೆ.
ಆದರೂ ಕೆಲಸ ಮಾಡಿ ಗೊತ್ತಿಲ್ಲ ನನಗೆ
ಹಾಡುವುದೊಂದನ್ನು ಬಲ್ಲೆ
ಮೊದಮೊದಲು ಆಸ್ಥಾನದಲ್ಲಿ ಹಾಡುತ್ತಿದ್ದೆ
ಆವಾಗ ಮೈ-ಕೈ ತುಂಬಿಕೊಂಡು ಸುಂದರವಾಗಿದ್ದೆ;
ಈಗ ಬೀದಿಯಲ್ಲಿ ಹಾಡುತ್ತೇನೆ, ಹೊಟ್ಟೆ
ತುಂಬಿದರೆ ತುಂಬೀತು, ಇಲ್ಲದಿದ್ದರೆ ಇಲ್ಲ.

ಪರವಾಗಿಲ್ಲ, ಗಾಂಧಿ ಹೇಳಿದರು,
ತುಂಟ ಕಿರುನಗುವೊಂದನ್ನು ಸೂಸುತ್ತ,
ಆವಾಗಾವಾಗ ಸಂಸ್ಕೃತದಲ್ಲಿ ಮಾತಾಡುವ
ಅಭ್ಯಾಸವೊಂದನ್ನ ಬಿಡಬೇಕು ನೀನು!
ಹೊಲ ಗದ್ದೆಗಳಲ್ಲಿ ತಿರುಗಾಡು
ಬೇಸಾಯಗಾರನ ಮಾತಿಗೆ ಕಿವಿ ಕೊಡು


ಅಲ್ಲಿಂದೆದ್ದು ಹೊರಟ ಕವಿತೆ
ಮುಂಗಾರಿಗೆ ಮುನ್ನ ಒಂದು ಧಾನ್ಯವಾಗಿ
ಉಳುವವನನ್ನು ಎದುರು ನೋಡುತ್ತ
ಕಾದು ಕೂತಿತ್ತು ಹೊಲದೊಳಗೆ
ಬಿದ್ದ ಹೊಸ ಮಳೆಗೆ ಗದ್ದೆ ಹೂಡಿ
ಹಸಿ ಮಣ್ಣ ಸಡಿಲಿಸಿ ಹದಗೊಳಿಸುವ ಕ್ಷಣಕ್ಕಾಗಿ


-[೧೯೯೩
-ಕೆ. ಸಚ್ಚಿದಾನಂದನ್  
-Translation of K. Satchidanandan's poem 'Gandi and Poetry'

ಕೆ. ಸಚ್ಚಿದಾನಂದನ್ ಮಲಯಾಳಂನ ಪ್ರಸಿದ್ಧ ಕವಿ. 1946 ರಲ್ಲಿ ತ್ರಿಸೂರಿನ ಒಂದು ಹಳ್ಳಿಯಲ್ಲಿ ಜನಿಸಿದ ಇವರು ಆಂಗ್ಲ ಸಾಹಿತ್ಯದಲ್ಲಿ  ಸ್ನಾತಕೋತ್ತರ ಪದವಿ  ಮತ್ತು ಆನಂತರದಲ್ಲಿ ಪಿ. ಎಚ್. ಡಿ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ನವ್ಯ ಶೈಲಿಯ ಇವರ ಕವಿತೆಗಳು ವಿಶ್ವದ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿವೆ. ಇವರು Indian Literature ಎನ್ನುವ ಜರ್ನಲ್ಲಿನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕೆಡೆಮಿಯ ಸೆಕ್ರೆಟರಿಯೂ ಆಗಿದ್ದವರು.

ಇವರ ಕವಿತೆಗಳನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿದ ಕಾರ್ಲೊ ಸಾವಿನಿ ಎಂಬ ಲೇಖಕರು ಗುರುತಿಸುವಂತೆ ಇವರ ಕವಿತೆಗಳು ನವ್ಯ ಶೈಲಿಯವು. ತಮ್ಮ ಗ್ರಹಿಕೆಗೆ ಬಂದ ಅನುಭವವನ್ನು ಕಾವ್ಯದಲ್ಲಿ ಹಿಡಿದಿಡುವಾಗ ಕಾಳಜಿ ಪೂರ್ವಕವಾಗಿ ಆಯ್ದ ಸರಳ ಪರಿಭಾಷೆಯನ್ನು ಬಳಸುತ್ತಾರೆ.  ಕವಿತೆಗಳ ಮೂಲಕ ತನ್ನೊಂದಿಗೂ ಮತ್ತು ಓದುಗನೊಂದಿಗೂ ಒಂದು “non-rhetorical” ಸಂವಾದ ನಡೆಸುತ್ತಿರುತ್ತಾರೆ. ಸಮೃದ್ಧ ರೂಪಕಗಳು, ಮೋಡಿ ಮಾಡುವ ಪದ ಲಾಲಿತ್ಯ, ಮತ್ತು ವಿಡಂಬನೆ ಇವರ ಕವಿತೆಗಳ ವೈಶಿಷ್ಟ್ಯ ಎನ್ನುತ್ತಾರೆ ಇಟಲಿಯ ಲೇಖಕ. ಅದಷ್ಟೇ ಅಲ್ಲ, ಅವರ ಕವಿತೆಗಳಲ್ಲಿ ಕಥನವೊಂದು .ಅಡಗಿರುತ್ತದೆ ಎಂದು ನನಗನಿಸುತ್ತದೆ. ಹಿಂದುಸ್ತಾನಿಯಲ್ಲಿ ಬರೆಯುವ ನಮ್ಮ ನಲ್ಮೆಯ ಕವಿ ಗುಲ್ಜಾರ್ ಕವಿತೆಗಳ ಹಾಗೆ. ಓದುಗ ಸಂವಾದ ನಡೆಸುವುದೊಂದೇ ಅಲ್ಲ, ಪೂರ್ತಿ ಬಿಚ್ಚಲಾಗದ ಕತಯೊಂದರ ಸನ್ನಿವೇಶದೊಳಗೆ ಮೂಕ ಸಾಕ್ಷಿಯೂ ಆಗಿರುತ್ತಾನೆ.

ಇದುವರೆಗೂ ಇವರ ಸುಮಾರು ಇಪ್ಪತ್ತೊಂದು ಕವಿತಾ ಸಂಕಲನಗಳು ಹೊರಬಂದಿವೆ. ಹೆಚ್ಚಿನವು ಮಲಯಾಳಂನವುಅವುಗಳಲ್ಲಿ ಕೆಲವನ್ನು ಕವಿಯೇ ಇಂಗ್ಲೀಷಿಗೆ ತರ್ಜುಮೆ ಮಾಡಿದ್ದಾರೆ. ಕೇರಳ ರಾಜ್ಯದ ಸಾಹಿತ್ಯ ಪ್ರಶಸ್ತಿಗಳಲ್ಲದೇ ಅನೇಕ ಅಂತರ್ರಾಷ್ಟ್ರೀಯ ಪ್ರಶಸ್ತಿಗಳೂ ಇವರಿಗೆ ದಕ್ಕಿವೆ. ಕಳೆದ ವರ್ಷ (2013) ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಕೊಡಲಾಗುವ ಮೊದಲ ಕುವೆಂಪು ಪ್ರಶಸ್ತಿ ಇವರಿಗೆ ಸಂದಿದೆ.

ಕಾವ್ಯವೆಂಬುದು ಅವರಿಗೆ ಬರಿಯ ಶಬ್ಧಗಳೊಂದಿಗೆ ಆಡುವ ಆಟವಲ್ಲ. ಅದು ಅವ್ಯಕ್ತದ ಕಡಲೊಳಗಿಂದ ಆವಿರ್ಭಾವವಾಗುತ್ತದೆ, ತಡೆಯಲಾಗದ ತವಕವನ್ನು ವ್ಯಕ್ತಗೊಳಿಸುವ ಯತ್ನ. ಹೆಸರಿಲ್ಲದ್ದಕ್ಕೆ ಹೆಸರಿಡುವ ತವಕ, ದನಿಯಿಲ್ಲದ್ದಕ್ಕೆ ದನಿಯಾಗುವ ತವಕ. ಹಾಗೆಂದು ಸ್ವತಃ ಕವಿ ಹೇಳುತ್ತಾರೆ.

ನನಗೆ ಮಲಯಾಳಂ ಬರುವುದಿಲ್ಲ! ಅವರ ಇಂಗ್ಲೀಷ್ (ಮಲಯಾಳಂ ನಿಂದ ಅವರೇ ಇಂಗ್ಲೀಷಿಗೆ ತಂದ) ಕವನಗಳನ್ನು ಮಾತ್ರ ಓದಬಲ್ಲೆ. ಇವರ ಬಗ್ಗೆ ಕೇಳಿ ಗೊತ್ತಿತ್ತೆ ವಿನಃ ಓದುವ ಅವಕಾಶ ಇದುವರೆಗೂ ಆಗಿರಲಿಲ್ಲ. ಇಲ್ಲಿಯ ಪುಸ್ತಕ ಮಳಿಗೆಯೊಂದರಲ್ಲಿ ಅಚಾನಕ್ಕಾಗಿ ಕಂಡ ಅವರ ಕವನ ಸಂಕಲನವೊಂದನ್ನು ಸುಮ್ಮನೆ ತಿರುವಿದಾಗ ಮೊದಲು ಕಣ್ಣಿಗೆ ಬಿದ್ದದ್ದು ಅವರ Granny ಕವಿತೆ. ಅದನ್ನ ಓದಿದವಳು ತಲೆ ಕೆಟ್ಟು ಆ ಪುಸ್ತಕವನ್ನ ಮನೆಗೆ ತಂದೆ. ಇದೇ ಬ್ಲಾಗಿನ ’ಸಚ್ಚಿದಾನಂದನ್ ಕವಿತೆಗಳು’ ಎಂಬ ಪೋಸ್ಟಿನಲ್ಲಿ ಅದರ ಅನುವಾದ ಕೂಡ ಇದೆ. ಅವರ ಕಾವ್ಯ ಜಗತ್ತಿನಲ್ಲಿ ಇಷ್ಟಿಷ್ಟೇ ಪ್ರವೇಶ ಪಡೆಯುತ್ತಿದ್ದೇನೆ.

ಇವರ ಕವಿತೆಗಳು ಈಗಾಗಲೇ ಕನ್ನಡದ ಪತ್ರಿಕೆಗಳಲ್ಲಿ ಅನುವಾದಗೊಂಡಿರಬಹುದು. ಆದರೆ ನನಗೆ ಅದರ ಅರಿವಿಲ್ಲ. ಇಲ್ಲಿ,   ಈ ಔರಂಗಾಬಾದ್ ಎಂಬ ದ್ವೀಪದಲ್ಲಿ ನನಗೆ ಕೈಗೆಟುಕಿದಷ್ಟೇ ಆಕಾಶ! ಹಾಗಾಗಿ ಎಲ್ಲರಿಗೂ ಈಗಾಗಲೇ ಗೊತ್ತಿರುವುದೇನನ್ನೋ ಆಗಷ್ಟೇ ನಡೆಯಲಾರಂಭಿಸಿದ ಮಗುವಿನ ಉತ್ಸುಕತೆಯಲ್ಲಿ ನಿಮ್ಮೆದುರು ಪ್ರಸ್ತುತ ಪಡೆಸುತ್ತಿದ್ದೇನೆ ಎಂದು ನಿಮಗನ್ನಿಸಿದರೆ ಕ್ಷಮೆ ಇರಲಿ.

ಖುಷಿಯ ಸಮಾಚಾರವೆಂದರೆ ಕೆ. ಸಚ್ಚಿದಾನಂದನ್ ತಮ್ಮ ಕವಿತೆಗಳ ಕನ್ನಡ ಅನುವಾದಕ್ಕೆ ತಮ್ಮ ಪರವಾನಿಗೆ ಇತ್ತಿದ್ದಾರೆ. ಮತ್ತು ಆ ಅನುವಾದಿತ ಕವಿತೆಗಳನ್ನ ನಾನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿಕೊಳ್ಳಲೂ ಸಮ್ಮತಿ ಸೂಚಿಸಿದ್ದಾರೆ. ಅವರಿಗೆ ನನ್ನ ಅನಂತ ಧನ್ಯವಾದಗಳು. ಮೂಲ ಕವಿಯ ಆಶಯಕ್ಕೆ ಚ್ಯುತಿ ಬರದೇ ಇರುವ ಹಾಗೆ ಕನ್ನಡಕ್ಕೆ ತರುವುದು ಗುರುತರ ಜವಾಬ್ದಾರಿಯೆಂದು ನಾನು ಭಾವಿಸುತ್ತೇನೆ. ನಾನು ಎಡವಿದೆ ಎಂದನ್ನಿಸಿದರೆ ತಿದ್ದಲು ನೀವಿದ್ದೀರಲ್ಲವೆ?

-ಪ್ರಜ್ಞಾ  



Wednesday, October 8, 2014

ಎಲ್ಲ ನೆನಪಾದವನ ಕತೆ


ಆಗಷ್ಟೇ ಹರೆಯ ಹುಟ್ಟಿದ ಹುವಾತ್ಸೇ ಗೆ
ಒಮ್ಮಿಂದೊಮ್ಮೆಲೆ ಮರೆವಿನ ರೋಗ ಮೆತ್ತಿಕೊಂಡಿತು.
ಕೋಣೆಯಲ್ಲಿರುವಾಗ ಕೂರಬೇಕೆಂಬುದನ್ನು ಮರೆಯುತ್ತಿದ್ದ
ಬೀದಿಯ ಮೇಲೆ ನಡೆಯಬೇಕೆಂಬುದನ್ನು ಮರೆಯುತ್ತಿದ್ದ
ಊಟ-ತಿಂಡಿ ಮರೆತ, ಉಡುಗೆ-ತೊಡುಗೆ ಮತ್ತು ನಿದ್ದೆಯನ್ನೂ ಸಹ
ಹಗಲು ಮತ್ತು ರಾತ್ರಿಯನ್ನೂ, ಆಮೇಲೆ ನೆಂಟರಿಷ್ಟರನ್ನೂ ಮರೆತಾದ ಬಳಿಕ
ಒಂದು ದಿನ, ತನ್ನ ಹೆಸರನ್ನೂ ಮರೆತ.

ಹೀಗೇ,,,ಇಲ್ಲಿಯವರೆಗೆ ಏನೋ ಒಂದು ಆಗಿದ್ದ ಹುವಾತ್ಸೆ ಈಗ ಏನೂ ಅಲ್ಲದವನಾದ
ಹಕೀಮರನ್ನು ಕರೆಯಿಸಿದರು, ಮಾಂತ್ರಿಕರನ್ನು ಕರೆಯಿಸಿದರು
ಪ್ರಯೋಜನವಾಗಲಿಲ್ಲ.
ಕೊನೆಗೊಮ್ಮೆ ಮಹಾಗುರು ಮೆನ್ಶಿಯಸ್ ನ ಸಲಹೆಯ ಮೇರೆಗೆ
ಉಪವಾಸ ಕೆಡವಿದರು ಅವನನ್ನ
ಮೂರು ಹಗಲು ಮೂರು ಇರುಳು
ಆಗ ಇವನಿಗೆ ಊಟ-ತಿಂಡಿಯ ನೆನಪಾಯಿತು
ಕೊರೆವ ಚಳಿಯಲ್ಲಿ ಹಿಮದ ಮೇಲೆ ಮಲಗಿಸಿದರು
ಇವನಿಗೆ ಉಡುಗೆ-ತೊಡುಗೆಯ ಖಯಾಲು ಬಂತು.

ನಂತರ, ಅವನನ್ನ ವರ್ತಮಾನದಲ್ಲಿಟ್ಟರು
ಗತದ ನೆನಪು ಬಂತು
ಗತದೊಳಗಿಟ್ಟರು, ಅವನು ಭವಿಷ್ಯವನ್ನು ನೆನಪಿಸಿಕೊಂಡ
ಒಂದೊಂದಾಗಿ ಎಲ್ಲವೂ ನೆನಪಿಗೆ ಬಂತು.
ಹಾಗೆ ಎದ್ದವನ ಕಣ್ಣುಗಳಲ್ಲಿ ರೋಷ
ಮೆನ್ಶಿಯಸ್ ನ ಎದುರು ಕಿರುಚಿದ
ಏನೂ ಅಲ್ಲದವನಾದಾಗ ನಾನು ತುಪ್ಪಳದಷ್ಟು ಹಗುರವಾಗಿದ್ದೆ
ಮರೆವು ಬಿಡುಗಡೆಯಾಗಿತ್ತು. ಅಂಕೆಯಿಲ್ಲದ, ಬಿಂದಾಸ್ ಬದುಕು.
ಈಗ ನೀವು ಎಲ್ಲವನ್ನೂ ಹಿಂದಿರುಗಿಸಿದಿರಿ
ನನ್ನೆಲ್ಲ ಹೊರೆಯನ್ನು, ಹಿಂದಾಗಿದ್ದನ್ನೂ
ಈಗ ಹಿಂದೆಂದಿಗಿಂತಲೂ ಹೆಚ್ಚು ವ್ಯಾಕುಲ ಮತ್ತು ಒಂಟಿ ಪಿಶಾಚಿ
ವ್ಯಾಕುಲತೆ ಮತ್ತು ಒಂಟಿತನ ಇವೆರಡೂ ನನ್ನ
ಅಸ್ತಿತ್ವದ ಆವರಣವನ್ನೇ ಮುರಿಯುತ್ತಿವೆ
ಹಿಂತೆಗೆದುಕೊ ನನ್ನ ನೆನಪನ್ನು, ನನಗದು ಬೇಡ”
ಮರುಗಿದ ಮೆನ್ಶಿಯಸ್ ಕೂಡ.
ಆದರೆ ಹುವಾತ್ಸೆಯ ಮರೆವನ್ನು ಹಿಂತಿರುಗಿಸಲಾರ.
ಹೀಗೆನಾವು ಮನುಜರು ಹುವಾತ್ಸೆಯ ವಂಶಜರು
ನೆನಪಿನ ಶಾಪ ಹೆಗಲ ಮೇಲಿನ ಹೊರೆ
ಒಟ್ಟಿನಲ್ಲಿ ಏನಾದರೊಂದು ಆಗಿರಬೇಕು ನಾವೆಲ್ಲ.



-  ಕೆ. ಸಚ್ಚಿದಾನಂದನ್ (ಮೂಲ) 
   ಕನ್ನಡಕ್ಕೆ ಪ್ರಜ್ಞಾ ಶಾಸ್ತ್ರಿ 

The Man who remembered everything' from the collection  "While I write" 

[ಮೂಲ ಮಲಯಾಳಂ. ಮಲಯಾಳಂ ನಿಂದ ಇಂಗ್ಲೀಷಿಗೆ ಸ್ವತಃ ಕವಿಯೇ ತರ್ಜುಮೆ ಮಾಡಿದ್ದಾರೆ. ನಾನು ಅನುವಾದಿಸಿದ್ದು ಇಂಗ್ಲೀಷಿನಲ್ಲಿ ಬಂದ ಅವರ ಕವಿತೆಗಳನ್ನ] 




Tuesday, October 7, 2014

ಸಚ್ಚಿದಾನಂದನ್ ಕವಿತೆಗಳು



1. ಸ್ಥಾನ ಪಲ್ಲಟ 



ಒಂದರೆಗಳಿಗೆ...
ಬದುಕಿನಲ್ಲಿ ಈವರೆಗೆ ಮರೆತು
ಎಲ್ಲೋ ಇಟ್ಟ ವಸ್ತುಗಳೆಲ್ಲ
ಒಂದೊಂದಾಗಿ ನೆನಪಾಗುತ್ತಿವೆ

ಮಾವಿನ ತೋಪಿನ ಒಣ ತರಗೆಲೆಗಳ ಒಳಗೆ
ಮರೆತಿಟ್ಟ ನಯ ಹೊಳಪಿನ ಗೋಲಿಗಳು
ಮಳೆ ಬರದೇ ಇದ್ದ ಒಂದು ದಿನ
ಅಪ್ಪಣ್ಣನ ಕ್ಷೌರದಂಗಡಿಯಲ್ಲಿ ಬಿಟ್ಟು ಬಂದ ಕೊಡೆ
ಶಾಲೆಯಿಂದ ಬರುವಾಗ ಗೇರು ಮರ ಹತ್ತಲು ಹೋಗಿ
ಕಿಸೆಯಿಂದ ಜಾರಿ ಬಿದ್ದ ಪೆನ್ನು
ರಿಗಾದ ಹೊಟೆಲ್ಲಿನ ಕಪಾಟಿನಲ್ಲೇ
ಉಳಿದು ಹೋದ ತಿಳಿ ನೀಲಿ ಶರಟು
ಓದಲಿಕ್ಕೆಂದು ಇಸಿದುಕೊಂಡು ಹೋಗಿ
ಮರಳಿ ಕೊಡದೇ ಇದ್ದ ಎಷ್ಟೋ ಪುಸ್ತಕಗಳು
ಮರಳಿ ಪಡೆಯದ ಒಂದಿಷ್ಟು ಸಾಲ, ಒಂದಿಷ್ಟು ಪ್ರೇಮ...
ಮರೆಗುಳಿತನವೊಂದೇ ಇನ್ನೂವರೆಗೆ ನನ್ನ ಕೈಬಿಟ್ಟಿಲ್ಲ

ಪ್ರೇಮದಲ್ಲಿ  ಹೃದಯ ಸ್ಥಾನ ಪಲ್ಲಟಗೊಂಡಿದ್ದಕ್ಕೆ ಲೆಕ್ಕವಿಲ್ಲ
ಕವಿತೆಯಲ್ಲಿ ರೂಪಕಗಳು ಸ್ಥಾನ ಪಲ್ಲಟಗೊಂಡಿದ್ದಕ್ಕೂ ಲೆಕ್ಕವಿಲ್ಲ

ಆಮೇಲೆ, ಬೆಟ್ಟಗಳನ್ನ ನೋಡುತ್ತ ಅಂದುಕೊಳ್ಳುತ್ತಿದ್ದೆ
ಆಕಾಶ ಅವುಗಳನ್ನ ಎಲ್ಲೋ ಮರೆತಿಟ್ಟಿದೆ
ಹಾಗೆಯೇ ಮೋಡಗಳು ಕಾಮನ ಬಿಲ್ಲನ್ನ
ಎಲ್ಲೋ ಇಟ್ಟು ಮರೆತು ಹೋಗಿವೆ ಎಂದು
ಇತ್ತೀಚೆಗೆ ಅನುಮಾನವಾಗುತ್ತಿದೆ
ನಾವಿರುವ ಈ ಭೂಮಿಯನ್ನೂ ದೇವರು ಮರೆತಿಟ್ಟಿದ್ದಾನೆ ಇಲ್ಲಿ
ಒಂದು ವೇಳೆ ಅವನಿಗೆ ನೆನಪಾದರೆ
ಎಲ್ಲವನ್ನೂ ಮರಳಿ ಒಯ್ಯುತ್ತಾನೆ
ಮೊದಲು ಕಾಡುಗಳನ್ನ, ಆಮೇಲೆ  ನದಿಗಳನ್ನ,  ಮತ್ತೂ ಆಮೇಲೆ ನಮ್ಮನ್ನ.




2. ನನ್ನಜ್ಜಿ


ನನ್ನಜ್ಜಿಗೆ ತಲೆ ಕೆಟ್ಟಿತ್ತು.
ಅವಳ ಹುಚ್ಚು ದಿನೇ ದಿನೇ ಬೆಳೆದು, ಹಣ್ಣಾಗಿ, ಸಾವಾದಾಗ,
ನನ್ನ ಮಾವ, ಮಹಾ ಜಿಪುಣ, 
ಅವಳನ್ನ ಹುಲ್ಲೊಳಗೆ ಸುತ್ತಿ
ನಮ್ಮ ಸ್ಟೋರ್ ರೂಮಿನೊಳಗಿಟ್ಟ.
ನನ್ನಜ್ಜಿ ಅಲ್ಲೇ ಒಣಗಿ, ಬಿರಿದು,
ಅವಳ ಬೀಜಗಳು ಕಿಟಕಿಯಿಂದಾಚೆ ಹಾರಿ ಹೋದವು. 
ಸೂರ್ಯ ಬಂದ ಆಮೇಲೆ ಮಳೆ 
ಅದರೊಳಗೊಂದು ಬೀಜ ಸಸಿಯಾಗಿ ಬೆಳೆದು
ಅದರ ಬಯಕೆಯ ತಂತು ನನ್ನನ್ನ ಹುಟ್ಟಿಸಿತು.
ಅಂಥಾ ನಾನು
ಚಿನ್ನದ ಹಲ್ಲಿನ ಮಂಗಗಳ ಬಗ್ಗಲ್ಲದೇ
ಇನ್ನಾವುದರ ಬಗ್ಗೆ ಕವಿತೆ ಬರೆಯಲಾದೀತು?!


-ಸಚ್ಚಿದಾನಂದನ್ (ಮೂಲ) 
ಕನ್ನಡಕ್ಕೆ ಪ್ರಜ್ಞಾ ಶಾಸ್ತ್ರಿ