Monday, September 3, 2012

ಗುಲ್ಜಾರ್ ಕವಿತೆಗಳು

ಖಗ್ರಾಸ ಸೂರ್ಯ ಗ್ರಹಣ 

ಕಾಲೇಜಿನ ದಿನಗಳಲ್ಲಿ ಪ್ರಣಯ ಹಾಗೆಯೆ ನಡೆಯುತ್ತಿತ್ತು
ಡೆಸ್ಕಿನ ಹಿಂದೆ  ಕೈಗಳೆರಡು
ಸದ್ದಿಲ್ಲದೆ ತೆವಳುತ್ತ, ತೆವಳುತ್ತ ಹತ್ತಿರವಾಗುತ್ತಿದ್ದವು
ಇದ್ದಕ್ಕಿದ್ದಂತೆ ಒಂದು ಕೈ ಮತ್ತೊಂದನ್ನು ಸಟಕ್ಕನೆ ಹಿಡಿದೆಳೆದು
ತನ್ನ ಮುಷ್ಟಿಯೊಳಗೆ ಬಂಧಿಸುತ್ತಿತ್ತು ಇಡಿಯಾಗಿ...

ಇವತ್ತಿನ ಸೂರ್ಯ ಶಶಿಯ ಕೈಯನ್ನ ಸೆರೆಹಿಡಿದಿದ್ದಾನೆ
ಹಾಗೆಯೇ...ಸುಮ್ಮನೆ!




ನಿನಗೂ ಒಂದು ನಕಲನ್ನು  ಕಳಿಸಲೆಂದು....

ನಿನಗೂ ಒಂದು ಪ್ರತಿ ಕಳಿಸೋಣ
ಎಂಬ ಯೋಚನೆಯಿಂದಲೇ
ನನ್ನ ಏಕಾಕಿತನದ ಕೆಳಗೊಂದು ಕಾರ್ಬನ್ ಪೇಪರ್ ಇಟ್ಟು
ಜೋರು ಜೋರಾಗಿ ಮಾತಾಡುತ್ತೇನೆ

ಕಾಗದದ ಮೇಲೆ ಪದಗಳು ಬಸಿದು ಬರುತ್ತವೆಯಾದರೂ
ನನ್ನ ಕೂಗಿನ ಚೆಹರೆ ಮೂಡುವುದಿಲ್ಲ
ಕಾರ್ಗತ್ತಲ ಇರುಳಿನ ಮಸಿಯೊಂದೇ ಕಾಣುತ್ತದೆ!!


[ಮತ್ತೆ ಗುಲ್ಜಾರರ ಕವಿತೆಗಳು. Neglected Poems]




No comments:

Post a Comment