Monday, July 1, 2013

ಹೂತುಹೋದ ಮಾತುಗಳು...


ಹೂತುಹೋದ ಮಾತುಗಳು...

ಎದೆಗೆ ಚೂರಿ ಇಟ್ಟ ಹಾಗೆ ಅವನ ಅಳಲು...
ಕಣ್ಣಂಚಿನಲ್ಲಿ ಅದುಮಿಟ್ಟ ರಕ್ತದ ಹನಿ
ವ್ಯಾಪಿಸುತ್ತಲೇ ಹೋದ ನೋವು
ತಣ್ಣಗೆ ಕೈ –ಕಾಲು -ಮನ
ಅರಿವಿಗೆ ಬಂದದ್ದು.. ಕಚ್ಚಿದ ತುಟಿಗಳಡಿ ಸಿಕ್ಕುಬಿದ್ದ ನೋವೊಂದೇ
ಎದೆಗೆ ಚೂರಿ ಇಟ್ಟ ಹಾಗೆ ಅವನ ಅಳಲು...
ತೆರೆದ ಬಾಗಿಲಿನಿಂದೀಚೆ ಇಣುಕುತ್ತಿದ್ದ ಬಿಸಿಲು ಕೋಲಿಗೆ,
ಸೂರಿನಂಚಿಗೆ ಸುರಿಯುತ್ತಿದ್ದ ನೀರ ಧಾರೆಗೆ,
ಅಟ್ಟದ ಮೇಲಿನ ಅಜ್ಜನ ಹಳೆಯ ಟ್ರಂಕಿಗೆ,
ವರ್ಷಕ್ಕೊಮ್ಮೆಯೂ ತೊಳೆಯದೇ ಗಿಳಿ ಗೂಟಕ್ಕೆ ನೇತು ಬಡಿಯುತ್ತಿದ್ದ
ಅಜ್ಜಿಯ ಮಡಿ ಸೀರೆಗೆ..ಹೀಗೆ ಇನ್ನೂ ಹಲವಾರು ತಮಾಷಿಗಳಿಗೆ ಇಟ್ಟಿದ್ದ
ಅವಳ ಹೆಸರು...
ಹೆಸರಿಟ್ಟ ಮರುದಿನವೇ ಅಜ್ಜಿ ತೊಳೆದ ಸೀರೆ ಮಡಿಚಿಟ್ಟಳು
ಅಯ್ಯೋ ಎದೆಗೆ ಚೂರಿ ಇಟ್ಟ ಹಾಗೆ ಅವನ ಅಳಲು...
ಘಲ್ಲೆನುವ ಗೆಜ್ಜೆ, ಝಲ್ಲೆನುವ ನಗೆ, ಮಲ್ಲಿಗೆಯ ಕಂಪು
ಮಳಲ ದಂಡೆಯ ಮೇಲೆ ಒದ್ದೆ ಪಾದಗಳ ಹುಡುಗಿ ಬರುವ ಹೊತ್ತು...
ಕಾದ ಕಣ್ಣುಗಳ ಮೇಲೆ ಕನಸನೊತ್ತುವ ಸಮಯ..
ಗಾಯಗಳನ್ನು ಎಣಿಸುತ್ತ ಕೂರಬೇಡ
ಕತೆಯಾಗಬೇಡ ಹುಡುಗಾ...ಅನ್ನಬೇಕಿತ್ತೆ?
ಮತ್ತೆ  ಬರಲಿದೆ ವಸಂತ, ಹೊಸ ಚಿಗುರು ಹೊಸ ತಾನ...ಛೀ 

ಮಾತುಗಳು ಕೆಲವೊಮ್ಮೆ ಸತ್ತು ಹೋಗುವುದೇ ಹೀಗೆ 
ಮತ್ತು , ಹೂತ ಮಾತುಗಳಿಗೆ ಜೀವ ಬರುವುದೂ ಹೀಗೆಯೇ..

-ಪ್ರಜ್ಞಾ 




No comments:

Post a Comment