ಒಂಥರಾ ಮಬ್ಬು ಕವಿದ ಹಾಗೆ. ಯಾರ ಜೊತೆಯೂ ಮಾತಾಡಬೇಕೆನ್ನಿಸುತ್ತಿಲ್ಲ. ಒಳಗಿಂದೊಳಗೇ ಬಿಗಿದ ಮೌನ. ಅಂತರಾಳದೊಳಗಿಂದ ಕಡಲ ಮೊರೆತದ ಸದ್ದು, ಅರೆನಿದ್ರೆಯಲ್ಲಿ ಅದ್ಭುತ ರೌದ್ರವೊಂದನ್ನು ಕಂಡು ಅದು ನಿಜವೋ ಸುಳ್ಳೋ ಅನ್ನುವದು ಗೊತ್ತಾಗದೇ, ಕುತೂಹಲಿಗಳಿಗೆ ಅದನ್ನು ಹೇಗೆ ವಿವರಿಸಬೇಕೆಂದು ತೋಚದೇ ದಿಕ್ಕುಗೆಟ್ಟ ಪರಿಸ್ಥಿತಿಯಲ್ಲಿ ನಾನಿದ್ದೇನೆ.
ಕೈಲಾಸ-ಮಾನಸ ಯಾತ್ರೆಯಿಂದ ಹಿಂದಿರುಗಿ ಎರಡು ದಿನಗಳಾಗಿವೆ. ಸುಮಾರು ೫೩ ಕಿ ಮಿ ಗಳಷ್ಟು ಉದ್ದದ ಕೈಲಾಸ ಪರಿಕ್ರಮವನ್ನು ಯಶಸ್ವಿಯಾಗಿ ಕಾಲ್ನಡಿಗೆಯಲ್ಲಿ ಪೂರ್ಣ ಗೊಳಿಸಿದ ಆನಂದದೊಳಗೆ ನಿಗೂಢ ತುಮುಲವಿದೆ. ಅದೇನೆಂದೇ ನನಗರ್ಥವಾಗುತ್ತಿಲ್ಲ.
ಅಸಲಿಗೆ ಈ ಯಾತ್ರೆಯನ್ನು ಹರಕೆ ತೀರಿಸುವುದಕ್ಕೆಂದು ಮಾಡಿದ್ದಲ್ಲ. ಬಹುವಾಗಿ ಬಯಸಿ ಹೊರಟು ನಿಂತಿದ್ದಲ್ಲ. ಹಿಮಾಲಯದ ಕಣಿವೆಗಳ ಪ್ರಕೃತಿ ಸೌಂದಯವನ್ನು ಸವಿಯುವ ಉದ್ದೇಶವೂ ಇರಲಿಲ್ಲ. ತನ್ನಿಂದ ತಾನೆ ಘಟಿಸಿದ್ದು. ಗಾಳಿಯೊಂದಿಗೆ ತೇಲಿದ ಒಣ ಹುಲ್ಲ ಗರಿಕೆ ನಾನು.
ಒಟ್ಟಾರೆ ಇಡೀ ಯಾತ್ರೆಯನ್ನು ಹಿಂತಿರುಗಿ ತಡವಿದಾಗ ಸಿಕ್ಕ ನೆನಪಿನ ತುಂಡುಗಳು ಇಂತಿವೆ: ಕಠ್ಮಂಡುವಿನಲ್ಲಿ ಕಂಡ ಹವಳದ ತುಟಿಯ ಸುಂದರಿಯರು, ರಹಸ್ಯವೊಂದನ್ನು ಬಚ್ಚಿಟ್ಟುಕೊಂಡಂತಿದ್ದ ನೇಪಾಳ, ಮೋಹಕ ಪ್ರಕೃತಿ, ಆಗಷ್ಟೇ ಮೈನೆರೆದ ಯುವತಿಯ ಮಾದಕತೆಯನ್ನು ನೆನಪಿಸುವ ಬೋಟಿಕೋಸಿ ನದಿ, ನೇಪಾಳ-ಚೈನಾ ಬಾರ್ಡರ್ ನಲ್ಲಿದ್ದ ’ಸ್ನೇಹ ಸೇತುವೆ’, ಚೈನಾ ಆಕ್ರಮಿತ ಟಿಬೇಟ್ ಮತ್ತು ಅಲ್ಲಿನ ಜನಜೀವನ, ಬೋಳು ಬೋಳಾದರೂ ಮನಸೆಳೆಯುವ ಟಿಬೇಟಿನ ಪ್ರಸ್ಥಭೂಮಿ ಮತ್ತು ಅದರೊಳಗಿನ ಊರುಗಳು, ಪ್ರಶಾಂತ ಮಾನಸ ಸರೋವರದ ನೀಲಿ, ಘನ ಗಾಂಭೀರ್ಯದ ಕೈಲಾಸ ಪರ್ವತ, ಎದೆ ನಡುಗಿಸುವ ಡೋಲ್ಮಾ ಲಾ ಪಾಸ್ ನ ಕಣಿವೆ, ಮತ್ತು ಮೂರು ದಿನದ ಕಾಲ್ನಡಿಗೆಯ ಪರಿಕ್ರಮ.
ಇವೆಲ್ಲ ತುಣುಕುಗಳನ್ನು ಜೋಡಿಸಿ ಒಂದು ಅನುಭವ ಕಥಾನಕವನ್ನು ಹೆಣೆಯಬೇಕೆಂದುಕೊಂಡಿದ್ದೇನೆ. ಅಸಲಿಗೆ ಈ ಯಾತ್ರೆಯಿಂದ ನನಗೆ ದಕ್ಕಿದ್ದೇನು, ಈ ಯಾತ್ರೆಯ ಸಾಫಲ್ಯವನ್ನು ಯಾವ ಮಾನದಂಡ ದಿಂದ ಅಳೆಯಬಹುದು, ಮತ್ತು ಈ ಯಾತ್ರೆಯ ಕೆಲವೊಂದು ವಿವರಗಳು ಮುಂದಿನವರಿಗೆ ಯಾವ ರೀತಿ ಉಪಯುಕ್ತವಾಗಬಹುದು ಎಂಬ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನನ್ನದು.
ಮಡುಗಟ್ಟಿದ ಮೌನ ಸಡಿಲವಾಗುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ.
No comments:
Post a Comment