ಕೈಲಾಸ ದರ್ಶನದ ಉದ್ವೇಗವೆಲ್ಲ ಇಳಿದ
ಮೇಲೆ ನಮ್ಮ ಕೋಣೆಗೆ ತೆರಳಿ ಸ್ವಲ್ಪ ಹೊತ್ತು ವಿರಮಿಸಿದೆವು. ದಿರಾಪುಕ್ ಒಂದು ತಾತ್ಕಾಲಿಕ ತಂಗುದಾಣದಂತಿದೆ. ಕೈಲಾಸ ಪರ್ವತದ ಬುಡದಲ್ಲೇ
ನಮ್ಮ ಬಿಡಾರ. ಸಾಲಾಗಿ
ತಗಡಿನ ಶೀಟ್ ಹೊದಿಸಲಾದ ೮-೧೦ ಕೋಣೆಗಳು. ಒಂದೊಂದರಲ್ಲಿ ೪ ರಿಂದ ೫ ಜನ ಮಲಗಬಹುದು.
ಹೊದೆಯುವುದಕ್ಕೆ ಸಾಕಷ್ಟು ಕೊಡುತ್ತಾರೆ. ನಮ್ಮ ಷೆರ್ಪಾಗಳು ಅಲ್ಲೇ ಹೊರಗೆ ಟೆಂಟೊಂದರಲ್ಲಿ ಅಡುಗೆ
ತಯಾರಿ ನಡಸಿದ್ದರು.
ಆದರೆ ನಾವು ಬಂದು ಸುಮಾರು ಒಂದು
ಗಂಟೆಯಾದರೂ ನನ್ನ ತಮ್ಮ ಮತ್ತು ಅವನ ಹೆಂಡತಿ ಇನ್ನೂ ನಮ್ಮ ಜಾಗ ಸೇರಿಕೊಳ್ಳಲಿಲ್ಲ. ಆರಂಭದಿಂದಲೂ
ನನ್ನ ತಮ್ಮ ನಮ್ಮ ಜೊತೆ ತಪ್ಪಿಸಿಕೊಂಡು ಬಿಟ್ಟಿದ್ದ. ಹೇಗೂ ಬರುತ್ತಾನೆ ಅಂತ ನಾವೂ
ಸುಮ್ಮನಿದ್ದೆವು. ಅವನ ಹೆಂಡತಿ ಸ್ವಲ್ಪ ಹೊತ್ತಿನವರೆಗೆ ನಮ್ಮ ಜೊತೆ ಇದ್ದವಳು ಆಮೇಲೆ ಸ್ವಲ್ಪ
ಹಿಂದೆ ಬಿದ್ದಿದ್ದಳು. ನಿಧಾನವಾಗಿ ಅವಳೂ ಬಂದಳು. ಆದರೆ ತಮ್ಮನ ಸುಳಿವೇ ಇಲ್ಲ. ತಂಡದ
ಹಿರಿಯರೆಲ್ಲ ಸೇರಿಕೊಂಡಿದ್ದರು. ಸ್ವಲ್ಪ ಹೊತ್ತು ಕಳವಳಗೊಳ್ಳುತ್ತ ನಿಂತಿರುವಾಗ ಅವನೂ ತೇಕುತ್ತ
ಬಂದ!
ನೋಡುತ್ತಿದ್ದಂತೆಯೇ ಕತ್ತಲಾಯಿತು.
ಯಾರಿಗೂ ಎರಡು ಹೆಜ್ಜೆ ಎತ್ತಿಡಲೂ ತಾಕತ್ತಿಲ್ಲ. ಅಷ್ಟು ನಿಯಮಿತವಾಗಿ ಡೈಮಾಕ್ಸ ಸೇವಿಸಿದರೂ ಆ ರಾತ್ರಿ
ನಮಗೆಲ್ಲ ಜ್ವರ. ವಾಂತಿ ಬಂದ ಹಾಗೆ ಆಗುವುದು, ತಲೆ ಸುತ್ತುವುದು ಎಲ್ಲ ಕಾಣಿಸಿಕೊಂಡಿತ್ತು. ಮಂಚ ಹತ್ತಿದವರು
ಇಳಿಯಲಿಲ್ಲ. ನಮ್ಮ
ಪ್ರಾರಬ್ಧಕ್ಕೆ ಮತ್ತೆ ಮಳೆ. ಆರ್ಭಟದ ಮಳೆ. ಕೆಲವೊಮ್ಮೆ ಹಿಮಪಾತವೂ ಆಗುತ್ತದಂತೆ. ಆ ದಿನ ಕೇವಲ
ಮಳೆ! ರಾತ್ರಿಯಿಡೀ ಸುರಿದಿದ್ದರಿಂದ ನಾಳೆಯ ಪರಿಕ್ರಮಣ ರದ್ದಾಗುತ್ತದೆ ಎಂದೇ ಅಂದುಕೊಂಡೆವು.
ಹಾಗಾದರೆ ಒಳ್ಳೆಯದೇ ಅಂತ ನನಗೆ ಅನಿಸಿತ್ತು. ಯಾಕೆಂದರೆ ರಾತ್ರಿಯಿಡೀ ನಿದ್ದೆಯಿರಲಿಲ್ಲ.
ಜ್ವರಕ್ಕೆಂದು ಮಾತ್ರೆ ತೆಗೆದುಕೊಂಡಿದ್ದಕ್ಕೆ ವಿಪರೀತ ಬೆವರಿ, ತಲೆ ಸುತ್ತಿದಂತೆ ಆಗುತ್ತಿತ್ತು.
ನಾಳೆ ಮತ್ತೆ ೩೨ ಕಿಲೋಮೀಟರುಗಳಷ್ಟು ಹೇಗೆ ನಡೆಯುವುದು? ಆಗಲಿಕ್ಕಿಲ್ಲ. ಹಾಗಾಗಿ ನಾಳೆ ಇಲ್ಲ
ಅಂದರೆ ಒಳ್ಳೆಯದೇ ಅಂದುಕೊಳ್ಳುತ್ತ, ಗಳಿಗೆಗೊಮ್ಮೆ ನೀರು ಕುಡಿಯುತ್ತ ಹೇಗೋ ರಾತ್ರಿಯನ್ನು
ದೂಡಿದೆ.
ಎರಡನೆಯ ದಿನ
ಆದರೆ, ಮಾರನೆ ದಿನ ನಸುಕಿನಲ್ಲೇ
ಷೆರ್ಪಾಗಳು ಬಂದು ಬಾಗಿಲು ತಟ್ಟಿದರು. ಬೇಗ ಸಿದ್ಧವಾಗಿ ಅನ್ನಲಿಕ್ಕೆ. ಸಣ್ಣಗೆ ಮಳೆ ಹನಿಯುತ್ತಲೇ
ಇತ್ತು. ಹೋಗುವುದು ಹೇಗೆ ಅಂತ ಕೇಳಿದರೆ, “ಹಿಮ್ಮತ್ ರಕ್ಖೋ...ಹಿಮ್ಮತ್ ಸೆ ಕಾಮ್ ಚಲೇಗಾ” ಅಂತ
ನಮ್ಮ ಸಾಂಗ್ಯಾ ಷೆರ್ಪಾ ಉತ್ತರಿಸಿದ. ಅಂತೂ ಅನುಮಾನಿಸುತ್ತಲೇ ಹೊರಟೆವು. ಬಟ್ಟೆ ಗಿಟ್ಟೆ
ಬದಲಾಯಿಸುವ ಕೆಲಸವಿಲ್ಲ. ಚಿಕ್ಕಮ್ಮ, ಚಿಕ್ಕಪ್ಪ ಎಲ್ಲ ಆರಾಮಾಗೆ ಇದ್ದರು. ನಾನು ಮಾತ್ರ
ಸಿಕ್ಕಾಪಟ್ಟೆ ಗೊಂದಲದಲ್ಲಿದ್ದೆ. ಹಾಗೊಂದುವೇಳೆ ಎರಡನೆಯ ದಿನಕ್ಕೆ ಸಾಧ್ಯವೇ ಇಲ್ಲ ಎನ್ನಿಸಿದರೆ
ಒಂದು ದಿನದ ಪರಿಕ್ರಮಣ ಮುಗಿಸಿ ಮರಳಿ ದಾರ್ಚಿನ್ನಿಗೆ ಹೋಗಿ ಉಳಿಯಬಹುದಿತ್ತು. ಆರೋಗ್ಯ
ಹದಗೆಟ್ಟಿರಲಿಲ್ಲವಾದರೂ ತುಂಬ ಹೆದರಿಬಿಟ್ಟಿದ್ದೆ. ನಾನು ಬಯಸದೇ ಇದ್ದರೂ ನನ್ನನ್ನು
ಇಲ್ಲಿಯವರೆಗೆ ನಿರ್ವಿಘ್ನವಾಗಿ ಕರೆದುಕೊಂಡು ಬಂದ ನನ್ನ ದೈವ ಮುಂದೆಯೂ ಕೈಬಿಡಲಾರದು ಎಂದುಕೊಂಡು
ಹೊರಟಿದ್ದೆ.
ಪರಿಕ್ರಮಣದ ಈ ದಿನ ಅತ್ಯಂತ ಕಷ್ಟದ ದಿನ
ಎಂದು ಷೆರ್ಪಾಗಳು ಎಚ್ಚರಿಸಿದ್ದರು. ೧೮ ಸಾವಿರ ಅಡಿಗಳಿಗಿಂತಲೂ ಹೆಚ್ಚಿನ ಎತ್ತರದಲ್ಲಿದ್ದ ಡ್ರೋಲ್ಮಾ ಲಾ ಪಾಸ್ ನ್ನು ಮೂರು ಹಂತಗಳಲ್ಲಿ ತಲುಪಬೇಕಿತ್ತು. ಆದು ಸುಮಾರು ೮-೯ ಕಿ.ಮೀ ಪ್ರಯಾಣ. ಮೂರು ಹಂತಗಳಲ್ಲಿ ಹತ್ತುತ್ತ ಹೋಗುವುದು, ಅದು ಸಮತಟ್ಟಾದ ಜಾಗವಲ್ಲ. ಆಮೇಲೆ ಸ್ವಲ್ಪ ದೂರ
ಇಳಿದು ಮತ್ತೆ ಸುಮಾರು ೨೫ ಕಿ,ಮೀ ನಡೆದುಕೊಂಡು ಹೋಗಬೇಕು. ಏನಾದರೂ ತೊಂದರೆ ಆದರೆ ಷೆರ್ಪಾಗಳ
ಹತ್ತಿರ ಆಮ್ಲಜನಕದ ಸಿಲಿಂಡರುಗಳು ಇರುತ್ತವೆ. ಆದರೆ ಅದನ್ನು ಉಪಯೋಗಿಸಿದರೆ ಎದೆಗೂಡಲ್ಲಿ ನೀರು
ಕಟ್ಟಿಕೊಳ್ಳುತ್ತದೆ, ಮತ್ತೂ ಕಷ್ಟವಾಗುತ್ತದೆ ಎಂದು ಅವರೆಲ್ಲ ಹೇಳುತ್ತಿದ್ದರು.
ಒಟ್ಟಿನಲ್ಲಿ ನಮ್ಮ ಮನೋಬಲದ, ಸಂಯಮದ,
ಎದೆಗಾರಿಕೆಯ ಮತ್ತು ಅದೃಷ್ಟದ ಪರೀಕ್ಷೆಯಾಗುತ್ತದೆಯಲ್ಲಿ.
ಚಲ್ ಪ್ರಜ್ಞಾ ಚಲ್!
ಸರಿ, ಒಬ್ಬರ ಹಿಂದೊಬ್ಬರು
ನಡೆಯುತ್ತ ಹೊರಟೆವು. ಇವತ್ತಿನ ಹಾದಿ ಅಗಲದ್ದಲ್ಲ. ಕಿರಿದಾದ ಹಾದಿ. ಏರು ಹತ್ತುತ್ತ ಹೋಗಬೇಕು.
ಹೆಜ್ಜೆಗೊಂದು ಸಲ ನಿಲ್ಲುತ್ತ, ಉಸಿರೆಳೆದು ಕೊಳ್ಳುತ್ತ, ನೀರು ಕುಡಿಯುತ್ತ...ಮೊದಲನೆಯ ಏರು
ಹತ್ತಿದ್ದಾಯ್ತು. ಈ ಏರಾದ ಮೇಲೆ ಒಂದು ಮಾರು ಸಮತಟ್ಟಾದ ಹಾದಿ, ನಂತರ ಮತ್ತೆ ಎರಡನೆ ಹಂತದ ಏರು
ಸಿಗುತ್ತದೆ. ಏರೆಂದರೆ ಬೆಟ್ಟ ಹತ್ತಿದಂತೆ. ಎರಡನೆಯ
ಹಂತದ ಏರಿನ ತುಂಬ ಹಿಮ. ಕಣ್ಣು ಹಾಯಿಸಿದಲ್ಲೆಲ್ಲ ಹಿಮ! ಹಿಂದಿನ ದಿನ ಕೆಳಗೆ ಮಳೆ ಬಿದ್ದರೆ
ಇಲ್ಲಿ ಹಿಮ ಪಾತವಾಗಿತ್ತು ಅಂತ ಅನಿಸುತ್ತದೆ. ಮಬ್ಬು ಬೆಳಕು, ಗೂಢದೊಳಗೆ...ಆಳದೊಳಗೆ....ಗಮ್ಯ
ಇನ್ನೇನು ಕೈಗೆಟುಕಿತು ಅನ್ನುವಷ್ಟರಲ್ಲಿ ಜಾರಿ ಇನ್ನಷ್ಟು ಮುಂದೆ ಸರಿವಂತೆ...ಇದು ಅಂತ್ಯವಿರದ
ನಿರಂತರ ಚಲನೆಯೆನ್ನಿಸುತ್ತಿತ್ತು.
ಇಲ್ಲಿ ಎಲ್ಲಿಯೂ ಅರ್ಧ ನಿಮಿಷಕ್ಕಿಂತಲೂ
ಹೆಚ್ಚು ನಿಲ್ಲುವಂತಿಲ್ಲ. “ಚಲೋ ಚಲೋ ಆಗೇ ಜಾನಾ ಹೈ” ಎಂದು ನನ್ನ ಜೊತೆ ಬರುತ್ತಿದ್ದ ನೀಮಾ
ಷೆರ್ಪಾ ಎಚ್ಚರಿಸುತ್ತಿದ್ದ. ಎಷ್ಟೇ ಸುಸ್ತಾದರೂ ನಡೆಯುತ್ತಲೇ ಇರಬೇಕಂತೆ. ಸುಸ್ತಾಯಿತು ಎಂದು ಕೂರುವಂತಿಲ್ಲ. ಕೂತರೆ ಏಳಲಾಗುವುದೇ ಇಲ್ಲ
ಎಂದು ಹೆದರಿಸುತ್ತಿದ್ದ. ಎರಡನೆಯ
ಹಂತದಿಂದ ಮೂರನೆಯ ಹಂತದ ಏರು ಕಾಣಿಸುತ್ತಿತ್ತು. ಅಲ್ಲಿ ಹೋಗುತ್ತಿದ್ದ ಜನರೆಲ್ಲ ಇರುವೆಗಳಂತೆ ಕಾಣುತ್ತಿದ್ದರು. ಮಧ್ಯೆ ಮಧ್ಯೆ ಕುದುರೆಯ ಮೇಲೆ
ಹೋಗುತ್ತಿದ್ದ ಹಿರಿಯರು ಕಾಣುತ್ತಿದ್ದರು, ಚೈನೀಸ್ ಪೋರ್ಟರುಗಳು ಕೀರಲು ದನಿಯಲ್ಲಿ ಏನೇನೋ ಹಾಡುತ್ತ ಹೋಗುತ್ತಿದ್ದರು. ಮಾತಂತೂ
ನಿಲ್ಲಿಸಿಬಿಟ್ಟಿದ್ದೆವು. ಮಂಜಿದ್ದದ್ದಕ್ಕೆ ಕತ್ತಲು ಕತ್ತಲು ಅನಿಸುತ್ತಿತ್ತು. ಸುತ್ತಲೆಲ್ಲ ಹಿಮದ
ಹಾಸಿಗೆ.
ಅದರ ಮಧ್ಯೆ
ಚಿಕ್ಕ ಚಿಕ್ಕ ತೊರೆಗಳು. ಇಡೀ
ಕಣಿವೆಯ ತುಂಬ ಆವರಿಸಿದ್ದ ಮೌನಕ್ಕೆ ಗಾಢ
ರಂಗಿತ್ತು.
ಆಮ್ಲಜನಕದ ಕೊರತೆಯೆಂದರೆ ಏನು
ಎನ್ನುವುದು ಈ ದಿನ ಸರಿಯಾಗಿ ಅರ್ಥವಾಗುತ್ತದೆ. ಮೇಲೆ ಹೆಜ್ಜೆ ಕಿತ್ತಿಡಲೂ ಆಗುವುದಿಲ್ಲ.
ಆಮ್ಲಜನಕ ಎಳೆದುಕೊಳ್ಳುವುದಕ್ಕೆ ಮೂಗಿನ ಎರಡು ಹೊಳ್ಳೆಗಳೂ ಮತ್ತು ಒಂದು ಬಾಯಿ ಏನೇನಕ್ಕೂ
ಸಾಕಾಗುವುದಿಲ್ಲ! ನಾನಂತೂ ಸದ್ದು ಮಾಡುತ್ತಲೇ ಉಸಿರೆಳೆದುಕೊಳ್ಳುತ್ತಿದ್ದೆ. ಮಾರು ಮಾರಿಗೆ
ಊರುಗೋಲಿನ ಸಹಾಯದಿಂದ ನಿಲ್ಲುವುದು. ಮತ್ತೆ ನಡೆಯುವುದು. ಶಕ್ತಿ ಬರಲಿ ಅಂತ ಜಾಕೇಟಿನ ಕಿಸೆಯಲ್ಲಿ
ತುಂಬಿಟ್ಟುಕೊಂಡ ಒಣ ಹಣ್ಣುಗಳನ್ನ ತಿನ್ನುತ್ತಿದ್ದೆವು. ನನ್ನ ಅವಸ್ಥೆ ನೋಡಿ ಜೊತೆಯಲ್ಲಿದ್ದ
ನೀಮಾ ಷೆರ್ಪಾ ನನ್ನ ಕ್ಯಾಮೆರಾ ಚೀಲವನ್ನೂ ತಾನೆ ಹೊತ್ತುಕೊಂಡ. ಮುಂದೆ ಕೊನೆ ಮುಟ್ಟುವವರೆಗೆ ಅದು
ಅವನ ಹತ್ತಿರವೇ ಇತ್ತು. ನಡುವೆ ನನಗೆ ಬೇಕೆನ್ನಿಸಿದಾಗ ಅವನೇ ಕ್ಯಾಮೆರ ತೆಗೆದು ಕೊಡುತ್ತಿದ್ದ,
ಕೆಲಸವಾದ ಮೇಲೆ ಮತ್ತೆ ಇಟ್ಟುಕೊಳ್ಳುತ್ತಿದ್ದ. ಬಿಸಿ ನೀರೂ ಅಷ್ಟೇ. ತಾನೇ ಫ್ಲಾಸ್ಕಿನ ಮುಚ್ಚಳ
ತೆಗೆದು ನೀರೆರೆಸಿ ಕೊಡುತ್ತಿದ್ದ. ಕೊಡುವಾಗ ಮುಖದಲ್ಲಿ ಕನಿಕರದ ನಗುವಿರುತ್ತಿತ್ತು!
ಮೂರನೆಯ ಹಂತದ ಏರು
ಹತ್ತತೊಡಗಿದೆವು. ಇದು ಮೊದಲೆರಡು ಏರುಗಳಿಗಿಂತ ಕಡಿದಾದದ್ದು. ಇದನ್ನು ಹತ್ತುವಾಗ ಮಾತ್ರ
ನಾವೆಲ್ಲ ನಮ್ಮ ನಮ್ಮ ಜೀವದ ಹಂಗು ತೊರೆದುಬಿಟ್ಟಿದ್ದೆವು. “ಭಯ್ಯಾ..ಇನ್ನೂ ಎಷ್ಟು ದೂರ’
ಎನ್ನುವಂತೆ ನಮ್ಮ ಷೆರ್ಪಾನತ್ತ ನೋಡಿದರೆ..’ಆಗೋಯ್ತು..ಬಂದೆ ಬಿಟ್ವಿ’ ಅನ್ನುತ್ತಿದ್ದ.
ಅಯ್ಯಪ್ಪ! ಎಲ್ಲಿ ಬರೋದು? ನನಗೆ ನನ್ನ ಮಗಳ ಮುಖ ಕಣ್ಣಿಗೆ ಬರುತ್ತಿತ್ತು. ಒಂದೆಡೆ ವಿಪರೀತ ಹೆದರಿಕೆಯಾಗಿ
ನನ್ನ ಆಪ್ತ ರಕ್ಷಕ ದತ್ತ ಗುರುವಿನ ನಾಮಸ್ಮರಣೆಯನ್ನು ಮನಸ್ಸಿನಲ್ಲಿಯೇ ಮಾಡುತ್ತ ಹೋದೆ. ಈಗ ನಗು ಬರುತ್ತಿದೆ!
ನಮ್ಮ ಜೊತೆ ಮೊದಲ ದಿನ ನಡೆದುಕೊಂಡು
ಬಂದಿದ್ದ ಮಂಜು ಆಂಟಿ ಎರಡನೆಯ ದಿನವೂ ನಡೆಯುತ್ತೇನೆ ಎಂದು ಹೊರಟಿದ್ದರು. ಆದರೆ ಎರಡನೆಯ ಏರು
ಬರುವಷ್ಟರಲ್ಲಿಯೇ ಆಗದು ಎನ್ನಿಸಿತಂತೆ. ಅದೃಷ್ಟಕ್ಕೆ ಮತ್ಯಾರನ್ನೋ ಮೇಲೆ ಬಿಟ್ಟು ಮರಳುತ್ತದ್ದ
ಕುದುರೆಯೊಂದು ಸಿಕ್ಕು ಅದರ ಮೇಲೆ ಹೋದರಂತೆ. ಅಂದ ಹಾಗೆ, ಈ ಕುದುರೆಗಳು ಡ್ರೋಲ್ಮಾ ಪಾಸನ್ನು
ತಲುಪಿಸಿ ಮರಳಿ ಹೋಗುತ್ತವೆ. ನಂತರ ಸುಮಾರು ಐದಾರು ಕಿ.ಮೀ ಕಡಿದಾದ ಜಾರುಬಂಡೆಯಂತಹ ಇಳುಕಲು.
ಹಾಗಾಗಿ ಅಲ್ಲಿ ಎಲ್ಲರೂ ನಡೆಯಲೇ ಬೇಕು. ಮುಂದೆ ಸಮತಟ್ಟಾದ ಜಾಗ ಸಿಗುವುದರಿಂದ ಅಲ್ಲಿ ಮತ್ತೆ
ಬೇರೆ ಕುದುರೆಗಳು ಕಾಯುತ್ತಿರುತ್ತವೆ.
ಮುಂದೆ ಒಂದು ಕಡೆ ಯಾರಿಗೋ
ತೊಂದರೆಯಾಗಿ ಕುಸಿದು ಬಿದ್ದಿದ್ದರು. ಅವರಿಗೆ ಆಮ್ಲಜನಕ ಕೊಡುತ್ತಿದ್ದರು. ಅವರನ್ನು ನೋಡುತ್ತ
ನಿಲ್ಲಲು ಆಸ್ಪದವಿಲ್ಲ. ’ಚಲೋ ಚಲೋ’ ಅಂದಿದ್ದ ನೀಮಾ. ನಿಂತರೆ ಕಾಲು ನಡುಗುತ್ತಿದ್ದವು. ನಡೆಯಬೇಕು
ಮತ್ತು ನಡೆಯುತ್ತಿರಬೇಕು. ಅಷ್ಟೇ. ಆ ಹೊತ್ತಿನಲ್ಲಿ
ಬೇರೆ ಯಾವ ಯೋಚನೆಯೂ ಬರುವುದಿಲ್ಲ. ನನಗನಿಸಿದ ಮಟ್ಟಿಗೆ ನಾನು ಆ ಅಸೀಮ ರೂಪಿ ಪ್ರಕೃತಿಯಲ್ಲಿನ
ಒಂದು ನಾದಬಿಂದುವಾಗಿದ್ದೆ. ನುಡಿಸುವವರು ಯಾರೋ, ಯಾರದೋ ವೀಣೆ, ಯಾರದೋ ರಾಗ. ಆ ಸ್ಥಿತಿ ನನ್ನ
ಸ್ಥಾಯೀ ಭಾವವಾಗಬಾರದೇ ಅನಿಸುತ್ತದೆ ನನಗೆ. ಒಂದು ಬಗೆಯ ಅರೆ ಎಚ್ಚರದ ಸ್ಥಿತಿ.
ನಾವು ತಲುಪಿದೆವು ಅಂತ ನೀಮಾ
ಹೇಳಿದಾಗಲೇ ಬಹುಶಃ ನಮಗೆ ಎಚ್ಚರವಾಯಿತು ಅನಿಸುತ್ತದೆ, ನಾವು ನಿಂತ ಜಾಗ...ಅದು...ಅದೇ...
ಡ್ರೋಲ್ಮಾ ಲಾ ಪಾಸ್...ಪರಿಕ್ರಮದ ಅತ್ಯಂತ ಎತ್ತರದ ಗಮ್ಯ...ಇಲ್ಲಿ ನಿಲ್ಲಲೇ ಬೇಡಿ ಎಂದಿದ್ದರು.
ಇಲ್ಲಿ ಆಮ್ಲಜನಕ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಜಾಸ್ತಿ ನಿಂತವರು ಅಲ್ಲೇ
ಸೆಟೆಯುತ್ತಾರೆ ಎಂದು ಷೆರ್ಪಾಗಳು ಹೇಳಿದ್ದರು. ನಡುಗುವ ಕೈಯಲ್ಲೇ ಕ್ಯಾಮೆರ ಇಸಿದುಕೊಂಡು ಲಗು
ಬಗೆಯಿಂದ ಒಂದೆರಡು ಫೋಟೋ ಹೊಡೆದೆ. ಆವತ್ತು ಹಿಮ ತುಂಬಿದ್ದರಿಂದ ಮತ್ತು ಮಂಜಿದ್ದದ್ದರಿಂದ
ಸುತ್ತಲಿನ ಕಣಿವೆ ಸ್ಪಷ್ಟವಾಗಿ ಗೋಚರಿಸಲಿಲ್ಲ. ಶುಭ್ರ ಹಿಮದ ಮೇಲೆ ರಂಗು ರಂಗಿನ ಪ್ರಾರ್ಥನಾ ಪತಾಕೆಗಳು
ಅದ್ಭುತ ಕಾಂಟ್ರಾಸ್ಟ್ ಒದಗಿಸಿದ್ದವು. ಆ ಜಾಗಕ್ಕೆ ಏನೇ
ಹೆಸರಿರಲಿ, ನಾನದನ್ನ ಹಿಮ ಗರ್ಭವೆನ್ನುತ್ತೇನೆ. ರುದ್ರ ರಮಣೀಯ. ಮರುಹುಟ್ಟಿನ ಜಾಗವದು.
ಸಾಧಕರಿಗೆ ಅರಿವು ಕಣ್ತೆರೆಯುವ ಜಾಗ. ಭಕ್ತರು ದೈವದೊಂದಿಗೆ ಲೀನವಾದ ಮಧುರ ಅನುಭೂತಿ ಪಡೆಯುವ
ಜಾಗ. ಸಂಸಾರಸ್ಥರಿಗೆ ಆಸೆ ಮರಳುವ ಜಾಗ.
ಒಟ್ಟಿನಲ್ಲಿ ಸುಖ ಪ್ರಸವವಾಯಿತು ಎನ್ನಲಡ್ಡಿಯಿಲ್ಲ.
ಅಲ್ಲಿಂದ ಮುಂದೆ ಇಳಿಯುತ್ತ
ಹೋಗುತ್ತೇವೆ, ಡ್ರೋಲ್ಮಾ ಲಾ ಪಾಸಿನ ನೇರವಾದ ಬುಡಕ್ಕೆ ಗೌರಿ ಕುಂಡವಿದೆ. ಇಲ್ಲಿ ನಮ್ಮ ಗೌರಮ್ಮ
ಪರಶಿವನನ್ನು ಪಡೆಯುವ ಸಲುವಾಗಿ ತಪಸ್ಸು ಮಾಡಿದ್ದಳಂತೆ. ಎಂತಹ ಜಾಗದಲ್ಲಿ ಕೂತಿದ್ದಳು ಅವಳು! ಇಳಿಯಲು
ಪ್ರಾರಂಭಿಸಿದಾದಲೇ ಗೌರಿಕುಂಡ ಕಾಣತೊಡಗುತ್ತದೆ. ಮುಂದೆ ಒಂದು ಹಿಮಗಟ್ಟಿದ ನದಿಯನ್ನೂ ದಾಟಿದೆವು. ಕಣಿವೆ ಇಳಿದರೆ, ಅಲ್ಲಿ ಬುಡಕ್ಕೆ ಕುದುರೆಗಳು
ಬಂದಿರುತ್ತವೆ. ಅಲ್ಲೇ
ಚಿಕ್ಕ ಹೊಟೆಲ್ ಥರದ್ದು ಇದೆ. ಅಲ್ಲಿ ಬಂದು ಕುಸಿಯುವವರೆಗೆ ನಮಗೆ ನಮ್ಮ ಖಬರಿರಲಿಲ್ಲ. ಎಲ್ಲರ ಮುಖ ನೋಡುವ ಹಾಗಿತ್ತು.
ನಮ್ಮ ಜೊತೆ ಬಂದಿದ್ದ ಮಂಗಳೂರಿನ ಯುವಕರೊಬ್ಬರಿಗೆ
ವಿಪರೀತ ತ್ರಾಸಾಗಿತ್ತು. ವಾಂತಿ
ಬರುತ್ತದೆ, ತಲೆ
ತಿರುಗುತ್ತದೆ ಅಂತೆಲ್ಲ ಹೇಳತೊಡಗಿದ್ದರು. ಆದರೆ ಇನ್ನೂ ಸುಮಾರು ೨೫ ಕಿ.ಮೀ ನಡೆಯಬೇಕಲ್ಲ. ಹಾಗಾಗಿ ನಾವೆಲ್ಲ ಮುಂದೆ ಹೊರಟೆವು. ಒಂದು ನದಿಯ ಗುಂಟ ನಡೆಯುತ್ತ
ಹೋಗಬೇಕು.
ಇಲ್ಲಿ ಒಂದು
ಸಮಾಧಾನವೆಂದರೆ ಆಮ್ಲಜನಕದ ಕೊರತೆಯುಂಟಾಗುವುದಿಲ್ಲ. ಆದರೆ ಮೇಲೆ ಹತ್ತಿದ ಸುಸ್ತು ಆರಿರುವುದಿಲ್ಲ. ಚಿಕ್ಕಮ್ಮ ಚಿಕ್ಕಪ್ಪ ಎಲ್ಲ
ಮುಂದೆ ಮುಂದೆ ನಡೆದಿದ್ದರು, ನಾನು ಮತ್ತು ಡಾಕ್ಟರ್ ಒಟ್ಟೊಟ್ಟಿಗೆ ನಡೆಯುತ್ತಿದ್ದೆವು. ಈಗ ನನ್ನ ಜೊತೆ ನೀಮಾ ಷೆರ್ಪಾ
ಮತ್ತು ವೀರ ಬಹಾದ್ದೂರ್ ಷೆರ್ಪಾ ಇಬ್ಬಿಬ್ಬರು ಬರುತ್ತಿದ್ದರು. ನಡೆದೆವು….ನಡೆದೆವು…ಮತ್ತು…….ನ…….ಡೆ……..ದೆ…...ವು….
ನಾನಂತೂ ಕೊನೆ ಕೊನೆಗೆ ಅರೆ ಪ್ರಜ್ಞಾವಸ್ಥೆಯಲ್ಲಿ
ನಡೆದಿದ್ದೆ. ಮಧ್ಯೆ
ಮಧ್ಯೆ ಕೂರುತ್ತಿದ್ದೆ. ವೀರಬಹಾದುರ್
ನಂತೂ ಮಾರು ಮಾರಿಗೆ ನೀರು ಕೊಡುತ್ತಿದ್ದ. ಈ ರೀತಿ ನಿದ್ದೆಯ ನಶೆ ಕೂಡ altitude sickness ನ ಒಂದು ಲಕ್ಷಣವಂತೆ. ಅದು ಗೊತ್ತಾಗೇ ಇರಬೇಕು ವೀರಬಹಾದುರ್
ತುಂಬ ಕಾಳಜಿಯಿಂದ ನಡೆಸಿಕೊಂಡು ಬಂದಿದ್ದು. ದಾರಿಯಲ್ಲಿ ಮಳೆಯೂ ಸಿಕ್ಕಿತ್ತು. ಈ ಮಧ್ಯೆ ಒಂದು ಆಂಬುಲೆನ್ಸ ಭರ್ರನೇ
ಹಾದು ಹೋಯಿತು. ನಮಗೆ
ಕಳವಳ.
ನಮ್ಮ ಜೊತೆಗೆ
ಬಂದ ಹಿರಿಯರ ಮುಖ ಎಲ್ಲ ನೆನಪಿಗೆ ಬಂತು. ಅಲ್ಲಿ ಮೊದಲೇ ತಲುಪಿದ್ದ ಚಿಕ್ಕಮ್ಮ ಚಿಕ್ಕಪ್ಪ ಎಲ್ಲರಿಗೆ ನಾನಿನ್ನೂ
ಬರದಿದ್ದುದು ನೋಡಿ, ಜೊತೆಗೆ
ಆಂಬುಲೆನ್ಸ ಬೇರೆ ಹೊರಟಿದ್ದು ನೋಡಿ ಭಯವಾಗಿತ್ತಂತೆ. ಆದರೆ, ಅದು ಹೋಗಿದ್ದು ಮಂಗಳೂರಿನ ಯುವಕನನ್ನು
ಕರೆತರಲು.
ಅವರಿಗೆ ನಡೆಯಲೇ
ಆಗುವುದಿಲ್ಲವೆಂಬ ಕಾರಣಕ್ಕೆ ಆಂಬುಲೆನ್ಸ ಕಳಿಸಿದ್ದರು. ಅಂತೂ ನಾನು ಜುತುಲ್ ಪುಕ್ ತಲುಪಿದಾಗ
ಸುಮಾರು ಸಂಜೆ ಏಳು ಗಂಟೆಯಾಗಿತ್ತು. ಶೆಡ್ ಕಾಣಿಸುತ್ತಿದ್ದಂತೆ ಒಳ್ಳೇ ರೋಮಿಯೋನ ಥರ ನನ್ನ ಕೈ ಹಿಡಿದುಕೊಂಡ ವೀರ್ ಬಹಾದುರ್ ನನ್ನನ್ನು
ಚಿಕ್ಕಪ್ಪ-ಚಿಕ್ಕಮ್ಮನೆದುರು
ಒಯ್ದು ನಿಲ್ಲಿಸಿದ. ’ಎ
ದೇಖೋ…ಕೌನ್ ಆಆಆಆಯಾಆಆ…” ಅನ್ನುತ್ತ.
ಶೂ, ಜಾಕೇಟ್ ಎಲ್ಲ ಕಿತ್ತೆಸೆದು ಹಾಸಿಗೆ
ಮೇಲೆ ಒರಗಿದ್ದೆ. ಆ ಹೊತ್ತಿಗೆ ಹಾಗೆ ಒರಗುವ ಸುಖದ ಮುಂದೆ ಇನ್ಯಾವ ಸುಖವೂ ಇಲ್ಲ ಅನಿಸಿತ್ತು.
ಆವತ್ತೂ ಜೋರು ಮಳೆ. ಇನ್ನು ಜನ ಬರುತ್ತಲೇ ಇದ್ದರು, ಡಾಕ್ಟರ್ ಶೈಲಜಾ ಇನ್ನೂ ಬಂದಿಲ್ಲವೆಂದು
ಮೊದಲೇ ತಲುಪಿದ ಅವರ ತಂದೆ (ಸುಮಾರು ೬೫) ಕಳವಳಗೊಂಡಿದ್ದರು. ಭಟ್ಕಳದ ನಾರಾಯಣ ಅಂಕಲ್ (೬೯ ರ
ವಯಸ್ಸು) ಕೂಡ ಬಂದಿರಲಿಲ್ಲ. ಅವರೂ ಬಂದರು. ಈ ಹಿರಿಯರಿಬ್ಬರ ಉತ್ಸಾಹಕ್ಕೆ, ಚೈತನ್ಯಕ್ಕೆ ನಾವೆಲ್ಲ
ಬೆರಗಾಗಿದ್ದೇವೆ. ನಾವೆಲ್ಲ ಹತ್ತು ಹಡೆದವರ ಥರ ಮಲಗಿದ್ದರೆ ಇವರಿಬ್ಬರೂ ’ನಮ್ಮ ಪುಣ್ಯ ಮಾರಾಯರೇ.
ನೋಡಿ ಎಂತಹ ದೈವೀ ಕಳೆ ಬಂದಿದೆ ಎಲ್ಲರ ಮುಖದ
ಮೇಲೆ” ಎನ್ನುತ್ತ ಓಡಾಡುತ್ತಿದ್ದರು!
ಮೂರನೆಯ ದಿನ
ಮರುದಿನ ಬೆಳಿಗ್ಗೆ ನಮಗೆ
ನಡೆಯುವದಿದ್ದದ್ದು ಕೇವಲ ೮-೧೦ ಕಿ ಮೀ. ಈ ಅಂತರದ ಲೆಖ್ಖ ಯಾರಿಗೂ ಸರಿಯಾಗಿ ಸಿಕ್ಕಿಲ್ಲ. ಒಟ್ಟೂ
೫೩ ಕಿ.ಮೀ ಅಂತ ಮಾತ್ರ ಗೊತ್ತು. ಮರುದಿನ ನಡೆಯುವಾಗ ಸ್ವಲ್ಪ ದೂರ ಮಳೆ ಸಿಕ್ಕಿತ್ತು. ಇದೂ ಕಡಿದಾದ ದಾರಿ. ಆದರೆ
ಗುಡ್ಡ ಹತ್ತುವದೇನೂ ಇಲ್ಲ. ಕೈಲಾಸ ನದಿ ಅಂತ ಕರೆಯುವ ನದಿಯಗುಂಟ ನಡೆಯಬೇಕು. ಕೊನೆ ತಲುಪಲು ಎರಡು-ಮೂರು
ಕಿ.ಮಿ ಇರುವಾಗ ಹಿಮ ಬೀಳಲು ಶುರುವಾಯಿತು. ಎಂಥಾ ದೃಶ್ಯ ಅಂತೀರಿ! ಮುಂದೆ ಇದ್ದ ಚಿಕ್ಕಮ್ಮನಿಗೆ
ಹೇಳುತ್ತಿದ್ದೆ ನಾನು, “ನೋಡೇ, ನಾವೆಲ್ಲ ಭಕ್ತಿಯಿಂದ ಪರಿಕ್ರಮಣ ಮಾಡಿದ್ದಕ್ಕೆ ಇಂದ್ರ ಲೋಕದಿಂದ
ಪುಷ್ಪ ವೃಷ್ಟಿಯಾಗುತ್ತಿದೆ” ಎಂದು!!
ದೂರದಲ್ಲಿ ನಮ್ಮ ವಾಹನಗಳು
ಕಾಣತೊಡಗಿದಾಗ ನಮ್ಮ ಮುಖ ಅರಳತೊಡಗಿತ್ತು. ಆ ದಿನವೇ ನಾವು ಬಂದ ದಾರಿಯಲ್ಲಿ ಮರಳಿ ಕಠ್ಮಂಡುವಿನತ್ತ
ಹೊರಟಿದ್ದೆವು.
[ಮುಂದಿನ ವಾರ ಉಪ ಸಂಹಾರ!]