ಮಾನಸ
ಸರೋವರ ವನ್ನು ತಲುಪಲು ಎರಡಕ್ಕಿಂತ ಹೆಚ್ಚು ದಾರಿಗಳಿವೆಯಂತೆ. ಉತ್ತರಾಖಂಡದಿಂದ ಹೊರಡುವ
ಯಾತ್ರೆಯನ್ನು ಭಾರತ ಸರಕಾರದ ಮಿನಿಸ್ಟ್ರಿ ಆಫ್ ಎಕ್ಸಟರ್ನಲ್ ಅಫೇರ್ಸ ಆಯೋಜಿಸುತ್ತದೆ. ಆದರೆ ಈ
ಸಲದ ಮಳೆಯ ಆರ್ಭಟದಿಂದ ಸರಕಾರದ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು. ನಾವು ಒಂದು ಖಾಸಗಿ ಟ್ರಾವೆಲ್ಸನವರ ಮೂಲಕ ಹೊರಟಿದ್ದೆವು.
ಕಳೆದ ಬೇಸಿಗೆಯಲ್ಲೇ ಈ ಯಾತ್ರೆಗೆ ತಯಾರಿ ನಡೆಸಿದ್ದ ನನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪ ನನ್ನ
ತಮ್ಮನನ್ನೂ ತಮ್ಮ ಜೊತೆ ಹೊರಡಿಸಿದ್ದರು. ನನ್ನ ಪತಿ ಸುರೇಶನನ್ನೂ ಬರುತ್ತೀಯಾ ಅಂತ ಕೇಳಿದ್ದರು. ಮಗಳನ್ನು
ನಾನು ನೋಡಿಕೊಳ್ಳುತ್ತೇನೆ ನೀನೆ ಹೋಗಿ ಬಾ ಎಂದಿದ್ದರು ಸುರೇಶ್. ಒಪ್ಪಿಕೊಂಡಾದ ಮೇಲೆ ಚಿಂತೆ ಹಿಡಿದಿತ್ತು
ಈ ಯಾತ್ರೆಯನ್ನು ನಾನು ಮಾಡಬಲ್ಲೆನೆ ಅಂತ. ನನ್ನ ಸಮಾಧಾನಕ್ಕೆಂದು ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನೆಲ್ಲ
ಮಾಡಿಸಿಕೊಂಡೆ. ಎಲ್ಲವೂ ಸರಿಯಾಗಿದೆ ಎಂದು ಧೃಢವಾದ ಮೇಲೆ ಕೊಂಚ ನೆಮ್ಮದಿ ಸಿಕ್ಕಿತ್ತು. ಅಷ್ಟಲ್ಲ
ಮಾಡಿ ದೊರಕಿಸಿಕೊಂಡ ವೈದ್ಯರ ಪ್ರಮಾಣ ಪತ್ರವನ್ನು ಮೂಸಿಯೂ ನೋಡಲಿಲ್ಲ ನಮ್ಮ ಟ್ರಾವಲ್ಸನವರು.
ನಾವು ಹೊರಟಿದ್ದು ನೇಪಾಳದ ಕಠ್ಮಂಡುವಿನಿಂದ.
ಬೆಂಗಳೂರಿನಿಂದ ದಿಲ್ಲಿ, ದಿಲ್ಲಿಯಿಂದ ಕಠ್ಮಂಡುವರೆಗೆ ವಿಮಾನ ಪ್ರಯಾಣ ಮತ್ತು ಅಲ್ಲಿಂದ ಮುಂದೆ
ಖಾಸಗಿ ಬಸ್ಸೊಂದರಲ್ಲಿ ಹೋಗಬೇಕು. ನೇಪಾಳದಿಂದ ಚೈನಾ ಆಕ್ರಮಿತ ಟಿಬೇಟಿನ ಬಾರ್ಡರವರೆಗೆ ನೇಪಾಳದ
ಖಾಸಗಿ ಬಸ್ಸು ನಮ್ಮನ್ನು ಕೊಂಡೊಯ್ಯುತ್ತದೆ. ಬಾರ್ಡರ್ ದಾಟಿದ ಮೇಲೆ ಮುಂದೆಲ್ಲ ಚೈನೀಸ್
ಏಜೆಂಟುಗಳದ್ದೇ ಕಾರುಬಾರು. ಅವರದೇ ಬಸ್ಸು, ಅವರದೇ ಮೇಲ್ವಿಚಾರಣೆ. ಮಾನಸ ಸರೋವರ ತಲುಪಿ, ಕೈಲಾಸದ
ಪರಿಕ್ರಮ ನಡೆಸಿ, ಮರಳಿ ನೇಪಾಳದ ಬಾರ್ಡರ್ ತಲುಪುವವರೆಗೆ ಈ ಚೀನಾದ ಏಜೆಂಟರುಗಳು ನಮ್ಮ ಜತೆ
ಇರುತ್ತಾರೆ. ಒಂದರ್ಥದಲ್ಲಿ ನಮ್ಮಿಡೀ ಯಾತ್ರೆ ಚೈನೀಸ್ ಟ್ರಾವೆಲ್ಸ ನವರ ಸುಪರ್ದಿಯಲ್ಲಿರುತ್ತದೆ.
ನಮ್ಮ ದಾರಿ ಹೀಗಿತ್ತು. ಕಠ್ಮಂಡುವಿನಿಂದ ಹೊರಟು ೧೧೫
ಕಿ.ಮಿ ದೂರದಲ್ಲಿರುವ ಕಡೋರಿ ಎಂಬ ಊರನ್ನು ತಲುಪಿಕೊಳ್ಳುವುದು. ಕಡೋರಿಯಿಂದ ನ್ಯಾಲಂ, ನ್ಯಾಲಂನಿಂದ ಡೋಂಗ್ಬಾ,
ಡೋಂಗ್ಬಾ ದಿಂದ ಮಾನಸ ಸರೋವರ ಸೇರಿಕೊಳ್ಳುವುದು. ಒಟ್ಟು ೧೩ ದಿನದ ಯಾತ್ರೆ. ನ್ಯಾಲಂ, ಸಾಗ,
ಡೋಂಗ್ಬಾ ಇವೆಲ್ಲ ಟಿಬೆಟಿಗೆ (ಈಗ ಚೈನಾ ಆಕ್ರಮಿತ ಟಿಬೇಟ್) ಸೇರಿರುವ ಜಾಗಗಳು. ಮಾನಸ ಸರೋವರದ
ವರೆಗೆ ಈಗ ಚೈನಾ ಸರಕಾರದ ನಿರ್ಮಿಸಿದ ಒಳ್ಳೆಯ ರಸ್ತೆ ಇದೆ. ಅಲ್ಲಿಯವರೆಗೂ ಬಸ್ಸಿನಲ್ಲಿ ಅಥವಾ
ಮತ್ಯಾವುದೇ ಗಾಡಿಯಲ್ಲಿ ಆರಾಮವಾಗಿ ಪ್ರಯಾಣಿಸಬಹುದು.
ಕಠ್ಮಂಡುವಿನಲ್ಲಿ ತುಂಬ ತಿರುಗಾಡಲು ಆಗಲಿಲ್ಲ. ಮಳೆ ಇತ್ತು. ನಾವು ಹೋದ ಮಾರನೆ ದಿನ
ಸೋಮವಾರ, ಮತ್ತು ಆವತ್ತು ನಾಗರ ಪಂಚಮಿಗೆಂದು ವಿಶೇಷ ಸಂಭ್ರಮವಿತ್ತು. ಪಶುಪತಿನಾಥ
ದೇವಸ್ಥಾನದಲ್ಲಿ ಕೆಂಪು, ಹಳದಿ, ಹಸಿರು, ಕೇಸರಿ ಸೀರೆ ಉಟ್ಟು ಹೆಂಗಳೆಯರ ತಂಡವೇ ಇತ್ತು. ಕೊರಳಲ್ಲಿ ಕೆಂಪು, ಹಸಿರು ಮಣಿಗಳ ಸರ. ಗಾಢವಾದ ಮೇಕಪ್.
ಎಲ್ಲಿ ನೋಡಿದರಲ್ಲಿ ಅವರೇ. ಅದೇನು ನಗುವೋ, ಅದೇನು ಮಾತೋ! ಪಶುಪತಿ ನಾಥ ದೇವಸ್ಥಾನದೊಳಕ್ಕೆ
ಪ್ರವೇಶಿಸಿದರೆ ಬೇರೆಯದೇ ಲೋಕ. ಒಂದು ಕಡೆ ನೇಪಾಳಿ ಪೂಜಾರಿಗಳು ಅಲ್ಲಲ್ಲಿ ಒಂದಿಷ್ಟು ಹೆಂಗಸರನ್ನ
ಕೂರಿಸಿಕೊಂಡು ಪೂಜೆ ನಡೆಸಿಕೊಡುತ್ತಿದ್ದರು. ಪೂಜೆ ಸಮಾಪ್ತಿಯಾದ ಮೇಲೆ ಎಲ್ಲ ಹೆಂಗಸರ ಹಣೆಗೆ
ಅಕ್ಷತೆ ಕಾಳಿನಂಥದ್ದನ್ನೇನೋ ಮೆತ್ತುತ್ತಿದ್ದರು. ಇನ್ನೊಂದು ಕಡೆ ಒಂದಿಷ್ಟು ಜನ ಗುಂಪು ಕಟ್ಟಿಕೊಂಡು
ನೃತ್ಯ ಮಾಡುತ್ತಿದ್ದರು. ಆ
ದೇವಸ್ಥಾನದೊಳಗೆ ನಮ್ಮ ಕರ್ನಾಟಕದವರೇ ಒಬ್ಬರು ಪ್ರಧಾನ ಅರ್ಚಕರು. ಅವರ ಹೆಸರು ಗಿರೀಶ ಭಟ್. ಉತ್ತರ ಕನ್ನಡದ ಮೂಲೆಯಿಂದ
ಆ ನೇಪಾಳವನ್ನು ಹೇಗೆ ಸೇರಿಕೊಂಡರು ಎಂಬುದನ್ನು ತಿಳಿಯಲಾಗಲಿಲ್ಲ. ನೇಪಾಳಿ ಷೆರ್ಪಾಗಳು ಅವಸರದಲ್ಲಿ ಒಂದೆರಡು
ದೇವಾಲಯಗಳನ್ನೂ, ಬೌದ್ಧನಾಥ
ಸ್ತೂಪವನ್ನೂ ತೋರಿಸಿದರು. ಅದಷ್ಟು ಬಿಟ್ಟರೆ ನಮಗೆ ಮತ್ತೇನೂ ದಕ್ಕಲಿಲ್ಲ.
ಬೆಳಿಗ್ಗೆ ಸುಮ್ಮನೇ ನಡೆದು ಬರೋಣ ಎಂದು ಹೋದವರಿಗೆ ದಾರಿಯಲ್ಲಿ ಒಬ್ಬಳು ಬಿಸಿ ಬಿಸಿ ಚಹಾ
ಫ್ಲಾಸ್ಕಿನಲ್ಲಿ ಇಟ್ಟುಕೊಂಡು ಕೂತಿದ್ದು ಕಾಣಿಸಿತು. ಆ ಹೆಂಗಸಿನ ಹೆಸರು ಮಂಜು. ಚಹಾ ಕುಡಿಯುತ್ತ ಕೂತಂತೆ ಮಿಲ್ಖಾ
ಸಿಂಗನಂತೆ ಕೂದಲನ್ನು ಮೇಲೆತ್ತಿ ಗಂಟು ಹಾಕಿಕೊಂಡ ಮುದುಕಿಯೊಬ್ಬಳು ತನಗೂ ಚಹಾ ಆರ್ಡರ್ ಮಾಡಿ ಅಲ್ಲೇ
ಕೂತಳು.
ಸ್ವಲ್ಪ
ಹೊತ್ತಿಗೆ ಮಂಜು ಅವಳಿಗೆ ಒಂದು ಸಿಗರೇಟ ಎತ್ತಿಕೊಟ್ಟಳು. ಇವಳು ಸೇದತೊಡಗಿದಳು. ಮುದುಕಿಯ ಹೆಸರು
ವೇಲ್ಮಯಿಯಂತೆ. ನಾವು ಫೋಟೋ ತೆಗೆಯುವುದನ್ನ ನೋಡಿ ಹತ್ತಿರದಲ್ಲಿದ್ದ, ಅವಳಂತೆ ಸೀರೆಯುಟ್ಟ ತನ್ನ
ಗೆಳತಿ ಗಾಯತ್ರಿಯನ್ನೂ ಕರೆದಳು. ನೇಪಾಳ ಮೊದಲಿನಿಂದಲೂ ತನ್ನ ಬಗ್ಗೆ ವಿಚಿತ್ರ ಬಗೆಯ
ಕುತೂಹಲವನ್ನು ಕಾಯ್ದಿರಿಸಿಕೊಂಡೇ ಬಂದಿದೆ. ಬಡ ಪಟ್ಟಿಗೆ ಏನನ್ನೂ ತೋರಿಸದ ಊರು ಕಠ್ಮಂಡು. ಎನೋ
ಒಂಚೂರು ತೋರಿಸಿದ ಹಾಗೆ ಮಾಡಿ ತಟಕ್ಕನೆ ಸೆರಗಿನಲ್ಲಿ ಮುಚ್ಚಿಟ್ಟುಕೊಳ್ಳುವ ಮಾಟಗಾತಿ
ಮುದುಕಿಯಂತೆ ಆ ಊರು. ಹಾಗಂತ ನನಗನ್ನಿಸಿತು.
ಮರುದಿನ ಬೆಳಿಗ್ಗೆ ಸುಮಾರು ೨೦ ಜನರನ್ನ ತುಂಬಿಕೊಂಡ ಬಸ್ಸು ಕಡೋರಿಯತ್ತ ಸಾಗಿತು.
ನಾವೆಲ್ಲ ಬೆಂಗಳೂರಿನ ಟ್ರಾವೆಲ್ ಏಜೆನ್ಸಿಯ ಮೂಲಕ ಹೊರಟಿದ್ದರಿಂದ ನಮ್ಮ ಗುಂಪಿನಲ್ಲಿ ಸುಮಾರು
ಮುಕ್ಕಾಲು ಭಾಗ ಕನ್ನಡಿಗರೇ ಇದ್ದರು. ಬಹುಪಾಲು ಎಲ್ಲಾ ೫೦ ದಾಟಿದವರು. ಅವರಲ್ಲಿ ಅತ್ಯಂತ
ಸೀನಿಯರ್ ಅಂದರೆ ಭಟ್ಕಳದ ನಾರಾಯಣ ಅವರು. ೬೯ ರ ವಯಸ್ಸಿನಲ್ಲಿಯೂ ಮೂರು ದಿನಗಳ ಕಾಲ್ನಡಿಗೆಯ
ಪರಿಕ್ರಮವನ್ನು ಒಂಚೂರು ತ್ರಾಸಿಲ್ಲದೇ ಪೂರೈಸಿದ್ದರು!
No comments:
Post a Comment