Sunday, August 26, 2012

ಒಂದು ಹಳೆಯ ಪತ್ರ

                                                      

  

ಪ್ರತಿ ನಾಗರ ಪಂಚಮಿಗೆ ಎರಡೆರಡು ಸಂಭ್ರಮ ಅವಳಿಗೆ. ಹಳೆಯ ಮಾವಿನ ಮರಕ್ಕೆ ಕಟ್ಟುತ್ತಿದ್ದ ಹಗ್ಗದ ಜೋಕಾಲಿ ಮತ್ತು ರಾತ್ರಿ  ಕೈಯ ಎಲ್ಲಾ ಬೆರಳುಗಳಿಗೆ ಮೆತ್ತಿಕೊಳ್ಳುತ್ತಿದ್ದ ಮದರಂಗಿ. ನಿಂಬೆ ರಸ, ಸುಣ್ಣ ಮತ್ತಿನ್ನೇನೇನೋ ಸೇರಿಸಿ ಹಿತ್ತಲಲ್ಲಿ ಬೆಳೆದ ಮದರಂಗಿಯ ಸೊಪ್ಪನ್ನು ಒರಳುಕಲ್ಲಿನಲ್ಲಿ ಅರೆದು...ರಾತ್ರಿ ಮಲಗುವಾಗ ಎಲ್ಲಾ ಬೆರಳುಗಳ ತುದಿಗೆ ಮೆತ್ತಿಕೊಳ್ಳುವುದು. ಹಾಸಿಗೆ ಹೊಲಸಾಗದಿರಲೆಂದು ಬೇಲಿ ಸಾಲಿನ ಆಡುಮೆಟ್ಲ ಗಿಡದ ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ ಬೆರಳ ತುದಿಗೆ ಕಟ್ಟಿಕೊಳ್ಳುವುದು...ಬೆಳಿಗ್ಗೆ ಏಳುತ್ತಿದ್ದಂತೆ ಕಟ್ಟು ಬಿಚ್ಚಿ ಮದರಂಗಿ ಎಷ್ಟು ರಂಗೇರಿದೆ ಎಂದು ನೋಡಿಕೊಳ್ಳುವುದು...

ಜರ ಜರ ಎಂದು ಸುರಿವ ಜಡಿ ಮಳೆ
ಮಬ್ಬು ಕತ್ತಲಿನ ಜಗುಲಿಯ ತುದಿಯಲ್ಲಿ 
ಕವಳ ತುಂಬಿಕೊಂಡು ಕೂತ ಅಜ್ಜನ ತುಟಿಗೆ
ಅವಳ ಮದರಂಗಿಯ ರಂಗು!
ನಿರಿಗೆಯ ಲಂಗವನ್ನು ತುಸುವೆ ಎತ್ತಿ 
ಮಾವಿನ ಮರದ ಜೋಕಾಲಿಯ ಬಳಿ ಓಡುವಾಗ...
ಅವನಿರಲಿಲ್ಲ! 

ಅಂಥ ಎಷ್ಟೋ ಪಂಚಮಿಗಳು ಸರಿದ ಮೇಲೊಂದು ದಿನ... ಅವನ ಕೈ ಅವಳ ಬೆರಳುಗಳ ಜತೆ ಆಟವಾಡುತ್ತ ಆಡುತ್ತ ಪಕ್ಕದಲ್ಲೇ ಆಳೆತ್ತರಕ್ಕೆ ಬೆಳೆದ ಮದರಂಗಿಯ ಟಿಸಿಲೊಂದನ್ನ ಮುರಿದಿತ್ತು. ಮುರಿದ ಟಿಸಿಲಿಗೆ ಸಣ್ಣ ಹೂಗಳೂ ಇದ್ದವು. ಮದರಂಗಿಯ ಹೂಗಳು. ತಿಳಿ ನಿಂಬೆ ಬಣ್ಣದ ಚಿಕ್ಕ ಚಿಕ್ಕ ಹೂಗಳ ಗೊಂಚಲು, ಅಲ್ಲಲ್ಲಿ ಎಲೆಗಳು. ಹೊತ್ತು ಸರಿಯುವವರೆಗೆ ಮಾತಾಡುತ್ತಿದ್ದ ಅವನ ಕೈಗಳು ಆ ಟಿಸಿಲಿನ ಜತೆ ಆಟವಾಡುತ್ತಿದ್ದವು. ಒಮ್ಮೆ ಅದನ್ನು ಸವರುತ್ತಿದ್ದ, ಮತ್ತೊಮ್ಮೆ  ಅದರಿಂದ ತನ್ನ ಕೆನ್ನೆ ಸವರಿಕೊಳ್ಳುತ್ತಿದ್ದ. ಅವನು ಹೋದ ಎಷ್ಟೋ ಹೊತ್ತಿನ ನಂತರ ಮನೆ ಸೇರಿದ ಇವಳ ಜಡೆಯಲ್ಲಿ ಆ ಗೊಂಚಲು.

ಅವನ ಮೊದಲ ಪ್ರೇಮ ಪತ್ರ
ಹಾಗಂದುಕೊಂಡು
ನೋಟುಬುಕ್ಕಿನ ಬಿಳಿಹಾಳೆಯೊಂದನ್ನ ಕಿತ್ತು
ಅದರೊಳಗೆ ಬಚ್ಚಿಟ್ಟಳು ಅವಳು
ಎದೆಯ ಢವಢವ, ಬೇಸಗೆಯ ಧಗೆ, 
ಹೂ ಕನಸುಗಳ ನಿದ್ದೆಗೂ
ಮದರಂಗಿಯ ರಂಗು!

ಅಂಥ ಎಷ್ಟೋ ರಾತ್ರಿಗಳು ಸರಿದ ಮೇಲೊಂದು ದಿನ...ಅವಳ ಬೆರಳುಗಳು ತಡಕುತ್ತಿದ್ದವು. ಒಂದಾದ ಮೇಲೊಂದು  ಸೇರಿಸಿಟ್ಟ ಪುಸ್ತಕಗಳ ರಾಶಿಯಲ್ಲಿ. ಮಗ ಓಡಿ ಬಂದಿದ್ದ. "ಅಮ್ಮ ಬಿದ್ದೇ.." ಅವನ ಗಾಯಕ್ಕೆ ಮುಲಾಮು ಸವರಿ, ಒಂದಿಷ್ಟು ಗದರಿ ಆಚೆ ಕಳಿಸಿ ಮತ್ತೆ ಬಂದಳು. She was desperate. ಅದು ಇಲ್ಲದಿದ್ದರೆ...ಒಂದೊಮ್ಮೆ ಕಳೆದಿದ್ದರೆ...ಎಲ್ಲ ನಾಳೆಗಳೂ ಅವಳ ಪಾಲಿಗೆ ಸತ್ತಂತೆ. ಸಿಕ್ಕಿತು. 

ಮಾಸಲಾಗಿದ್ದ ಮಡಿಕೆಯಾಗಿದ್ದ ಹಾಳೆ
ಮಡಿಕೆಯೊಳಗೆ ಮುದುರಿ ಮಲಗಿದ್ದ  ಗೊಂಚಲು!
ಮದರಂಗಿಯ ಹೂ ಗೊಂಚಲು
ಕೋರಾ ಕಾಗಜ್ ಮತ್ತು ಬಗಿಯನ್ ಕಿ ಫೂಲ್
ಮಾಸಲು ಬಿಳಿಯ ಖಾಲಿ ಹಾಳೆಯ ಒಳಗೆ ಮದರಂಗಿಯ ಹೂ..ಗೊಂಚಲು
ಈಗ...
ಬರಿದಾದ ಒಣ ಟಿಸಿಲು ಮತ್ತು ಹಾಳೆಗಂಟಿದ ಎಲೆ, ಹೂ
ಸಮಯದ ತೊರೆಯಲ್ಲಿ ಕರಡಿ, ತೇಲಿ, ಕೊಚ್ಚಿ ಹೋದ 
ಪಂಚಮಿಯ ರಂಗು, ಅಜ್ಜನ ಕವಳದ ರಂಗು, ಅವಳ ಹೂಗನಸಿನ ರಂಗು
ನಾಭಿಯಾಳದವರೆಗೆ ಚಿಮ್ಮಿತ್ತು ನೋವಿನ ರಂಗು 
ಹಾಗೆ ಚಿಮ್ಮಿದ ರಕ್ತದ ರಂಗಿಗೂ ಮದರಂಗಿಯ ಗಾಢ ರಂಗು! 

ಮಾಸಲು ಹಳದಿ ಕಾಗದಕ್ಕಂಟಿದ ಎಲೆ, ಹೂಗಳನ್ನು ತೆಗೆದು, ಸೆರಗ ತುದಿಯಿಂದ ಎಲ್ಲ ಒರೆಸಿ, ಒಣಗಿದ ಟಿಸಿಲನ್ನು ಅದರೊಳಗಿಟ್ಟು ಮತ್ತೆ ಬಚ್ಚಿಡುವ ಹುನ್ನಾರದಲ್ಲಿರುವಾಗ ಅವಳಿಗನ್ನಿಸಿದ್ದಿಷ್ಟೆ: 

ಎಂಥ ಪ್ರೌಢ ಕಳೆ ಅವನ ಪ್ರೇಮಕ್ಕೆ
ಸಿಂಗರದ ಹೊರೆಯಿರದ ಸುಂದರಿಯ ಹಾಗೆ
ಬರಿದು ಬೆತ್ತಲಾದ ಮೇಲಲ್ಲವೆ ಸಾಕ್ಷಾತ್ಕಾರ
ಮನದೊಳಗೆ ಮೂಡಿದ ಹೂ ನಗೆಗೆ ಮತ್ತೆ
ಮದರಂಗಿಯ ರಂಗು! 


[ಇದನ್ನು ಗದ್ಯ ಎನ್ನುತ್ತೀರೋ, ಪದ್ಯ ಎನ್ನುತ್ತೀರೋ ನಿಮಗೆ ಬಿಟ್ಟಿದ್ದು!]







Tuesday, August 21, 2012

ಖಯಾಲಿಗೊಂದು ರೂಪ ಕೊಟ್ಟು ಅವನನ್ನು ಹುಡುಕುತ್ತ ಉಳಿದೆ!

ಖಯಾಲಿಗೊಂದು ರೂಪ ಕೊಟ್ಟು ಅವನನ್ನು ಹುಡುಕುತ್ತ ಉಳಿದೆ!


ಖಯಾಲಿಗೊಂದು ರೂಪ ಕೊಟ್ಟು ಅವನನ್ನು ಹುಡುಕುತ್ತ ಉಳಿದೆ!
ಆಕಾರ ತಳೆದದ್ದು ಬರಿಯ ಕಲ್ಪನೆ ಮಾತ್ರ
ಹಾರೈಕೆಗಳನ್ನು ಊದುತ್ತ ಕುಳಿತೆ ದಟ್ಟ ಹೊಗೆಯ ನಡುವೆ
ಎಲ್ಲಾದರೂ  ಜ್ವಾಲೆ ಎದ್ದರೆ ಬರಸೆಳೆದು
ನಿನ್ನ ಹೆಸರಿಡಬಹುದೆಂದು

ಪರ್ವತಸಾಲಿನ ಗುಹೆಯೊಂದರಲ್ಲಿ
ಯಾರೋ ಹೊತ್ತಿಸಿಟ್ಟಿದ್ದರು   ಬಯಕೆಯ ದಳ್ಳುರಿಯನ್ನ...
ಕಾಲದ ಮಿತಿ ಇರದೆ ಕಾಯುತ್ತ
ಗಟ್ಟಿ ಬಂಡೆಗಳ ಮೇಲೆ    ಉಪಾಸನೆಯನ್ನು ಒರೆ ಹಚ್ಚಿ
ಇನ್ನೂ ಭರವಸೆ ಇಟ್ಟುಕೊಂಡ ಅಪರಾಧಕ್ಕಾಗಿ
ಖಯಾಲಿಗೊಂದು ಬೆಚ್ಚಗಿನ ಗೂಡನ್ನೂ ಮಾಡಿಟ್ಟು...

ರಾತ್ರಿಯಿಡೀ ಉರಿದಿತ್ತು ವಿರಹದ ಅಗ್ನಿ
ಭರವಸೆ ಇನ್ನೂ ಉಳಿದಿದೆಯೆಂದರೆ ಇಷ್ಟೇ
ಒಬ್ಬ ಬಂಜೆಗಿರುವ ಬಸಿರಿನ ಬಯಕೆಯಷ್ಟೇ!!

ಗುಲ್ಜಾರರ ಕವನವೊಂದನ್ನು ಕನ್ನಡಕ್ಕಿಳಿಸುತ್ತಿದ್ದೇನೆ ಇವತ್ತು. ಅವರ Neglected Poems ನಿಂದ ಆಯ್ದುಕೊಂಡಿದ್ದು. 

ಗುಲ್ಜಾರ್ ಎಂತಹ ನವಿರು ಭಾವಗಳನ್ನಾದರೂ ಪದಗಳ ಕುಸುರಿಯಲ್ಲಿ ಹೆಣೆದಿಡಬಲ್ಲರು. ಕೋಮಲ ಭಾವಗಳು ಅಕ್ಷರಶಃ ರೂಪು ತಾಳುತ್ತವೆ, ಮನಃಪಟಲದ ಮೇಲೆ ಕತೆಯೊಂದನ್ನು ಮೂಡಿಸುತ್ತಾರೆ. ಅಂತಹ ಕುಸುರಿಕಾರನ ಸೃಷ್ಟಿಯನ್ನು ಮತ್ತೊಮ್ಮೆ  ಬೇರೆಯದೇ ಭಾಷೆಯಲ್ಲಿ ಸೃಷ್ಟಿಸುವುದು ಕಷ್ಟ. ನಾನು ಅಂತಹ ಪ್ರಯತ್ನವೊಂದನ್ನ ಮಾಡಿದ್ದೇನೆ ಅಷ್ಟೆ.






Sunday, August 19, 2012

ಮೊದಲ ಮಾತು

ಬ್ಲಾಗ್ ಲೋಕಕ್ಕೆ ನಾನು ಹೊಸಬಳು. ಎಷ್ಟು ದಿನ ಠಿಕಾಯಿಸುತ್ತೇನೆ ಅಂತ ಗೊತ್ತಿಲ್ಲ. ಏನು ಮಾಡ ಹೊರಟಿದ್ದೇನೆ ಅನ್ನುವುದೂ ಗೊತ್ತಿಲ್ಲ. ಯಾರಿಗಾಗಿ ಬಂದಿದ್ದೇನೆ ಇಲ್ಲಿ ಅನ್ನುವುದು ಗೊತ್ತಿಲ್ಲ. 

ನನಗೆ ಏನೋ ಒಂದಿಷ್ಟು ಹೇಳುವುದಿದೆ ಅಂತ ಬಂದಿಲ್ಲ. ಒಂದು ತೆರೆದ ಪುಸ್ತಕವಾಗಬೇಕೆಂಬ ಭ್ರಮೆಯಿಲ್ಲ. ಕೆಲವೊಂದಿಷ್ಟನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಾಗದು. ನನ್ನ ಮತ್ತು ನಿಮ್ಮ ನಡುವೆ ಒಂದು ತೆರೆಯಿರಲಿ. 

ಇದು ಒಂದು ತರಹ ಸಮುದ್ರದೊಳಗೆ ಹೊಕ್ಕ ಹಾಗೆ. ಎಲ್ಲೆಲ್ಲೂ ದಾರಿಯೇ. ತೇಲುತ್ತೇನೋ, ಮುಳುಗುತ್ತೇನೋ, ಅಲೆಗಳನ್ನು ಬಗೆದು ಮುನ್ನುಗ್ಗುತ್ತೇನೋ....ಅಸಲಿಗೆ ಅದ್ಯಾವುದು ನನ್ನ ಉದ್ದೇಶವೇ ಅಲ್ಲ. 

ಇಲ್ಲಿಯವರೆಗೆ ಸವೆಸಿದ ಹಾದಿಯಲ್ಲಿ ಕಲ್ಲು-ಮುಳ್ಳುಗಳೇನೂ ಬಹಳಷ್ಟು ಇರಲಿಲ್ಲ. ಬದುಕು ದುಸ್ತರವಾಗೇನೂ ಇಲ್ಲ. ಆದರೂ ಇನ್ನೊಂದಿಷ್ಟು ಸ್ಪಷ್ಟತೆ ಬೇಕು ಬದುಕಿಗೆ ಅನಿಸುತ್ತದೆ.  ನನ್ನ ಬಗ್ಗೆಯೇ ಸ್ಪಷ್ಟತೆ ಬೇಕು. ನಾನು ಯಾಕೆ ಹೀಗೆ, ನನಗೇನಾದರೂ ಇಷ್ಟವಾದರೆ ಅದು ಯಾಕಾಗಿ ಇಷ್ಟವಾಯಿತು, ಹೇಗೆ ಬದುಕಿದರೆ ಒಳಿತು ಎಂದು ನಾನು ಅಂದುಕೊಂಡಿದ್ದೇನೆ, ಯಾಕಾಗಿ ಹಾಗನ್ನಿಸುತ್ತದೆ...ಇತ್ಯಾದಿ ಇತ್ಯಾದಿ...ಸಂದೇಹಗಳಿಗೆ ಎಲ್ಲಿಂದಾದರೂ ಒಂದು ಸಣ್ಣ ಕ್ಲೂ ಸಿಗಬಹುದೆಂಬ ಭರವಸೆ. ಹುಡುಕಾಟಕ್ಕೆ ಒಂದೆ ದಾರಿ ಇರಬೇಕೆಂದಿಲ್ಲ. 

ಅತಿಯಾದ ಮಾತು ಕಿರಿಕಿರಿಯೆನಿಸುತ್ತದೆ. ಹಾಗೆ ಅತಿಯಾಗಿ, ಎಗ್ಗು-ಸಿಗ್ಗಿಲ್ಲದೆ ಹರಟುವ ಮಂದಿ ಕೆಲವೇ ಕೆಲವರಿದ್ದಾರೆ. ಕೋಪ, ಅಸೂಯೆ, ದ್ವೇಷಗಳಿಗೆ ಹೊರತಾದವಳಲ್ಲ. ನಾನು ಹೆಣ್ಣು! ಅತಿಯಾಗಿ ಕಾಡುವುದು ಸಂಬಂಧಗಳ ಮಾಯೆ. ಇದ್ದೂ ಇಲ್ಲದಂತಾಗುವ, ಇರದೆಯೂ ಇದ್ದಂತಾಗುವ ಮಾಯೆ.  ಬಹಳಷ್ಟನ್ನು ಕಳೆದು ಕೊಂಡಿದ್ದೇನೆ. ಇವತ್ತಿನವರೆಗೂ ಈ ಮಾಯೆ ಬೇಸರ ತಂದಿಲ್ಲ.  

ಇವಿಷ್ಟು ಈಗ ಸಾಕು. ನಾಳೆ ನನಗೆ ಬರಬೇಕೆನಿಸಿದರೆ, ಇಲ್ಲಿಗೆ ಬಂದರೆ ಇನ್ನೊಂದಿಷ್ಟು.