Sunday, August 26, 2012

ಒಂದು ಹಳೆಯ ಪತ್ರ

                                                      

  

ಪ್ರತಿ ನಾಗರ ಪಂಚಮಿಗೆ ಎರಡೆರಡು ಸಂಭ್ರಮ ಅವಳಿಗೆ. ಹಳೆಯ ಮಾವಿನ ಮರಕ್ಕೆ ಕಟ್ಟುತ್ತಿದ್ದ ಹಗ್ಗದ ಜೋಕಾಲಿ ಮತ್ತು ರಾತ್ರಿ  ಕೈಯ ಎಲ್ಲಾ ಬೆರಳುಗಳಿಗೆ ಮೆತ್ತಿಕೊಳ್ಳುತ್ತಿದ್ದ ಮದರಂಗಿ. ನಿಂಬೆ ರಸ, ಸುಣ್ಣ ಮತ್ತಿನ್ನೇನೇನೋ ಸೇರಿಸಿ ಹಿತ್ತಲಲ್ಲಿ ಬೆಳೆದ ಮದರಂಗಿಯ ಸೊಪ್ಪನ್ನು ಒರಳುಕಲ್ಲಿನಲ್ಲಿ ಅರೆದು...ರಾತ್ರಿ ಮಲಗುವಾಗ ಎಲ್ಲಾ ಬೆರಳುಗಳ ತುದಿಗೆ ಮೆತ್ತಿಕೊಳ್ಳುವುದು. ಹಾಸಿಗೆ ಹೊಲಸಾಗದಿರಲೆಂದು ಬೇಲಿ ಸಾಲಿನ ಆಡುಮೆಟ್ಲ ಗಿಡದ ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ ಬೆರಳ ತುದಿಗೆ ಕಟ್ಟಿಕೊಳ್ಳುವುದು...ಬೆಳಿಗ್ಗೆ ಏಳುತ್ತಿದ್ದಂತೆ ಕಟ್ಟು ಬಿಚ್ಚಿ ಮದರಂಗಿ ಎಷ್ಟು ರಂಗೇರಿದೆ ಎಂದು ನೋಡಿಕೊಳ್ಳುವುದು...

ಜರ ಜರ ಎಂದು ಸುರಿವ ಜಡಿ ಮಳೆ
ಮಬ್ಬು ಕತ್ತಲಿನ ಜಗುಲಿಯ ತುದಿಯಲ್ಲಿ 
ಕವಳ ತುಂಬಿಕೊಂಡು ಕೂತ ಅಜ್ಜನ ತುಟಿಗೆ
ಅವಳ ಮದರಂಗಿಯ ರಂಗು!
ನಿರಿಗೆಯ ಲಂಗವನ್ನು ತುಸುವೆ ಎತ್ತಿ 
ಮಾವಿನ ಮರದ ಜೋಕಾಲಿಯ ಬಳಿ ಓಡುವಾಗ...
ಅವನಿರಲಿಲ್ಲ! 

ಅಂಥ ಎಷ್ಟೋ ಪಂಚಮಿಗಳು ಸರಿದ ಮೇಲೊಂದು ದಿನ... ಅವನ ಕೈ ಅವಳ ಬೆರಳುಗಳ ಜತೆ ಆಟವಾಡುತ್ತ ಆಡುತ್ತ ಪಕ್ಕದಲ್ಲೇ ಆಳೆತ್ತರಕ್ಕೆ ಬೆಳೆದ ಮದರಂಗಿಯ ಟಿಸಿಲೊಂದನ್ನ ಮುರಿದಿತ್ತು. ಮುರಿದ ಟಿಸಿಲಿಗೆ ಸಣ್ಣ ಹೂಗಳೂ ಇದ್ದವು. ಮದರಂಗಿಯ ಹೂಗಳು. ತಿಳಿ ನಿಂಬೆ ಬಣ್ಣದ ಚಿಕ್ಕ ಚಿಕ್ಕ ಹೂಗಳ ಗೊಂಚಲು, ಅಲ್ಲಲ್ಲಿ ಎಲೆಗಳು. ಹೊತ್ತು ಸರಿಯುವವರೆಗೆ ಮಾತಾಡುತ್ತಿದ್ದ ಅವನ ಕೈಗಳು ಆ ಟಿಸಿಲಿನ ಜತೆ ಆಟವಾಡುತ್ತಿದ್ದವು. ಒಮ್ಮೆ ಅದನ್ನು ಸವರುತ್ತಿದ್ದ, ಮತ್ತೊಮ್ಮೆ  ಅದರಿಂದ ತನ್ನ ಕೆನ್ನೆ ಸವರಿಕೊಳ್ಳುತ್ತಿದ್ದ. ಅವನು ಹೋದ ಎಷ್ಟೋ ಹೊತ್ತಿನ ನಂತರ ಮನೆ ಸೇರಿದ ಇವಳ ಜಡೆಯಲ್ಲಿ ಆ ಗೊಂಚಲು.

ಅವನ ಮೊದಲ ಪ್ರೇಮ ಪತ್ರ
ಹಾಗಂದುಕೊಂಡು
ನೋಟುಬುಕ್ಕಿನ ಬಿಳಿಹಾಳೆಯೊಂದನ್ನ ಕಿತ್ತು
ಅದರೊಳಗೆ ಬಚ್ಚಿಟ್ಟಳು ಅವಳು
ಎದೆಯ ಢವಢವ, ಬೇಸಗೆಯ ಧಗೆ, 
ಹೂ ಕನಸುಗಳ ನಿದ್ದೆಗೂ
ಮದರಂಗಿಯ ರಂಗು!

ಅಂಥ ಎಷ್ಟೋ ರಾತ್ರಿಗಳು ಸರಿದ ಮೇಲೊಂದು ದಿನ...ಅವಳ ಬೆರಳುಗಳು ತಡಕುತ್ತಿದ್ದವು. ಒಂದಾದ ಮೇಲೊಂದು  ಸೇರಿಸಿಟ್ಟ ಪುಸ್ತಕಗಳ ರಾಶಿಯಲ್ಲಿ. ಮಗ ಓಡಿ ಬಂದಿದ್ದ. "ಅಮ್ಮ ಬಿದ್ದೇ.." ಅವನ ಗಾಯಕ್ಕೆ ಮುಲಾಮು ಸವರಿ, ಒಂದಿಷ್ಟು ಗದರಿ ಆಚೆ ಕಳಿಸಿ ಮತ್ತೆ ಬಂದಳು. She was desperate. ಅದು ಇಲ್ಲದಿದ್ದರೆ...ಒಂದೊಮ್ಮೆ ಕಳೆದಿದ್ದರೆ...ಎಲ್ಲ ನಾಳೆಗಳೂ ಅವಳ ಪಾಲಿಗೆ ಸತ್ತಂತೆ. ಸಿಕ್ಕಿತು. 

ಮಾಸಲಾಗಿದ್ದ ಮಡಿಕೆಯಾಗಿದ್ದ ಹಾಳೆ
ಮಡಿಕೆಯೊಳಗೆ ಮುದುರಿ ಮಲಗಿದ್ದ  ಗೊಂಚಲು!
ಮದರಂಗಿಯ ಹೂ ಗೊಂಚಲು
ಕೋರಾ ಕಾಗಜ್ ಮತ್ತು ಬಗಿಯನ್ ಕಿ ಫೂಲ್
ಮಾಸಲು ಬಿಳಿಯ ಖಾಲಿ ಹಾಳೆಯ ಒಳಗೆ ಮದರಂಗಿಯ ಹೂ..ಗೊಂಚಲು
ಈಗ...
ಬರಿದಾದ ಒಣ ಟಿಸಿಲು ಮತ್ತು ಹಾಳೆಗಂಟಿದ ಎಲೆ, ಹೂ
ಸಮಯದ ತೊರೆಯಲ್ಲಿ ಕರಡಿ, ತೇಲಿ, ಕೊಚ್ಚಿ ಹೋದ 
ಪಂಚಮಿಯ ರಂಗು, ಅಜ್ಜನ ಕವಳದ ರಂಗು, ಅವಳ ಹೂಗನಸಿನ ರಂಗು
ನಾಭಿಯಾಳದವರೆಗೆ ಚಿಮ್ಮಿತ್ತು ನೋವಿನ ರಂಗು 
ಹಾಗೆ ಚಿಮ್ಮಿದ ರಕ್ತದ ರಂಗಿಗೂ ಮದರಂಗಿಯ ಗಾಢ ರಂಗು! 

ಮಾಸಲು ಹಳದಿ ಕಾಗದಕ್ಕಂಟಿದ ಎಲೆ, ಹೂಗಳನ್ನು ತೆಗೆದು, ಸೆರಗ ತುದಿಯಿಂದ ಎಲ್ಲ ಒರೆಸಿ, ಒಣಗಿದ ಟಿಸಿಲನ್ನು ಅದರೊಳಗಿಟ್ಟು ಮತ್ತೆ ಬಚ್ಚಿಡುವ ಹುನ್ನಾರದಲ್ಲಿರುವಾಗ ಅವಳಿಗನ್ನಿಸಿದ್ದಿಷ್ಟೆ: 

ಎಂಥ ಪ್ರೌಢ ಕಳೆ ಅವನ ಪ್ರೇಮಕ್ಕೆ
ಸಿಂಗರದ ಹೊರೆಯಿರದ ಸುಂದರಿಯ ಹಾಗೆ
ಬರಿದು ಬೆತ್ತಲಾದ ಮೇಲಲ್ಲವೆ ಸಾಕ್ಷಾತ್ಕಾರ
ಮನದೊಳಗೆ ಮೂಡಿದ ಹೂ ನಗೆಗೆ ಮತ್ತೆ
ಮದರಂಗಿಯ ರಂಗು! 


[ಇದನ್ನು ಗದ್ಯ ಎನ್ನುತ್ತೀರೋ, ಪದ್ಯ ಎನ್ನುತ್ತೀರೋ ನಿಮಗೆ ಬಿಟ್ಟಿದ್ದು!]







No comments:

Post a Comment