ಕಡೋರಿ ನೇಪಾಳ ಮತ್ತು ಚೈನಾ ಆಕ್ರಮಿತ ಟಿಬೇಟಿನ
ಗಡಿಯಲ್ಲಿರುವ ಊರು. ಹಸಿರು ಬೆಟ್ಟಗಳು, ಮೈತುಂಬಿ ಹರಿವ ಬೋಟಿಕೋಸಿ ನದಿ, ಎಲ್ಲೆಂದರಲ್ಲಿ ಕಾಣುವ
ಜಲಪಾತಗಳು, ಮತ್ತು ಊರತುಂಬ ಮಕ್ಕಳು! ಕಠ್ಮಂಡುವಿನಿಂದ ಕಡೋರಿಗೆ ಹೋಗುವ ಮಾರ್ಗವನ್ನು ’ಆರ್ನಿಕೊ ಹೈವೇ’
ಎಂದು ಕರೆಯುತ್ತಾರೆ. ಅದನ್ನು ಉಭಯ ಸಂಬಂಧಿ ವ್ಯಾಪಾರ ವಹಿವಾಟಿಗಾಗಿ ಚೀನಾದ ನೇತೃತ್ವದಲ್ಲಿ
ನಿರ್ಮಿಸಲಾಗಿದೆಯಂತೆ. ವ್ಯಾಪಾರ-ವಹಿವಾಟಲ್ಲದೇ ಕಾಲಕ್ರಮೇಣ ನೇಪಾಳವನ್ನೂ ಕಬಳಿಸುವ ಚೀನಾದ
ಹುನ್ನಾರವದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಅದನ್ನು ಹೈವೇ ಎನ್ನುವ ಹಾಗೇ ಇಲ್ಲ. ಒಂದು ಕಡೆ ಎತ್ತರೆತ್ತರದ ಹಸಿರು ಬೆಟ್ಟಗಳ ಸಾಲು,
ಇನ್ನೊಂದು ಬದಿಗೆ ಉದ್ದಕ್ಕೂ ಹರಿಯುವ ಬೋಟಿಕೋಸಿ ನದಿ ಕಣಿವೆ. ಅವೆರಡರ ಮಧ್ಯೆ ಕಡಿದಾದ, ಟಾರು
ಕಿತ್ತುಹೋದ ರಸ್ತೆ. ದಾರಿಯುದ್ದಕ್ಕೂ ಜಲಪಾತಗಳು ಮತ್ತು ಅಲ್ಲಲ್ಲಿ ಭೂಕುಸಿತಗೊಂಡು ಭಗ್ನಗೊಂಡ
ಹಾದಿ. ಭೂಕುಸಿತ ಆಗುತ್ತಲೇ ಇರುವ ರಸ್ತೆ ಅದು. ನಿಜಕ್ಕೂ ಹೆದರಿಕೆಯನ್ನುಂಟು ಮಾಡುವ ಹೈವೆ.
ಕಡೋರಿಗೆ ತಾಗಿಯೇ ಚೈನಾ ಇಮಿಗ್ರೇಶನ್ ಕೇಂದ್ರ ವಿದೆ. ಬೋಟಿಕೋಸಿ ನದಿಗೆ ಕಟ್ಟಲಾದ ’ಸ್ನೇಹ ಸೇತುವೆ’ಯನ್ನು ದಾಟಿ ಬಿಟ್ಟರೆ ನಾವು ಚೈನಾ ಆಕ್ರಮಿತ
ಟಿಬೇಟಿನಲ್ಲಿ ಇರುತ್ತೇವೆ. ಸೇತುವೆಯ ಈಚೆಗೆ ಕಡೋರಿ, ಆಚೆಗೆ ಚೀನಾದವರ ಜಾಗ. ಅದನ್ನು ಝಾಂಗ್ಮು ಎಂದು
ಕರೆಯುತ್ತಾರೆ. ಗಡಿ ದಾಟುವುದು ಮೊದಲಿನಷ್ಟು ಸುಲಭವಲ್ಲ ಈಗ ಎನ್ನು ತ್ತಾರೆ ಷೆರ್ಪಾಗಳು. ಈಗ ಒಂದೆರಡು ವರ್ಷಗಳಿಂದ ಚೈನಾ
ಕಡೆಯಿಂದ ತೀವ್ರ ಕಟ್ಟೆಚ್ಚರ ಕಂಡುಬಂದಿದೆಯಂತೆ.
ಅಧಿಕೃತವಾಗಿ ವಿಶ್ವಸಂಸ್ಥೆಯ ಮಾನ್ಯತೆ ಸಿಗದೇ ಇದ್ದರೂ ಚೈನಾ ಆಕ್ರಮಿತ ಟಿಬೇಟಿನ ಜಾಗವನ್ನು ತನ್ನದೇ ಎಂಬಂತೆ ಬಳಸುತ್ತಿದೆ. ಅಲ್ಲೀಗ ಹೊಸದಾಗಿ ಕಟ್ಟಲಾದ
ವ್ಯವಸ್ಥಿತವಾದ ಇಮಿಗ್ರೇಶನ್ ಕೇಂದ್ರವಿದೆ. ೧೯೬೨ ರಿಂದ ೧೯೮೧ ರವರೆಗೆ ಹದಗೆಟ್ಟ ಇಂಡೋ-ಚೈನಾ ಸಂಬಂಧದ ಪ್ರಯುಕ್ತ
ಮಾನಸ ಸರೋವರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ನಿಧಾನವಾಗಿ ಮತ್ತೆ ಶುರುವಾದ ಯಾತ್ರೆಯನ್ನ
ಈಗ ಭಾರತ ಸರಕಾರದ ಮೂಲಕವೂ ಮಾಡಬಹುದು ಅಥವಾ ಖಾಸಗಿ ಪ್ರವಾಸಿ ಏಜೆನ್ಸಿಗಳ ಮೂಲಕವೂ ಮಾಡಬಹುದು.
ನೇಪಾಳದ ಮೂಲಕ ಚೈನಾ ಆಕ್ರಮಿತ ಟಿಬೇಟನ್ನು ಪ್ರವೇಶಿಸಲು ಈಗ ಕೊಡಾರಿ ಒಂದೇ ಸದ್ಯಕ್ಕಿರುವ ವ್ಯವಸ್ಥಿತ
ಪ್ರವೇಶದ್ವಾರ.
ಕಠ್ಮಂಡುವಿನಲ್ಲಿ ನಮಗೆ ಮುನ್ನೆಚ್ಚರಿಕೆ ಕೊಡಲಾಗಿತ್ತು. ಗಡಿ ದಾಟುವ ಸಮಯದಲ್ಲಾಗಲೀ ಅಥವಾ ಗಡಿ
ದಾಟಿದ ನಂತರವಾಗಲೀ ಚೀನಾದ ರಾಜತಂತ್ರದ ಬಗ್ಗೆ, ದಲೈಲಾಮ ಅವರ ಬಗ್ಗೆ ಏನನ್ನೂ ಮಾತಾಡಬಾರದು ಎಂದು. ಈ ಬಗ್ಗೆ ಅಂತರ್ಜಾಲದಲ್ಲಿ ಒಂದಿಷ್ಟು ಓದಿಕೊಂಡೂ ಹೋಗಿದ್ದೆ ನಾನು. ಏನೆಂದರೆ ನೇಪಾಳದ ವ್ಯಾಪಾರಿಗಳು ಹಾಗೂ ಟ್ರಾವಲ್ಸನವರಲ್ಲಿ ಒಂದು ಅಘೋಷಿತ
ಒಮ್ಮತವಿದೆ. ಚೈನಾದ
ವಿರುದ್ಧ ಯಾವುದೇ ಬಗೆಯ ಚಟುವಟಿಕೆಗಳನ್ನೂ ಪ್ರೋತ್ಸಾಹಿಸಕೂಡದು. ಅಲ್ಲದೇ ಆಕ್ರಮಿತ ಟಿಬೇಟನ್ನು
ಚೀನಾದ ಅಧಿಕೃತ ಸ್ವತ್ತು ಎಂದು ಮಾನ್ಯ ಮಾಡಬೇಕು. ಹೀಗಾಗಿ ನೇಪಾಳ ಮತ್ತು ಆಕ್ರಮಿತ ಟಿಬೇಟ್
ನಡುವೆ ವ್ಯಾಪಾರ, ಹಾಗೂ ಪ್ರವಾಸೋದ್ಯಮ ಅಡ್ಡಿ ಆತಂಕಗಳಿಲ್ಲದೇ ನಡೆಯುತ್ತಿದೆ. ಚೀನಾದ
ಸ್ವಾಮ್ಯವನ್ನು ಮಾನ್ಯ ಮಾಡುವ ಮೂಲಕ ನೇಪಾಳಿ ವ್ಯಾಪಾರಸ್ಥರು, ಉದ್ಯಮಿಗಳು, ಪ್ರವಾಸಿ ಏಜೆನ್ಸಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ
ನಿರಾತಂಕವಾಗಿ ಇರಬಹುದು. ಇದೇ ಕಾರಣಕ್ಕೆ ನೇಪಾಳದಲ್ಲಿ ಮಾನಸ ಸರೋವರ ಯಾತ್ರೆಯನ್ನು ನಡೆಸಿಕೊಡುವ
ಅನೇಕ ಖಾಸಗಿ ಸಂಸ್ಥೆಗಳು ತಲೆಯೆತ್ತುತ್ತಿವೆ. ಚೀನಾ ಬಾರ್ಡರ್ ದಾಟಿದ ಮೇಲೆ ನಿರಾತಂಕವಾಗಿ ಚೀನಾ
ಏಜೆಂಟರೊಂದಿಗೆ ಮಾನಸ ಸರೋವರ ತಲುಪಬಹುದು. ಮತ್ತು ಬಹುಶಃ ಇದೇ ಕಾರಣಕ್ಕೆ ಈ ಮಾರ್ಗವನ್ನು
ಇದ್ದಿದ್ದರಲ್ಲೇ ಸುರಕ್ಷಿತ ಮಾರ್ಗ ಎಂದೂ ಪರಿಗಣಿಸಲಾಗುತ್ತದೆ. ಎಲ್ಲಿಯವರೆಗೆ ಪ್ರತಿರೋಧವಿಲ್ಲವೋ
ಅಲ್ಲಿಯವರೆಗೆ ಅವರು ನಮ್ಮ ದೋಸ್ತರು!
ನಮ್ಮ ಗುಂಪಿನಲ್ಲಿ ಕೈಲಾಸ ಪರಿಕ್ರಮ ನಡೆಸಿ ಕೃತಾರ್ಥರಾಗಬಯಸಿದ ಭಕ್ತರಲ್ಲದೇ ಸುಮ್ಮನೇ ಹಿಮಾಲಯ
ಕಣಿವೆಗಳ ಸೌಂದರ್ಯ ಸವಿಯ ಬಂದವರೂ ಇದ್ದರು. ಆದರೆ ಈ ಹಾದಿಯಲ್ಲಿ ಹೋದವರಿಗೆ ಮಾನಸ ಸರೋವರ ಯಾತ್ರೆಯ ಅನುಭವ
ಕೇವಲ ಆಧ್ಯಾತ್ಮಿಕ ಅಥವಾ ಪ್ರೇಕ್ಷಣೀಯವಾಗಿ ಉಳಿದುಕೊಳ್ಳುವುದಿಲ್ಲ ಎಂದು ನನಗನ್ನಿಸುತ್ತದೆ.
ನೇಪಾಳ ಮತ್ತು ಭಾರತದೊಂದಿಗೆ ಚೀನಾದ ರಾಜತಾಂತ್ರಿಕ ವ್ಯವಹಾರ ಮತ್ತು ಅದರ ಪರಿಣಾಮಗಳನ್ನು ಕುರಿತು
ಯೋಚಿಸುವಂತೆ ಮಾಡುತ್ತವೆ. ಹಾಗಂತ ಚೀನೀಯರನ್ನೆಲ್ಲ ದುಷ್ಟರು ಎಂಬಂತೆ ನೋಡಬೇಕಾದ್ದಿಲ್ಲ. ಗಡಿ ದಾಟುವಾಗ ಮತ್ತು ಗಡಿ
ದಾಟಿದ ನಂತರ ನೇಪಾಳಿಗರಲ್ಲಿ ಮತ್ತು ಟಿಬೇಟಿಯನ್ನರಲ್ಲಿ ಮೂಡುವ
ಆತಂಕವಂತೂ ಖಂಡಿತ ನಮ್ಮ ಅನುಭವಕ್ಕೆ ಬರುತ್ತದೆ. ಮತ್ತು ಈ ಆತಂಕವನ್ನು ನನ್ನೊಂದಿಗೆ ಬಂದ ಉಳಿದ ಯಾತ್ರಿಕರೂ ಹಂಚಿಕೊಂಡಿದ್ದಾರೆ.
ಗಡಿಯನ್ನು ದಾಟುವವರು ಅಧಿಕೃತ ಪಾಸಪೋರ್ಟ ಮತ್ತು ಚೈನಾ ವೀಸಾ ಪಡೆದಿರಬೇಕು. ನಮ್ಮದು ಗ್ರೂಪ್ ವೀಸಾ ಮೊದಲೇ
ಆಗಿತ್ತು.
ಸೇತುವೆಯನ್ನು
ದಾಟಿ,
ಇಮಿಗ್ರೇಶನ್
ಪರವಾನಗಿ ದಕ್ಕಿಸಿಕೊಂಡು ಮುಂದೆ ಸಾಗಬೇಕು. ಆದರೆ ಇವೆಲ್ಲ ಸಾಂಗ ವಾಗಿ ನೆರವೇರಬೇಕೆಂದರೆ, ಆ ಬದಿಯಲ್ಲಿ ನಮ್ಮನ್ನು ಕರೆದೊಯ್ಯುವ
ಚೈನಾದ ಏಜೆಂಟ್ ಬಂದಿರಬೇಕು. ನಮ್ಮ ದುರಾದೃಷ್ಟಕ್ಕೆ ಆವತ್ತು ನಮ್ಮ ಚೈನಾ ಏಜೆಂಟ್ ಬರಲೇ ಇಲ್ಲ. ಇದ್ದಿದ್ದರಲ್ಲಿಯೇ ಪರವಾಗಿಲ್ಲ
ಅನ್ನುವ ಹೊಟೆಲ್ಲೊಂದರಲ್ಲಿ ಏಜೆಂಟಿಗೋಸ್ಕರ ಕಾಯುತ್ತ ಕುಳಿತೆವು. ಅಲ್ಲೇ ಊಟವೂ ಆಯಿತು. ಸಂಜೆಯೂ ಆಯಿತು. ಇನ್ನು ಗಡಿ ದಾಟುವುದು ಮರುದಿನವೇ
ಅಂದ ನಮ್ಮ ನೇಪಾಳಿ ಏಜೆಂಟು. ಗತ್ಯಂತರವಿಲ್ಲದೇ ಅದೇ ಹೊಟೆಲ್ಲಿನಲ್ಲಿ ಆ ರಾತ್ರಿ ಕಳೆಯುವಂತಾಯಿತು.
ಅದು ಊರೆಂದರೆ ಊರೇನಲ್ಲ. ಹಾಗೆ ನದಿಯಂಚಿನ ಗುಡ್ಡಗಳ
ಮೇಲೆ ಚಾ ಪೆಟ್ಟಿಗೆಯಂಥ ಮನೆಗಳು, ಅಲುಗಾಡುವ ಮನೆಗಳು. ಅವುಗಳಿಗೆ ಬಾಲ್ಕನಿಗಳು ಬೇರೆ ಇದ್ದವು.
ನಾವು ಉಳಿದ ಹೊಟೆಲ್ಲನ್ನೂ ಹಾಗೆಯೇ ಕಟ್ಟಲಾಗಿತ್ತು. ಪ್ರಕೃತಿ ಸೌಂದರ್ಯ ಸವಿಯುವ ಆಸೆಯಿಂದ
ಬಾಲ್ಕನಿಯಲ್ಲಿ ನಿಂತರೆ ಇಡೀ ಮನೆಯೇ ಅಲುಗಾಡಿದಂತಾಗುತ್ತದೆ. ತೂಗು ಸೇತುವೆಯ ಮೇಲೆ ನಿಂತಂತೆ.
ಜೀವ ಮುಖ್ಯವೇ ಅಥವಾ ಪ್ರಕೃತಿ ಮಾತೆಯೇ ಎಂಬ ಜಿಜ್ಞಾಸೆ ಮೂಡುವ ಮೊದಲೇ ನಾವು ಬಾಲ್ಕನಿಯನ್ನು
ಬಿಟ್ಟು ಓಡಿದ್ದೆವು!
ಮೇಲ್ನೋಟಕ್ಕೆ ಆ ಜಾಗ ಟಿಬೇಟ್ ನಿರಾಶ್ರಿತರ
ಆಶ್ರಯದಾಣವೆಂಬಂತೆ ತೋರುತ್ತಿತ್ತು. ನೇಪಾಳಿಗರು ಬಹಳ ಕಮ್ಮಿಯೇ ಕಂಡರು. ನಮ್ಮ ಬಸ್ಸು ಅಲ್ಲಿ
ನಿಲ್ಲುತ್ತಿದ್ದಂತೆ ಚಿಕ್ಕ ಮಕ್ಕಳ ತಂಡವೇ ಓಡಿಬಂದಿತ್ತು. ’ಆಂಟಿ, ತಿನ್ನೋಕ್ಕೆ ಏನಾರ ಕೊಡಿ’
ಅಂದುಕೊಂಡು ದುಂಬಾಲು ಬಿದ್ದಿದ್ದವು. ಅದು ಅಲ್ಲಿ ಮಾಮೂಲಂತೆ. ಮುದ್ದು ಮುದ್ದಾದ ಗೊಣ್ಣೆ ಸುರುಕ
ಮಕ್ಕಳು, ನನ್ನನ್ನ ನೋಡಿ ನೀವೂ ನೇಪಾಳಿ ಥರ ಇದ್ದೀರಾ ಅಂದಿತು ಒಂದು ಮಗು. ಆ ಊರಿಗೆ ಒಂದು
ಶಾಲೆಯೂ ಇದೆ. ಎತ್ತರದ ಗುಡ್ಡದ ಮೇಲೆ.
ಬ್ಯಾಗಿನಲ್ಲಿದ್ದ ಬಿಸ್ಕೀಟ್ ಪೊಟ್ಟಣವನ್ನ ಅವರ ಕೈಗಿಟ್ಟ ಮೇಲಂತೂ ನಮ್ಮ ನ್ನ
ಮುತ್ತಿಕೊಂಡೇ ಬಿಟ್ಟವು.
ನಾವಿದ್ದ ಹೊಟೆಲ್ಲಿನಲ್ಲಿ ಟೇಬಲ್ ಒರೆಸುವದರಿಂದ
ಹಿಡಿದು ಮಾಡಿದ ಅಡುಗೆ ಬಡಿಸುವಲ್ಲಿಯವರೆಗೆ ಎಲ್ಲವನ್ನೂ ಹೆಣ್ಣು ಮಕ್ಕಳೇ ನಡೆಸುತ್ತಿದ್ದವು. ಒಂದಿಷ್ಟು ಹೆಂಗಸರು ದಾರಿಯಲ್ಲಿದ್ದ
ಜಲಪಾತದ ನೀರಲ್ಲಿ ಬಟ್ಟೆ ಒಗೆಯುತ್ತಿದ್ದರು. ಹೆಂಗಸರೇ ಹೆಚ್ಚಾಗಿ ಕಂಡಿದ್ದರು. ಈ ಊರಲ್ಲಿ ಗಂಡಸರೇನು ಮಾಡುತ್ತಾರೆ ಎಂದು ನಮ್ಮೊಳಗೆ
ನಾವು ಅಣಕವಾಡಿದ್ದೆವು. ಬಹುಶ: ಗಂಡಸರೆಲ್ಲ ಬಾರ್ಡರಿನಾಚೆ ದುಡಿಯುವುದಕ್ಕೆ
ಹೋಗುತ್ತಿದ್ದಿರಬೇಕು. ಅಂತೂ ಬೆಳಿಗ್ಗೆಯಾಗುವುದನ್ನೇ ಕಾಯುತ್ತ ನಿದ್ದೆ ಹೋದೆವು.
[ಮುಂದುವರೆಯುವುದು]
No comments:
Post a Comment